ಕೊಳೆರೋಗ ಸಾಧ್ಯತೆ: ಕ್ರಮ ಕೈಗೊಳ್ಳಲು ಸೂಚನೆ

0
450

ನಮ್ಮ ಪ್ರತಿನಿಧಿ ವರದಿ
ಸೆಪ್ಟೆಂಬರ್ ತಿಂಗಳಿನಲ್ಲಿ ಮುನ್ಸೂಚನೆ ಪ್ರಕಾರ ಹೆಚ್ಚು ಮಳೆ ಬೀಳುವ ಸಾಧ್ಯತೆ ಇರುತ್ತದೆ. ಇದರಂತೆ ಅಡಿಕೆ ಬೆಳೆಯಲ್ಲಿ ಕೊಳೆ ರೋಗದ ಲಕ್ಷಣಗಳು ಹೆಚ್ಚಾಗಬಹುದು. ಆದ್ದರಿಂದ ಎಲ್ಲಾ ರೈತರುಗಳು ಅಡಿಕೆ ಬೆಳೆಗೆ ಶೇ. 1ರ ಬೋರ್ಡೋ ದ್ರಾವಣವನ್ನು ತಯಾರಿಸಿ ಸಿಂಪರಣೆ ಮಾಡಲು ತೋಟಗಾರಿಕಾ ಇಲಾಖೆಯು ಅಡಕೆ ಬೆಳೆಗಾರರಲ್ಲಿ ಮನವಿ ಮಾಡಿದೆ.
ಶೇ. 1ರ ಬೋರ್ಡೋ ಮಿಶ್ರಣ ತಯಾರಿಸುವ ವಿಧಾನ (100 ಲೀಟರ್ ದ್ರಾವಣ): ಬೇಕಾಗುವ ಸಾಮಾಗ್ರಿಗಳು- ಮೈಲುತ್ತುತ್ತು 1 ಕಿ.ಗ್ರಾಂ, ಸುಣ್ಣದ ಹರಳು 1ಕಿ.ಗ್ರಾಂ, ನೀರು 100 ಲೀಟರ್
ಹೀಗೇ ಮಾಡಿ…
  ಒಂದು ಕಿ.ಗ್ರಾಂ. ಮೈಲುತ್ತುತ್ತನ್ನು 10 ಲೀಟರ್ ನೀರಿನಲ್ಲಿ ಕರಗಿಸಬೇಕು. ಅದರಂತೆ ಇನ್ನೊಂದು ಪಾತ್ರೆಯಲ್ಲಿ 1 ಕಿ.ಗ್ರಾಂ. ಸುಣ್ಣದ ಹರಳನ್ನು 10 ಲೀಟರ್ ನೀರಿನಲ್ಲಿ ಕರಗಿಸಬೇಕು. ಅನಂತರ ಮೈಲುತ್ತುತ್ತು ಹಾಗೂ ಸುಣ್ಣದ ತಿಳಿ ನೀರನ್ನು 80ಲೀಟರ್ ನೀರು ತುಂಬಿರುವ ಮೂರನೆಯ ಪಾತ್ರೆಯಲ್ಲಿ ಜೊತೆಯಾಗಿ ಸುರಿಯಬೇಕು. ಈಗ ಈ ಮಿಶ್ರಣವು ಶೆ.1ರ ಬೋರ್ಡೋ ಮಿಶ್ರಣದ 100ಲೀಟರ್ ದ್ರಾವಣವಾಗುತ್ತದೆ. ಈ ಮಿಶ್ರಣವು ಸರಿಯಾಗಿ ತಯಾರಿಯಾಗಿದೆಯೊ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಲು (1) ಲಿಟ್ಮಸ್ ಕಾಗದವನ್ನು ಈ ಮೇಲಿನಂತೆ ತಯಾರಿಸಿದ ದ್ರಾವಣದಲ್ಲಿ ಅದ್ದಿ, ನಂತರ ಲಿಟ್ಮಸ್ ಕಾಗದದ ಬಣ್ಣವನ್ನು ನಿಗಧಿತ ಬಣ್ಣದೊಂದಿಗೆ ಹೊಂದಾಣಿಕೆ ಮಾಡಿ ನೋಡಿ, ತಯಾರಿಸಿರುವ ದ್ರಾವಣವು ಸಮತೋಲನವಾಗಿರುವುದನ್ನು ಖಾತ್ರಿ ಮಾಡಿಕೊಳ್ಳಬೇಕು.
ಅಥವಾ (2) ಸ್ಥಳೀಯವಾಗಿ ಒಂದು ಸ್ವಚ್ಛವಾದ ಚಾಕು ಅಥವಾ ಬ್ಲೇಡನ್ನು ದ್ರಾವಣದಲ್ಲಿ ಅದ್ದಬೇಕು. ಒಂದು ವೇಳೆ ಚಾಕು ಅಥವಾ ಬ್ಲೇಡಿನ ಮೇಲೆ ತಿಳಿ ಕೆಂಪು ಬಣ್ಣ ಕಂಡುಬಂದರೆ ಇನ್ನೂ ಸ್ವಲ್ಪ ಸುಣ್ಣದ ತಿಳಿ ನೀರನ್ನು ಹಾಕಬೇಕು.ಇಂತಹ ಮಿಶ್ರಣವು ತಿಳಿ ನೀಲಿಬಣ್ಣದ್ದಾಗಿರಬೇಕು.
ಈ ರೀತಿ ತಯಾರಿಸಿದ ಹಾಗೂ ದ್ರಾವಣವು ಸಮತೋಲವಾಗಿರುವುದನ್ನು ಖಾತ್ರಿ ಪಡಿಸಿಕೊಂಡ ನಂತರ ಆ ದ್ರಾವಣವನ್ನು ಸುಳಿಯ ಹಾಗೂ ಕಾಯಿಗಳ ಗೊಂಚಲಿನ ಎಲ್ಲಾ ಭಾಗಗಳಲ್ಲಿ ಸಮರ್ಪಕವಾಗಿ ಸಿಂಪರಣೆ ಮಾಡಬೇಕು. ಬೋರ್ಡೋ ಮಿಶ್ರಣ ತಯಾರಿಸಲು ಯಾವಾಗಲೂ ಮಣ್ಣಿನ ಅಥವಾ ಪ್ಲಾಸ್ಟಿಕ್ ಪಾತ್ರೆಗಳನ್ನು ಮಾತ್ರ ಉಪಯೋಗಿಸಬೇಕು. ಕಬ್ಬಿಣ ಅಥವಾ ಲೋಹದ ಪಾತ್ರೆಗಳನ್ನು ಬಳಸಬಾರದು  ಎಂದು ತೋಟಗಾರಿಕಾ ಇಲಾಖೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here