`ಕೌಶಲ್ಯ ತರಬೇತಿ' ಉದ್ಘಾಟನೆ

0
383

ವರದಿ: ಶ್ಯಾಮ್ ಪ್ರಸಾದ್, ಬದಿಯಡ್ಕ
ಮಕ್ಕಳೊಂದಿಗೆ ಪಾಲಕರಿಗೂ ವಿದ್ಯೆಯನ್ನು ನೀಡುತ್ತಿರುವ ಈ ಶಾಲೆಯು ಉತ್ತಮ ಕೌಶಲ್ಯವನ್ನು ರೂಪಿಸುವ ಶಾಲೆಯಾಗಿದೆ ಎಂದು ಬದಿಯಡ್ಕ ವ್ಯಾಪಾರಿ ವ್ಯವಸಾಯೀ ಏಕೋಪನ ಸಮಿತಿಯ ಅಧ್ಯಕ್ಷ ಎಸ್.ಎನ್.ಮಯ್ಯ ನುಡಿದರು.
 
 
ಅವರು ಬುಧವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಗ್ರಾಮೋತ್ಥಾನ ಸೇವಾ ಸೆಂಟರ್ ಬದಿಯಡ್ಕ ಇದರ ಆಶ್ರಯದಲ್ಲಿ ಆಸಕ್ತ ಮಹಿಳೆಯರಿಗಾಗಿರುವ ಕೌಶಲ್ಯ ತರಬೇತಿ ಕೇಂದ್ರ (ಸ್ಕಿಲ್ ಡೆವಲೆಪ್ ಮೆಂಟೆ ಸೆಂಟರ್) ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮ ದೇಶದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಆಗಬೇಕಿದೆ. ನಾವು ನಮ್ಮಲ್ಲಿಂದಲೇ ಅದನ್ನು ಆರಂಭಿಸೋಣ. ಇಲ್ಲಿ ಪ್ಲಾಸ್ಟಿಕ್ ಮುಕ್ತ ಚೀಲಗಳನ್ನು ತಯಾರಿಸಿ ಕೊಡಿ, ನಾವು ಅದನ್ನು ಬದಿಯಡ್ಕ ವ್ಯಾಪಾರಿ ಸಂಸ್ಥೆಗಳಿಗೆ ನೀಡುವ ವ್ಯವಸ್ಥೆಯನ್ನು ಮಾಡುತ್ತೇವೆ. ಬದಿಯಡ್ಕವನ್ನು ಸಾಧ್ಯವಾದಷ್ಟು ಮಟ್ಟಿಗೆ ಪ್ಲಾಸ್ಟಿಕ್ ಮುಕ್ತಗೊಳಿಸಲು ಪಣತೊಡೋಣ. ಇದರಿಂದ ಮಹಿಳೆಯರಿಗೂ ಆದಾಯ ಲಭಿಸಿದಂತಾಗುತ್ತದೆ ಎಂದರು. ಗ್ರಾಮೋತ್ಥಾನ ಬದಿಯಡ್ಕದ ಅಧ್ಯಕ್ಷ ಜಯಪ್ರಕಾಶ್ ಪಜಿಲ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಎಲ್ಲರಲ್ಲೂ ಕೌಶಲ್ಯ ಅಡಗಿದೆ. ಅದನ್ನು ಪೋಷಿಸಲು ಬೇಕಾದ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ.
 
 
ಸದುಪಯೋಗಪಡಿಸಿಕೊಳ್ಳಿ ಎಂದರು. ಪಿ.ಟಿ.ಎ. ಅಧ್ಯಕ್ಷೆ ಲೀಲಾವತಿ ಕನಕಪ್ಪಾಡಿ ಮಾತನಾಡಿ ಬಟ್ಟೆಯ ಚೀಲಗಳ ತಯಾರಿಗೆ ಹೆಚ್ಚು ಒತ್ತನ್ನು ನೀಡುತ್ತೇವೆ. ಪಾಲಕರು ಇದಕ್ಕಾಗಿ ಕೈಜೋಡಿಸಬೇಕು ಎಂದು ಹೇಳುತ್ತಾ ಶುಭಾಶಂಸನೆಗೈದರು. ಗ್ರಾಮೋತ್ಥನದ ಸಂಚಾಲಕ ಧನಂಜಯ ಮಧೂರು ಸ್ವಾಗತಿಸಿ ಸ್ವ ಉದ್ಯೋಗವನ್ನು ಪ್ರೋತ್ಸಾಹಿಸುವ ಸಲುವಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಪ್ರಾರಂಭಿಕ ಹಂತದಲ್ಲಿ ಹೊಲಿಗೆ ಮತ್ತು ಎಂಬ್ರೋಯಿಡರಿ ತರಬೇತಿಯನ್ನು ನೀಡಲಾಗುವುದು ಎಂದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಧನ್ಯವಾದವನ್ನಿತ್ತರು. ವಿದ್ಯಾ ಮಂಜೇಶ ಅದ್ರುಗುಳಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here