ಕೃಷಿ ಯಂತ್ರೋಪಕರಣಗಳ ಬಾಡಿಗೆ ಸೇವಾ ಕೇಂದ್ರ ಕೃಷಿ ಅಭಿವೃದ್ಧಿಯ ಆಶಾಕಿರಣ

0
440

 
ವರದಿ: ಜಯಕಿರಣ್ ಶೆಟ್ಟಿ
ಸಣ್ಣ ಹಾಗೂ ಅತೀ ಸಣ್ಣ ಹಿಡುವಳಿದಾರ ರೈತರು ಆಧುನಿಕ ಯಂತ್ರೋಪಕರಣಗಳನ್ನು ಕೊಂಡುಕೊಂಡು ಉಪಯೋಗಿಸುವುದು ಕಷ್ಟ ಸಾಧ್ಯ. ಯಂತ್ರಗಳನ್ನು ಕೃಷಿ ಕ್ಷೇತ್ರದಲ್ಲಿ ಉಪಯೋಗಿಸಲು ಹಾಗೂ ನಿರ್ವಹಿಸಲು ಬೇಕಾದ ಅಗತ್ಯ ಕೌಶಲಗಳ ಕೊರತೆ ಕೂಡಾ ಕೃಷಿ ಅಭಿವೃದ್ಧಿಗೆ ತೊಡಕಾಗಿದೆ. ಈ ಹಂತದಲ್ಲಿ ಕೃಷಿ ಯಂತ್ರೋಪಕರಣಗಳ ಬಾಡಿಗೆ ಸೇವಾ ಕೇಂದ್ರ ಒಂದು ಆಶಾಕಿರಣವಾಗಿ ಮೂಡಿದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಜಯ ಕುಮಾರ ಶೆಟ್ಟಿ ಅವರು ಅಭಿಪ್ರಾಯಪಟ್ಟರು.
 
ಡಾ.ಎ.ಜಯ ಕುಮಾರ ಶೆಟ್ಟಿ ಅವರು ಕುವೆಟ್ಟುವಿನ ಮಿಂಚಿನಡ್ಕದಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕರ್ನಾಟಕ ಸರಕಾರದ ಕೃಷಿ ಇಲಾಖೆಯ ಸಹಭಾಗಿತ್ವದಲ್ಲಿ ಅನುಷ್ಠಾನಗೊಂಡಿರುವ ಕೃಷಿ ಉಪಕರಣಗಳ ಬಾಡಿಗೆ ಸೇವಾ ಕೇಂದ್ರಕ್ಕೆ ಉಜಿರೆಯ ಶ್ರೀ ಧ.ಮಂ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಸಂದರ್ಶನ ನೀಡಿದಾಗ ಮಾತನಾಡುತ್ತಿದ್ದರು.
 
ಮಿತದರದಲ್ಲಿ ನುರಿತ ನಿರ್ವಾಹಕರೊಂದಿಗೆ ಲಭ್ಯವಿರುವ ಕೃಷಿ ಯಂತ್ರೋಪಕರಣಗಳು ಕಾರ್ಮಿಕರ ಕೊರತೆ ನಿವಾರಣೆಯೊಂದಿಗೆ, ಅಗತ್ಯ ಸಮಯದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಹಕರಿಸುವ ಮೂಲಕ ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
 
ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರದ ಪ್ರಬಂಧಕ ಸಂತೋಷ್ ಅವರು ಬಾಡಿಗೆ ಸೇವಾ ಕೇಂದ್ರದಲ್ಲಿರುವ ಯಂತ್ರಗಳು ಕೃಷಿ ಕ್ಷೇತ್ರದಲ್ಲಿ ನಿರ್ವಹಿಸುವ ವಿಧಾನ ಮತ್ತು ಕೃಷಿ ಕ್ಷೇತ್ರದಲ್ಲಿ ಯಂತ್ರಗಳ ಮೂಲಕ ಕೆಲಸ ಮಾಡಿದಾಗ ಕೂಲಿಯಾಳುಗಳ ಉಳಿತಾಯದ ಬಗ್ಗೆ ಮಾಹಿತಿ ನೀಡಿದರು. ಕೃಷಿ ವಿಭಾಗದ ಮೇಲ್ವಿಚಾರಕ ಹೊನ್ನಪ್ಪ ಅವರು ಪ್ರಾದೇಶಿಕವಾಗಿ ಕೃಷಿ ಕ್ಷೇತ್ರದ ಸವಾಲುಗಳ ಬಗ್ಗೆ ತಿಳಿಸಿದರು. ಸೇವಾ ಕೇಂದ್ರದ ಚಾಲಕ ಉಲ್ಲಾಸ್, ಹೇಮಂತ್ ಅವರು ಯಂತ್ರಗಳ ಪ್ರಾತ್ಯಕ್ಷಿಕೆ ನೀಡಿದರು. ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಅಧ್ಯಾಪಕ ವಸಂತ, ಶ್ರೀ.ಧ.ಮಂ.ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಗಣರಾಜ್, ವಸಂತಿ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here