ಬೆಂಗಳೂರು ಪ್ರತಿನಿಧಿ ವರದಿ
ಸುಮಾರು 52 ದಿನಗಳ ಕಾಲ ರಾಮನಗರದಲ್ಲಿ ನರಕಯಾತನೆ ಅನುಭವಿಸಿದ್ದ ಕಾಡಾನೆ ಸಿದ್ದಗೆ ಕೊನೆಗೂ ಚಿಕಿತ್ಸೆ ಭಾಗ್ಯ ದೊರಕಿದೆ. ಸಿದ್ದ ಎಂಬ ಹೆಸರಿನ ಆನೆ ಕಳೆದ ಒಂದೂವರೆ ತಿಂಗಳಿನಿಂದ ಕಾಲು ಮುರಿದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದಾನೆ.
ಮಾಗಡಿ ತಾಲ್ಲೂಕಿನ ಮಂಚನಬೆಲೆ ಹಿನ್ನೀರಿನ ಜಲಾಶಯದಲ್ಲಿ ಒಂಟಿ ಸಲಗವೊಂದು ಅಪಾಯಕ್ಕೆ ಸಿಲುಕಿತ್ತು. ಈವರೆಗೂ ಅರಣ್ಯ ಇಲಾಖೆ ನೆಪ ಮಾತ್ರಕ್ಕೆ ನೋವು ನಿವಾರಕ ಮಾತ್ರೆಗಳನ್ನು ನೀಡುತ್ತಿತ್ತು. ಆದರೆ ಇದೀಗ ಆ ಕಾಡಾನೆಗೆ ಕೊನೆಗೂ ನರಕದಿಂದ ಮುಕ್ತಿ ಸಿಗುವ ಕಾಲ ಬಂದಿದೆ.
ಕಾಡಾನೆಗೆ ಚಿಕಿತ್ಸೆ ನೀಡಲು ಅರಣ್ಯಾಧಿಕಾರಿಗಳು, ವೈದ್ಯರು ಭೇಟಿ ನೀಡಿದ್ದಾರೆ. ಶಕ್ತಿಯಿಲ್ಲದೇ ಕುಂಟುತ್ತಲೇ ಹೆಜ್ಜೆ ಹಾಕುತ್ತಾ ಇರುವ ಒಂಟಿಸಲಗಕ್ಕೆ ಆಹಾರ ನೀಡಲಾಗಿದೆ. ಜತೆಗೆ ವೈದ್ಯರ ತಂಡ ಚಿಕಿತ್ಸೆ ನೀಡಿದ್ದಾರೆ. ಆನೆಯ ಚಿಕಿತ್ಸೆಯ ಬಗ್ಗೆ ವೀಕ್ಷಣೆ ನಡೆಸಲು ಅಸ್ಸಾಂ ರಾಜ್ಯದ ಗುವಾಹಟಿಯ ಡಾ.ಕುಶಾಲ್ ಶರ್ಮ ನೇತೃತ್ವದ ತಂಡ ಮತ್ತು ಕೇರಳ ಮೂಲದ ಅರುಣ್ ಜಕಾಲಿ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಅಲ್ಲದೆ ಆನೆ ಚಿಕಿತ್ಸೆಗೆಂದು ಬೇರೆ ಕ್ಯಾಂಪ್ ಗಳಿಂದ ಆನೆಗಳೂ ಕೂಡ ಬಂದಿದೆ. ದುಬಾರೆ, ಮುತ್ತಗೋಡುವಿನಿಂದ ಗಜೇಂದ್ರ, ಹರ್ಷ ಆನೆಗಳು ಬಂದಿದೆ.
ಆಗಸ್ಟ್ 30 ರಂದು ಬೆಂಗಳೂರಿನ ಗೋಪಾಲನಗರ ಅರಣ್ಯವಲಯದಲ್ಲಿ ಈ ಆನೆ ಕಾಲುವೆಗೆ ಬಿದ್ದು ಬಲಗಾಲು ಮುರಿದುಕೊಂಡಿತ್ತು. ಅಂದಿನಿಂದ ಅರಣ್ಯ ಇಲಾಖೆ ಕೇವಲ ತಾತ್ಕಾಲಿಕ ಚಿಕಿತ್ಸೆ ನೀಡುತ್ತಿತ್ತು. ಸರಿಯಾದ ಚಿಕಿತ್ಸೆ ನೀಡದ ಕಾರಣ ಸಿದ್ದ ಆನೆ ರಾಮನಗರದ ಮಂಚನಬೆಲೆಯಲ್ಲಿ ಕುಸಿದು ಬಿದ್ದಿತ್ತು.
ಇದೀಗ ಈ ಕಾಡಾನೆಗೆ ವೈದ್ಯರು ಚಿಕಿತ್ಸೆ ನೀಡಲು ಒಲವು ತೋರಿದ್ದಾರೆ. ಅಲ್ಲದೇ ಮಂಚನಬೆಲೆಯಲ್ಲಿ ಇಂದು ಆನೆಯ ಕಾಲಿನ ಎಕ್ಸ್ ರೇ ತೆಗೆದು ಆ್ಯಂಟಿ ಬಯೋಟಿಕ್ಸ್ ನೀಡಿ, ವಿಟಮಿನ್ ಥೆರಮಿ ನಡೆಸೋದಾಗಿ ಡಾ. ಕುಶಾಲ್ ಶರ್ಮ ತಿಳಿಸಿದ್ದಾರೆ.