ಖಂಡನೆ

0
560

ನಮ್ಮ ಪ್ರತಿನಿಧಿ ವರದಿ
ಸಮಾಜದ ಶ್ರದ್ಧಾಕೇಂದ್ರ ಶ್ರೀರಾಮಚಂದ್ರಾಪುರಮಠ ಹಾಗೂ ಶ್ರೀಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಆಡಳಿತದಲ್ಲಿ ಸರ್ಕಾರ ಹಸ್ತಕ್ಷೇಪದ ಹುನ್ನಾರ ಮಾಡಲು ಮುಂದಾಗಿರುವುದನ್ನು ಶ್ರೀ ಅಖಿಲ ಹವ್ಯಕ ಮಹಾಸಭೆಯು ತೀವ್ರವಾಗಿ ಖಂಡಿಸುತ್ತದೆ.
 
 
ಮಠವು ಸಮಾಜಕ್ಕೆ ಮಾರ್ಗದರ್ಶನ ಮಾಡುವ, ಅಭಯವನ್ನು ನೀಡುವ ಸ್ಥಾನವಾಗಿದ್ದು, ದೇವಾಲಯಗಳು ಮನುಷ್ಯನಿಗೆ ನೆಮ್ಮದಿ ನೀಡುವ ಕೇಂದ್ರಗಳಾಗಿವೆ. ಶ್ರೀರಾಮಚಂದ್ರಾಪುರಮಠವು ಹವ್ಯಕರ ಪ್ರಮುಖ ಗುರುಪೀಠವಾಗಿದ್ದು, ಅನೇಕ ಸಮಾಜಮುಖೀ ಕಾರ್ಯಗಳ ಮೂಲಕ ಸಮಾಜದ ಏಳ್ಗೆಯಲ್ಲಿ ಪ್ರಧಾನ ಪಾತ್ರ ವಹಿಸಿದೆ. ಸಹಸ್ರಾರುವರ್ಷಗಳಿಂದ ಹವ್ಯಕ ಸಮಾಜ ಸೇರಿದಂತೆ ಇನ್ನಿತರ 20ಕ್ಕೂ ಸಮಾಜಗಳಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದು, ಸಮಾಜದ ಶ್ರದ್ಧಾಕೇಂದ್ರವಾಗಿದೆ. ಕೇವಲ ಆರೋಪ ಕೇಳಿಬಂದೊಡನೆ ಆಡಳಿತಾಧಿಕಾರಿಯನ್ನು ನೇಮಿಸುವುದು ಸಹಜ ನ್ಯಾಯಕ್ಕೆ ವಿರುದ್ಧವಾಗಿದ್ದು, ಸರಿಯಾದ ವಿವರಣೆಯನ್ನು ಪಡೆಯದೇ ಏಕಪಕ್ಷೀಯವಾಗಿ ಶ್ರೀಮಠದ ಆಡಳಿತವನ್ನು ನಿಯಂತ್ರಿಸಲು ಮುಂದಾಗುವುದು ಸಂವಿಧಾನಬಾಹಿರ ಎಂದು ಮಹಾಸಭೆಯು ಭಾವಿಸುತ್ತದೆ.
 
 
ಹಾಗೆಯೇ ಪೂರ್ವದಲ್ಲಿ ಶ್ರೀಮಠಕ್ಕೆ ಸೇರಿದ್ದ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯವನ್ನು 2008ರಲ್ಲಿ ಘನ ಸರ್ಕಾರವು ಪುನಃ ಶ್ರೀರಾಮಚಂದ್ರಾಪುರಮಠಕ್ಕೆ ವಹಿಸಿದಂದಿನಿಂದಲೂ, ಸುವ್ಯವಸ್ಥಿತ ಆಡಳಿತ, ಪಾರದರ್ಶಕ ನಿರ್ವಹಣೆ ಹಾಗೂ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಶ್ರೀಮಠ ಗೋಕಣದಲ್ಲಿ ಕೈಗೊಂಡಿರುವುದನ್ನು ದೇವಾಲಯಕ್ಕೆ ಭೇಟಿನೀಡುವ ಲಕ್ಷಾಂತರ ಭಕ್ತಮಹಾಜನರು ಒಪ್ಪಿ ದಾಖಲಿಸಿದ್ದಾರೆ. ಇಂತಹ ಸುಸ್ಥಿತಿಯಲ್ಲಿ ಇರುವ, ಸ್ವಚ್ಛಸುಂದರ ಆಡಳಿತ ವ್ಯವಸ್ಥೆಯನ್ನು ಕದಡುವ ಪ್ರಯತ್ನಕ್ಕೆ ಸರ್ಕಾರವು ಕೈಹಾಕಬಾರದೆಂದು ಸಮಗ್ರ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀ ಅಖಿಲ ಹವ್ಯಕ ಮಹಾಸಭೆ ಆಗ್ರಹಿಸುತ್ತದೆ.

LEAVE A REPLY

Please enter your comment!
Please enter your name here