ಗಂಭೀರ ಓದಿನಿಂದ ಬರೆಯುವ ಕೌಶಲ್ಯ

0
418

 
ಉಜಿರೆ ಪ್ರತಿನಿಧಿ ವರದಿ
ಓದಿನಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವುದರಿಂದ ಬರಹ ಬರೆಯುವ ಕೌಶಲ್ಯವನ್ನು ರೂಢಿಸಿಕೊಳ್ಳಬಹುದು ಎಂದು ಖ್ಯಾತ ಅಂಕಣಕಾರ ಅಡೂರ್ ಕೃಷ್ಣರಾವ್ ಅಭಿಪ್ರಾಯಪಟ್ಟರು.
 
 
ಅವರು ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಮಂಗಳವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ನುಡಿಚಿತ್ರ ಬರಹದ ತಂತ್ರಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
 
 
ಲೇಖನ ಬರೆಯುವ ಮುನ್ನ ಓದಿನೊಂದಿಗೆ ನಂಟಿರಬೇಕು. ಓದು ಲೇಖನಕ್ಕೆ ವಿಷಯ ವಸ್ತುಗಳನ್ನು ಹೊಳೆಸಿಕೊಳ್ಳುವುದಕ್ಕೆ ಪೂರಕವಾದ ಶಕ್ತಿ ನೀಡುತ್ತದೆ. ನಿರ್ದಿಷ್ಟ ಲೇಖನ ಓದುವ ಕಾಲಕ್ಕೆ ಸಮಗ್ರವಾಗಿ ಗ್ರಹಿಸುವ ಆಸಕ್ತಿ ಇರಬೇಕು. ಹಾಗಾದಾಗ ಮಾತ್ರ ಹೊಳೆಸಿಕೊಂಡ ವಸ್ತುವಿಷಯಕ್ಕೆ ಅನುಗುಣವಾಗಿ ಬರಹ ಬರೆಯುವ ಸಾಮಥ್ರ್ಯ ರೂಢಿಯಾಗುತ್ತದೆ ಎಂದು ಅವರು ಹೇಳಿದರು.
 
 
ನಿಖರತೆ, ಸಂಕ್ಷಿಪ್ತತೆ ಹಾಗೂ ಸ್ಪಷ್ಟತೆಯ ಗುಣಲಕ್ಷಣಗಳೊಂದಿಗಿನ ಬರಹಗಳು ವಿಶ್ವಾಸಾರ್ಹತೆಯನ್ನು ಗಳಿಸುತ್ತವೆ. ನಿರಾಧಾರ, ಅಸ್ಪಷ್ಟ, ದ್ವಂದ್ವಾತ್ಮಕ ಬರಹಗಳು ಪ್ರಕಟಣಾಯೋಗ್ಯವಾಗುವುದಿಲ್ಲ. ದಿನಪತ್ರಿಕೆಗಳಿಗೆ ಹರಿದುಬರುವ ಬರಹಗಳಲ್ಲಿ ನೂರಕ್ಕೆ ತೊಂಬತ್ತರಷ್ಟು ಕಳಪೆಯಾಗಿರುತ್ತವೆ. ಆ ಕಾರಣಕ್ಕಾಗಿಯೇ ಪ್ರಕಟವಾಗದೇ ಕಸದ ಬುಟ್ಟಿ ಸೇರುತ್ತವೆ ಎಂದು ತಿಳಿಸಿದರು.
 
 
ಯಾವ ವಿಷಯದ ಕುರಿತು ನಮ್ಮ ಬರಹಗಳು ಕೇಂದ್ರಿಕೃತವಾಗಬೇಕೆಂದು ಮೊದಲೇ ನಿರ್ಧರಿಸಿಕೊಳ್ಳ ಬೇಕಾಗುತ್ತದೆ. ಆಗ ಆ ವಿಷಯದ ಬಗ್ಗೆ ಆಳವಾದ ಅಧ್ಯಯನ ಸಾಧ್ಯ ಮತ್ತು ಹಾಗೆ ಬರೆದಾಗ ಮಾತ್ರ ನಮ್ಮ ಬರಹಕ್ಕೆ ಉತ್ತಮ ಪ್ರತಿಕ್ರಿಯೆ ದೊರಕುತ್ತದೆ ಎಂದರು.
 
 
ವಿಭಾಗದ ಮುಖ್ಯಸ್ಥರಾದ ಪ್ರೊ. ಭಾಸ್ಕರ ಹೆಗ್ಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಪೂಜಾ ನಿರೂಪಿಸಿ, ಪವಿತ್ರ ವಂದಿಸಿದರು. ಈ ಸಂದರ್ಭದಲ್ಲಿ ವಿಭಾಗದ ಇತರೆ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here