ಕಾರ್ಯಕ್ರಮ ಸಂಘಟನೆ

0
1486

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ

ಮುಂದುವರಿದ ಭಾಗ…
ವಿವಿಧ ಭಾಷಣಗಳು
ಒಂದು ಕಾರ್ಯಕ್ರಮದಲ್ಲಿ ಮಾತನಾಡುವ ಅನೇಕ ಹಂತಗಳು ಇರುತ್ತದೆ. ಈ ಹಂತಗಳ ವೈವಿಧ್ಯತೆಗನುಗುಣವಾಗಿ ಭಾಷಣಗಳನ್ನು ವರ್ಗೀಕರಿಸಿಕೊಳ್ಳಬೇಕು. ಅವುಗಳೆಂದರೆ:

1. ವ್ಯಕ್ತಿ ಪರಿಚಯ:
ವ್ಯಕ್ತಿ ಪರಿಚಯದ ಭಾಷಣವೆಂದರೆ ಕೇವಲ ವ್ಯಕ್ತಿ ಬಯೋಡಾಟಾವನ್ನು ಹೇಳುವ ಸಂಗತಿಯಾಗಬಾರದು. ವ್ಯಕ್ತಿಯ ವ್ಯಕ್ತಿತ್ವವನ್ನು ಪರಿಚಯಿಸುವ ಭಾಷಣವಾಗಬೇಕು. ವ್ಯಕ್ತಿಯ ವ್ಯಕ್ತಿತ್ವದ ಹಿತಕಾರಿಯಾದ ಗುಣ ವಿಶೇಷಗಳನ್ನು ಸಭೆಗೆ ತಿಳಿಸುವುದರೊಂದಿಗೆ ವ್ಯಕ್ತಿಯ ಬಯೋಡಾಟಾದ ಅಗತ್ಯ ವಿವರಗಳನ್ನು ಮಾತ್ರ ಹೇಳುಬೇಕು.

2. ಪ್ರಾಸ್ತಾವಿಕ ಭಾಷಣ:
ಕೆಲವೊಮ್ಮ ಪ್ರಾಸ್ತಾವಿಕ ಭಾಷಣವನ್ನು ಕಾರ್ಯಕ್ರಮ ನಿರ್ವಹಕರೇ ನಿರ್ವಹಿಸುತ್ತಾರೆ. ಇನ್ನು ಕೆಲವೊಮ್ಮೆ ಅದಕ್ಕಾಗಿ ಪ್ರತ್ಯೇಕ ವ್ಯಕ್ತಿಯನ್ನು ನಿಯೋಜಿಸಲಾಗುತ್ತದೆ. ಇವುಗಳಲ್ಲಿ ಎರಡು ಕೂಡ ಸರಿಯಾದ ವಿಧಾನಗಳೇ. ಅದು ಸಂಘಟನೆಯ ತೀರ್ಮಾನಕ್ಕೆ ಬಿಟ್ಟ ವಿಷಯ. ಪ್ರಾಸ್ತಾವಿಕ ಭಾಷಣದಲ್ಲಿ ಬಾರಬೇಕಾದ್ದು ಏನು? ಹೆಸರೇ ಸೂಚಿಸುವಂತೆ ಅದು ಇಡೀ ಕಾರ್ಯಕ್ರಮದ ಕುರಿತ ಪ್ರಸ್ತಾವನೆಯನ್ನು ಮಾಡಲಾಗುತ್ತದೆ. ಒಂದು ರೀತಿಯಲ್ಲಿ ಅದು ಮುಖ್ಯ ಕಾರ್ಯಕ್ರಮಕ್ಕೆ ಪ್ರವೇಶದ್ವಾವಿದ್ದ ಹಾಗೆ. ಕಾರ್ಯಕ್ರಮದ ಬಾಗಿಲನ್ನು ತೆರೆಯುವ ಕೆಲಸವನ್ನು ಪ್ರಾಸ್ತಾವಿಕ ಭಾಷಣವು ಮಾಡಬೇಕು.

ಆಶಯ ಭಾಷಣ:
ಆಶಯ ಭಾಷಣವು ಪ್ರಾಸ್ತಾವಿಕ ಭಾಷಣಕ್ಕಿಂತ ಭಿನ್ನವಾಗಿರುತ್ತದೆ. ವೈಚಾರಿಕ ರೀತಿಯ ಆಳವನ್ನು ಹೊಂದಿರುತ್ತದೆ. ಪ್ರಾಸ್ತಾವಿಕ ಭಾಷಣದಲ್ಲಿ ಕಾರ್ಯಕ್ರಮದ ಉದ್ದೇಶಗಳ ಸ್ಪಷ್ಟ ಚಿತ್ರಣ ಇರುತ್ತದೆ. ಆದರೆ ಆಶಯ ಭಾಷಣದಲ್ಲಿ ಉದ್ದೇಶಗಳ ಚಿತ್ರಣದ ತಲಸ್ಪರ್ಶಿಯಾದ ಅಧ‍್ಯಯನದ ಅಂಶಗಳು ಇರುತ್ತದೆ.

Advertisement

ಪ್ರಧಾನ ಭಾಷಣಗಳು:
ಒಂದು ಕಬಡ್ಡಿ ಆಟದ ಉದಾಹರಣೆಯ ಮೂಲಕ ಭಾಷಣಗಳ ವ್ಯತ್ಯಾಸವನ್ನು ಮನವರಿಕೆ ಮಾಡಿಕೊಡಬಹುದು. ಪ್ರಾಸ್ತಾವಿಕ ಭಾಷಣವು ಆಟದ ಮೈದಾನವು ಎಲ್ಲಿ ಇದೆ ಎಂದು ತಿಳಿಸುತ್ತದೆ. ಆಶಯ ಭಾಷಣವು ಮೈದಾನದಲ್ಲಿ ಆಟವು ಎಲ್ಲಿ ನಡೆಯಬೇಕು, ಆಟ ಹೇಗೆ ನಡೆಯಬೇಕು, ಆಟದ ಬಿರುಸು ಹೇಗಿರಬೇಕು ಯಾವ ರೀತಿ ಆಟ ನಡೆದರೆ ಗೆಲ್ಲಲು ಸಾಧ್ಯವಾಗುತ್ತದೆ ಎಂಬುದನ್ನೆಲ್ಲ ತಿಳಿಸುತ್ತದೆ. ಆದರೆ ನಿಜವಾದ ಆಟ ಇವು ಯಾವುವೂ ಆಗಿರುವುದಿಲ್ಲ. ಪ್ರಧಾನ ಭಾಷಣವೇ ನಿಜವಾದ ಆಟವಾಗಿರುತ್ತದೆ. ಉದ್ದೇಶದ ನಿಜವಾದ ಸಾಧನೆಯನ್ನು ಮಾಡುವುದು ಪ್ರಧಾನ ಭಾಷಣ.
 
 
 
ಅಧ್ಯಕ್ಷರ ಅನಿಸಿಕೆಗಳು:
ಅಧ್ಯಕ್ಷರ ಭಾಷಣವೂ ಅದರ ಸಾಂಪ್ರದಾಯಿಕ ಸ್ವರೂಪದಲ್ಲಿ ಒಂದು ಸ್ವಾತಂತ್ರ್ಯ ಭಾಷಣವಾಗಿರುವುದಿಲ್ಲ. ಸಮಾರಂಭದ ಒಟ್ಟೂ ಕ್ರಿಯೆಗಳ ಕುರಿತ ಅನಿಸಿಕೆಯಾಗಿ ಅಧ್ಯಕ್ಷ ಭಾಷಣವು ಇರುತ್ತದೆ. ಪ್ರಾಸ್ತಾವಿಕ ಭಾಷಣವು ಸಮಾರಂಭದ ಸ್ವರೂಪವನ್ನು ಸ್ಪಷ್ಟಪಡಿಸುವ ಪೀಠಿಕೆಯನ್ನು ನೀಡಿದರೆ ಅಧ್ಯಕ್ಷ ಭಾಷಣವು ಸಮಾರಂಭಕ್ಕೆ ಉಪಸಂಹಾರವನ್ನು ನೀಡುತ್ತದೆ. ಬೇರಾವ ಭಾಷಣಕ್ಕೂ ಇಲ್ಲದಷ್ಟು ದೊಡ್ಡ ವ್ಯಾಪ್ತಿ ಅಧ್ಯಕ್ಷ ಭಾಷಣಕ್ಕೆ ಇರುತ್ತದೆ. ಇತರ ಭಾಷಣಗಳಲ್ಲಿ ಪ್ರಸ್ತಾಪಗೊಂಡ ವಿಚಾರಗಳ ಬಗ್ಗೆ ಅಧ್ಯಕ್ಷ ಭಾಷಣದಲ್ಲಿ ವಿವರಣೆಯನ್ನು ಕೊಡಬಹುದು. ಅವುಗಳ ಕುರಿತ ಅಭಿಪ್ರಾಯವನ್ನು ಸೂಚಿಸಬಹು್ಉ. ಕಾರ್ಯಕ್ರಮದಲ್ಲಿ ಎಲ್ಲಿಯೂ ಪ್ರಸ್ತಾಪಗೊಂಡಿರದ, ಆದರೆ ಪ್ರಸ್ತಾಪಗೊಳ್ಳಬೇಕಾದ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಬಹುದು.
 
 
ಇತ್ತೀಚೆಗೆ ಅಧ್ಯಕ್ಷ ಭಾಷಣದಲ್ಲಿ ಒಂದು ಹೊಸ ಪ್ರಯೋಗವು ನಡೆಯುತ್ತಿದೆ. ಅಧ್ಯಕ್ಷ ಭಾಷಣವೂ ಕೂಡ ಸ್ವತಂತ್ರವಾದ ಪ್ರಧಾನ ಭಾಷಣವಾಗಿ ಬೆಳೆಯುತ್ತಿದೆ. ಇದೂ ಕೂಡ ಅನುಕೂಲಕರವಾದ ಬೆಳವಣಿಗೆಯೇ ಆಗಿದೆ.
ಅರವಿಂದ ಚೊಕ್ಕಾಡಿ
[email protected]

ಮುಂದುವರಿಯುತ್ತದೆ…

LEAVE A REPLY

Please enter your comment!
Please enter your name here