ಕಾಶ್ಮೀರ ಹಿಂಸಾಚಾರದ ನೇತೃತ್ವ ವಹಿಸಿದ್ದು ಲಷ್ಕರ್ ಸಂಘಟನೆ

0
404

 
ವರದಿ: ಲೇಖಾ
ಹಿಜ್ಬುಲ್‌ ಮುಜಾಹಿದ್ದೀನ್‌ ಕಮಾಂಡರ್‌ ಬುರ್ಹಾನ್‌ ವಾನಿ ಹತ್ಯೆಯ ಬಳಿಕ ಜಮ್ಮು-ಕಾಶ್ಮೀರದಲ್ಲಿ ನಡೆದ ಹಿಂಸಾಚಾರ, ಗಲಭೆಗಳ ನೇತೃತ್ವವನ್ನು ವಹಿಸಿದ್ದು ನಿಷೇಧಿತ ಲಷ್ಕರ್‌ ಎ ತೊಯ್ಬಾ ಭಯೋತ್ಪಾದಕ ಸಂಘಟನೆ ಎಂದು ಜಮಾತ್‌ ಉದ್‌ ದಾವಾ ಮುಖ್ಯಸ್ಥ ಹಫೀಜ್‌ ಸಯೀದ್‌ ಹೇಳಿದ್ದಾನೆ.
 
 
ಪಾಕಿಸ್ತಾನದ ಫೈಸಲಾಬಾದ್ ನಲ್ಲಿ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಸಯೀದ್‌, ಕಾಶ್ಮೀರದಲ್ಲಿ ಲಕ್ಷಾಂತರ ಜನರು ಬೀದಿಗಿಳಿದಿದ್ದನ್ನು ನೋಡಿದ್ದೀರಾ? ಬೀದಿಗಿಳಿದು ನಡೆಸಿದ ಮುಜಾಫರ್ ವನಿಯ ಶವಯಾತ್ರೆಯ ನೇತೃತ್ವ ವಹಿಸಿದ್ದು ಯಾರು ಗೊತ್ತಾ? ಆ ವ್ಯಕ್ತಿ ಲಷ್ಕರ್-ಎ- ತಯ್ಬಾ ಉಗ್ರ ಸಂಘಟನೆಗೆ ಸೇರಿದ ವ್ಯಕ್ತಿ ಎಂದು ಹೇಳಿದ್ದಾನೆ.
 
 
ಲಕ್ಷಾಂತರ ಕಾಶ್ಮೀರಿಗಳು ತಮ್ಮ ಹೆಗಲ ಮೇಲೆ ಯಾರನ್ನು ಹೊತ್ತೂಯ್ಯುತ್ತಿದ್ದರು ಗೊತ್ತೇ? ಈ ಮೆರವಣಿಗೆಯ ನೇತೃತ್ವ ವಹಿಸಿದ್ದು ಯಾರು ಗೊತ್ತೇ? ಆತ ಲಷ್ಕರ್‌ ಎ ತೊಯ್ಬಾ ಸಂಘಟನೆಯ ಅಮೀರ್‌ (ಮುಖ್ಯಸ್ಥ) ಎಂದು ಉಗ್ರ ವಾನಿಯನ್ನು ಹೊಗಳಿದ್ದಾನೆ. ಜೊತೆಗೆ ಅನೇಕ ಮಂದಿ ಫೈಸಲಾಬಾದ್‌ನಿಂದ ಕಾಶ್ಮೀರಕ್ಕೆ ತೆರಳಿ, ಸೇನೆಯೊಂದಿಗೆ ಕಾದಾಡಿ ಸಾವಪ್ಪಿದ್ದಾರೆ ಎಂದು ಸಯೀದ್‌ ಹೇಳಿಕೊಂಡಿದ್ದಾನೆ.
 
 
ಇದೇ ವೇಳೆ ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಪೆಟ್ಟುತಿಂದವರ ನೆರವಿಗೆ ಧಾವಿಸಲು ನಾವು ವೈದ್ಯರ ನೆರವು ಪ್ರಕಟಿಸಿದರೂ, ಅದನ್ನು ತಿರಸ್ಕರಿಸುವ ಮೂಲಕ ಭಾರತ ಅಮಾನವೀಯತೆ ಮೆರೆದಿದೆ ಎಂದು ಟೀಕಿಸಿದ್ದಾನೆ.
 
 
ಜೊತೆಗೆ ಕಾಶ್ಮೀರ ಒಂದು ದಿನ ಪಾಕಿಸ್ತಾನದ ಭಾಗವಾಗಲಿದ್ದು, ಭಾರತ ಚೂರು ಚೂರಾಗುವುದಕ್ಕೆ ಜಗತ್ತು ಸಾಕ್ಷಿಯಾಗಲಿದೆ ಎಂದು ಹೇಳಿದ್ದಾನೆ ಎಂದು ಹೇಳಿಕೆ ನೀಡಿದ್ದಾನೆ.

LEAVE A REPLY

Please enter your comment!
Please enter your name here