ಕೃಷಿಗಾಗಿ ತಮಿಳು ನಾಡಿಗೆ ನೀರು ಹರಿಸಲು ಸಾಧ್ಯವೇ ?

0
264

ಕುಡಿಯುವ ನೀರಿಗೆ ರಾಜ್ಯವೇ ತೀವ್ರ ಸಂಕಷ್ಟ ಎದುರಿಸುತ್ತಿರುವಾಗ ಕೃಷಿಗಾಗಿ ತಮಿಳು ನಾಡಿಗೆ ನೀರು ಹರಿಸಲು ಸಾಧ್ಯವೇ ? ನ್ಯಾಯಾಲಯಕ್ಕೆ ವಾಸ್ತವ ಚಿತ್ರಣವನ್ನು ಮನವರಿಕೆ ಮಾಡಿಕೊಡಿ ಸರ್ವಪಕ್ಷ ಮುಖಂಡರ ಸಭೆಯಲ್ಲಿ ಹೊರಹೊಮ್ಮಿದ ಒಕ್ಕೊರಲ ಧ್ವನಿ.
ಕುಡಿಯುವ ನೀರಿಗೆ ರಾಜ್ಯವೇ ತೀವ್ರ ಸಂಕಷ್ಟ ಎದುರಿಸುತ್ತಿರುವಾಗ ಕೃಷಿಗಾಗಿ ತಮಿಳು ನಾಡಿಗೆ ನೀರು ಹರಿಸಲು ಸಾಧ್ಯವೇ ? ನ್ಯಾಯಾಲಯಕ್ಕೆ ವಾಸ್ತವ ಚಿತ್ರಣವನ್ನು ಮನವರಿಕೆ ಮಾಡಿಕೊಡಿ. ಇದು ಕಾವೇರಿ ಜಲ ವಿವಾದ ಕುರಿತಂತೆ ಇಲ್ಲಿ ಇಂದು ನಡೆದ ಸರ್ವಕ್ಷಗಳ ಮುಖಂಡರ ಸಭೆಯಲ್ಲಿ ಹೊರಹೊಮ್ಮಿದ ಒಕ್ಕೊರಲ ಧ್ವನಿ.
ಕಾವೇರಿ ನ್ಯಾಯಾಧಿಕರಣದ ಐತೀರ್ಪಿನ ಆದೇಶದಂತೆ ಆಗಸ್ಟ್ ತಿಂಗಳಲ್ಲಿ 50 ಟಿ ಎಂ ಸಿ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಸೂಚಿಸುವಂತೆ ಭಾರತ ಸರ್ವೋಚ್ಛ ನ್ಯಾಯಾಲಯದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿರುವ ತಮಿಳು ನಾಡು ಸರ್ಕಾರದ ಕ್ರಮದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷಗಳ ಸದನ ನಾಯಕರು, ರಾಜ್ಯದ ಸಂಸತ್ಸದಸ್ಯರು, ಕಾನೂನು ಹಾಗೂ ನೀರಾವರಿ ತಜ್ಞರ ಸಭೆಯಲ್ಲಿ ಪರಿಸ್ಥಿತಿಯ ಪರಿಶೀಲನೆ ನಡೆಯತು. ಕಾವೇರಿ ಕಣಿವೆಯ ಕಬಿನಿ, ಹಾರಂಗಿ, ಹೇಮಾವತಿ ಹಾಗೂ ಕೃಷ್ಣರಾಜ ಸಾಗರ ಒಳಗೊಂಡಂತೆ ನಾಲ್ಕೂ ಜಲಾಶಯಗಳ ಒಟ್ಟು ಸಂಗ್ರಹಣಾ ಸಾಮಥ್ರ್ಯ 114 ಟಿ ಎಂ ಸಿ. ಅದರಲ್ಲಿ 10 ಟಿ ಎಂ ಸಿ ಜಡ ಸಂಗ್ರಹ (ಡೆಡ್ ಸ್ಟೋರೇಜ್) ಹೊರತು ಪಡಿಸಿದರೆ 104 ಟಿ ಎಂ ಸಿ ನೀರು ಮಾತ್ರ ಬಳಕೆಗೆ ಲಭ್ಯವಿರುತ್ತದೆ.
ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಕೊರತೆಯಿಂದ ನೀರು ಸಂಗ್ರಹದ ಪ್ರಮಾಣದಲ್ಲಿ ಶೇಕಡಾ 45 ರಷ್ಟು ಕಡಿಮೆ ಇದೆ. ಪ್ರಸ್ತುತ ಎಲ್ಲಾ ಜಲಾಶಯಗಳಲ್ಲಿ ಲಭ್ಯವಿರುವ ಒಟ್ಟಾರೆ ನೀರು ಸಂಗ್ರಹದ ಪ್ರಮಾಣ 51 ಟಿ ಎಂ ಸಿ. ಅದರಲ್ಲಿ ಜಡ ಸಂಗ್ರಹ 10 ಟಿ ಎಂ ಸಿ ಹೊರತುಪಡಿಸಿದರೆ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣ ಕೇವಲ 41 ಟಿ ಎಂ ಸಿ. ಬೆಂಗಳೂರು ಮತ್ತು ಮೈಸೂರು ಒಳಗೊಂಡಂತೆ ನಡುವಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆಗೆ ಅಗತ್ಯವಿರುವ ನೀರಿನ ಪ್ರಮಾಣ ಕನಿಷ್ಠ 40 ಟಿ ಎಂ ಸಿ. ಅಂದರೆ ವಾಸ್ತವವಾಗಿ ಕುಡಿಯುವ ನೀರು ಒದಗಿಸುವುದೇ ಒಂದು ಸವಾಲಾಗಿದೆ. ರಾಜ್ಯದಲ್ಲಿ ಬೆಳೆದು ನಿಂತ ಬೆಳೆಗಳ ರಕ್ಷಣೆ ಹೇಗೆ ? ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಈ ಎಲ್ಲಾ ಅಂಕಿ-ಅಂಶಗಳನ್ನು ಅವಲೋಕಿಸಿದರೆ ರಾಜ್ಯವು ಸಂಕಷ್ಟ ವರ್ಷದಲ್ಲಿದೆ ಎಂಬುದು ಸುಸ್ಪಷ್ಟವಾಗುತ್ತದೆ. ಆದರೆ, ವಾಸ್ತವಾಂಶಗಳನ್ನು ಮರೆಮಾಚಿ, ರಾಜ್ಯವು ಸ್ವಾಭಾವಿಕ ವರ್ಷದಲ್ಲಿದೆ ಎಂಬಂತೆ ಬಿಂಬಿಸಿ ತಮಿಳು ನಾಡು ತನ್ನ ಕುರುವೈ ಬೆಳೆಗೆ ನೀರುಬೇಕೆಂದು ನ್ಯಾಯಾಲಯದ ಮೊರೆ ಹೋಗಿರುವುದು ಸಮಂಜಸವಲ್ಲ ಎಂಬುದು ಎಲ್ಲಾ ಮುಖಂಡರ ಸರ್ವಸಮ್ಮತ ಅಭಿಪ್ರಾಯವಾಗಿತ್ತು.
ತಮಿಳುನಾಡು ವಾದವೇನು ?
ಭಾರತೀಯ ಹವಾಮಾನ ಇಲಾಖೆಯ ಮಳೆ ಪ್ರಮಾಣದ ಅಂಕಿ-ಅಂಶಗಳನ್ನು ಉಲ್ಲೇಖಿಸಿ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತಲೂ ಶೇಕಡಾ ಎರಡರಷ್ಟು ಮಾತ್ರ ಕಡಿಮೆ ಮಳೆಯಾಗಿದೆ ಎಂದು ತನ್ನ ಮಧ್ಯಂತರ ಅರ್ಜಿಯಲ್ಲಿ ತಿಳಿಸಿರುವ ತಮಿಳುನಾಡು ತನಗೆ ಸ್ವಾಭಾವಿಕ ವರ್ಷದಲ್ಲಿ ಕರ್ನಾಟಕವು ಜೂನ್ ತಿಂಗಳಲ್ಲಿ 10 ಟಿ ಎಂ ಸಿ, ಜುಲೈ ತಿಂಗಳಲ್ಲಿ 34 ಟಿ ಎಂ ಸಿ ಹಾಗೂ ಆಗಸ್ಟ್ ತಿಂಗಳಲ್ಲಿ 50 ಟಿ ಎಂ ಸಿ ನೀರು ಬಿಡುಗಡೆ ಮಾಡಬೇಕು. ಆದಕಾರಣ, ಕೂಡಲೇ 50 ಟಿ ಎಂ ಸಿ ನೀರು ಬಿಡುಗಡೆಗೆ ಆದೇಶಿಸಬೇಕೆಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಮನವಿ ಮಾಡಿದೆ. ಆದರೆ, ಮಳೆ ಪ್ರಮಾಣವನ್ನು ಆಧರಿಸಿ, ನೀರು ಬಿಡುಗಡೆಗೆ ತಮಿಳು ನಾಡು ಕೋರಿಕೆ ಸಲ್ಲಿಸಿರುವುದು ನ್ಯಾಯ ಸಮ್ಮತವಲ್ಲ. ವಾಸ್ತವಾಂಶಗಳನ್ನು ಆಧರಿಸಿ, ತಮಿಳುನಾಡು ನೀರು ಬಿಡುಗಡೆಗೆ ಮನವಿ ಮಾಡಬೇಕಿತ್ತು. ತಮಿಳುನಾಡಿನ ಈ ತಗಾದೆಯ ಮೂಲ ಉದ್ದೇಶ ಕಾವೇರಿ ನಿರ್ವಹಣಾ ಮಂಡಳಿಯ ರಚನೆಗೆ ಬೇಡಿಕೆ ಇಡುವುದೇ ಆಗಿದೆ. ಇದಕ್ಕೆ ರಾಜ್ಯದ ಕಡು ವಿರೋಧವಿದೆ ಎಂಬುದು ರಾಜ್ಯ ನಾಯಕರ ಸ್ಪಷ್ಟೋಕ್ತಿ.
ಇದು ವಾಸ್ತವ !
ದಕ್ಷಿಣ ಒಳನಾಡಿನ ವ್ಯಾಪ್ತಿಗೆ 16 ಜಿಲ್ಲೆಗಳು ಬರುತ್ತವೆ. ಅದರಲ್ಲಿ ಕಾವೇರಿ ಕಣಿವೆ ಪ್ರದೇಶ ಕೇವಲ ಶೇಕಡಾ 37. ಈ ಪ್ರದೇಶದಲ್ಲಿ ಮುಂಗಾರು ಪೂರ್ವ ಮಳೆ ಶೇಕಡಾ 35 ರಷ್ಟು ಕೊರತೆಯಾಗಿದೆ. ಕೃಷ್ಣರಾಜ ಸಾಗರ ಪ್ರದೇಶದಲ್ಲಿ ಜುಲೈನಲ್ಲಿ ಶೇಕಡಾ 28 ಹಾಗೂ ಆಗಸ್ಟ್‍ನಲ್ಲಿ ಶೇಕಡಾ 42 ರಷ್ಟು ಮಳೆ ಕಡಿಮೆಯಾಗಿದೆ. ಜೂನ್ 1 ರಿಂದ ಆಗಸ್ಟ್ 26 ರ ಅವಧಿಯಲ್ಲಿನ 12 ವಾರಗಳಲ್ಲಿ 10 ವಾರಗಳಲ್ಲಿ ವಾಡಿಕೆಗಿಂತಲೂ ಮಳೆ ಕಡಿಮೆಯಾಗಿದೆ. ಇದರ ಪರಿಣಾಮ ಕಾವೇರಿ ಕಣಿವೆಯ ಜಲಾಶಯಗಳಲ್ಲಿನ ನೀರು ಸಂಗ್ರಹದಲ್ಲಿ ತೀವ್ರ ಕುಸಿತ ಉಂಟಾಗಿದೆ. ಈ ಪ್ರದೇಶದಲ್ಲಿ 63,000 ಹೆಕ್ಟೇರ್ ಭತ್ತದ ಬೆಳೆಗೆ ಪ್ರತಿಯಾಗಿ ಕೇವಲ ಶೇಕಡಾ 8 ರಷ್ಟು ಪ್ರದೇಶದಲ್ಲಿ ನಾಟಿಯಾಗಿದೆ. ಅಲ್ಲದೆ, 24,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲು ಸಿದ್ಧತೆ ನಡೆದಿದೆ. ಶೇಕಡಾ 52 ರಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪ್ರಾರಂಭವಾಗಿಲ್ಲ. ಕಬ್ಬು ಬೆಳೆಯ ಪರಿಸ್ಥಿತಿಯೂ ಇದಕ್ಕಿಂತಲೂ ಭಿನ್ನವಾಗಿಲ್ಲ. ಮುಂಗಾರು ವೈಫಲ್ಯದಿಂದ ರಾಜ್ಯವು ತೀವ್ರ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಕುಡಿಯುವ ನೀರು ಪೂರೈಕೆಗೆ ಅತ್ಯಾಧ್ಯತೆ ನೀಡಬೇಕಿದೆ. ಬೆಳೆದು ನಿಂತ ಬೆಳೆಯ ರಕ್ಷಣೆಯೂ ನಮ್ಮ ಹೊಣೆಯಾಗಿದೆ. ಅದು ಹೇಗೆ ? ಎಂಬುದಕ್ಕೆ ಇನ್ನೂ ಉತ್ತರ ನಿಗೂಢವೇ ಆಗಿದೆ. ಆದರೆ, ನೀರು ಬಿಡುಗಡೆಗೆ ನ್ಯಾಯಾಲಯದ ಮೊರೆ ಹೋಗಿರುವ ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಈ ದಿನ 34 ಟಿ ಎಂ ಸಿ ನೀರು ಸಂಗ್ರಹವಿದೆ. ಇದು ವಾಸ್ತವ !
ಸಭೆಯ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳ ಬೆಂಬಲಕ್ಕೆ ಧನ್ಯವಾದ ಅರ್ಪಿಸಿ, ವಾಸ್ತವದ ಚಿತ್ರಣವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯದ ಪರ ಕಾನೂನು ತಂಡ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here