ಕಾರ್ಯಾಗಾರ

0
244

ಮಂಗಳೂರು ಪ್ರತಿನಿಧಿ ವರದಿ
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಪಡಿ ಮಂಗಳೂರು ಇವರ ಸಹಭಾಗಿತ್ವದಲ್ಲಿ ‘ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ-2012 ರ ಅನುಷ್ಠಾನ ಮತ್ತು ಸವಾಲುಗಳು’ ಎಂಬ ವಿಷಯದ ಬಗ್ಗೆ ರಾಜ್ಯ ಮಟ್ಟದ 2 ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಾಗಾರದ ಉದ್ಘಾಟನೆಯನ್ನು ಬುಧವಾರ ಮಂಗಳೂರು ನಗರದ ನಂತೂರು ಬಳಿಯಿರುವ ಐ.ಎಸ್.ಡಿ ಸಭಾಂಗಣದಲ್ಲಿ ನಡೆಸಲಾಯಿತು.
 
 
ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಡಿ.ಟಿ ಪುಟ್ಟರಂಗಸ್ವಾಮಿಯವರು ಪೋಕ್ಸೋ ಕಾಯಿದೆಯಲ್ಲಿರುವ ವ್ಯವಸ್ಥೆಗಳ ಬಗ್ಗೆ ರಚಿಸಲಾದ ಸ್ತಬ್ದಚಿತ್ರಗಳ ಮಾದರಿಯನ್ನು ಪ್ರದರ್ಶಿಸುವುದರ ಮೂಲಕ ಈ ಕಾರ್ಯಾಗಾರವನ್ನು ಉದ್ಘಾಟಿಸಿದರು. ಶಿಬಿರಾರ್ಥಿಗಳನ್ನು ಉದ್ಧೇಶಿಸಿ ಮಾತುಗಳನ್ನಾಡಿದ ಅವರು, ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನಡೆದರೆ ಪೋಕ್ಸೋ ಕಾಯಿದೆಯಡಿ ಶಿಕ್ಷೆಯಾಗುತ್ತದೆ, ಆದರೆ ಆನೇಕ ಪ್ರಕರಣಗಳಲ್ಲಿ ಆರೋಪಿತಗೆ ಶಿಕ್ಷೆ ತಪ್ಪಿ ಹೋಗುತ್ತದೆ, ಈ ಕಾಯಿದೆಯಡಿ ದೂರುಗಳು ವರದಿಯಾದಾಗ ಇಲಾಖೆಗಳು ಬಹಳ ಎಚ್ಚರಿಕೆಯಿಂದ ಕ್ರಮ ವಹಿಸಬೇಕು ಎಂದು ತಿಳಿಸಿದರು. ಪೋಕ್ಸೋ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಿದರೆ ಸಾಲದು, ಈ ಕಾಯಿದೆ ಬಗ್ಗೆ ಸಮುದಾಯದಲ್ಲಿ ಅರಿವುನ್ನು ಮೂಡಿಸಬೇಕು ಎಂದ ಅವರು, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಯಾವ ಕಾರಣಕ್ಕಾಗಿ, ಯಾಕೇ ನಡೆಯುತ್ತದೆ ಎಂಬುದನ್ನು ನಾವು ಮೊದಲು ಕಂಡುಕೊಳ್ಳಬೇಕು ಎಂದು ಹೇಳಿದರು.
 
 
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಪ ವಿಭಾಗಧಿಕಾರಿಯಾದ ರೇಣುಕಾ ಪ್ರಸಾದ್ ಮಕ್ಕಳ ಹಕ್ಕು ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು, ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಸಮುದಾಯದಲ್ಲಿ ಇಂತಹ ಮಾಹಿತಿ ಕಾರ್ಯಾಗಾರಗಳನ್ನು ಹೆಚ್ಚೆಚ್ಚು ನಡೆಸಬೇಕು, ಇಲಾಖೆಗಳ ಜೊತೆ ಸಂಘ ಸಂಸ್ಥೆಗಳು ಕೈಜೋಡಿಸಿ ಶ್ರಮಿಸಬೇಕು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆಯ ಅನುಷ್ಠಾನ ಸಂದರ್ಭದಲ್ಲಿ ಎದುರಿಸುತ್ತಿರುವ ಸವಾಲುಗಳು ಬಗ್ಗೆ ಇಂತಹ ಕಾರ್ಯಾಗಾರಗಳಲ್ಲಿ ಚರ್ಚೆ ನಡೆಸಿ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮೂಲಕ ಸರಕಾರಕ್ಕೆ ಸಲಹೆಗಳನ್ನು ಸಲ್ಲಿಸಬೇಕು, ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ಹೇಳಿದರು.
 
 
 
ಪೋಕ್ಸೋ ಮತ್ತು ಮಕ್ಕಳ ಸಂಬಂಧಿಸಿದ ದೂರುಗಳನ್ನು ದಾಖಲಿಸುವಾಗ ಇಲಾಖಾಧಿಕಾರಿಗಳ ಬಹಳ ಎಚ್ಚರಿಕೆಯಿಂದ ಕಾರ್ಯಾನಿರ್ವಹಿಸಬೇಕು, ಇಲ್ಲದಿದ್ದರೆ ಮಕ್ಕಳಿಗೆ ಅನ್ಯಾಯವಾಗುತ್ತದೆ, ಅದಕ್ಕಾಗಿ ಸರಿಯಾದ ಸಾಕ್ಷೀಕರಣ ಕ್ರಮಗಳನ್ನು ಅನುಸರಿಸಬೇಕು ಎಂದ ಅವರು, ಪೋಕ್ಸೋ ಕಾಯಿದೆಯಡಿ ದಾಖಲಾದ ಪ್ರಕರಣಗಳು ಶೀಘ್ರ ತೀರ್ಪು ಆಗಬೇಕು, ನ್ಯಾಯ ದಾನ ವಿಳಂಬ ವಾಗುವುದರಿಂದ ನೊಂದ ಮಕ್ಕಳಿಗೆ ತೊಂದರೆಯಾಗಿದೆ. ಮಕ್ಕಳ ವಿಶೇಷ ನ್ಯಾಯಾಲಯಗಳು, ಜಿಲ್ಲಾ ನ್ಯಾಯಾಲಯದ ಅವರಣದಿಂದ ಹೊರಗೆ ಇರಬೇಕು. ಮಕ್ಕಳ ಕೋರ್ಟ್ ಗಳು ಮನೆ ಪರಿಸರದಂತೆ ಮಗುಸ್ನೇಹಿ ವಾತವರಣದಲ್ಲಿ ಇರಬೇಕು ಈ ಬಗ್ಗೆ ಸೂಕ್ತ ವ್ಯವಸ್ಥೆಯಾಗಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಡಾ.ಕೃಪಾ ಅಮರ್ ಆಳ್ವ ರವರು ಹೇಳಿದರು.
 
 
 
ಮಹಿಳೆ ಮತ್ತುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ 3 ರಲ್ಲಿ 1 ಮಗುವಿನ ಮೇಲೆ ನಡೆದ ದೌರ್ಜನ್ಯ ಪ್ರಕರಣವಾಗಿರುತ್ತದೆ, ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾ ಉಚಿತ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶರಾದ ಮಲ್ಲನ ಗೌಡ ರವರು ಹೇಳಿದರು.
 
 
 
ಎರಡು ದಿನದ ಕಾರ್ಯಗಾರವನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಆನಂದ್ ಲೋಬೋ ಮತ್ತು ಪಡಿ ಸಂಸ್ಥೆಯ ನಿರ್ದೇಶಕರಾದ ರೆನ್ನಿ ಡಿ’ಸೋಜರವರು ಸಂಘಟನ ಜವಬ್ಧಾರಿಯನ್ನು ವಹಿಸಿಕೊಂಡಿದ್ದರು.
 
 
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮೂಲಕ ಸರಕಾರಕ್ಕೆ ನೀಡಬೇಕಾದ ಶಿಪಾರಸ್ಸುಗಳು:
ಮಕ್ಕಳ ವಿಶೇಷ ನ್ಯಾಯಾಲಯಗಳ ಬಗ್ಗೆ:
1. ಮಕ್ಕಳ ವಿಶೇಷ ನ್ಯಾಯಾಲಯಗಳು, ಜಿಲ್ಲಾ ನ್ಯಾಯಾಲಯ ಅವರಣದಿಂದ ಹೊರಗೆ ಇರಬೇಕು.
2. ಮಕ್ಕಳ ವಿಶೇಷ ನ್ಯಾಯಾಲಯಗಳು ಮನೆ ಪರಿಸರದಂತೆ ಮಗುಸ್ನೇಹಿ ವಾತವರಣ ಇರಬೇಕು.
3. ಮಕ್ಕಳ ವಿಶೇಷ ನ್ಯಾಯಾಲಯಗಳಲ್ಲಿ, ಜಡ್ಜ್ಗಳು, ಪಬ್ಲಿಕ್ ಪ್ರಾಸಿಕ್ಯೂಟರ್ಗಳು, ವಕೀಲರು, ಸಿಬಂಧಿಗಳು ಸಾದಾ ಉಡುಪು ಧರಿಸಿರಬೇಕು.
4. ಮಕ್ಕಳ ವಿಶೇಷ ನ್ಯಾಯಾಲಯಗಳಲ್ಲಿ ಜಡ್ಜ್ಗಳು ಸಮಾನ ಆಸನದಲ್ಲಿ ಕೂರಬೇಕು.
5. ಮಕ್ಕಳ ವಿಶೇಷ ನ್ಯಾಯಾಲಯಗಳಲ್ಲಿ ಮಾಮೂಲಿ ಕೋರ್ಟಿನಂತೆ ಸಾಕ್ಷಿ ಕಟಕಟೆಗಳು ಇರಬಾರದು.
6. ಮಕ್ಕಳ ವಿಶೇಷ ನ್ಯಾಯಾಲಯಗಳಲ್ಲಿ ವಿಚಾರಣೆಗಾಗಿ ಬಹಳ ಹೊತ್ತು ಕಾಯಬೇಕಾಗಿರುವುದರಿಂದ ಅಲ್ಲಿ ವಿಶ್ರಾಂತಿ ಪಡೆಯಲು ಮೂಲಸೌಕರ್ಯಗಳನ್ನು ಒದಗಿಸಬೇಕು.
7. ಮಕ್ಕಳ ವಿಶೇಷ ನ್ಯಾಯಾಲಯಗಳಲ್ಲಿ ಹಣ್ಣು ಹಂಪಲು, ಲಘ ಆಹಾರ ವ್ಯವಸ್ಥೆ ಇರಬೇಕು.
8. ಮಕ್ಕಳ ವಿಶೇಷ ನ್ಯಾಯಾಲಯಗಳಲ್ಲಿ ಆಪ್ತ ಸಮಾಲೋಚಕರು, ಸೈಕಾಲಾಜಿಸ್ಟ್ ಗಳು ಇರಬೇಕು.
9. ಮಕ್ಕಳ ವಿಶೇಷ ನ್ಯಾಯಾಲಯಗಳಲ್ಲಿ ದೂರು ಶೀಘ್ರ ವಿಲೇವಾರಿಯಾಗಲು ಸೂಕ್ತ ಮೂಲಸೌರ್ಕರ್ಯ ವ್ಯವಸ್ಥೆಯನ್ನು ಒದಗಿಸಿಕೊಡಬೇಕು.
10. ಮಕ್ಕಳ ವಿಶೇಷ ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸುವ ಜಡ್ಜ್ಗಳಿಗೆ, ಪಬ್ಲಿಕ್ ಪ್ರಾಸಿಕ್ಯೂಟರ್ಗಳಿಗೆ ಮಕ್ಕಳ ಮನೋವಿಜ್ಞಾನ ಬಗ್ಗೆ ತರಬೇತಿ ಆಗಬೇಕು.
11. ಮಕ್ಕಳ ವಿಶೇಷ ನ್ಯಾಯಾಲಯಗಳಲ್ಲಿ ನುರಿತ ಹಿರಿಯ ವಕೀಲರು ಇರಬೇಕು.
12. ಮಕ್ಕಳ ವಿಶೇಷ ನ್ಯಾಯಾಲಯಗಳಲ್ಲಿ ನಡೆಯುವ ಕಲಾಪ, ಹೇಳಿಕೆಗಳು, ವಿಚಾರಣೆಗಳನ್ನು ವೀಡಿಯೋ ಚಿತ್ರೀಕರಿಸಿ ದಾಖಲೆ ಮಾಡಬೇಕು.
13. ಮಕ್ಕಳ ವಿಶೇಷ ನ್ಯಾಯಾಲಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ, ಅರಿವುವನ್ನು ಮೂಡಿಸಬೇಕು.
ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಕಲ್ಯಾಣ ಸಮಿತಿ ಬಗ್ಗೆ:
14. ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಸಿಬಂಧಿ ಕೊರತೆಯಿಂದ ಕಾರ್ಯ ಚಟುವಟಿಕೆ ನಿಧಾನಗತಿಯಿಂದ ನಡೆಯುತ್ತಿದ್ದು, ಮೂಲಸೌಕರ್ಯ ಹೆಚ್ಚಿಸಬೇಕು, ಖಾಯಂ ಸಿಬಂಧಿ ನೇಮಕ ಮಾಡಬೇಕು.
15. ಪುನರ್ವಸತಿ ಕೇಂದ್ರದಲ್ಲಿರುವ ಮಕ್ಕಳಿಗೆ ಸ್ವ ಉಧ್ಯೋಗಧಾರಿತ ತಾಂತ್ರಿಕ, ಕೌಶಲ್ಯಭಿವೃದ್ಧಿ ತರಭೇತಿ ನೀಡಬೇಕು.
16. ಬಾಲಮಂದಿರ ಮತ್ತು ಪುನರ್ವಸತಿ ಕೇಂದ್ರಗಳಲ್ಲಿ ಖಾಯಂ ಶಿಕ್ಷಕರನ್ನು ನೇಮಕ ಮಾಡಬೇಕು.
17. ಧಾರ್ಮಿಕ ಭೋದನಾ ಶಾಲೆ, ಶಿಕ್ಷಣ ವಸತಿ ಸಂಸ್ಥೆಗಳು, ಖಾಸಾಗಿ ವಸತಿ ನಿಲಯ, ಮಕ್ಕಳ ಪಾಲನಾ ಪುನರ್ವಸತಿ ಕೇಂದ್ರಗಳು ಬಾಲ ನ್ಯಾಯ ಕಾಯಿದೆ ಅಡಿಯಲ್ಲಿ ಕಡ್ಡಾಯ ನೋಂದಾವಣೆಯಾಗಬೇಕು.
18. ಧಾರ್ಮಿಕ ಭೋದನಾ ಶಾಲೆ, ಶಿಕ್ಷಣ ವಸತಿ ಸಂಸ್ಥೆಗಳು, ಖಾಸಾಗಿ ವಸತಿ ನಿಲಯ, ಮಕ್ಕಳ ಪಾಲನಾ ಪುನರ್ವಸತಿ ಕೇಂದ್ರಗಳಿಗೆ ಇಲಾಖಾಧಿಕಾರಿಗಳು, ಸಾರ್ವಜನಿಕ ಪ್ರಾಧಿಕಾರಗಳು ಭೇಟಿ ನೀಡಿ ವೀಕ್ಷಿಸಿಸಲು ಪ್ರವೇಶವನ್ನು ನಿರಾಕರಿಸಲಾಗುತ್ತಿದೆ, ಈ ಬಗ್ಗೆ ಸೂಕ್ತ ಕ್ರಮ ಆಗಬೇಕು.
19. ಪ್ಲೇ ಹೋಮ್, ಪ್ಲೇ ಸ್ಕೂಲ್ ಗಳು ಬಾಲ ನ್ಯಾಯ ಕಾಯಿದೆ ಅಡಿಯಲ್ಲಿ ಕಡ್ಡಾಯ ನೋಂದಾವಣೆಯಾಗಬೇಕು.
20. ಜಿಲ್ಲೆಯಲ್ಲಿ ಹೆಚ್.ಐ.ವಿ ಭಾದಿತ ಮಕ್ಕಳಿಗೆ ಪುನರ್ವಸತಿ ಕೇಂದ್ರ ಇರುವುದಿಲ್ಲ, ಪುನರ್ವಸತಿ ಕೇಂದ್ರ ಇರಬೇಕು.
21. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರುಗಳಿಗೆ, ಸದಸ್ಯರುಗಳಿಗೆ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ಇರುವುದಿಲ್ಲ ಈ ಬಗ್ಗೆ ತರಬೇತಿ ನೀಡಬೇಕು.
22. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರುಗಳಿಗೆ, ಸದಸ್ಯರುಗಳಿಗೆ ಮಕ್ಕಳ ಮನೋವಿಜ್ಞಾನ ಬಗ್ಗೆ ತರಬೇತಿ ನೀಡಬೇಕು.
23. ಮಕ್ಕಳ ಕಲ್ಯಾಣ ಸಮಿತಿಯ ವಾತವರಣ ಮಗು ಸ್ನೇಹಿಯಾಗಿರಬೇಕು, ಲಘು ಆಹಾರ, ವಿಶ್ರಾಂತಿ ಪಡೆಯಲು ಮೂಲಸೌಕರ್ಯಗಳನ್ನು ಒದಗಿಸಬೇಕು, ಭಿತ್ತಿಚಿತ್ರಗಳು, ಹೂತೋಟ, ಪಾರ್ಕ್ ವ್ಯವಸ್ಥೆ ಇರಬೇಕು.
24. ಬಾಲಮಂದಿರ, ಪುನರ್ವಸತಿ ಕೇಂದ್ರಗಳು ಮಕ್ಕಳ ಸ್ನೇಹಿಯಾಗಿರಬೇಕು.
25. ತುರ್ತು ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸಲು ಮಕ್ಕಳ ಕಲ್ಯಾಣ ಸಮಿತಿಗೆ ಪ್ರತ್ಯೇಕ ವಾಹನದ ವ್ಯವಸ್ಥೆಯಾಗಬೇಕು.
26. ಪೊಲೀಸ್ ಠಾಣೆಗಳಲ್ಲಿ ದಾಖಲಾದ ಮಕ್ಕಳ ಪ್ರಕರಣ ಈಖ ಪ್ರತಿಯನ್ನು 24 ಗಂಟೆಯ ಒಳಗೆ ಮಕ್ಕಳ ಕಲ್ಯಾಣ ಸಮಿತಿಗೆ ಸಲ್ಲಿಸುವಂತೆ ಸೂಕ್ತ ಕ್ರಮವಾಗಬೇಕು.
27. ಮಕ್ಕಳ ಕಲ್ಯಾಣ ಸಮಿತಿಯಲ್ಲಿ, ಮಕ್ಕಳ ಮನೋವಿಜ್ಞಾನ ಬಗ್ಗೆ ಉನ್ನತ್ತ ತರಬೇತಿ ಹೊಂದಿದ ನುರಿತ ಆಪ್ತ ಸಮಾಲೋಚಕರನ್ನು ನೇಮಕ ಮಾಡಬೇಕು.
28. ಬೆಂಬಲ ವ್ಯಕ್ತಿಯನ್ನು ನೇಮಕ ಮಾಡಬೇಕು ಮತ್ತು ಅವರಿಗೆ ತರಭೇತಿ ನೀಡಬೇಕು.
29. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳ ಸ್ನೇಹಿಯಾಗಿರಬೇಕು, ಸಿಬಂಧಿಗಳಿಗೆ ಮಕ್ಕಳ ಮನೋವಿಜ್ಞಾನ ಬಗ್ಗೆ ತರಬೇತಿ ನೀಡಬೇಕು.
30. ಶಿಕ್ಷಣ ಇಲಾಖೆಯ ಇಜಣ-ಚಿಣ ಮೂಲಕ ನೀಡುವ ಖಚಿಣಜಟಣಜ ಶಿಕ್ಷಣಾಧರಿತ ಕಾರ್ಯಕ್ರಮವನ್ನು ಬಾಲಮಂದಿರ ಮತ್ತು ಪುನರ್ವಸತಿ ಕೇಂದ್ರದ ಮಕ್ಕಳಿಗೆ ವ್ಯವಸ್ಥೆಗೊಳಿಸಬೇಕು.
ಬಾಲನ್ಯಾಯ ಮಂಡಳಿ/ ಮಕ್ಕಳ ವಿಶೇಷ ಪೊಲೀಸ್ ಘಟಕ
31. ಬಾಲನ್ಯಾಯ ಮಂಡಳಿ (ಎಎಃ) ಜಡ್ಜ್ ಗಳಿಗೆ ಮತ್ತು ಸಾರ್ವಜನಿಕ ಅಭಿಯೋಜಕರುಗಳಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಅವರಿಗೆ ಮಕ್ಕಳ ವಿಶೇಷ ಕಾಯಿದೆ ಬಗ್ಗೆ ತರಭೇತಿ ನೀಡಬೇಕು.
32. JJB ಕಾಯಿದೆ ಮಾರ್ಗಸೂಚಿಗಳ ಮಾಹಿತಿಯನ್ನು ತಿಳಿಸಬೇಕು.
33. ಬಾಲನ್ಯಾಯ ಮಂಡಳಿಗಳಲ್ಲಿ ಮಗುಸ್ನೇಹಿ ವಾತವರಣ ನಿರ್ಮಾಣ ಮಾಡಬೇಕು.
ಕಾರ್ಯಕ್ರಮದಲ್ಲಿ ಈ ಕಾಯಿದೆಯ ಪಾಲುದಾರರಾದ ಆಯ್ದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರುಗಳು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಬಾಲ ನ್ಯಾಯ ಮಂಡಳಿಯ ಸದಸ್ಯರುಗಳು, ವಿಶೇಷ ನ್ಯಾಯಾಲಯಗಳ ಸಾರ್ವಜನಿಕ ಅಭಿಯೋಜಕರು, ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕರು, ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರುಗಳು, ಆಯೋಗದ ಸದಸ್ಯರುಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here