ಕುಷ್ಟಗಿಯಲ್ಲಿ ಪರಿವರ್ತನೆಯ ಗಾಳಿ

0
579

ನಮ್ಮ ಪ್ರತಿನಿಧಿ ವರದಿ
ಕಾರ್ಯ ಮಿಂಚಿದ ಮೇಲೆ ಚಿಂತಿಸಿ ಫಲವಿಲ್ಲ. ತಂದೆ ತಾಯಿ ಇದ್ದಾಗ ಮಾಡದ ಸೇವೆ ಅವರು ಕಳೆದ ಮೇಲೆ ಸ್ಮಾರಕ ಕಟ್ಟಿ ಪ್ರಯೋಜನವಿಲ್ಲ. ಗೋವುಗಳ ತಳಿಗಳೂ ಹಾಗೆ. ಮರೆಯಾದ ತಳಿಗಳನ್ನು ಮರಳಿ ತರಲು ಸಾಧ್ಯವಿಲ್ಲ. ಹಾಗಾಗಿ ದೇಸಿ ಗೋವುಗಳ ರಕ್ಷಣೆಗಾಗಿಯೇ ಮಂಗಲಗೋಯಾತ್ರೆ ಎಂದು ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
 
mata-go_kustagi1
 
ಕುಷ್ಟಗಿಯ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮಚಂದ್ರಾಪುರಮಠ ಆಯೋಜಿಸಿರುವ ಮಂಗಲಗೋಯಾತ್ರೆಯ ಅಂಗವಾಗಿ ನಡೆದ ಸುರಭಿ ಸಂತ ಸಂಗಮ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, ಮಂಗಲಗೋಯಾತ್ರೆ ಕುಷ್ಟಗಿ ಪ್ರವೇಶಿಸುವ ವೇಳೆಗೆ ಪ್ರಬಲ ಗಾಳಿ ಬೀಸುತ್ತಿತ್ತು. ಅಂದರೆ ಗೋಯಾತ್ರೆ ಎನ್ನುವುದು ಕುಷ್ಟಗಿಯಲ್ಲಿ ಪರಿವರ್ತನೆಯ ಗಾಳಿ ಬೀಸಿದೆ ಎನ್ನುವುದು ಖಾತ್ರಿಯಾದ ಸ್ವರೂಪವಿದು ಎಂದರು. ಭಾರತೀಯರಿಗೆ ಮಾತ್ರ ದೇವರಿಂದ ವರವಾಗಿ ದಕ್ಕಿರುವಂತದ್ದು ನಮ್ಮ ಗೋತಳಿಗಳು. ಆದರೆ ಇಲ್ಲಿಯೇ ಕ್ಷಣ ಕ್ಷಣಕ್ಕೂ ಗೋಹತ್ಯೆ ನಡೆಯುತ್ತಿದೆ. ಪುಂಗನೂರು, ಕೃಷ್ಣಾ, ವೆಚ್ಯೂರ್ ತಳಿಯಂತವು ಈಗಾಗಲೇ ವಿನಾಶದಂಚಿನಲ್ಲಿದೆ. ಇವುಗಳ ಉಳಿವನ್ನು ಬಯಸುವುದೇ ಆದರೆ ಸಂಘರ್ಷವಿಲ್ಲದೇ, ಗೋಮೂತ್ರ, ಗೋಮಯಗಳನ್ನು ಆದರಿಸಿಯೇ ನಾವು ಗೋವುಗಳನ್ನೂ ಉಳಿಸಬಹುದಾಗಿದೆ ಎಂದರು.
 
 
ಗೋರಕ್ಷಣೆಯಾದರೆ ಅದೇ “ನಮಗೆ” ಕಾಣಿಕೆ
ಯಾರ ಹತ್ತಿರ ದೇಸಿ ಗೋವುಗಳಿದೆಯೋ ಅವರನ್ನು ಗೋವೆ ಸಾಕುತ್ತದೆ. ವಿಜ್ಞಾನದ ದೃಷ್ಟಿಯಿಂದ ಅಸಂಗತವಾದ ತಳಿಸಂಕರವನ್ನು ನೀವು ಸರಿಯೆಂದು ಭಾವಿಸುವುದಾದರೆ ಇನ್ನೊಮ್ಮೆ ಎಮ್ಮೆ ಆಕಳುಗಳ ಸಂಕರವನ್ನೂ ಒಪ್ಪಬೇಕಾದ ಸಂದರ್ಭ ಒದಗಬಹುದು. ಉತ್ತರವಿಲ್ಲದ ಅನೇಕ ಪ್ರಶ್ನೆಗಳಿಗೆ ಗೋವು ಉತ್ತರವಾಗಬಲ್ಲುದು. ವಿದ್ಯುತ್ ಉತ್ಪಾದನೆಯ ಮಾರ್ಗವಾಗಿ, ಆರೋಗ್ಯದ ಏಕಮಾತ್ರ ಸೂತ್ರವಾಗಿ, ಇಂಧನದ ಪರ್ಯಾಯ ವ್ಯವಸ್ಥೆಯಾಗಿ, ಹೀಗೆ ಅನೇಕ ಬಗೆಯಲ್ಲಿ ದೇಸಿ ಗೋವುಗಳು ಲಾಭದಾಯಕವಾಗಿದೆ. ಇಂತಹಾ ಗೋವಿನ ರಕ್ಷಣೆಯಾದರೆ ಅದೇ ನಮಗೆ ನೀಡುವ ಕಾಣಿಕೆ ಎಂದು ಹೇಳಿದರು.
 
 
ದತ್ತಜಯಂತಿಯಂದು “ಶ್ರೀ”ದತ್ತ ನುಡಿ
ದತ್ತ ಜಯಂತಿಯಂದು ಯೋಚಿಸಬೇಕಾದ್ದೇನೆಂದರೆ, “ಅತ್ರಿ”ಸಂಜಾತ ದತ್ತಾತ್ರೇಯ ಗೋವನ್ನು ಆದರಿಸಿ ನಿಂತಿರುವಂತೆಯೇ ಸೃಷ್ಟಿ ಗೋವನ್ನು ಆದರಿಸಿದೆ ಎನ್ನುವುದನ್ನು ಜನರು ಅರಿಯಬೇಕಾಗಿದೆ. ಹಾಲು ಕುಡಿದವರೆಲ್ಲರೂ ಇದಕ್ಕಾಗಿ ಒಂದಾಗಬೇಕಿದೆ. ಈ ಯಾತ್ರೆ ನಡೆಯುತ್ತಿರುವುದು ಗೋಹತ್ಯೆಗಲ್ಲ, ಗೋರಕ್ಷೆಗಾಗಿ. ರಕ್ತದ ಕೆಂಪಿಗಾಗಿಯಲ್ಲ, ಶ್ವೇತಕ್ಷೀರಕ್ಕಾಗಿ‌. ಬರಗಾಲದಲ್ಲಿ ಅಲ್ಲ, ಭೂಮಿ ಹಸನಾಗಲಾಗಿಯೇ ಗೋರಕ್ಷಣೆ ಎನ್ನುವುದು ಎಲ್ಲರೂ ಮನಗಂಡು, ನಮ್ಮೆಲ್ಲರಿಗಾಗಿ ಗೋವನ್ನು ಉಳಿಸಬೇಕಾದ ಅನಿವಾರ್ಯತೆ ಇಂದಿದೆ ಎಂದು ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಗೋಸಂದೇಶ ನೀಡಿದರು.
 
 
ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಹೇಗೆ ಪ್ರಜೆಗಳನ್ನು ಪಾಲಿಸುವುದು ರಾಜರ ಧರ್ಮವೋ, ಮಗನನ್ನು ಜೋಪಾನ ಮಾಡುವುದು ತಾಯಿಯ ಧರ್ಮವೋ, ತಾಯಿಯ ಜೋಪಾನ ಮಾಡುವುದು ಮಗನ ಧರ್ಮವೋ, ಹಾಗೆಯೇ ಗೋವುಗಳ ರಕ್ಷಣೆ ಮಾನವಧರ್ಮವೇ ಆಗಿದೆ. ಗೋವಿನ ಸಗಣಿಯಲ್ಲೇ ಆರೋಗ್ಯವರ್ಧಕ ಶಕ್ತಿಯಿದೆ ಎಂದಾದರೆ ಇಡೀ ಹಸುವಿನಲ್ಲಿ ಎಷ್ಟು ಶಕ್ತಿಗಳು ಅಡಗಿರಬೇಕು. ಹಾಗಾಗಿ ಸಮಾಜದಲ್ಲಿ ನೀತಿ, ಧರ್ಮ ಉಳಿಯಬೇಕು ಎಂದಾದರೆ ಗೋವು ಉಳಿಯಲೇಬೇಕಿದೆ ಎಂದರು.
 
 
ಹರಿದ್ವಾರದ ನಾಗಾಸನ್ಯಾಸಿಗಳಾದ ಶ್ರೀ ಸಹದೇವಾನಂದಗಿರಿ ಸ್ವಾಮೀಜಿಯವರು ಮಾತನಾಡಿ, ಗೋವಿನ ಸೇವೆಗಾಗಿ ಮಹಾವಿಷ್ಣುವೇ ಕೃಷ್ಣನ ಅವತಾರವನ್ನು ತಾಳಿ ಬಂದಿದ್ದಾನೆ. ಋಷಿಮುನಿಗಳು, ರಾಜ ಮಹಾರಾಜರೆಲ್ಲರೂ ಗೋವಿನ ಪಾಲನೆಯಿಂದಲೇ ಶ್ರೇಯಸ್ಸನ್ನು ಹೊಂದಿದ್ದಾರೆ. ಇಂದಿನ ದಿನಗಳಲ್ಲಿ ಗೋಮಾತೆಯನ್ನು ಗೋಶಾಲೆಯ ಬದಲು ಬೀದಿಗಳಲ್ಲಿ ಕಾಣುತ್ತಿದ್ದೇವೆ. ಈ ಬಗೆಯ ಗೋವಿನ ಮೇಲಿನ ದೌರ್ಜನ್ಯ ಮುಂದುವರೆದರೆ ಮುಂದೊಂದು ದಿನ ಗೋವು ಮತ್ತು ನಾವು ಯಾರೂ ಉಳಿಯಲು ಸಾಧ್ಯವಿಲ್ಲ. ಇಂತಹಾ ಗೋಮಾತೆಗಾಗಿ ಗೋಯಾತ್ರೆಯನ್ನು ನಡೆಸುತ್ತಿರುವ ರಾಘವೇಶ್ವರ ಶ್ರೀಗಳ ಕಾರ್ಯ ಅಪೂರ್ವವಾದದ್ದು ಎಂದರು.
 
 
ಕಾರ್ಯಕ್ರಮದ ನಂತರ ಗೋಪ್ರೇಮಿ ಯುವಕರನ್ನೊಳಗೊಂಡ ಗೋರಥಗಳು ಕುಷ್ಟಗಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಸುಗಳ ಪ್ರಾಮುಖ್ಯತೆಯನ್ನು ಸಾರಿತು. ಈ ಸಂದರ್ಭದಲ್ಲಿ ಕುಷ್ಟಗಿಯ ಶಾಸಕರಾದ ದೊಡ್ಡನಗೌಡ ಪಾಟೀಲ್, ಗೋಪ್ರೇಮಿ ಗಣ್ಯರಾದ ವೀರೇಶ್ ಬಂಗಾರಶೆಟ್ಟರು, ಅಮರೇಗೌಡ ಬಯ್ಯಪ್ಪ ಮೊದಲಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here