ಕಾವಿ ವಸ್ತ್ರವನ್ನು ಅಸ್ತ್ರ ಮಾಡಿಕೊಂಡಿದ್ದೀರಲ್ಲ..!

0
659

ನಿತ್ಯ ಅಂಕಣ:೨೩

ಕೊರಳಲ್ಲಿ ರುದ್ರಾಕ್ಷಿ ಮಣಿಗಳ ಮಾಲೆ, ಹಣೆಯಲ್ಲಿ ವಿಭೂತಿಯ ಮೂರು ಅಡ್ಡನಾಮ, ಹೆಗಲ ಮೇಲೊಂದು ಜೋಳಿಗೆ, ಗಡ್ಡ ಬಿಟ್ಟು, ಮೈತುಂಬ ಕಾವಿ ಬಟ್ಟೆ ಧರಿಸಿರುವ, ಈರ್ವರು ಸಾಧುಗಳು, ನಿತ್ಯಾನಂದ ಸ್ವಾಮಿಗಳ ಬಳಿಗೆ ಬಂದು ದರ್ಶನ ಪಡೆಯುತ್ತಾರೆ. ತಾವಿಬ್ಬರು ಹಿಮಾಲಯದಿಂದ ಬಂದವರೆಂದು ಪರಿಚಯಿಸಿ ಕೊಳ್ಳುತ್ತಾರೆ. ಲೌಕಿಕ ಜೀವನದಿಂದ ಹೊರಬಂದು ಜಪ ತಪ ಅನುಷ್ಠಾನಗಳ ಮಾಡುತ್ತ, ಆಧ್ಯಾತ್ಮ ಸಾಧನೆಯಲ್ಲಿ ನಿರತರಾಗಿದ್ದೇವೆ. ನಮ್ಮ ಗುರುಗಳ ಆಜ್ಞೆಯಂತೆ, ಪವಿತ್ರ ತೀರ್ಥ ಕ್ಷೇತ್ರಗಳ ದರ್ಶನ ಮಾಡಲೆಂದು, ದಕ್ಷಿಣ ಭಾರತದ ಕಡೆಗೆ ಸಂಚಾರ ಹೊರಟಿದ್ದೇವೆ. ಸಂಚಾರದಲ್ಲಿ ಇದ್ದಾಗ ಗಣೇಶಪುರಿಯಲ್ಲಿ ಒಬ್ಬರು ಅವಧೂತ ಮಹಾತ್ಮರು ಇದ್ದಾರೆಂಬ ಶುಭವಾರ್ತೆ ತಿಳಿದು ಬಂದಿತು. ತಮ್ಮ ದರ್ಶನ ಪಡೆಯಲು ಬಂದೆವು, ಎಂದು ಸಾಧುಗಳು ತಮ್ಮನ್ನು ಗುರುದೇವರಲ್ಲಿ ಪರಿಚಯಿಸಿ ಕೊಳ್ಳುತ್ತಾರೆ. ಅವರ ಮಾತುಗಳಿಗೆ ಗುರುದೇವರು ಪ್ರತಿಕ್ರಿಯಿಸುದಿಲ್ಲ. ಮತ್ತು ಏನನ್ನೂ ಅವರಲ್ಲಿ ಪ್ರಶ್ನಿಸುವುದಿಲ್ಲ. ಮೌನರಾಗಿ ಇರುತ್ತಾರೆ.

ನಂತರ ಸಾಧುಗಳಿಬ್ಬರು… “ತಾವು ಮುಂದೆ ಪ್ರಯಾಣ ಬೆಳೆಸುತ್ತೇವೆ. ವಸ್ತ್ರ, ದಕ್ಷಿಣೆ ನೀಡುವಂತೆ, ನಿತ್ಯಾನಂದರಲ್ಲಿ ಹೇಳುತ್ತಾರೆ. ಅಷ್ಟುಹೊತ್ತು ಮೌನರಾಗಿದ್ದ ಗುರುದೇವರು.. ಒಮ್ಮೆಗೆ ನಗುತ್ತಾರೆ..! ತಾವು ನಟನೆಯನ್ನು ಉತ್ತಮವಾಗಿ ಮಾಡುತ್ತೀದ್ದಿರಾ..! ನಟನೆಗೆಂದು ಧರಿಸಿರಿವ ಪೋಷಾಕು ಬಹಳ ಚೆನ್ನಾಗಿದೆ. ಬದುಕಲು ಪವಿತ್ರವಾದ ಕಾವಿ ವಸ್ತ್ರವನ್ನು ಅಸ್ತ್ರ ಮಾಡಿಕೊಂಡಿದ್ದೀರಲ್ಲ..! ಇದುವರೆಗೆ ವಂಚಿಸಿದಾಯಿತು. ಮತ್ತೆ ಯಾರನ್ನೂ ವಂಚಿಸಲು ಹೋಗ ಬೇಡಿ..! ಸೋಮಾರಿತನ ಬಿಡಲು ಪ್ರಯತ್ನಿಸಿ..! ಎಂದು ಹೇಳಿದಾಗ, ಸಾಧುಗಳು ಬೆವರುತ್ತಾರೆ. ನಮ್ಮ ಕಪಟ ನಾಟಕ ಮತ್ತೆ ನಡೆಯದು ಎಂದು, ಗುರುದೇವರ ಕಾಲಿಗೆರಗಿ ಕ್ಷಮೆಯಾಚಿಸಿ ಸಾಧುಗಳು ಮುಂದೆ ತೆರಳುತ್ತಾರೆ.

ಗುರುದೇವರ ಬಳಿಗೆ ಬಂದ ಸಾಧುಗಳು ನಿಜವಾದ ಸಾಧುಗಳಾಗಿರಲಿಲ್ಲ. ಅವರೀರ್ವರು ಕಾವಿ ಬಟ್ಟೆ ಧರಿಸಿ ಅಲೆಮಾರಿಗಳಾಗಿ, ತಿಂದುಂಡು ವಿಲಾಸಿ ಜೀವನ ನಡೆಸುತ್ತಿದ್ದವರು. ನಿತ್ಯಾನಂದ ಸ್ವಾಮಿಗಳ ಬಳಿ ಹೋದರೆ ಒಂದಿಷ್ಟು ಹಣ ಸಿಗಬಹುದು ಎಂಬುವುದು ಅವರ ಆಲೋಚನೆ ಆಗಿತ್ತು. ಅಂದರೆ ಆ ಸಮಯದಲ್ಲಿ ಬಾಬಾರು ತಾವು ಉಟ್ಟಿರುವ ಲಂಗೋಟಿಯಿಂದ ಹಣ ತೆಗುದು ಕೋಡುತ್ತಾರೆ, ಎಂಬ ಪವಾಡದ ಸುದ್ಧಿಯು ಬಹಳವಾಗಿ ಪ್ರಚಾರದಲ್ಲಿತ್ತು. ಆದರೆ.. ಕಾಲಜ್ಞಾನಿಗಳಾದ ನಿತ್ಯಾನಂದ ಸ್ವಾಮಿಗಳ ಎದುರು, ಅವರ ಕಪಟ ನಾಟಕವು ನಡೆದಿತೇ ಹೇಳಿ..! ಅವರಿಬ್ಬರ ಬಣ್ಣವನ್ನು ಬಯಲು ಮಾಡಿಯೇ ಬಿಟ್ಟರು… ಗುರುದೇವ ಪರಬ್ರಹ್ಮ ನಿತ್ಯಾನಂದರು. ಅವರಿಬ್ಬರು ಸೋಮಾರಿತನ ಬಿಡುತ್ತಾರೆ. ಗುರುದೇವರ ಅನುಗ್ರಹಿಸಿದ ವಿವೇಕಜ್ಞಾನದಿಂದ ಅವರಿರ್ವರು ಜೀವನದಲ್ಲಿ ಸಜ್ಜನರಾಗುತ್ತಾರೆ. ತಮ್ಮ ಕಪಟ ವೇಷವನ್ನು ಕಳಚಿ, ತಮಗಿರುವ ಕೃಷಿಭೂಮಿಯಲ್ಲಿ ದುಡಿಯಲು ಆರಂಭಿಸುತ್ತಾರೆ. “ಕೈ ಕೆಸರಾದರೆ… ಬಾಯಿ ಮೊಸರು” ಎಂಬ ಗಾದೆ ಮಾತಿನಂತೆ ಅವರಿಬ್ಬರು ದುಡಿಮೆಯ ಫಲದಿಂದ ಅನುಕೂಲಸ್ಥರು ಆಗುತ್ತಾರೆ. ಒಂದು ವರ್ಷದ ಬಳಿಕ ಅವರಿರ್ವರು ಪುನಃ ಸುಜ್ಞಾನದ ಮಾರ್ಗ ತೋರಿದ ಗುರುದೇವರ ಬಳಿಗೆ ಬರುತ್ತಾರೆ. ಅವರನ್ನು ಕಂಡೊಡನೆ ನಿತ್ಯಾನಂದರು ಸಂತೋಷಪಟ್ಟು ನಗುತ್ತ, ‘ಬನ್ನಿ ಸ್ವಾಮಿಗಳೇ…’ ಎಂದು ಸನಿಹ ಕರೆಯುತ್ತಾರೆ. ಅವರಿಬ್ಬರಿಗೂ ತಮ್ಮನ್ನು ಸ್ವಾಮಿಗಳು ಗುರುತಿಸಿದ್ದು ಅಚ್ಚರಿ ಆಗುತ್ತದೆ. ನಿತ್ಯಾನಂದರು ಕಪಟಿಗಳನ್ನು ಕ್ಷಮಿಸುತ್ತಿದ್ದರು. ಬದಕಲು ಅವಕಾಶ ನೀಡುತ್ತಿದ್ದರು. ತಪ್ಪಿಸ್ಥರ ತಪ್ಪುಗಳನ್ನು ತಿದ್ದುತ್ತಿದ್ದರು.

ನಿತ್ಯಾನಂದ ಸ್ವಾಮಿಗಳ ಪರಮಭಕ್ತರು, ಶಿಷ್ಯ ಕೂಟದಲ್ಲಿ ಓರ್ವರಾದ ಶ್ರೀ ನಾರಾಯಣ ಸ್ವಾಮಿಗಳು ತಮ್ಮಲ್ಲಿ ಬರುವ ಭಕ್ತರಲ್ಲಿ ಗುರುದೇವರ ಮಹಿಮೆಗಳನ್ನು ಹೇಳುತ್ತಿದ್ದರಂತೆ. ಗಣೇಶಪುರಿಯಲ್ಲಿ ನಾರಾಯಣ ಸ್ವಾಮಿಗಳು ಇದ್ದವರು. ಹಾಗಾಗಿ ಈ ಲೀಲೆಯು ಅವರಿಗೆ ತಿಳಿದಿತ್ತು. ಅವರು ಭಕ್ತರಿಗೆ ಭೋದಪ್ರದವಾಗಿ ಈ ಲೀಲೆ ಹೇಳುತ್ತಿದ್ದರಂತೆ. ಕೇರಳ ಮೂಲದವರಾದ ಅವರು, ಗುರುದೇವರಿಂದ ಅನುಗ್ರಹ ಪಡೆದು, ಅವರ ಆಜ್ಞೆಯಂತೆ, ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಸಮೀಪ ಇರುವ, ಮಾಸ್ತಿಕಟ್ಟೆ ಎಂಬ ಊರಲ್ಲಿ ಬಂದು ನೆಲೆಸುತ್ತಾರೆ. ಅವರು ಅಲ್ಲಿ ನಿತ್ಯಾನಂದ ಸ್ವಾಮಿಗಳ ಆಶ್ರಮವನ್ನು ಸ್ಥಾಪಿಸಿರುತ್ತಾರೆ. ಅಲ್ಲಿಯೇ ಸಾಧನೆಮಾಡಿ ಸಮಾಧಿ ಪಡೆದಿರುತ್ತಾರೆ.

Advertisement

ತಾರಾನಾಥ್‌ ಮೇಸ್ತ ಶಿರೂರು.

LEAVE A REPLY

Please enter your comment!
Please enter your name here