ಕಾಲೇಜು ಶುಲ್ಕ ಸದ್ಯಕ್ಕೆ ಅಸಾಧ್ಯ-ಆನ್‌ ಲೈನ್‌ ಪಾಠ ಎಂಬ ಕರ್ಮಕಾಂಡ

0
1223

ಬೇಸತ್ತ ವಿದ್ಯಾರ್ಥಿಗಳಿಂದ ಸರಕಾರದ ಮೊರೆ

ಮೂಡುಬಿದಿರೆ: ಉನ್ನತ ಶಿಕ್ಷಣದಲ್ಲಿ ಹಾಗೂ ಇತರೆ ಶಿಕ್ಷಣ ವ್ಯವಸ್ಥೆಯಲ್ಲಿ ಇದೀಗ ಶಿಕ್ಷಣ ಸಂಸ್ಥೆ ಆರಂಭಕ್ಕೂ ಮೊದಲೇ ʻಫೀಸ್‌ ಕಟ್ಟುವಂತೆʼಒತ್ತಾಯಿಸುವ ಪ್ರವೃತ್ತಿ ಆರಂಭಗೊಂಡಿದೆ. ಕಳೆದ ಮೂರು ತಿಂಗಳುಗಳಿಂದ ದುಡಿಯುವ ಕೈಗೆ ಕೆಲಸಗಳಿಲ್ಲದೆ, ಸರಿಯಾಗಿ ಹಣಕಾಸು ವ್ಯವಸ್ಥೆಯಿಲ್ಲದೆ ಹೆತ್ತವರು ತೊಂದರೆಗೊಳಗಾಗಿದ್ದಾರೆ. ಶಿಕ್ಷಣ ಸಂಸ್ಥೆಗಳಿಗೆ ಫೀಸ್‌ ಕಟ್ಟುವ ಪರಿಸ್ತಿತಿಯಲ್ಲಿ ವಿದ್ಯಾರ್ಥಿಗಳ ಹೆತ್ತವರಿಲ್ಲ; ಶಿಕ್ಷಣ ಸಂಸ್ಥೆಗಳ ಫೀಸ್‌ ಕಟ್ಟುವಂತೆ ಒತ್ತಾಯ ಹೇರುವ ಪ್ರವೃತ್ತಿ ಸರಿಯಲ್ಲ. ಸಂಬಂಧ ಪಟ್ಟ ಇಲಾಖೆ ತಕ್ಷಣ ಗಮನ ಹರಿಸಬೇಕು ಎಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ಅನ್ವಿತ್‌ ಕಟೀಲು ಸರಕಾರವನ್ನು ಆಗ್ರಹಿಸಿದ್ದಾರೆ.

ವಾರ್ತೆ.ಕಾಂಗೆ ಈ ಬಗ್ಗೆ ಮಾಹಿತಿ ನೀಡಿದ ಅವರು, ಈಗಾಗಲೇ ನಿಗಧಿತ ಪಠ್ಯಕ್ರಮಗಳು ಮುಗಿದು ಪರೀಕ್ಷೆಗಳು ನಡೆಯಬೇಕಾಗಿತ್ತು. ಆದರೆ ಅದ್ಯಾವುದೂ ಇನ್ನೂ ಆಗಿಲ್ಲ. ಆ ಬಗ್ಗೆ ಸೂಕ್ತ ನಿರ್ಧಾರವೂ ಕೈಗೊಳ್ಳದೆ ಇದೀಗ ನೂತನ ಶೈಕ್ಷಣಿಕ ಅವಧಿಯ ಪ್ರವೇಶ ಪ್ರಕ್ರಿಯೆಯ ಆರಂಭಗಳು, ಫೀಸು ಕಟ್ಟುವಂತೆ ಒತ್ತಾಯಿಸುವುದು ಮೊದಲಾದ ಕ್ರಮಗಳನ್ನು ಶಿಕ್ಷಣ ಸಂಸ್ಥೆಗಳು ಕೈಗೊಳ್ಳುತ್ತಿರುವುದನ್ನು ಖಂಡಿಸಿದರು. ಆನ್‌ ಲೈನ್‌ ಹೆಸರಿನಲ್ಲಿ ತೀವ್ರ ಹಿಂಸೆ ನೀಡುವ ಕಾರ್ಯವಾಗುತ್ತಿದೆ. ವಾಟ್ಸ್‌ ಆಪ್‌ ಮೂಲಕ ಪಿ.ಡಿ.ಎಫ್‌ ಪ್ರತಿ ಕಳುಹಿಸಲಾಗುತ್ತಿದೆ. ಸೂಕ್ತ ಪಠ್ಯಗಳನ್ನು ಹೇಳಲಾಗುತ್ತಿಲ್ಲ. ರಾಶಿ ರಾಶಿ ಮನೆಗೆಲಸಗಳನ್ನು ನೀಡುತ್ತಿದ್ದಾರೆ. ಪೂರಕ ಪಠ್ಯಗಳಾಗಲೀ, ಪಾಠ ಕ್ರಮಗಳಾಗಲಿ ಲಭ್ಯವಾಗದೆ ವಿದ್ಯಾರ್ಥಿಗಳು ತೊಂದರೆಗೊಳಗಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಉಪಮುಖ್ಯಮಂತ್ರಿ, ಶಿಕ್ಷಣ ಮಂತ್ರಿಗಳ ಗಮನ ಸೆಳೆಯುವ ಕಾರ್ಯ ನಡೆದಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here