ಗಗನಯಾತ್ರೆಗೆ ಸಜ್ಜಾಗುತ್ತಿದ್ದಾರೆ ಮತ್ತೋರ್ವ ಭಾರತೀಯ ನಾರಿ

0
324

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದ ಭಾರತೀಯ ನಾರಿಯರಾದ ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್ ಅವರ ಸಾಲಿನಲ್ಲಿ ಮತ್ತೋರ್ವ ನಾರಿ ಸೇರ್ಪಡೆಯಾಗುತ್ತಿದ್ದಾರೆ. ಹೌದು 32 ವರ್ಷದ ಡಾ.ಶಾವ್ನಾ ಪಾಂಡ್ಯಾ ಅವರು ಗಗನಯಾತ್ರೆಗೆ ಸಜ್ಜಾಗಿದ್ದಾರೆ. ಶಾವ್ನಾ ಭಾರತೀಯ ಮೂಲದ ಅಮೆರಿಕ ಪ್ರಜೆಯಾಗಿದ್ದು, ಪ್ರಸ್ತುತ ಕೆನಡಾದಲ್ಲಿ ನೆಲೆಸಿದ್ದಾರೆ.
 
 
ಶಾವ್ನಾ ಹುಟ್ಟಿದ್ದು ಕೆನಡಾದಲ್ಲೇ ಆದರೂ ಅವರ ಪೋಷಕರು ಭಾರತೀಯರು. ಮುಂಬೈ ಮೂಲದ ಡಾ. ಶಾವ್ನಾ ಬಹುಮುಖ ಪ್ರತಿಭೆಯಾಗಿದ್ದಾರೆ. ಲೇಖಕಿ, ಗಾಯಕಿ, ಉದ್ಯಮಿ, ವೈದ್ಯೆ, ನರಶಾಸ್ತ್ರಜ್ಞೆ, ಅಂತಾರಾಷ್ಟ್ರೀಯ ಕೊರಿಯನ್ ಟೆಕ್ವಾಂಡೊ ಚಾಂಪಿಯನ್ ಕೂಡ ಆಗಿದ್ದಾರೆ. ಅಲ್ಲದೆ ಶಾವ್ನಾ ಅಮೆರಿಕದ ಅತ್ಯುನ್ನತ ಸೈನಿಕ ಪಡೆ ನೇವಿ ಸೀಲ್ಸ್​ನಿಂದ ತರಬೇತಿ ಪಡೆದ ಮುಯ್ ಥಾಯ್ ಪಟುವಾಗಿದ್ದಾರೆ.
 
 
ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಗೈದಿರುವ 32 ವರ್ಷದ ಶಾವ್ನಾ 2018ರಲ್ಲಿ ಇತರೆ ಎಂಟು ಬಾಹ್ಯಾಕಾಶ ಯಾತ್ರಿಗಳ ತಂಡದೊಂದಿಗೆ ಬಾಹ್ಯಾಕಾಶ ಯಾನ ಆರಂಭಿಸಲಿದ್ದಾರೆ. ಅಮೆರಿಕದ ಸಿಟಿಜನ್ ಸೈನ್ಸ್ ಅಸ್ಟ್ರೋನಾಟ್, ಸಿಎಸ್​ಎ ಯೋಜನೆಯಡಿ ಶಾವ್ನಾ ಬಾಹ್ಯಾಕಾಶ ಯಾನ ಕೈಗೊಳ್ಳಲಿದ್ದಾರೆ.
 
 
 
ಬಾಹ್ಯಾಕಾಶದ ಈ ಸುಧೀರ್ಘ ಪಯಣದಲ್ಲಿ ಶಾವ್ನಾ ಮತ್ತು ತಂಡ ಭೂಮಿಗಿಂತ ಹೊರಗಿನ ವಿಶೇಷ ಪರಿಸರದಲ್ಲಿ ಮಾನವನ ದೇಹ ಹೇಗೆ ಕಾರ್ಯ ನಿರ್ವಹಿಸುತ್ತದೆ. ದೇಹದಲ್ಲಿ ಯಾವೆಲ್ಲಾ ಬದಲಾವಣೆಗಳಾಗುತ್ತವೆ, ಅದಕ್ಕೆ ದೇಹ ಹೇಗೆ ಸ್ಪಂದಿಸುತ್ತದೆ ಎಂಬ ಕುರಿತು ಬಾಹ್ಯಾಕಾಶದಲ್ಲಿ ವಿಶೇಷ ಅಧ್ಯಯನ ಕೈಗೊಳ್ಳಲಿದ್ದಾರೆ. ಅದಕ್ಕಾಗಿ ಬಯೋ ಮೆಡಿಸಿನ್, ಮೆಡಿಕಲ್ ಸೈನ್ಸ್, ನ್ಯೂರೋಸೈನ್ಸ್ ಮತ್ತು ಇತರೆ ಬಾಹ್ಯಾಕಾಶ ಪ್ರಯೋಗಗಳನ್ನು ಬಳಸಿಕೊಳ್ಳಲಿದ್ದಾರೆ. ಹವಾಮಾನದ ಬದಲಾವಣೆಯ ಪರಿಣಾಮಗಳ ಕುರಿತು ಈ ಅಧ್ಯಯನ ಬೆಳಕು ಚೆಲ್ಲಲಿದೆ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here