ಕೊಟ್ಟಾರ-ಕೋಡಿಕಲ್ ಬಂಟರ ಸಂಘ ಮಹಾಸಭೆ – ಪ್ರವಚನ

0
261

 
ವರದಿ: ಕೃಷ್ಣ ಶೆಟ್ಟಿ ಎ.
ಸಂಕಟಗಳಿಗೆ ಸ್ಪಂದಿಸುವುದು ಸಮಾಜ ಸೇವೆ : ಸಂತೋಷ್ ಗುರೂಜಿ
`ಸಮಾಜದ ವಿವಿಧ ಸಂಘಟನೆಗಳು ನಿರ್ಧಿಷ್ಟ ಧ್ಯೇಯಗಳನ್ನಿರಿಸಿ ಕೆಲಸ ಮಾಡಬೇಕು. ಉಳ್ಳವರಿಂದ ಸಂಪನ್ಮೂಲಗಳನ್ನು ಪಡೆದು, ಇಲ್ಲದವರ ಕಡೆಗೆ ಹರಿಯಗೊಡುವ ಕಾರ್ಯವಾಗಬೇಕು. ನಿಸ್ವಾರ್ಥ ದುಡಿಮೆಯೊಂದಿಗೆ ನಮ್ಮವರ ಸಂಕಟಗಳಿಗೆ ಸ್ಪಂದಿಸುವುದೇ ನಿಜವಾದ ಸಮಾಜಸೇವೆ’ ಎಂದು ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ವಿದ್ಯಾವಾಚಸ್ಪತಿ ಡಾ. ವಿಶ್ವಸಂತೋಷ ಭಾರತಿ ಶ್ರೀಪಾದಂಗಳವರು ಹೇಳಿದ್ದಾರೆ.
 
 
 
ಕೊಟ್ಟಾರ-ಕೋಡಿಕಲ್ ಬಂಟರ ಸಂಘದ ವತಿಯಿಂದ ಕೊಟ್ಟಾರ ಶ್ರೀಕೃಷ್ಣ ಜ್ಞಾನೋದಯ ಭಜನಾ ಮಂದಿರದಲ್ಲಿ ಜರಗಿದ ಮಹಾಸಭೆಯ ಅಂಗವಾಗಿ ಏರ್ಪಡಿಸಲಾದ `ಧಾರ್ಮಿಕ ಪ್ರವಚನ’ದಲ್ಲಿ ಅವರು ಮಾತನಾಡಿದರು.
 
 
`ನೈಸರ್ಗಿಕವಾದ ಮಳೆನೀರನ್ನು ಇಂಗುಗುಂಡಿಗಳಲ್ಲಿ ಶೇಖರಿಸಿ ಸದುಪಯೋಗಗೊಳಿಸುವಂತೆ, ಶ್ರೀಮಂತರ ಸಂಪತ್ತಿನ ಒಂದು ಭಾಗವನ್ನು ಸಮಾಜದ ತಳಮಟ್ಟದವರ ಅಭಿವೃದ್ಧಿಗೆ ಬಳಸಿಕೊಳ್ಳುವ ಸಲುವಾಗಿ ಕಾದಿರಿಸಬೇಕಾದ ಅಗತ್ಯವಿದೆ’ ಎಂದು ಅವರು ನುಡಿದರು.
 
 
ಕೊಟ್ಟಾರ-ಕೋಡಿಕಲ್ ಬಂಟರ ಸಂಘದ ಅಧ್ಯಕ್ಷ ಬಿ. ಕಮಲಾಕ್ಷ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಇದೇ ಸಂದರ್ಭದಲ್ಲಿ ಬಿ. ಕಮಲಾಕ್ಷ ಶೆಟ್ಟಿ ಸಿರಿಮನೆ ಅವರು ಸಂಗ್ರಹಿಸಿದ ಹಳೆಯ ನಾಣ್ಯ ಮತ್ತು ನೋಟುಗಳ ಸಂಗ್ರಹವನ್ನು ಬಾರಕೂರು ಮಹಾಸಂಸ್ಥಾನದ ವಸ್ತುಸಂಗ್ರಹಾಲಯದಲ್ಲಿ ಬಳಸಿಕೊಳ್ಳುವುದಕ್ಕಾಗಿ ಸ್ವಾಮೀಜಿಯವರಿಗೆ ಹಸ್ತಾಂತರಿಸಲಾಯಿತು.
 
 
ಬಾರಕೂರು ಮಹಾಸಂಸ್ಥಾನದ ಮಂಗಳೂರು ಘಟಕದ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಹೊಟೇಲ್ ಸುರಭಿ ಮಾಲಕ ಎ. ಸುಧೀರ್ ಪ್ರಸಾದ್ ಶೆಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಉಳ್ಳಾಲ ಬಂಟರ ಸಂಘದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಕ್ರೀಡಾ ಭಾರತಿ ಅಧ್ಯಕ್ಷ ಕೆ. ಚಂದ್ರಶೇಖರ ರೈ ಸಂಘದ ಉಪಾಧ್ಯಕ್ಷರಾದ ಪುಷ್ಪರಾಜ ಶೆಟ್ಟಿ, ತಂರ್ಜೀಗುತ್ತು ರೋಹಿತ್ ಶೆಟ್ಟಿ, ಸಂಘದ ಮಾಜಿ ಕಾರ್ಯದರ್ಶಿ ಸುನೀಲ್ ಕುಮಾರ್ ಶೆಟ್ಟಿ,, ಪದಾಧಿಕಾರಿಗಳಾದ ಶಿವಪ್ರಸಾದ್ ಶೆಟ್ಟಿ, ರೇಖಾ ಕೆ. ಶೆಟ್ಟಿ ಉಪಸ್ಥಿತರಿದ್ದರು.
 
 
ಬಂಟರ ಸಂಘದ ಉಪಾಧ್ಯಕ್ಷ ಮಧುಕರ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ ರೈ ಪ್ರಸ್ತಾವನೆ ಗೈದರು. ಮಾಜಿ ಅಧ್ಯಕ್ಷ ಮಹಾಬಲ ಚೌಟ ವಂದಿಸಿದರು. ಸಿದ್ಧಕಟ್ಟೆ ಮಲ್ಲಿಕಾ ಅಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here