ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರನ್ನು ವಜಾಗೊಳಿಸಲು ಒತ್ತಾಯ

0
348

 
ಮಡಿಕೇರಿ ಪ್ರತಿನಿಧಿ ವರದಿ
ಕೊಡವ ಭಾಷೆಯನ್ನಾಡುವ ವಿವಿಧ ಸಮುದಾಯಗಳ ಬಗ್ಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಬುಡಕಟ್ಟು ಕೃಷಿಕರ ಸಂಘದ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಕುಡಿಯರ ಮುತ್ತಪ್ಪ ಆರೋಪಿಸಿದ್ದಾರೆ.
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕಾಡೆಮಿ ಅಧ್ಯಕ್ಷರ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳುವುದರೊಂದಿಗೆ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಫೆ. 27 ರವರೆಗೆ ಕಾದು ನೋಡಿ ನಂತರ ಜಿಲ್ಲೆಯ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಅಕಾಡೆಮಿ ಕಛೇರಿ ಎದುರು ನಿರಂತರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
 
‘ಕುಡಿಯರ ಮಂದ್ ನಮ್ಮೆ’ ಆಯೋಜನೆಗೆ 1 ಲಕ್ಷ ಅನುದಾನ ಒದಗಿಸುವಂತೆ ಅಕಾಡೆಮಿಗೆ ಕುಡಿಯರ ಸಮೂಹದ ಪರವಾಗಿ ಈ ಹಿಂದೆ ಮನವಿ ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ವಿಚಾರಿಸಲು ಅಕಾಡೆಮಿ ಕಛೇರಿಗೆ ತೆರಳಿದ ಸಂದರ್ಭ ಅಧ್ಯಕ್ಷರು, ನಿನಗೆ ಕಛೇರಿಗೆ ಬರುವ ಯೋಗ್ಯತೆ ಇಲ್ಲವೆಂದು ಅಗೌರವ ತೋರಿದ್ದಾರೆ. ತಾನು ಸಲ್ಲಿಸಿದ್ದ ಮನವಿಯನ್ನು ಎಸೆದು, ವರ್ಷದ ಹಿಂದೆ ನೀನು ಅಧ್ಯಕ್ಷರ ವಿರುದ್ಧ ಹೇಳಿಕೆ ನೀಡಿದ್ದೀಯ. ಇದರಿಂದ ನಿಮಗೆ ಯಾವುದೇ ಅನುದಾನವಾಗಲಿ, ಮರ್ಯಾದೆಯಾಗಲಿ ನೀಡುವುದಿಲ್ಲವೆಂದು ಗದರುವ ಮೂಲಕ ಕಛೇರಿಯಿಂದ ಹೊರಗೆ ಹೋಗು ಎಂದು ಹೇಳುವ ಮೂಲಕ ಅವಮಾನಿಸಿದ್ದಾರೆ ಎಂದು ಕುಡಿಯರ ಮುತ್ತಪ್ಪ ಆರೋಪಿಸಿದರು.
 
ಅಧ್ಯಕ್ಷರ ಈ ಕ್ರಮದ ವಿರುದ್ಧ ನಗರ ಪೊಲೀಸ್ ಠಾಣೆ ಸೇರಿದಂತೆ ಉಪ ವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ತಾವು ದೂರು ನೀಡಿದ್ದು, ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ತನಿಖೆ ನಡೆಸಿ
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ 2.50 ಕೋಟಿ ರೂ.ಗಳಷ್ಟು ಅನುದಾನವಿದೆ. ಇದರಲ್ಲಿ ಶೇ.25 ರಷ್ಟು ಹಣವನ್ನು ಪರಿಶಿಷ್ಟ ಜಾತಿಗೆ ಒಳಪಟ್ಟ ಕುಡಿಯ, ಮೇದ, ಕೆಂಬಟ್ಟಿ ಸಮೂಹದ ಸಂಸ್ಕ್ರತಿಯ ಬೆಳವಣಿಗೆಗೆ ಬಳಸಬೇಕು. ಆದರೆ, ಎಷ್ಟು ಅನುದಾನವನ್ನು ಈ ಅಧ್ಯಕ್ಷರು ಬಳಸಿದ್ದಾರೆ ಎಂದು ಪ್ರಶ್ನಿಸಿದ ಕುಡಿಯರ ಮುತ್ತಪ್ಪ ಕೊಡವ ಭಾಷಿಕ ಇತರೆ ಸಮುದಾಯಗಳ ಭಾಷಾ, ಸಂಸ್ಕ್ರತಿ, ಆಚಾರ ವಿಚಾರಗಳ ಬೆಳವಣಿಗೆಗೆ ಅಕಾಡೆಮಿಯಿಂದ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸದೆ, ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆ ನಡೆಸಿ ಸತ್ಯಾಂಶವನ್ನು ಬಯಲಿಗೆ ತರಬೇಕೆಂದು ಒತ್ತಾಯಿಸಿದರು.
 
 
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಕೊಡವ ಭಾಷೆಯನ್ನಾಡುವ ಇತರೆ ಸಮುದಾಯಗಳನ್ನು ಕಡೆಗಣಿಸಲಾಗಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಅಕಾಡೆಮಿ ಅಧ್ಯಕ್ಷರು ಸಾರ್ವಜನಿಕ ಚರ್ಚೆಗೆ ಬರಬೇಕು. ಕೊಡವ ಭಾಷಿಕ ಇತರೆ ಸಮುದಾಯಗಳಿಗೆ ಎಷ್ಟು ವೆಚ್ಚ ಮಾಡಲಾಗಿದೆ ಎನ್ನುವ ವಿವರವನ್ನು ನೀಡಬೇಕೆಂದರು.
ತನಗೆ ಯೋಗ್ಯತೆ ಇಲ್ಲದವನೆಂದು ಹೇಳಿರುವ ಅಕಾಡೆಮಿ ಅಧ್ಯಕ್ಷರು ನನ್ನೊಂದಿಗೆ ಕೊಡವ ಜಾನಪದ ‘ದೇಶ ಕಟ್ಟ್ ಪಾಟ್’ ಸ್ಪರ್ಧೆಗೆ ಬರಲಿ ಇಲ್ಲವೆ ನಮ್ಮ ಮಕ್ಕಳೊಂದಿಗೆ ಸ್ಪರ್ಧೆಗಿಳಿಯಲಿ ನಮ್ಮ ಯೋಗ್ಯತೆ ಏನೆಂದು ತೋರಿಸಿಕೊಡುವುದಾಗಿ ಸವಾಲೆಸೆದ ಕುಡಿಯರ ಮುತ್ತಪ್ಪ, ಅಕಾಡೆಮಿ ಸಮಾರಂಭಗಳಲ್ಲಿ ಕಾರ್ಯಕ್ರಮ ನೀಡುವ ಕೊಡವ ಮತ್ತು ಇತರೆ ಸಮುದಾಯಗಳ ತಂಡಗಳ ಸಂಭಾವನೆಯಲ್ಲು ತಾರತಮ್ಯವನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬುಡಕಟ್ಟು ಕೃಷಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎ.ಸೋಮಯ್ಯ, ಗೋಪಮ್ಮ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here