ಕಾರ್ಯಕ್ರಮ ಸಂಘಟನೆ

0
359

ಮುಂದುವರಿದ ಭಾಗ…

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ
ಅತಿಥಿಗಳು
ಪ್ರೇಕ್ಷಕರಲ್ಲಿ ಭಿನ್ನ ವರ್ಗಗಳಿರುವಂತೆಯೇ ಅತಿಥಿಗಳಲ್ಲಿಯೂ ಭಿನ್ನ ವರ್ಗಗಳಿವೆ. ಕಾರ್ಯಕ್ರಮದ ಚಾಲಕ ಶಕ್ತಿ ಅತಿಥಿಗಳೇ ಆಗಿರುವುದರಿಮದ ಭಿನ್ನರೂಪದ ಅತಿಥಿಗಳನ್ನು ಅರ್ಥ ಮಾಡಿಕೊಳ್ಳುವುದೂ ಬಹಳ ಅಗತ್ಯವಾಗಿದೆ.
 
 
ವಿಷಯ ಪರಿಣಿತರು:
ನಿರ್ದಿಷ್ಟ ಕ್ಷೇತ್ರದ ನಿರ್ದಿಷ್ಟ ವಿಚಾರದಲ್ಲಿ ಪರಿಣಿತಿ ಪಡೆದ ಉಪನ್ಯಾಸಕರ ಅಗತ್ಯವು ಕಾರ್ಯಕ್ರಮ ಸಂಘಟಿಸುವವರಿಗೆ ಇರುತ್ತದೆ. ಇವರು ವಿದ್ವಾಂಸವರ್ಗದ ಅತಿಥಿಗಳಾಗಿರುತ್ತಾರೆ.
ದಾನಿಗಳು:
ಅನೇಕ ಸಂದರ್ಭಗಳಲ್ಲಿ ದಾನಿಗಳನ್ನು ಅತಿಥಿಗಳಾಗಿ ಆಹ್ವಾನಿಸಬೇಕಾಗುತ್ತದೆ. ಕಾರ್ಯಕ್ರಮದ ಯಶಸ್ಸಿನಲ್ಲಿ ದಾನಿಗಳ ಪಾತ್ರವೂ ಮುಖ್ಯವಾಗಿರುವುದರಿಂದ ಅವರನ್ನು ಅತಿಥಿಗಳಾಗಿ ಆಹ್ವಾನಿಸುವುದು ಸರಿಯಾಗಿದೆ.
 
ಪ್ರತಿನಿಧಿ ಅತಿಥಿಗಳು:
ಕೆಲವು ಗುಂಪುಗಳನ್ನು ಪ್ರತಿನಿಧಿಸುವುದಕ್ಕಾಗಿ ಅತಿಥಿಗಳನ್ನು ಆಹ್ವಾನಿಸುವ ಪದ್ಧತೆ ಇರುತ್ತದೆ. ಇಂತಹ ಅತಿಥಿಗಳನ್ನು ಕಾರ್ಯಕ್ರಮದ ಉದ್ದೇಶವನ್ನು ಸಾಧಿಸುವಂತೆಯೂ, ಗುಂಪನ್ನು ಪ್ರತಿನಿಧಿಸುವಂತೆಯೂ ಕಾಣಿಸಿಕೊಡಬೇಕಾಗುತ್ತದೆ.
ದೃಢೀಕೃತ ಅತಿಥಿಗಳು:
ಈ ರೀತಿಯ ಅತಿಥಿಗಳು ಸಾಮಾನ್ಯವಾಗಿ ಸರ್ಕಾರದ ಕಾರ್ಯಕ್ರಮಗಳಲ್ಲಿ ಕಂಡು ಬರುತ್ತಾರೆ. ಪ್ರೊಟೋಕಾಲ್ ಪದ್ಧತಿಯ ಪ್ರಕಾರ ಅತಿಥಿಗಳು ಇರಬೇಕು ಎಂಬ ನಿಯಮಗಳಿಂದ ದೃಢೀಕರಿಸಲ್ಟಟ್ಟು ಇಂತಹ ಅತಿಥಿಗಳು ಬರುತ್ತಾರೆ. ಇವರ ಉಪಸ್ಥಿತಿಯೇ ಮಹತ್ವದ್ದಾಗಿರುತ್ತದೆ.
 
ಕಾಳಜಿಯ ಅತಿಥಿಗಳು:
ಕಾಳಜಿಯ ಅತಿಥಿಗಳು ಎನ್ನುವಾಗ ಇತರೆಲ್ಲರಿಗೆ ಕಾಳಜಿಗಳು ಇಲ್ಲವೆಂದು ಅರ್ಥವಿಲ್ಲ. ಬದಲು ಕೇವಲ ಕಾಳಜಿಯ ಕಾರಣಕ್ಕಾಗಿಯೇ ಒಬ್ಬ ವ್ಯಕ್ತಿಗೆ ಗೌರವವನ್ನು ಸೂಚಿಸಿ ಆಹ್ವಾನಿಸುವುದಾಗಿರುತ್ತದೆ. ಉದಾಹರಣೆಗೆ ಒಂದು ಸಂಗೀತ ಸಮ್ಮೇಳನದ ಉದ್ಘಾಟನೆಗೆ ಒಬ್ಬ ಸ್ವಾತಂತ್ರ್ಯ ಹೋರಾಟಗಾರರನ್ನು ಆಹ್ವಾನಿಸಬಹುದು. ಅವರು ಸ್ವಾತಂತ್ರ್ಯ ಮತ್ತು ಸಂಗೀತದ ನಡುವಿನ ಸಂಬಂಧದ ಕುರಿತಾಗಿ ಮಾತನಾಡಬೇಕೆಂದೇನೂ ಇಲ್ಲ. ಅವರನ್ನು ಆಹ್ವಾನಿಸುವುದು ಗೌರವದ ಕಾಳಜಿಗಾಗಿ. ಇಂತಹ ಅತಿಥಿಗಳನ್ನು ಕಾಳಜಿಯ ಅತಿಥಿಗಳೆಂದು ಕರೆಯುತ್ತದೆ.
 
 
 
ಆಕರ್ಷಣೆಯ ಅತಿಥಿಗಳು:
ಕಾರ್ಯಕ್ರಮಕ್ಕೆ ವಿಶೇಷವಾದ ಆಕರ್ಷಣೆಯನ್ನು ತರುವ ದೃಷ್ಟಿಯಿಂದ ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸಬಲ್ಲ ವ್ಯಕ್ತಿಗಳನ್ನು ಅತಿಥಿಗಳಾಗಿ ಆಹ್ವಾನಿಸುವ ಪದ್ಧತಿ ಇದೆ. ಸಾಮಾನ್ಯವಾಗಿ ಮಿಶ್ರವರ್ಗದ ಕೇಳುಗರು, ಒತ್ತಾಯದ ಕೇಳುಗರು ಇರುವ ದೊಡ್ಡ ಸಮಾರಂಭಗಳಲ್ಲಿ ಈ ರೀತಿಯ ಕೇಳುಗರು ಬೇಕಾಗುತ್ತಾರೆ. ಆ ಸಂದರ್ಭದಲ್ಲಿ ಅವರು ಭಾಗವಹಿಸುವುದರ ಉದ್ದೇಶ ಪ್ರೇಕ್ಷಕರನ್ನು ಸಮಾರಂಭದ ಕಡೆಗೆ ಆಕರ್ಷಿಸುವುದಷ್ಟೇ ಆಗಿರುತ್ತದೆ. ಕ್ರೀಡಾ ತಾರೆಯರನ್ನು, ಸಿನಿಮಾ ತಾರೆಯರನ್ನು ಆಹ್ವಾನಿಸುವುದರ ಮೂಲ ಉದ್ದೇಶ ಇಷ್ಟೇ.
 
 
ಅತಿಥಿಗಳ ಮನೋಭಾವ:
ಕಾರ್ಯಕ್ರಮದ ಯಶಸ್ಸಿನಲ್ಲಿ ಅತಿಥಿಗಳ ಪಾತ್ರ ತುಂಬಾ ದೊಡ್ಡದಿರುವುದರಿಂದ ಅತಿಥಿಗಳ ಮನೋಭಾವವನ್ನು ಅರ್ಥ ಮಾಡಿಕೊಳ್ಳುವುದು ಸಂಘಟಕರ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ, ಅತಿಥಿಗಳ ಮನೋಭಾವವನ್ನು ಮಾಡಿಕೊಳ್ಳೋಣ.
 
 
ಸ್ಥಾಪಿತ ಧೋರಣೆಯವರು:
ಕೆಲವರಲ್ಲಿ ಎಲ್ಲವೂ ತನ್ನ ಮೂಗಿನ ನೇರಕ್ಕೆ ನಡೆಯಬೇಕು ಎಂಬ ಧೋರಣೆ ಇರುತ್ತದೆ. ತನ್ನ ವಿಚಾರಕ್ಕೆ ಭಿನ್ನವಾದದ್ದೇನನ್ನೂ ಸ್ವೀಕರಿಸಲು ಅವರಿಗೆ ಆಗುವುದಿಲ್ಲ. ಈ ಧೋರಣೆಯನ್ನು ಸ್ಥಿರೀಕೃತ ಧೋರಣೆ ಎನ್ನುತ್ತಾರೆ. ಕೆಲವು ಅತಿಥಿಗಳ ಮನೋಭಾವ ಹೀಗಿರುತ್ತದೆ.
 
ಸ್ವಪ್ರತಿಷ್ಠೆಯ ಅತಿಥಿಗಳು:
ಕೆಲವು ಅತಿಥಿಗಳು ವೇದಿಕೆಯನ್ನು ತಮ್ಮ ಬಗ್ಗೆ ಹೇಳುವುದಕ್ಕಾಗಿಯೇ ಬಳಸಿಕೊಳ್ಳುವಂತಹವರು ಇರುತ್ತಾರೆ. ಇವರು ಸ್ವಪ್ರತಿಷ್ಠೆಯ ಅತಿಥಿಗಳಾಗಿರುತ್ತಾರೆ. ಇನ್ನೊಬ್ಬರನ್ನು ಲೇವಡಿ ಮಾಡುವಂತಹ ಪ್ರವೃತ್ತಿಯನ್ನು ಈ ಅತಿಥಿಗಳಲ್ಲಿ ನಾವು ಗುರುತಿಸಬಹುದು.
 
ಅಧಿಕಾರಿ ಮನೋಭಾವದ ಅತಿಥಿಗಳು:
ಕೆಲವರಲ್ಲಿ ಯಾರು ಯಾವುದೇ ಕಾರ್ಯಕ್ರಮವನ್ನು ಮಾಡಿದರೂ ಅತಿಥಿಗಳಾಗಿ ಆಹ್ವಾನಿಸಲ್ಪಡುವುದು ತಮ್ಮ ಹಕ್ಕು ಎಂಬ ಮನೋಭಾವ ಇರುತ್ತದೆ. ಅವರು ಕಾರ್ಯಕ್ರಮದಲ್ಲಿಯೂ ತಾವು ಅಂದುಕೊಂಡಿರುವ ಅಧಿಕಾರವನ್ನು ಚಲಾಯಿಸಲು ಇಷ್ಟಪಡುತ್ತಾರೆ.
ಲಘು ಶೈಲಿಯವರು:
ಇವರು ಯಾವುದೇ ಕಾರ್ಯಕ್ರಮದ ಕುರಿತಾಗಿ ತಮ್ಮ ಜವಾಬ್ದಾರಿಯನ್ನು ಬಹಳ ಲಘುವಾದ ಶೈಲಿಯಲ್ಲಿ ತೆಗೆದುಕೊಳ್ಳುವವರಾಗಿರುತ್ತಾರೆ. ಇಂತಹ ಅತಿಥಿಗಳ ಬಳಿ ಪೂರ್ವ ಸಿದ್ಧತೆಗಳಿರುವುದು ಬಹಳ ಕಡಿಮೆ.
 
ಆಕಾಂಕ್ಷೆಗಳು:
ಇವರಿಗೆ ಯಾವುದಾದರೂ ಕಾರ್ಯಕ್ರಮಗಳಲ್ಲಿ ಅತಿಥಿಗಳಾಗುವ ಹಂಬಲವು ಜಾಸ್ತಿ ಇರುತ್ತದೆ. ಇವರಲ್ಲಿ ಇತರರನ್ನು ಓಲೈಸುವ ಪ್ರವೃತ್ತಿ ಇರುತ್ತದೆ.
ಆಕರ್ಷಿಸಲು ಬಯಸುವವರು: ಕೆಲವರಲ್ಲಿ ತಾನು ಎಲ್ಲರಿಗೂ ಆಕರ್ಷಿಸಲ್ಪಡಬೇಕು ಎಂಬ ಮನೋಭಾವ ಇರುತ್ತದೆ. ಆದ್ದರಿಂದ ಅವರು ಆಕರ್ಷಿಸಲು ಬೇಕಾದಂತಹವುಗಳನ್ನು ಮಾಡುತ್ತಿರುತ್ತಾರೆ.
ನಿರಾಸಕ್ತರು:
ಕೆಲವರಿಗೆ ತಮ್ಮ ಭಾಗವಹಿಸುವಿಕೆಯ ಬಗ್ಗೆ ವಿಶೇಷವಾದ ಆಸಕ್ತಿಯೇನೂ ಇರುವುದಿಲ್ಲ. ಸಾಮಾನ್ಯವಾಗೊ ಇವರು ಯಾವುದೋ ಒಂದು ಹಂತದಲ್ಲಿ ತುಂಬಾ ಕಾಳಜಿಯನ್ನಿಟ್ಟುಕೊಂಡು ಕೆಲಸ ಮಾಡಿ ನಾನಾ ಕಾರಣಗಳಿಗಾಗಿ ಭ್ರಮ ನಿರಸನ ಹೊಂದಿದವರಾಗಿರುತ್ತಾರೆ. ಅಂತಹವರಲ್ಲಿ ತನ್ನ ಭಾಗವಹಿಸುವ ತುಡಿತವೇನೂ ಇರುವುದಿಲ್ಲ. ಕೆಲವು ದಾಕ್ಷಿಣ್ಯಗಳಿಗೆ ಕಟ್ಟು ಬಿದ್ದು ಬಂದಿರುತ್ತಾರೆ ಅಷ್ಟೆ.
ಅತಿ ಉತ್ಸಾಹಿಗಳು:
ಅನಾಸಕ್ತರ ಜೊತೆ ಜೊತೆಯಲ್ಲೇ ಅತೀ ಉತ್ಸಾಹಿಗಳೂ ಇರುತ್ತಾರೆ. ಅತಿ ಉತ್ಸಾಹಿಗಳು ಸಾಮಾನ್ಯವಾಗಿ ಯುವಕ,ಯುವತಿಯರಾಗಿರುತ್ತಾರೆ. ಅವರಲ್ಲಿ ಆವೇಶ ಬರಿತ ಮಾತುಗಳು, ಏರುದನಿ ಎಲ್ಲ ಜಾಸ್ತಿ ಇರುತ್ತದೆ.
 
 
ಪ್ರಜಾಸತ್ತಾತ್ಮಕ ಪ್ರವೃತ್ತಿಯವರು:
ಪ್ರಜಾಸತ್ತಾತ್ಮಕ ಮನೋಭಾವವನ್ನು ಹೊಂದಿದವರು ವಿನಯವಂತರಾಗಿರುತ್ತಾರೆ. ಅವರ ಧೋರಣೆಯನ್ನು ಅವರು ಬಿಟ್ಟುಕೊಡುವುದಿಲ್ಲ. ಆದರೆ ಅವರೊಂದಿಗೆ ಸಂವಾದವನ್ನು ನಡೆಸಲು ಸಾಧ್ಯವಾಗುತ್ತದೆ. ಸಣ್ಣಪುಟ್ಟ ಆಚಾತುರ್ಯಗಳನ್ನೆಲ್ಲ ಅವರು ಸಹಿಸಕೊಳ್ಳುತ್ತಾರೆ. ಸಂಘಟಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಹೊಂದಾಣಿಕೆಗಳನ್ನು ಒಪ್ಪಿಕೊಳ್ಳುತ್ತಾರೆ. ಈ ಪ್ರವೃತ್ತಿಯನ್ನು ಅತಿಥಿಗಳು ಹೆಚ್ಚು ಅನುಕೂಲಿಗಳಾಗಿರುತ್ತಾರೆ.
ಎಲ್ಲದಕ್ಕೂ ಸಿದ್ಧರಿರುವವರು:
ಸಾಮಾನ್ಯವಾಗಿ ಸಂಘಟಕರು ಬದಲಿ ವ್ಯವಸ್ಥೆಗಳಿಗೆ ಇಮತಹ ಅತಿಥಿಗಳನ್ನು ಆರಿಸಿಕೊಳ್ಳುತ್ತಾರೆ. ಯಾಕೆಂದರೆ ಅವರು ಯಾವ ಸ್ಥಾನವನ್ನು ಬೇಕಾದರೂ ನಿರ್ವಹಿಸಲು ಸಿದ್ಧರಿರುತ್ತಾರೆ.
 
ಪ್ರಚಾರ ಆಸಕ್ತರು:
ಪ್ರಚಾರ ಪ್ರಿಯರ ಆಸೆಗಳು ಬಹಳ ಇರುತ್ತವೆ. ಅವರನ್ನು ಹೊಗಳಬೇಕು. ಅವರ ಬಗ್ಗೆ ಪತ್ರಿಕೆಗಳಲ್ಲಿ , ಟಿವಿಯಲ್ಲಿ ಬರಬೇಕು ಎಂದು ಭಾವಿಸುವವರು ಇವರು, ಅವರು ನಿರೀಕ್ಷಿಸಿದ ಪ್ರಚಾರ ಅವರಿಗೆ ಸಿಗದೆ ಇದ್ದರೆ ಸಿಕ್ಕಸಿಕ್ಕವರ ಮೇಲೆಲ್ಲ ರೇಗಲು ಪ್ರಾರಂಭಿಸುತ್ತಾರೆ.
ಅಹಂಕಾರ ಪ್ರವೃತ್ತಿಯವರು: ಅಹಂಕಾರ ಪ್ರವೃತ್ತಿಯ ಅತಿಥಿಗಳು ಅತಿಥಿಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಇರುತ್ತಾರೆ. ಅವರು ಸಂಘಟಕರು ಕೀಳು, ತಾವು ಮೇಲು ಎಂದು ಭಾವಿಸುವವರಾಗಿರುತ್ತಾರೆ.

ಮುಂದುವರಿಯುತ್ತದೆ…

ಅರವಿಂದ ಚೊಕ್ಕಾಡಿ
[email protected]

LEAVE A REPLY

Please enter your comment!
Please enter your name here