ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಸಾಲ ಸೌಲಭ್ಯ ನೀಡಿ

0
649

 
ಉಡುಪಿ ಪ್ರತಿನಿಧಿ ವರದಿ
ಜಿಲ್ಲೆಯ ಎಲ್ಲಾ ಬ್ಯಾಂಕ್ ಗಳು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ನೀಡುವಂತೆ ಎಂದು ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್ ತಿಳಿಸಿದ್ದಾರೆ.
 
ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಈ ವರ್ಷ ಜಿಲ್ಲೆಯಲ್ಲಿ 22% ಮಳೆಯ ಪ್ರಮಾಣ ಕಡಿಮೆ ಆಗಿದೆ, ಅಲ್ಲದೇ ರಬ್ಬರ್ ಮತ್ತಿತರ ಬೆಳೆಗಳ ಬೆಲೆ ಕುಸಿತ, ಕೂಲಿಕಾರರ ಸಮಸ್ಯೆಯಿಂದಿದಾಗಿ ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ಪ್ರಮಾಣದ ಸಾಲ ಸೌಲಭ್ಯಗಳನ್ನು ನೀಡುವಂತೆ ಹಾಗೂ ರೈತರ ಸಾಲ ವಸೂಲಾತಿ ಪ್ರಕರಣಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳದಂತೆ ಜಿಲ್ಲೆಯ ಎಲ್ಲಾ ಬ್ಯಾಂಕ್ ಗಳು ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.
 
 
ಜಿಲ್ಲೆಯ ಎಲ್ಲಾ ಬ್ಯಾಂಕ್ ಖಾತೆದಾರರ ಖಾತೆಗಳನ್ನು ಆಧಾರ್ ನೊಂದಿಗೆ ಲಿಂಕ್ ಮಾಡುವ ಕುರಿತಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಏಪ್ರಿಲ್ ಅಥವಾ ಮೇ ಅಂತ್ಯದ ವೇಳೆಗೆ ಆಧಾರ್ ನೊಂದಣಿ ಸಂಪೂರ್ಣಗೊಳ್ಳಲಿದೆ, ಹೊಸ ಪ್ರವಾಸಿ ನೀತಿಯಂತೆ ಆರಂಭಗೊಳ್ಳುವ ಹೋಟೆಲ್, ವಸತಿಗೃಹಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ವಿತರಿಸುವಂತೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳಾದ ಅಟಲ್ ಪಿಂಚಣಿ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಮತ್ತಿತರ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸುವಂತೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸಾಲ ಯೋಜನೆ 2016-17 ನ್ನು ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಿದರು.
 
 
ಸಿಂಡಿಕೇಟ್ ಬ್ಯಾಂಕ್ನ ಉಡುಪಿ ವಿಭಾಗೀಯ ಕಚೇರಿಯ ಸಹಾಯಕ ಮಹಾ ಪ್ರಬಂಧಕರಾದ ಪಿ ಪಲನಿ ಸ್ವಾಮಿಯವರು ಮಾತನಾಡಿ, ಜಿಲ್ಲೆಯ ಬ್ಯಾಂಕುಗಳು 2015 ಡಿಸೆಂಬರ್ ಅಂತ್ಯಕ್ಕೆ ರೂ17275.82 ಕೋಟಿ ಠೇವಣಿಯನ್ನು ಹಾಗೂ ರೂ.8703.93 ಕೋಟಿ ಮುಂಗಡವನ್ನು ಹೊಂದಿವೆ. ಜಿಲ್ಲೆಯು ವಾರ್ಷಿಕವಾಗಿ ಠೇವಣಿಯಲ್ಲಿ 13.35% ಹಾಗೂ ಮುಂಗಡದಲ್ಲಿ 13.23% ಅಭಿವೃದ್ಧಿ ಹೊಂದಿರುತ್ತದೆ. ಡಿಸೆಂಬರ್ 2015 ಅಂತ್ಯಕ್ಕೆ 50.37% ದಿಂದ 50.38% ರಷ್ಟು ಹೆಚ್ಚಳವನ್ನು ಸಾಧಿಸಿದೆ.
 
 
2015-16ನೇ ಸಾಲಿನ ಡಿಸೆಂಬರ್ ಅಂತ್ಯದವರೆಗೆ ಜಿಲ್ಲೆಯ ಬ್ಯಾಂಕುಗಳು ರೂ 4,450.80 ಕೋಟಿ ಸಾಲ ನೀಡಿ ಈ ಅವಧಿಯ ವಾರ್ಷಿಕ ಗುರಿ ರೂ.6,420 ಕೋಟಿಯ 69.33% ದಷ್ಟು ಪ್ರಗತಿಯನ್ನು ಸಾಧಿಸಿದೆ. ಇದರಲ್ಲಿ ರೂ.1223.41 ಕೋಟಿ ಕೃಷಿ ಕ್ಷೇತ್ರಕ್ಕೂ, ರೂ.1301.63 ಕೋಟಿ ಕಿರು ಹಾಗೂ ಸಣ್ಣ ಉದ್ದಿಮೆಗಳಿಗೂ, ರೂ.612 ಕೋಟಿ ಇತರ ಆದ್ಯತಾ ರಂಗದ ಉದ್ದೇಶಗಳಿಗೂ ಸಾಲ ನೀಡಿದ್ದು ಒಟ್ಟು ಆದ್ಯತಾ ರಂಗಕ್ಕೆ ನಿಗದಿಪಡಿಸಿದ ಗುರಿ ರೂ.5158.72 ಕೋಟಿಗೆ ಪ್ರತಿಯಾಗಿ ರೂ.3136.64 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಅದೇ ಅವಧಿಯಲ್ಲಿ ಆದ್ಯತೇತರ ರಂಗಕ್ಕೆ ವಾರ್ಷಿಕ ಅವಧಿಗೆ ನಿಗದಿಪಡಿಸಿದ ಗುರಿ ರೂ1261.28 ಕೋಟಿಗೆ ಪ್ರತಿಯಾಗಿ ರೂ.1314.16 ಕೋಟಿ ಸಾಲ ವಿತರಣೆ ಮಾಡಲಾಗಿದೆ.
 
 
ಪ್ರಸ್ತುತ ಹಣಕಾಸು ವರ್ಷದ 3ನೇ ತ್ರೈಮಾಸಿಕದ ಕೊನೆಯವರೆಗೆ ಬ್ಯಾಂಕುಗಳು ಜಿಲ್ಲೆಯಲ್ಲಿ ದುರ್ಬಲ ವರ್ಗದ 1,31,602 ಜನರಿಗೆ ರೂ.1348.45 ಕೋಟಿ ಸಾಲ ನೀಡಿದ್ದು, ಪ.ಜಾತಿ ಹಾಗೂ ಪ.ಪಂಗಡದ 19055 ಫಲಾನುಭವಿಗಳಿಗೆ ರೂ136.99 ಕೋಟಿ ಸಾಲವನ್ನು ನೀಡಿದೆ. ಅಲ್ಪ ಸಂಖ್ಯಾತ ವರ್ಗದ 46,545 ಜನರಿಗೆ ರೂ.967 ಕೋಟಿ ಸಾಲವನ್ನು ನೀಡಿದೆ. ಈ ಅವಧಿಯಲ್ಲಿ ಒಟ್ಟು 1,17,591 ಮಹಿಳೆಯರಿಗೆ ರೂ1,747 ಕೋಟಿ ಸಾಲ ನೀಡಲಾಗಿದ್ದು, ವಿದ್ಯಾಭ್ಯಾಸಕ್ಕಾಗಿ ಈ ವರ್ಷದಲ್ಲಿ ಒಟ್ಟು 3,771 ವಿದ್ಯಾರ್ಥಿಗಳು ರೂ.62.85 ಕೋಟಿ ಸಾಲ ಪಡೆದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 34,756 ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ರೂ.302 ಕೋಟಿ ಸಾಲ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಹಾಗೆಯೇ 21345 ಸ್ವಸಹಾಯ ಸಂಘಗಳು ರೂ.355 ಕೋಟಿ ಸಾಲ ಸೌಲಭ್ಯವನ್ನು ಹಾಗೂ 4655 ಜಂಟಿ ಭಾದ್ಯತಾ ಗುಂಪುಗಳು ರೂ.124 ಕೋಟಿ ಸಾಲ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಪ್ರಧಾನಮಂತ್ರಿ ಜನಧನ ಯೋಜನೆಯನ್ವಯ ಖಾತೆ ತೆರೆದಿರುವ ಗ್ರಾಹಕರ ಬ್ಯಾಂಕ್ ವ್ಯವಹಾರ ಹೆಚ್ಚಿಸಲು ಸಹಕಾರಿಯಾಗಿದೆ. ಪ್ರಧಾನಮಂತ್ರಿ ಜೀವನಜ್ಯೋತಿ ವಿಮೆಯಡಿಯಲ್ಲಿ 101250 ಗ್ರಾಹಕರನ್ನು ಹಾಗೂ ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ 6013 ಜನರನ್ನು ಈಗಾಗಲೇ ನೊಂದಣಿ ಮಾಡಲಾಗಿದೆ ಎಂದು ತಿಳಿಸಿದರು.
 
ನಬಾರ್ಡ್ ನ ಸಹಾಯಕ ಮಹಾ ಪ್ರಬಂಧಕ ಶ್ರೀ ಪ್ರಸಾದ್ ರಾವ್ ಮಾತನಾಡಿ, ಜಿಲ್ಲಾ ಮುಂಗಡ ಯೋಜನೆಯ ಅನುಷ್ಟಾನ ಪ್ರಗತಿ ಪರಿಶೀಲನೆ ನಡೆಸಿದರು. ಬ್ಯಾಂಕುಗಳು ಕೃಷಿ ರಂಗದ ಬಗ್ಗೆ ಇನ್ನೂ ಹೆಚ್ಚು ಗಮನ ಹರಿಸಲು ಬ್ಯಾಂಕುಗಳಿಗೆ ಕರೆ ನೀಡಿದರು. ಇತರ ಆದ್ಯತಾ ರಂಗ ಇನ್ನೂ ಹೆಚ್ಚು ಸಾಧಿಸಬೇಕಾಗಿದೆ , ಜಿಲ್ಲೆಯ ಸಾಲ ಮತ್ತು ಠೇವಣಿಯ ಅನುಪಾತ 50.38 ಇದ್ದು ಇನ್ನೂ ಹೆಚ್ಚಿಸಬೇಕಿದೆ ಎಂದರು.
ಭಾರತೀಯ ರಿಸರ್ವ್ ಬ್ಯಾಂಕ್ ನ ಸಹಾಯಕ ಪ್ರಬಂಧಕ ಲಕ್ಷ್ಮೀಪತಿಯವರು ಮಾತನಾಡಿ, ಬ್ಯಾಂಕಿಂಗ್ ಕಾರ್ಯಗಳಿಗೆ ಸಂಬಂಧಪಟ್ಟಂತೆ ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚಿಗೆ ಹೊರಡಿಸಿದ ವಿವಿಧ ಸುತ್ತೋಲೆಗಳ ಮಾಹಿತಿ ನೀಡಿದರು.
 
ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕುಗಳ ಸಾಲ ನಿರ್ವಹಣೆ ಹಾಗೂ ವಿವಿಧ ಇಲಾಖೆಗಳಿಂದ ಸರಕಾರ ನಿಯೋಜಿತ ಸಹಾಯಧನ ಯೋಜನೆಗಳ ಸೂಕ್ತ ಅನುಷ್ಟಾನದ ಮೂಲಕ ಆದ ಉತ್ತಮ ಸಾಧನೆಯನ್ನು ಶ್ಲಾಘಿಸಿದರು.
ಲೀಡ್ ಬ್ಯಾಂಕ್ ಮುಖ್ಯ ಪ್ರಬಂಧಕ ಸುಬ್ಬರಾವ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here