ಗಂಡ-ಹೆಂಡತಿ ಮತ್ತು ಅವನು(ಳು)

0
495

 
ನಾತಿಚರಾಮಿ ಕೊನೆಯ ಭಾಗ 
ದೃಷ್ಟಿ ಅಂಕಣ: ಸೌಮ್ಯ ಕುಗ್ವೆ
ಕಾಲೇಜಿನಲ್ಲಿ ಶುರುವಾದ ಗೆಳೆತನ ಆತ ಮತ್ತು ಆಕೆಯನ್ನು ಪ್ರೇಮಿಗಳಾಗಿ ಮುಂದುವರಿಯುವಂತೆ ಮಾಡಿತು. ಬೇರೆ ಬೇರೆ ಜಾತಿಯವರಾದ ಇವರಿಬ್ಬರ ಮದುವೆಗೆ ಎರಡೂ ಮನೆಯವರಿಂದ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಹುಡುಗಿಗೆ ಗಡಿಬಿಡಿಯಲ್ಲೇ ಸ್ವಜಾತಿಯ ವರನೊಂದಿಗೆ ಮದುವೆ ಮಾಡಿ ದೂರದೂರಿಗೆ ಕಳಹಿಸಲಾಯಿತು. ಮೊದಲ ಪ್ರೀತಿಯನ್ನು ಮರೆಯಲಾಗದ ಹುಡುಗಿ, ಹುಡುಗಿಯ ಪೂರ್ವಾಪರ ತಿಳಿಯದ ಗಂಡನ ಸಂಸಾರದಲ್ಲಿ ಆಕೆಯ ಮಾಜಿ ಪ್ರಿಯಕರ ಅಪಸ್ವರ ಮೂಡಿಸಲು ಕಾರಣನಾದ ಅತ್ತ ಪತಿ ಇತ್ತ ಪ್ರೇಮಿ, ಹುಡುಗಿಯ ಮನಸ್ಸು ಪ್ರಿಯಕರನೊಡನಿದ್ದು ಕೊನೆಗೆ ಪತಿಗೆ ಡೈವೋರ್ಸ್ ನೀಡಿ ಬಲವಂತದ ಮದುವೆಗೆ ಆಕೆ ವಿದಾಯ ಹೇಳಿದಳು.
 
diverse_vaarte
 
ಮದುವೆಯಾಗಿ ವರ್ಷ ಮೂರಷ್ಟೇ ಕಳೆದ ಸಂದೀಪನಿಗೆ ಆಕರ್ಷಕವಾಗಿರುವ ಅವಿವಾಹಿತ ಸಹೋದ್ಯೋಗಿಯೊಟ್ಟಿಗೆ ಸೆಳೆತ ಶುರುವಾಯಿತು. ಹೆಂಡತಿ ದೀಪನ ಜೊತೆ ಸಂಸಾರ ಬೇಡವಾಗಿ ಪ್ರತಿನಿತ್ಯದ ಕಲಹ ದಾಂಪತ್ಯದಲ್ಲಿ ಬಿರುಕು ಮೂಡಿಸಿತು. ಈಗ ದೀಪ ಹಾಗೂ ಸಂದೀಪ ಇಬ್ಬರೂ ವಿಚ್ಛೇದನಕ್ಕಾಗಿ ಕಾನೂನಿನ ಮೊರೆ ಹೋಗಿದ್ದಾರೆ.
 
diverse_vaarte1
ಮದುವೆಯ ನಂತರ ವೈವಾಹಿಕ ಜೀವನದಲ್ಲಿ ಬರುವ ಚಿಕ್ಕ-ಪುಟ್ಟ ಭಿನ್ನಾಭಿಪ್ರಾಯಗಳ ಜೊತೆ ಗಂಡ ಹಾಗೂ ಹೆಂಡತಿ ಪರಸ್ಪರ ಆಕರ್ಷಣೆ ಕಳೆದುಕೊಂಡು ಸಂಸಾರವನ್ನು ನಿಸ್ಸಾರವನ್ನಾಗಿಸುವುದು ಇಂದಿನ ವಿಚ್ಛೇದನಗಳಲ್ಲಿನ ಒಂದು ಅಂಶ. ವಿವಾಹವಾದೊಡನೆ ಪರಸ್ಪರದಲ್ಲಿ ಪ್ರೀತಿ ಬೆಳೆಸುವ ಹಾಗೂ ಉಳಿಸಿಕೊಂಡು ಹೋಗುವುದನ್ನು ಮರೆತವರು, ಸಂಗಾತಿಗಳಲ್ಲಿ ಆಕರ್ಷಣೆ ಕಳೆದುಕೊಂಡು ಮತ್ತೊಂದು ಸಂಬಂಧದತ್ತ ಗಮನ ಹರಿಸುವುದು ವಿಚ್ಛೇದನಕ್ಕೆ ಕಾರಣವಾಗಿದೆ. ಹಾಗೆಯೇ ಮದುವೆಗೂ ಮೊದಲು ಇದ್ದ ಅನ್ಯ ಹುಡುಗನೊಟ್ಟಿಗಿನ ಅಥವಾ ಹುಡುಗಿಯೊಟ್ಟಿಗಿನ ಸ್ನೇಹ ಮದುವೆಯ ನಂತರವೂ ಮಂದುವರಿದು ವಿವಾಹಕ್ಕೆ ಕೆಡುಕಾಗುವುದನ್ನು ನಾವು ಕಾಣಬಹುದು. ಈ ರೀತಿಯಾದಾಗ ವಿಚ್ಛೇದನದ ಅವಕಾಶವೂ ಹೆಚ್ಚಾಗಿರುತ್ತದೆ.
 
diverse_vaarte2
 
ಬಹಳಷ್ಟು ಸಾರಿ ಪತಿ ಅಥವಾ ಪತ್ನಿ ಇನ್ಯಾರ ಜೊತೆಗೂ ಸಂಬಂಧ ಹೊಂದಿರಬಹುದೆಂಬ ಸಂಶಯವೂ ದಾಂಪತ್ಯ ವಿಚ್ಛೇದನಕ್ಕೆ ಅವಸರಿಸುವಲ್ಲಿ ಕಾರಣವಾಗುತ್ತದೆ. ಎಷ್ಟೋ ಬಾರಿ ಅನುಮಾನವೇ ದೊಡ್ಡ ರೋಗವಾಗಿ ದಾಂಪತ್ಯವನ್ನು ವಿಚ್ಛೇದನದತ್ತಕೊಂಡೊಯ್ಯುವುದೂ ಇದೆ.
 
 
ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಒಂದು ಆಟವಾಗಿರುವುದನ್ನು ಕಾಣಬಹುದು. ಹೆಂಡತಿ/ಗಂಡ ಗೊರಕೆ ಹೊಡೆಯುವನೆಂದೋ, ಪತಿ ಯಾರನ್ನೋ ಕಾರಲ್ಲಿ ಕೂರಿಸಿಕೊಂಡು ಹೋಗಿದ್ದಾನೆಂದೋ, ಪತ್ನಿ ಒಂದು ಹುಡುಗನೊಡನೆ ನಗುತ್ತಾ ಮಾತನಾಡಿದಳೆಂದೋ, ಪತಿ/ಪತ್ನಿ ಮೊಬೈಲ್ ಚೆಕ್ ಮಾಡಿದರೆಂದೋ ಅಥವಾ ಫೋನಿನಲ್ಲಿ ಅತಿಹೆಚ್ಚು ಇರುವರೆಂದೋ ಹಲವು ಕ್ಷುಲ್ಲಕ ಕಾರಣಗಳೂ ದಾಂಪತ್ಯಕ್ಕೆ ಮಂಗಳ ಹಾಡಿದೆ. ಪತಿ ಅಥವಾ ಪತ್ನಿ ಈಗಿನ ಕಾಲಕ್ಕೆ ತಕ್ಕಂತೆ ಇಲ್ಲವೆಂಬುದೂ ವಿಚ್ಛೇದನದ ಕಾರಣಗಳಲ್ಲಿ ಒಂದಾಗಿದೆ.
 
diverse_vaarte3
 
ಉಸಿರುಗಟ್ಟಿಸುವ ದಾಂಪತ್ಯ, ಹೊಂದಾಣಿಗಳಿಗೂ ಸರಿಪಡಿಸಲಾಗದ ದಾಂಪತ್ಯ, ದೈಹಿಕ/ಮಾನಸಿಕ ದೌರ್ಜನ್ಯಗಳಿಗೊಳಪಟ್ಟ ದಾಂಪತ್ಯ ಮುಂತಾದ ಸಂದರ್ಭಗಳಲ್ಲಿ ವಿಚ್ಛೇದನ ಅನಿವಾರ್ಯವಾಗಿರುತ್ತದೆ. ಎಷ್ಟೋ ಬಾರಿ ಪತಿ ಅಥವಾ ಪತ್ನಿಯಲ್ಲಿರುವ ದೈಹಿಕ ನ್ಯೂನ್ಯತೆ, ಮಕ್ಕಳಾಗದಿರುವಿಕೆಯೂ ವಿಚ್ಛೇದನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
 
ಲೈಂಗಿಕವಾಗಿ ಹೆಣ್ಣು ಅಥವಾ ಗಂಡು ಅಸಮರ್ಥವಾಗಿದ್ದರೆ ದಾಂಪತ್ಯದಲ್ಲಿ ಉಂಟಾಗುವ ಬಿರುಕು ವಿಚ್ಛೇದನಕ್ಕೆ ಬಹುವಾಗಿ ಕಾರಣವಾಗಿರುತ್ತದೆ. ಪತಿ ಅಥವಾ ಪತ್ನಿ ಲೈಂಗಿಕವಾಗಿ ಅನಾಸಕ್ತಿ ತೋರಿಸಿದರೆ ಸಂಗಾತಿ ಖನ್ನತೆಗೊಳಗಾಗಬಹುದು ಅಥವಾ ಸಂಗಾತಿಯಲ್ಲಿ ಅಸಮಾಧಾನಕರವಾಗಿ ವರ್ತಿಸಬಹುದು. ಕೆಲವೊಮ್ಮೆ ಅತಿಯಾದ ಲೈಂಗಿಕ ವಾಂಛೆಯೂ ಸಂಗಾತಿಗಳಲ್ಲಿ ಅಸಮಾಧಾನ, ಅಸಹಕಾರ ಹಾಗೂ ಬಿರುಕಿಗೆ ಕಾರಣವಾಗಬಹುದು. ಇಂತಹ ಕಾರಣಗಳು ವಿಚ್ಛೇದನದ ಅಗತ್ಯವನ್ನು ಹೆಚ್ಚಿಸಿದೆ.
 
 
diverse_vaarte4
 
ಇದೊಂದು ಉದಾಹರಣೆ ನೋಡಿ. ಕೈತುಂಬಾ ಸಂಬಳ, ಸಾಕಷ್ಟು ಆಸ್ತಿ-ಪಾಸ್ತಿ ಹೊಂದಿದ ಮುಂದುವರಿದ ಪ್ರದೇಶದಲ್ಲಿ ಸ್ವಂತದ ಫ್ಲಾಟ್ ಹೊಂದಿ ಒಬ್ಬನೇ ವಾಸಿಸುತ್ತಿದ್ದ ಅಪ್ಪ-ಅಮ್ಮನಿಗೆ ಏಕೈಕ ಪುತ್ರನಾಗಿದ್ದ ವರನಿಗೆ ಮೈತ್ರಿಯನ್ನು ಹಿರಿಯರ, ಹುಡುಗ-ಹುಡುಗಿಯ ಪರಸ್ಪರ ಒಪ್ಪಿಗೆಯೊಂದಿಗೆ ಮದುವೆ ಮಾಡಲಾಯಿತು. ಸುಶಿಕ್ಷಿತ ವಧು-ವರರಿಗೆ ನಿಶ್ಚಿತಾರ್ಥದ ನಂತರ ಮದುವೆಗೆ ಒಂದು ವರ್ಷದಷ್ಟು ಅಂತರವನ್ನು ಪರಸ್ಪರರನ್ನು ಅರ್ಥೈಸಿಕೊಳ್ಳಲು ಅವರಿಗೆ ಮಾಡಿಕೊಡಲಾಯಿತು. ಎಲ್ಲ ರೀತಿಯಲ್ಲೂ ಅನುರೂಪವಾದ ಜೋಡಿ ನೋಡಿ ಹೀಗಿರಬೇಕು ಜೋಡಿ ಎಂದವರು ಬಹಳಷ್ಟು ಜನ. ಆದರೆ ಮದುವೆಯಾದ ಆರು ತಿಂಗಳಿಗೆ ಈ ಸಂಬಂಧ ಮುರಿದುಬಿತ್ತು. ಕಾರಣವಿಷ್ಟೇ ಅತಿ ಸುಂದರಿಯಾದ , ವಿದ್ಯಾವಂತೆಯಾಗಿ, ಗಂಡನಷ್ಟೋ ಸಂಪಾದಿಸುತ್ತಿದ್ದ ಮೈತ್ರಿಗೆ ಗಂಡನ ಮನೆ ನೆರೆಮನೆಯಾಯ್ತು ಮನೆ ಬಿಟ್ಟು ಬೇರೆಲ್ಲೊ ಹೋಗದಂತೆ ಹುಟ್ಟುಡುಗೆಯಲ್ಲಿ ದಿನಗಳೆಯುವಂತೆ ಮಾಡಿದ ಗಂಡ ಫೋನ್, ಇಂಟರ್ ನೆಟ್ ಉಪಯೋಗಿಸಲೂ ಬಿಡದಾದ. ಪ್ರತಿನಿತ್ಯ ಮಾನಸಿಕ, ದೈಹಿಕ, ಲೈಂಗಿಕ ಕಿರುಕುಳಕ್ಕೊಳಪಟ್ಟ ಮೈತ್ರಿಯ ಸಹಾಯಕ್ಕೆ ಅಕ್ಕಪಕ್ಕದ ಮನೆಯವರು ಬರಬೇಕಾಯಿತು. ಮದುವೆಯಾದ ಆರು ತಿಂಗಳಿಗೇ ಜೀವಚ್ಛವವಾದ ಮೈತ್ರಿಯನ್ನು ಉಳಿಸಿಕೊಳ್ಳಲು ತಂದೆ-ತಾಯಿ ಹರಸಾಹಸ ಪಡೆಬೇಕಾಯಿತು. ಅಂತಹ ಸ್ಯಾಡಿಸ್ಟನೊಟ್ಟಿಗೆ ಬಾಳಲು ಇಚ್ಚಿಸದ ಆಕೆ IPC ಸೆಕ್ಷನ್ 498 A ಯ ಸಹಾಯದಿಂದ ವಿಚ್ಛೇದನ ಪಡೆದಳು.
 
diverse_vaarte5
 
 
ಇದೊಂದೇ ಘಟನೆಯಲ್ಲದೆ ಗಂಡನಿಂದಲೇ ಲೈಂಗಿಕವಾಗಿ ಆತ್ಯಾಚಾರಕ್ಕೊಳಪಟ್ಟ, ಲೈಂಗಿಕ ಹಿಂಸೆಗೆ ಗುರಿಯಾದ ಎಷ್ಟೋ ಹೆಣ್ಣುಮಕ್ಕಳಿಗೆ ವಿಚ್ಛೇದನ ಅನಿವಾರ್ಯವಾಗಿದೆ ಮತ್ತು ಆಸರೆಯಾಗಿದೆ. ಸುಂದರ ದಾಂಪತ್ಯದ ಕನಸು ಕಂಡವರಿಗೆ ಪುರುಷರ ಲೈಂಗಿಕ ಹಿಂಸಾಚಾರದ ಆಟ, ದುಶ್ಚಟಗಳ ಸಹವಾಸ ಕನಸನ್ನು ಛಿದ್ರವಾಗಿಸಿದೆ. ಇವೆಲ್ಲವೂ ವಿಚ್ಚೇದನದ ಅನಿವಾರ್ಯತೆಯನ್ನು ಎತ್ತಿಹಿಡಿಯುತ್ತದೆ.
 
ಧರ್ಮಗಚ, ಅರ್ಥೇಚ, ಕಾಮೇಚ ನಾತಿಚರಾಮಿ ಎಂದು ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ದಾಂಪತ್ಯಕ್ಕೆ ಕಾಲಿಡುವ ಹೆಣ್ಣು, ಗಂಡಿಗೆ ಅನಿವಾರ್ಯತೆ ವಿಚ್ಛೇದನಕ್ಕೆ ಒಳಪಡುವಂತೆ ಮಾಡುತ್ತದೆ. ಕಾಲದ ಮಿತಿಗೆ ಒಳಪಟ್ಟಿರುವ ಬದುಕು ಮದುವೆಯೇ, ವಿಚ್ಚೇದನವೋ ನಿರ್ಧರಿಸುತ್ತದೆ. ಕೆಲವು ಬಾರಿ ವಿಚ್ಛೇದನ ವಿಚ್ಛೇದಿತರಿಗೆ ಬದುಕು ನೀಡಿದರೆ ಕೆಲವೊಮ್ಮೆ ದುರ್ಭರವಾಗಿಸುತ್ತದೆ. ವಿಚ್ಛೇದನ ಪರಿಣಾಮ ಎರಡು ಕುಟುಂಬಗಳಲ್ಲಿಯೂ ದುಃಖವನ್ನುಂಟು ಮಾಡುವುದಲ್ಲದೇ, ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ವಿಚ್ಛೇದನವನ್ನು ಕ್ಷುಲ್ಲಕ ಕಾರಣಗಳಿಗೆ ಉಪಯೋಗಿಸದೆ ಸಕಾರಣ ಹಾಗೂ ಅನಿವಾರ್ಯಕ್ಕೆ ಒಳಪಡಿಸಿದರೆ ಬಹಳಷ್ಟು ಒಳ್ಳೆಯದೇ ಆಗಿದೆ.
ಸೌಮ್ಯ ಕುಗ್ವೆ
[email protected]

LEAVE A REPLY

Please enter your comment!
Please enter your name here