ಕೃಷಿ ಕ್ಷೇತ್ರಕ್ಕೆ ಆಧುನಿಕ ಸ್ಪರ್ಶ ನೀಡಿ

0
377

 
ಬೆಂಗಳೂರು ಪ್ರತಿನಿಧಿ ವರದಿ
ಕೃಷಿ ಕ್ಷೇತ್ರದಲ್ಲಿ ಬಹಳಷ್ಟು ಅವಿಷ್ಕಾರಗಳಾಗಿದ್ದರೂ, ಅವುಗಳು ಇನ್ನೂ ರೈತರನ್ನು ತಲುಪದೆ ಅವೈಜ್ಞಾನಿಕ ಕೃಷಿ ಮುಂದುವರಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಅವೈಜ್ಞಾನಿಕ ಕೃಷಿಗೆ ಕಡಿವಾಣ ಹಾಕಿ, ಕೃಷಿ ಕ್ಷೇತ್ರಕ್ಕೆ ಆಧುನಿಕ ಸ್ಪರ್ಶ ನೀಡಿ ಎಂದು ಸಲಹೆ ಮಾಡಿದರು.
 
 
 
ನಗರದ ಶೇಷಾದ್ರಿ ರಸ್ತೆಯಲ್ಲಿರುವ ಕೃಷಿ ಆಯುಕ್ತರ ಕಚೇರಿಯಲ್ಲಿ ಇಲಾಖೆಯ ಎಲ್ಲಾ ಜಿಲ್ಲೆಯ ಜಂಟಿ ನಿರ್ದೇಶಕರ ಜೊತೆಯಲ್ಲಿ ವೀಡಿಯೋ ಕಾನ್ಪೆರೆನ್ಸ್ ಮೂಲಕ ಮಾತನಾಡುತ್ತಿದ್ದ ಅವರು ಕೃಷಿಯಲ್ಲಿನ ಎಲ್ಲಾ ಸಮಸ್ಯೆಗಳಿಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡು ಹಿಡಿಯಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದ ಸಚಿವರು ವಿಶ್ವವಿದ್ಯಾಲಯಗಳು ಹಾಗೂ ಕೃಷಿ ಇಲಾಖೆಯ ನಡುವೆ ಅಂತರ ಹೆಚ್ಚಾಗುತ್ತಿದೆ. ಅಂತೆಯೇ, ಕೃಷಿ ಇಲಾಖೆ ಮತ್ತು ರೈತರ ನಡುವೆ ಅಂತರ ಹೆಚ್ಚಾಗುತ್ತಿದೆ. ಈ ಅಂತರವನ್ನು ಕಡಿಮೆ ಮಾಡಿ ಇಲಾಖೆಯ ನಡಿಗೆ ರೈತರ ಬಳಿಗೆ ಎಂಬ ಘೋಷಣೆಯೊಂದಿಗೆ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿರುವ ಕೃಷಿ ಅಭಿಯಾನವನ್ನು ಪರಿಣಾಮಕಾರಿ ಹಮ್ಮಿಕೊಂಡು ಯಶಸ್ವಿಗೊಳಿಸುವಂತೆ ಅಧಿಕಾರಿಗಳಿಗೆ ಕರೆ ನೀಡಿದರು.
 
 
 
ಕಳೆದ ವರ್ಷ ಹಮ್ಮಿಕೊಳ್ಳಲಾಗಿದ್ದ ಕೃಷಿ ಅಭಿಯಾನ ಅತ್ಯಂತ ಯಶಸ್ವಿಯಾಗಿದ್ದು, ಜನ ಪ್ರತಿನಿಧಿಗಳಿಂದ ಹಾಗೂ ರೈತ ಸಮುದಾಯದಿಂದ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೆ, ಇಲಾಖೆ ಅನುಷ್ಠಾನಗೊಳಿಸಿರುವ ಕೃಷಿಭಾಗ್ಯ ಯೋಜನೆಯ ಬಗ್ಗೆಯೂ ರೈತರು ಆಸಕ್ತಿ ತೋರಿದ್ದಾರೆ. ಉಪಯುಕ್ತ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಜಾರಿಗೆ ತಂದರೆ ಜನ ಸಮುದಾಯದಿಂದ ಉತ್ತಮ ಸ್ಪಂದನೆ ದೊರೆಯಲಿದೆ ಎಂಬುದಕ್ಕೆ ಈ ಕಾರ್ಯಕ್ರಮಗಳೇ ಸಾಕ್ಷಿ.
 
 
 
ಕೃಷಿ ಅಭಿಯಾನದದಲ್ಲಿ ಕೇವಲ ಇಲಾಖೆಯ ಸವಲತ್ತುಗಳ ಬಗ್ಗೆ ಮಾತ್ರವಲ್ಲದೆ, ಕೃಷಿಯಲ್ಲಿನ ಹೊಸ ಆವಿಷ್ಕಾರಗಳು, ವ್ಯವಸಾಯದಲ್ಲಿ ಯಂತ್ರೋಪಕರಣಗಳ ಬಳಕೆ, ಮಣ್ಣಿನ ಫಲವತ್ತತೆ ಕಾಪಾಡುವಲ್ಲಿ ಆಧ್ಯತೆ ನೀಡುವ ಬಗ್ಗೆಯೂ ರೈತರಿಗೆ ಅಗತ್ಯ ಸಲಹೆ ಹಾಗೂ ಮಾಹಿತಿ ನೀಡಬೇಕೆಂದು ಸಚಿವರು ಹೇಳಿದರು.
ಈ ಅಭಿಯಾನದ ಸಂದರ್ಭದಲ್ಲಿ ಕೃಷಿ ಇಲಾಖೆ ಜೊತೆಗೆ, ತೋಟಗಾರಿಕೆ, ಪಶುಪಾಲನೆ, ರೇಷ್ಮೆ, ಮೀನುಗಾರಿಕೆ, ಸಹಕಾರ ಇಲಾಖೆ, ರಾಜ್ಯ ಬೀಜ ನಿಗಮ ಸರ್ಕಾರಿ ಸ್ವಾಮ್ಯದ ಇತರೆ ಇಲಾಖೆಗಳನ್ನು ತೊಡಗಿಸಿಕೊಂಡು ಕೃಷಿ ಚಟುವಟಿಕೆಯಲ್ಲಿ ತಾಂತ್ರಿಕತೆಯನ್ನು ಕಡ್ಡಾಯವಾಗಿ ಬಳಸಿಕೊಳ್ಳಲು ಉತ್ತೇಜಿಸಬೇಕೆಂದರು. ಬೀಜೋತ್ಪಾದನೆಗೆ ಹೆಚ್ಚು ಒತ್ತು ನೀಡುವ ಮೂಲಕ ಸ್ವತಃ ರೈತರೇ ಬೀಜೋತ್ಪಾದನೆಗೆ ಮುಂದಾಗಲು ಪ್ರೋತ್ಸಾಹ ನೀಡಬೇಕು ಎಂದರು.
 
 
 
ಎಲ್ಲಾ ರೀತಿಯ ಬೆಳೆಗಳನ್ನು ಒಕ್ಕಣೆ ಮಾಡಿಕೊಳ್ಳಲು ಯಂತ್ರಗಳು ಬಂದಿವೆ. ಆದರೆ, ಮಾಹಿತಿ ಕೊರತೆಯಿಂದ ಅವುಗಳ ಬಳಕೆಯಾಗುತ್ತಿಲ್ಲ. ಒಕ್ಕಣೆ ಸಮಸ್ಯೆಯಿಂದಾಗಿ ಬಹಳಷ್ಟು ರೈತರು ಕೆಲ ಬೆಳೆಗಳನ್ನು ಬೆಳೆಯಲು ಹಿಂಜರಿಯುತ್ತಿದ್ದಾರೆ. ಈ ರೀತಿಯ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಲು ಅಧಿಕಾರಿಗಳು ಕಾಳಜಿವಹಿಸಬೇಕು ಎಂದು ಸಚಿವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೃಷಿ ಆಯುಕ್ತ ಪಾಂಡುರಂಗ ಬಿ ನಾಯಕ್ ಅವರು ಕೃಷಿ ಅಭಿಯಾನವವನ್ನು ಯಶಸ್ವಿಗೊಳಿಸಲು ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here