“ಗಣೇಶಪುರಿ ದೇವರ ಔಷಧ” ಫಲಿಸಿತು!

0
1460

ನಿತ್ಯ ಅಂಕಣ-೯೦ : ತಾರಾನಾಥ್‌ ಮೇಸ್ತ, ಶಿರೂರು.
ಗಣೇಶಪುರಿಯಲ್ಲಿ ನಿತ್ಯಾನಂದರು ವೈಕುಂಠ ಆಶ್ರಮದಲ್ಲಿ ಇದ್ದಾಗ, ಅವರ ಬಳಿಗೆ, ಚುನಾಭಟ್ಟಿ ಪ್ರದೇಶದ ಸುಶಿಕ್ಷಿತ ಮನೆತನದ ಭಕ್ತೆಯೊರ್ವಳು ಬಂದಿದ್ದಳು, ಆಕೆಗೆ ಹೆಣ್ಣು ಮಕ್ಕಳು ಇದ್ದವು. ಆದರೆ ಗಂಡು ಮಕ್ಕಳು ತನಗೆ ಹುಟ್ಟಿಲ್ಲ ಎಂಬ ವ್ಯಥೆ ಆಕೆಗಿತ್ತು. ಬಾಬಾರಲ್ಲಿ ಆಕೆ ಮನದಾಶೆ ವ್ಯಕ್ತಪಡಿಸುತ್ತಾಳೆ. ಬಾಬರು ಭಕ್ತೆಯ ಅನುಗ್ರಹಿಸಿ ತೆಂಗಿನ ಕಾಯಿಯನ್ನು ನೀಡುತ್ತಾರೆ. ಮಹಿಳೆ ಸೀರೆಯ ಸೆರಗೊಡ್ಡಿ ತೆಂಗಿನ ಕಾಯಿಯನ್ನು ಭಕ್ತಿಯಿಂದ ಸ್ವೀಕರಿಸುತ್ತಾಳೆ.
ಮುಂದಿನ ವರ್ಷದಲ್ಲಿಯೇ ಮಹಿಳೆಗೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ. ಮನೆಯಲ್ಲಿ ಸಂಭ್ರಮದ ವಾತಾವರಣವು ಏರ್ಪಡುತ್ತದೆ. ಒಂದು ದಿನ ಮಹಿಳೆಯು ಸಂತೋಷದ ಸುದ್ದಿಯನ್ನು ಗುರುದೇವರಲ್ಲಿ ವ್ಯಕ್ತಪಡಿಸಲು ಮಗುವನ್ನು ಹೊತ್ತುಕೊಂಡು ಗಣೇಶಪುರಿಗೆ ತೆರಳುತ್ತಾಳೆ. ಬಾಬಾರ ದರ್ಶನ ಆಕೆ ಪಡೆಯುತ್ತಾಳೆ. ಬಾಬಾರು, ಭಕ್ತೆಯ ಕೈಯಿಂದ ಮಗುವನ್ನು ಪಡೆದು ಆಡಿಸುತ್ತ, ಮಗುವಿನ ತಾಯಿಗೆ, ‘ಈಗ ನಿನಗೆ ಆನಂದ ಆಯಿತಲ್ಲವೇ..? ಹಾಗಾದರೆ ಈ ಮಗುವಿಗೆ ‘ಆನಂದ’ ಎಂದು ನಾಮಕರಣ ಮಾಡೆಂದು ಸೂಚಿಸುತ್ತಾರೆ.
ಮುಂದೆ ಅದೇ ಮಗುವಿಗೆ ಉದರದ ಹತ್ತಿರ ಒಂದು ಗುಳ್ಳೆ ಹುಟ್ಟಿಕೊಳ್ಳುತ್ತದೆ. ಮೊದಲು ಸಣ್ಣದಿದ್ದ ಗುಳ್ಳೆಯ ಗಾತ್ರವು ದೊಡ್ಡದಾಗುತ್ತಲೇ ಹೋಗುತ್ತದೆ. ಮನೆಯವರು ಮಗುವಿಗೆ ಔಷಧೋಪಚಾರ ನಡೆಸುತ್ತಾರೆ. ಯಾವುದು ಫಲ ನೀಡುವುದಿಲ್ಲ. ತಜ್ಞ ಶಸ್ತ್ರ ಚಿಕಿತ್ಸಕರಲ್ಲಿ ತೋರಿಸಿದಾಗ, ಅವರು ಅಗತ್ಯವಾಗಿ ಶಸ್ತ್ರಚಿಕಿತ್ಸೆ ನಡೆಸ ಬೇಕೆಂದು ಸೂಚಿಸುತ್ತಾರೆ. ಆದರೆ ಎಲ್ಲವೂ ಯಶಸ್ವಿಯಾಗುತ್ತದೆ, ಭರವಸೆಯನ್ನು ವೈದ್ಯರು ನೀಡುದಿಲ್ಲ. ಗಾಬರಿಗೊಳಗಾದ ಮಗುವಿನ ತಾಯಿಯು, ಮಗುವನ್ನು ನಿತ್ಯಾನಂದರ ಬಳಿಗೆ ಕಳಿಸಿಕೊಟ್ಟಳು. ಬಾಬಾರು ಮಗುವನ್ನು ನನ್ನಲ್ಲಿಗೆ ಕರೆತರುವಂತೆ ಆಜ್ಞೆ ಇತ್ತರು. ಗುರುದೇವರ ಆಜ್ಞೆಯಂತೆ ಮಗನನ್ನು ಕರೆದುಕೊಂಡು ತಾಯಿ ಗಣೇಶಪುರಿಗೆ ತೆರಳಿದಳು.
ನಿತ್ಯಾನಂದರು ಮಗುವನ್ನು ಎತ್ತಿ ವಿಚಾರಿಸಿದರು. ‘ಎಲ್ಲಿದೆ ಗುಳ್ಳೆ..?’ ಎಲ್ಲಿದೆ ಗುಳ್ಳೆ..? ಮಗುವಿನ ಉದರದ ಮೇಲೆ ಕೈಯಾಡಿಸಿ ಹೇಳಿದರು. ‘ಹೋಗು ಕುಂಡದಲ್ಲಿ ಸ್ನಾನ ಮಾಡಿಸು’ ಎಂದರು. ಹೀಗೆ ಸ್ನಾನಮಾಡಿಸಿದ ನಂತರ, ಐದನೇ ದಿನದಲ್ಲಿ ಮಗವಿನ ಉದರದ ಮೇಲಿದ್ದ ಗುಳ್ಳೆಯು ಇಲ್ಲವಾಗುತ್ತದೆ. ನಂತರ ಮಗುವಿನ ತಾಯಿ ಮುಂಬಯಿಗೆ ತೆರಳುತ್ತಾಳೆ. ಅಲ್ಲಿ ಪುನಃ ಈ ಮೊದಲು ತೋರಿಸಿದ ಶಸ್ತ್ರ ಚಿಕಿತ್ಸ ವೈದ್ಯರಲ್ಲಿ ತೋರಿಸುತ್ತಾಳೆ..ವೈದ್ಯರು ಅಚ್ಚರಿಗೆ ಒಳಪಟ್ಟು, ‘ಬಾಯಿ, ನೀನು ಯಾವ ಔಷಧ ಮಗುವಿಗೆ ನೀಡಿದೆ ಎಂದು ಕೇಳುತ್ತಾರೆ. ಮಗುವಿನ ತಾಯಿ, “ಗಣೇಶಪುರಿ ದೇವರ ಔಷಧ” ಎಂದು ಹೇಳುತ್ತಾಳೆ.

LEAVE A REPLY

Please enter your comment!
Please enter your name here