ಕ್ಲೀನ್‌ ಅಪ್‌ ಮೂಡುಬಿದಿರೆಗೆ ಈಗ ೧೦೦!

0
777

ಸಂಘಟನೆಯ ಸ್ವಚ್ಛತಾ ಕಾರ್ಯಕ್ಕೆ ಸರ್ವತ್ರ ಪ್ರಶಂಸೆ

ಹರೀಶ್‌ ಕೆ.ಆದೂರು

ಮೂಡುಬಿದಿರೆ: ಇವರ ಕೆಲಸವನ್ನು ಯಾರೇ ಆದರೂ ಪ್ರಶಂಸಿಸಲೇ ಬೇಕು…ಭೇಷ್‌ ಎನ್ನಲೇ ಬೇಕು…ಕಾರಣವಿಷ್ಟೇ… ಎಲ್ಲರೂ ಸುಖ ನಿದ್ರೆಯಲ್ಲಿ ʻರಜೆಯ ಮಜʼದಲ್ಲಿರಬೇಕಾದರೆ ಇವರು ಊರ ಬಗ್ಗೆ ಚಿಂತಿಸುತ್ತಾರೆ!… ಎಲ್ಲಿ ಕಸವಿದೆ ಎಂದು ಯೋಚಿಸುತ್ತಾರೆ…ಅಲ್ಲೆಲ್ಲಾ ತೆರಳಿ ಸ್ವಚ್ಛಗೊಳಿಸುತ್ತಾರೆ…! ಇವರ್ಯಾರಿಗೂ ನಿದ್ದೆಯ ಆಸೆಯಿಲ್ಲ…ಪ್ರಚಾರದ ಬಯಕೆಯೂ ಇಲ್ಲ…ಹಣದ ಆಸೆಯಂತೂ ಇಲ್ಲವೇ ಇಲ್ಲ…ಫಲಾಪೇಕ್ಷೆಯೇ ಇಲ್ಲದೆ ಇದು ದೇವರ ಕೆಲಸ…ನಮ್ಮ ದೇಶದ ಕೆಲಸ ಎಂಬ ಭಾವನೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛಭಾರತ ಪರಿಕಲ್ಪನೆಯ ಅಡಿಯಲ್ಲಿ ಅವರಿಂದ ಪ್ರೇರಣೆ ಪಡೆದು ಮೂಡುಬಿದಿರೆಯನ್ನು ಸ್ವಚ್ಛಗೊಳಿಸಲು ದೊಡ್ಡ ಯುವ ಪಡೆಯು ನಿರಂತರ ಶ್ರಮಿಸುತ್ತಾ ಬಂದಿದೆ. ಇದೀಗ ನೂರನೇ ವಾರದ ಕಾರ್ಯಕ್ರಮವನ್ನು ದೊಡ್ಡ ಆಂದೋಲದ ರೀತಿಯಲ್ಲಿ ನಡೆಸಲಣಿಯಾಗಿದೆ. ಇದೇ ಜನವರಿ ೨೬ರಂದು ನೂರನೇ ವಾರದ ʻಕ್ಲೀನ್‌ ಅಪ್‌ ಮೂಡುಬಿದಿರೆʼ ಸ್ವಚ್ಛತಾ ಕಾರ್ಯ ಮೂಡುಬಿದಿರೆಯಲ್ಲಿ ನಡೆಯಲಿದೆ. ಇದರ ಹಿಂದಿರುವ ಪ್ರೇರಣಾ ಶಕ್ತಿ ಸಮಾಜ ಸೇವಕ ಜವನೆರ್‌ ಬೆದ್ರ ಸಂಘಟನೆಯ ಸಂಸ್ಥಾಪಕ ಅಮರ್‌ ಕೋಟೆ. ಅವರೊಂದಿಗಿನ ಮಾತುಕತೆ ಇಂದಿನ ವಾರ್ತೆ ʻಎಕ್ಸ್‌ ಕ್ಲೂಸಿವ್‌ʼ ರಿಪೋರ್ಟ್.‌

ವಾರ್ತೆ: ʻಕ್ಲೀನ್‌ ಅಪ್‌ ಮೂಡುಬಿದಿರೆʼ ನೂರರ ಹೊಸ್ತಿಲಲ್ಲಿದೆ. ಹೇಗನಿಸುತ್ತಿದೆ…

Advertisement

ಅಮರ್:‌ ಊಹಿಸಲು ಸಾಧ್ಯವಾಗುತ್ತಿಲ್ಲ. ಇದೆಲ್ಲವೂ ನಾವು ನಂಬಿದ ʻಜಗದಂಬೆʼಮಾಡಿಸಿದ್ದಾಳೆ. ಆಕೆಯ ಲೀಲೆ. ಆ ಸಂತೃಪ್ತಿ ನಮಗಿದೆ. ಪ್ರಕೃತಿಗಾಗಿ ಕೆಲಸ ಮಾಡಲು ಇನ್ನಷ್ಟು ಉತ್ಸಾಹ ತಾಕತ್ತನ್ನು ಆ ತಾಯಿ ನಮಗೆ ನೀಡಿದ್ದಾಳೆ. ಅದನ್ನು ಮಾಡುತ್ತೇವೆ. ನಮ್ಮ ತಂಡ ಸಶಕ್ತವಾಗಿದೆ. ನಿರಂತರ ʻಪ್ರಕೃತಿಯ ಕಾರ್ಯಕ್ಕೆʼಸಿದ್ಧರಿದ್ದೇವೆ.

ವಾರ್ತೆ: ಕ್ಲೀನ್‌ ಅಪ್‌ ಗೆ ೧೦೦… ಸ್ವರೂಪ ಹೇಗೆ?

ಅಮರ್:‌ ಇದೇ ಜನವರಿ ೨೬ರಂದು ನೂರನೇ ವಾರದ ಕ್ಲೀನ್‌ ಅಪ್‌ ಮೂಡುಬಿದಿರೆ ಕಾರ್ಯಕ್ರಮ ಯಥಾ ಪ್ರಕಾರ ಮೂಡುಬಿದಿರೆಯಲ್ಲಿ ನಡೆಯಲಿದೆ. ನೂರನೇ ವಾರದ ಅಂಗವಾಗಿ ಫೆಬ್ರವರಿ ೨ರಂದು ಮೂಡುಬಿದಿರೆಯಲ್ಲಿ ʻಸ್ವಚ್ಛತೆಯ ಕಡೆಗೆ ನಮ್ಮ ನಡಿಗೆʼ ಎಂಬ ಬೃಹತ್‌ ಜನಜಾಗೃತೀ ಜಾಥಾವನ್ನು ಹಲವು ಸಂಘಟನೆಗಳ ಸಹಯೋಗದಲ್ಲಿ ನಾವು ನಡೆಸುತ್ತಿದ್ದೇವೆ. ಮೂಡುಬಿದಿರೆಯ ವಿದ್ಯಾಗಿರಿಯಿಂದ ಸಮಾಜ ಮಂದಿರದ ತನಕ ಈ ಜಾಥಾ ನಡೆಯಲಿದ್ದು ಸ್ವಚ್ಛತೆಯ ಕುರಿತಾದ ಜಾಗೃತಿ, ಸ್ವಚ್ಛತಾ ಶ್ರಮದಾನದ ಮಹತ್ವವನ್ನು ಜನತೆಗೆ ತಿಳಿಸುವ ಉದ್ದೇಶ ಹೊಂದಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಾಮಾಜಿಕ ಮುಖಂಡರು, ಶೈಕ್ಷಣಿಕ ಸಂಸ್ಥೆಗಳು ಈ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಾರ್ತೆ: ಮುಂದೆ ಕ್ಲೀನ್‌ ಅಪ್‌ ಸ್ವರೂಪದಲ್ಲೇನಾದರೂ ಬದಲಾವಣೆಗಳಿವೆಯೇ?

ಅಮರ್:‌ ಹೌದು…ತುಸು ಬದಲಾವಣೆ ಮಾಡುತ್ತೇವೆ. ಕ್ಲೀನ್‌ ಅಪ್‌ ಅಪ್ಡೇಟ್‌ ಸೇರಿದಂತೆ ಹೊಸ ಯೋಜನೆಗಳ ಸೇರ್ಪಡೆಯಾಗಲಿದೆ. ಶ್ರಮದಾನದೊಂದಿಗೆ ಜನತೆಯಲ್ಲಿ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಎಲ್ಲ ಕಾರ್ಯಗಳಿಗೂ ಜನರ ಸಹಭಾಗಿತ್ವದವನ್ನು ವಿನಯ ಪೂರ್ವಕ ಅಪೇಕ್ಷಿಸುತ್ತೇವೆ.

ವಾರ್ತೆ: ಈತನಕದ ಕಾರ್ಯಕ್ರಮಗಳು ಹೇಗಿದ್ದವು…?ಹೇಗೆ ಸಾಕಾರಗೊಂಡವು…?

ಅಮರ್:‌ ಪ್ರತಿ ಆದಿತ್ಯವಾರದಂದು ಮುಂಜಾನೆ ನಗರ, ಗ್ರಾಮಾಂತರ ಪ್ರದೇಶ, ದೇವಾಲಯ, ಶಿಕ್ಷಣ ಸಂಸ್ಥೆಗಳ ಆವರಣ, ಐತಿಹಾಸಿಕ ಸ್ಮಾರಕ ಪರಿಸರ ಸೇರಿದಂತೆ ಮೂಡುಬಿದಿರೆ ನಗರ ಹೊರ ಭಾಗಗಳಲ್ಲಿ ಸ್ವಚ್ಚತಾ ಶ್ರಮದಾನ ನಡೆದಿದೆ. ಪತಂಜಲಿ ಯೋಗ ಪೀಠ, ನಮ್ಮ ಜವನೆರ್‌ ಮಂಜನಕಟ್ಟೆ ನಿರಂತರ ನಮ್ಮೊಂದಿಗೆ ಸಹಕಾರ ನೀಡಿದ್ದವು. ಧಾರ್ಮಿಕ ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜಾತ್ರೆಯ ಸಂದರ್ಭ ವಿಶೇಷ ಸ್ವಚ್ಛತಾ ಅಭಿಯಾನ ನಡೆಸಿದ್ದೆವು.

ವಾರ್ತೆ: ಸಂಘಟನೆಯ ಇತರ ಕಾರ್ಯಕ್ರಮಗಳು?

ಅಮರ್:‌ ಸೇವೆ, ಯುವಜನ ಸಬಲೀಕರಣ, ಇತಿಹಾಸ ಹಾಗೂ ಪ್ರಕೃತಿ ರಕ್ಷಣೆ ನಮ್ಮ ಮೂಲ ಮಂತ್ರ. ಹೋರಾಟ, ಅಭಿಯಾನ, ಏಕತೆಗಾಗಿ ಕ್ರಿಕೆಟ್‌, ಬಡ ವಿದ್ಯಾರ್ಥಿಗಳಿಗೆ ಹಾಗೂ ಆರೋಗ್ಯಕ್ಕಾಗಿ ಧನ ಸಹಾಯ, ನಿರಂತರ ಸ್ವಚ್ಛತೆ, ಪ್ರಕೃತಿ ಹಾಗೂ ಸ್ವಚ್ಛತಾ ವಿಚಾರದಲ್ಲಿ ಶಾಲಾ ಕಾಲೇಜುಗಳಲ್ಲಿ ವಿವಿಧ ಶಿಬಿರ ಆಯೋಜನೆ, ಜಲಶಕ್ತಿ ಅಭಿಯಾನ, ಬೋರ್ವೆಲ್‌ ಮರುಪೂರಣ, ಇಂಗು ಗುಂಡಿ ರಚನೆ, ಯೋಧ ನಮನ, ದೀಪಾವಳೀ ಆಚರಣೆ. ಇಷ್ಟೇ ಅಲ್ಲದೆ ಯುವ ಜನರನ್ನು ಪ್ರೋತ್ಸಾಹಿಸಲು ʻವಿವೇಕೋತ್ಸವʼ ಎಲೆಮರೆಯ ಪ್ರತಿಭೆಗಳಿಗೆ ವಿವೇಕ ಪುರಸ್ಕಾರ ಇವೇ ಮೊದಲಾದ ಕಾರ್ಯಕ್ರಮ ನಿರಂತರವಾಗಿ ಮಾಡಲಾಗುತ್ತಿದೆ.

ವಾರ್ತೆ: ನಿಮ್ಮ ಸಂಘಟನೆಯ ಬಗ್ಗೆ

ಅಮರ್:‌ ನಮ್ಮದು ʻಜವನೆರ್‌ ಬೆದ್ರʼಸಂಘಟನೆ. ಇದು ಯುವ ಮನಸ್ಸಿನ ಸ್ಫೂರ್ತಿಯ ತಂಡ. ತುಳು ನಾಡಿನ ತುಳು ಭಾಷೆಯ ಪ್ರತೀಕವಾಗಿ ಈ ಹೆಸರಿಟ್ಟಿದ್ದೇವೆ. ಸಮಾನ ಮನಸ್ಕರ ತಂಡ ಎಂದರೆ ತಪ್ಪಲ್ಲ.  2017ಜನವರಿ 12ರಂದು ಸಂಘಟನೆ ಅಸ್ತಿತ್ವಕ್ಕೆ ಬಂತು. ಅಂದು ನಾನೊಬ್ಬನೇ ಇದ್ದೆ! ಈಗ ಇನ್ನೂರರ ಗಡಿ ದಾಟಿದೆ! ಇದೆಲ್ಲವೂ ದೈವೀಚ್ಛೆ ಎಂದರೆ ತಪ್ಪಲ್ಲ. ಪ್ರತಿಯೊಬ್ಬರೂ ಸ್ವ ಇಚ್ಛೆಯಿಂದ ಈ ಸಂಘಟನೆಯೊಂದಿಗೆ ಕೈಜೋಡಿಸಿದ್ದಾರೆ. ಜನಪರ ಕಾರ್ಯವೇ ನಮ್ಮ ಅಜೆಂಡಾ. ಆ ಮೂಲಕವೇ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ವಾಮಿ ವಿವೇಕಾನಂದರ ಸ್ಪೂರ್ತಿ ನಮಗೆ ದೊಡ್ಡ ಶಕ್ತಿಯಾಗಿದೆ.

ವಾರ್ತೆ: ನಿಮ್ಮ ಮನದಾಳದ ಮಾತು

ಅಮರ್:‌ ಈ ಕೆಲಸ ದೇವರ ಕೆಲಸ ಎಂದು ಭಾವಿಸಿ ಪ್ರಾರಂಭಿಸಿದೆವು. ನಿರ್ದಿಷ್ಟ ಸಮಯ, ಸಂಪನ್ಮೂಲ ಇದರ ಬಗ್ಗೆ ಎಂದೂ ಚಿಂತೆಮಾಡಿಲ್ಲ. ಇದರ ಯಶಸ್ಸಿಗೆ ಕಾರಣ ಸಂಘಟನೆಯಲ್ಲಿರುವ ಪ್ರತಿಯೊಬ್ಬ ಸ್ವಯಂ ಸೇವಕರು. ಅವರ ಬೆವರ ಅರ್ಪಣೆಯಿಂದ ಸಂಘಟನೆ ಇಂದು ಸದೃಢವಾಗಿ ಬೆಳೆದಿದೆ. ವಿಶಾಲವಾಗಿ ವಿಸ್ತಾರವಾಗಿ ಹರಡಿ ನಿಂತಿದೆ.

LEAVE A REPLY

Please enter your comment!
Please enter your name here