ಕ್ಷಣ ಹೊತ್ತು ಇದ್ದ ಆ ದಿವ್ಯತೇಜಸ್ಸು ಮಾಯವಾಯಿತು!

0
1235

ನಿತ್ಯ ಅಂಕಣ: ೩೯

ಈಶ್ವರ ಐಯ್ಯರ್ ಅವರು ಸೂರ್ಯ ದೇವರ ಆರಾಧಕರು. ಅವರು ತಮ್ಮ ನಿತ್ಯಕರ್ಮದಂತೆ, ಒಂದು ದಿನ ನಸುಕಿನ ಜಾವ, ಮನೆಯ ಅಂಗಳದಲ್ಲಿ ನಿಂತು, ಮೂಡಣದಲ್ಲಿ ಮೂಡತ್ತಿರುವ ಸೂರ್ಯನನ್ನು ಕಂಡು, ಆರಾಧಿಸುತ್ತಿದ್ದರು. ಪ್ರಾರ್ಥನೆ ಮುಗಿದ ಬಳಿಕ ಮನೆಯೊಳಗೆ ಹೋಗಲೆಂದು ಹೆಜ್ಜೆಗಳಿಡಲು ಸಿದ್ದರಾದಾಗ, ಈಶ್ವರ್ ಐಯ್ಯರ್ ಅವರು, ರಾಮನು ಅಲ್ಲಿಗೆ ಬಂದಿರುವುದನ್ನು ಕಂಡರು. ‘ರಾಮ.. ನನಗೊಂದು ದೊಡ್ಡ ಆಶೆ ಇದೆ’. “ಸೂರ್ಯನನ್ನು ಭಗವಾನ್ ಸೂರ್ಯ ನಾರಾಯಣನ ರೂಪದಲ್ಲಿ ನೋಡಬೇಕು. ಜೀವನದ ಸಂದ್ಯಾ ಕಾಲದಲ್ಲಿ ಇರುವ ಈ ಮುದಿಜೀವವು ಆತನ ದರ್ಶನ ಭಾಗ್ಯದಿಂದ ಸಾರ್ಥಕತೆ ಪಡೆಯಬೇಕು”. ಈ ಲೋಕದಲ್ಲಿ ನಿನಗೆ ಮಾತ್ರ ನನ್ನ ಆಶೆ ಇಡೇರಿಸುವ ಸಾಮರ್ಥ್ಯ ಇದೆ. ನೀನು ಅನುಗ್ರಹಿಸ ಬೇಕು. ಹೀಗೆಂದು ನುಡಿದು, ಈಶ್ವರ ಐಯ್ಯರ್ ಅವರು ರಾಮನಲ್ಲಿ ಕರ ಮುಗಿದು ಪ್ರಾರ್ಥಿಸುತ್ತಾರೆ.

ನಿಜ..! ರಾಮನಲ್ಲಿ ಅಂತಹ ಅದ್ಭುತ ದಿವ್ಯಶಕ್ತಿ ಇದೆ ಎಂದು ಈಶ್ವರ ಐಯ್ಯರ್ ಅವರಿಗೆ ತಿಳಿದಿದೆ. ಅಸಂಖ್ಯಾತ ರಾಮನ ಬಾಲಲೀಲೆಗಳನ್ನು ಹತ್ತಿರದಿಂದ ಕಂಡವರು. ಅಲ್ಲದೆ ಸದ್ಗುರು ಸ್ಥಾನದಲ್ಲಿ ಇದ್ದವರಿಗೆ ದೇವರನ್ನು ತೋರಿಸುವ ಸಾಮರ್ಥ್ಯ ಇದೆ ಎಂಬುವುದನ್ನು ಅವರು ನಂಬಿದವರು. ಈಶ್ವರ ಐಯ್ಯರ್ ಅವರು ರಾಮನ ಮೇಲೆ ಇಟ್ಟಿರುವ ನಂಬಿಕೆ, ಶ್ರದ್ಧಾಭಕ್ತಿ ಗುರುಕೃಪೆಯಾಗಲು ಕಾರಣವಾಯಿತು. ಈಶ್ವರ ಐಯ್ಯರ್ ಅವರ ಭಕ್ತಿಯ ಪ್ರಾರ್ಥನೆ ಆಲಿಸಿದ ರಾಮ ಏನನ್ನು ಮಾತನಾಡುದಿಲ್ಲ. ಭರವಸೆಯ ನಗುವನ್ನು ಬೀರುತ್ತಾನೆ. ತಕ್ಷಣವೇ ಸೂರ್ಯ ನಾರಾಯಣ ದೇವರ ದಿವ್ಯತೇಜಸ್ಸಿನ ಆಕಾರವೊಂದು ಈಶ್ವರ ಐಯ್ಯರರ ಕಣ್ಣಮುಂದೆ ಅನಾವರಣ ಆಗುತ್ತದೆ. ಸೂರ್ಯ ನಾರಾಯಣನ ದಿವ್ಯ ದರ್ಶನವು ಅವರಿಗೆ ಲಭಿಸಿ, ದಿವ್ಯಾನಂದದ ನಿತ್ಯಾನಂದದ ವರ್ಣಿಸಲು ಅಸಾಧ್ಯವಾದ ಆತ್ಮಾನಂದವು ಅವರಿಗಾಯಿತು. ಕರ ಮುಗಿದು ನಮಸ್ಕರಿಸಿದರು. ಕ್ಷಣ ಹೊತ್ತು ಇದ್ದ ಆ ದಿವ್ಯತೇಜಸ್ಸು ಮಾಯವಾಯಿತು. ರಾಮನ ಅನುಗ್ರಹದಿಂದ ಪರಮಾನಂದ ಪಡೆದ ಈಶ್ವರ ಐಯ್ಯರರು ಧನ್ಯರಾದರು. ಜೀವನದ ಆಶೆ ಪೂರ್ತಿಗೊಂಡು ಸ್ವರ್ಗ ಸುಖದ ಅನುಭೂತಿ ಅನುಭವಿಸಿದರು. ಈಶ್ವರ ಐಯ್ಯರರು ಅತ್ಯಾನಂದದ ಸುಖದಲ್ಲಿ ರಾಮ..! ರಾಮ..! ನನಗೆ ಪರಮಾತ್ಮನ ಸನ್ನಿಧಾನ ಪ್ರಾಪ್ತಿಯಾಗುವಂತೆ ಕರುಣಿಸಿದೆ. “ನೀನೇ..ನಿತ್ಯಾನಂದ..! ನೀನೇ ನಿತ್ಯಾನಂದ..! ಎಲ್ಲರಿಗೂ ಸರ್ವ ಕಾಲಕ್ಕೂ ನಿತ್ಯಾನಂದ ಕೃಪೆ ತೋರುತ್ತಿರು”. ಎಂದು ಈ ರೀತಿಯ ಅಮೃತವಾಕ್ಯ ನುಡಿದ ಹಿರಿಯಚೇತನ ಈಶ್ವರ್ ಐಯ್ಯರ್ ಅವರು ಇಹಲೋಕದ ಯಾತ್ರೆ ಮುಗಿಸುತ್ತಾರೆ. ಐಯ್ಯರ್ ಅವರ ಅಂತಿಮ ಮಾತಲ್ಲಿ ಬಂದ ಬ್ರಹ್ಮಾರ್ಥದ ಶಬ್ಧ ನಿತ್ಯಾನಂದ. ಅಂದಿನಿಂದ ರಾಮ ‘ನಿತ್ಯಾನಂದ’ ಶುಭನಾಮ ಪಡೆಯುತ್ತಾನೆ. ಅವರೇ ಭಕ್ತ ಸಮೂಹಕ್ಕೆ ಸದ್ಗುರು, ಜಗದ್ಗುರು ಆಗುತ್ತಾರೆ. ಭಗವಾನ್ ನಿತ್ಯಾನಂದ ಸ್ವಾಮೀಜಿ ಆಗುತ್ತಾರೆ.

ಈಶ್ವರ ಐಯ್ಯರ್ ಅವರು ಬ್ರಿಟಿಷ್ ಆಡಳಿತದ ಕಾಲಘಟ್ಟದಲ್ಲಿ ಪ್ರಸಿದ್ಧ ವಕೀಲರಾಗಿ ಇದ್ದವರು. ಅವರಿಗೆ ಗಣ್ಯ ವ್ಯಕ್ತಿಗಳ ಸಂಪರ್ಕವು ಇತ್ತು. ಸಜ್ಜನರ ಒಡನಾಟವು ಇದ್ದಿತು. ಐಯ್ಯರ್ ಅವರ ಮರಣ ವಾರ್ತೆಯು ಅಗತ್ಯವಾಗಿ ತಲುಪಬೇಕಾದವರಿಗೆ ಬೇಗನೆ ತಲುಪುತ್ತದೆ. ಅವರೆಲ್ಲ ಸುದ್ದಿ ತಿಳಿದು ಬಂದು, ಈಶ್ವರ ಐಯ್ಯರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಾರೆ. ಗ್ರಾಮಸ್ಥರು, ಆತ್ಮೀಯರು, ಸಂಬಂಧಿಕರು ನೂರಾರು ಮಂದಿ ಕಂಬನಿ ಮಿಡಿಯುತ್ತಾರೆ. ಭರತಪುಝ ನದಿ ದಡದಲ್ಲಿ ಈಶ್ವರ್ ಐಯ್ಯರ್ ಅವರ ಶವಸಂಸ್ಕಾರದ ವಿಧಿ ವಿಧಾನಗಳು, ಪಂಚಭೂತಗಳಲ್ಲಿ ಲೀನಗೊಳಿಸುವ ಪ್ರಕ್ರಿಯೆ ಬ್ರಾಹ್ಮಣ ಸಮಾಜದ ಸಂಪ್ರದಾಯದಂತೆ ನಡೆಯುತ್ತದೆ. ಶವಸಂಸ್ಕಾರ ಪ್ರಕ್ರಿಯೆ ನಡೆಯುವಾಗ ಯುವ ನಿತ್ಯಾನಂದರ ದಿವ್ಯ ಉಪಸ್ಥಿತಿಯು ಅಲ್ಲಿ ಇರುತ್ತದೆ. “ಕಾಲನ ಕರೆಗೆ ಎಲ್ಲರೂ. ಓಗೂಟ್ಟಲೇ ಬೇಕು..! ಇದು ಜಗದ ನಿಯಮ”. ಹೀಗೆಂದು ಹೇಳಿದ ನಿತ್ಯಾನಂದರು, ಐಯ್ಯರ್ ಅವರ ಅಗಲಿಕೆಯ ವೇದನೆಯಲ್ಲಿ ಇರುವ ಪರಿವಾರದವರಿಗೆ ಸಮಾಧಾನ ಪಡಿಸುತ್ತಾರೆ. ನಂತರ ನಡೆದ ಉತ್ತರ ಕ್ರಿಯೆಗಳಲ್ಲೂ ನಿತ್ಯಾನಂದರು ಇರುತ್ತಾರೆ. ಎಲ್ಲವೂ ಮುಗಿದ ಬಳಿಕ ನಿತ್ಯಾನಂದರು ಮೃತ್ತಿಕೆ ಕುಂಭದಲ್ಲಿ ಸಂಗ್ರಹಿಸಿಟ್ಟ ಈಶ್ವರ್ ಐಯ್ಯರ್ ಅವರ ಚಿತಾಭಸ್ಮವನ್ನು ವಾರಣಾಸಿಯ ಕಾಶಿ ಕ್ಷೇತ್ರಕ್ಕೆ ತೆಗೆದುಕೊಂಡು ತೆರಳುತ್ತಾರೆ. ಅಲ್ಲಿ ಹರಿಯುವ ಗಂಗಾ ನದಿಯಲ್ಲಿ ವಿಸರ್ಜಿಸುತ್ತಾರೆ.

ತಾರಾನಾಥ್‌ ಮೇಸ್ತ, ಶಿರೂರು.

Advertisement

LEAVE A REPLY

Please enter your comment!
Please enter your name here