ಕಾರ್ಯಾಗಾರ

0
708

ವರದಿ-ಚಿತ್ರ: ಸುನೀಲ್ ಬೇಕಲ್
ಯೋಗದ ಬಗ್ಯೆ ಅರಿವು, ಜಾಗೃತಿ ಮೂಡಿಸಲು ಗೂಗ್ಲ್ ಹೊಸ ಯೋಜನೆ.
ಜಾಗತಿಕ ಮಟ್ಟದಲ್ಲಿ ಜನ ಸಾಮಾನ್ಯರಿಗೆ ಯೋಗದ ಮಹತ್ವದ ಬಗ್ಯೆ ಅರಿವು, ಜಾಗೃತಿ ಮೂಡಿಸಲು ಗೂಗ್ಲ್ ಹೊಸ ಯೋಜನೆ ರೂಪಿಸಿದೆ. ಭಾರತದ ಭವ್ಯ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆ ಬಗ್ಯೆ ಪ್ರಚಾರ ನೀಡಲಾಗುವುದು ಎಂದು ಗೂಗ್ಲ್ ಮುಖ್ಯಸ್ಥ ಚೇತನ್ ಕೃಷ್ಣಸ್ವಾಮಿ ಹೇಳಿದರು.
 
 
ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ರಾಜ್ಯದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ.ಯ 500 ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳು ಮತ್ತು ಸ್ವಯಂ-ಸೇವಕರಿಗೆ ಆಯೋಜಿಸಲಾದ ಮೂರು ದಿನಗಳ ಕಾರ್ಯಗಾರವನ್ನು ಅವರು ಭಾನುವಾರ ಉದ್ಘಾಟಿಸಿ ಮಾತನಾಡಿದರು.
 
 
ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನದಂತೆ ಅಂತರ್ಜಾಲದಲ್ಲಿ ಆನ್ ಲೈನ್ ಮೂಲಕ ಶಾಲೆಗಳಲ್ಲಿಯೂ ಯೋಗದ ಬಗ್ಯೆ ಪ್ರಸಾರ ಮಾಡಲಾಗುವುದು ಎಂದು ಅವರು ಪ್ರಕಟಿಸಿದರು. ಈ ಬಗ್ಯೆ ಧರ್ಮಸ್ಥಳದ ಸಹಭಾಗಿತ್ವದಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು ಎಂದು ಅವರು ಹೇಳಿದರು.
 
 
ಆಧುನಿಕ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ದೇಶದಲ್ಲಿ ಈಗ 400 ಮಿಲಿಯ ಜನರು ಅಂತರ್ಜಾಲ ಹಾಗೂ 200 ಮಿಲಿಯ ಜನರು ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಇದರಿಂದಾಗಿ ಅನೇಕ ಸವಾಲುಗಳು, ಸಮಸ್ಯೆಗಳು ಮತ್ತು ಒತ್ತಡವನ್ನು ಎದುರಿಸಬೇಕಾಗುತ್ತದೆ. ಯೋಗಾಭ್ಯಾಸದಿಂದ ಆರೋಗ್ಯದ ಬಗ್ಯೆ ಇರುವ ಎಲ್ಲಾ ಸಮಸ್ಯೆಗಳನ್ನು ಸುಲಭದಲ್ಲಿ ಪರಿಹರಿಸಬಹುದು ಎಂದು ಅವರು ಅಭಿಪ್ರಾಯ ಪಟ್ಟರು.
 
 
ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ದೃಢ ಸಂಕಲ್ಪದೊಂದಿಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ನಿತ್ಯವೂ ಯೋಗಾಭ್ಯಾಸದಿಂದ ಉತ್ಸಾಹಭರಿತರಾಗಿ ಮಾನಸಿಕ ಸಮತೋಲನವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಜಾಗತಿಕ ಮಟ್ಟದಲ್ಲಿ ಯೋಗಕ್ಕೆ ಮಾನ್ಯತೆ ಮತ್ತು ಗೌರವ ಸಿಕ್ಕಿರುವುದು ಯೋಗದ ಭಾಗ್ಯವಾಗಿದೆ. ನಿತ್ಯವೂ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ ಕಾಪಾಡುವುದರೊಂದಿಗೆ ಯಾವುದೇ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬಹುದು. ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹೆಗ್ಗಡೆಯವರು ಸಲಹೆ ನೀಡಿದರು.
 
 
ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಡಾ. ಬಿ. ವಸಂತ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಡೆದ ಜ್ಞಾನ ಮತ್ತು ಅನುಭವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
 
 
ರಾಜ್ಯ ಸಂಪರ್ಕಾಧಿಕಾರಿ ಡಾ. ಗಣನಾಥ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಆರೋಗ್ಯ ರಕ್ಷಣೆಯೊಂದಿಗೆ ಜ್ಞಾನ ಮತ್ತು ಕೌಶಲ ವೃದ್ಧಿಸಿಕೊಂಡು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
 
 
ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಡಾ.ಸಲ್ವಕುಮಾರ್ ಧನ್ಯವಾದವಿತ್ತರು. ಡಾ. ಮೇಘನಾ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here