ಕಾರ್ಯಕ್ರಮ ಸಂಘಟನೆ

0
445

 
ಮುಂದುವರಿದ ಭಾಗ…
ಶಿಕ್ಷಣ ಅಂಕಣ: ಅರವಿಂದ ಚೊಕ್ಕಾಡಿ
ಪ್ರೇಕ್ಷಕರ ವಿಧಗಳು: 
ಸಮಾರಂಭಗಳಲ್ಲಿ ವಿವಿಧ ರೂಪಗಳು ಇರುವ ಹಾಗೆ ಪ್ರೇಕ್ಷಕರಲ್ಲಿಯೂ ವಿವಿಧ ವರ್ಗದವರು ಇರುತ್ತಾರೆ. ಆ ವಿವಿಧ ವರ್ಗಗಳೆಂದರೆ:
 
 
ಮಿಶ್ರ ವರ್ಗದ ಪ್ರೇಕ್ಷಕರು:
ಕೆಲವೊಮ್ಮೆ ಕಾರ್ಯಕ್ರಮದ ಸ್ವರೂಪಕ್ಕೂ ಪ್ರೇಕ್ಷಕ ವರ್ಗಕ್ಕೂ ಹೊಂದಾಣಿಕೆಯಾಗುವುದಿಲ್ಲ. ಪ್ರೇಕ್ಷಕರು ಕಾರ್ಯಕ್ರಮದ ಮೇಲಿನ ಆಸಕ್ತಿಯಿಂದಲೇ ಬಂದಿರಿವುದಿಲ್ಲ. ಸುಮ್ಮನೇ ಬಂದಿರುತ್ತಾರೆ. ಅಥವಾ ಬೇರೆ ಯಾವ್ಯಾವುದೋ ಆಸಕ್ತಿಯಿಂದ ಬಂದಿರುತ್ತಾರೆ. ಅವರವರ ಅಪೇಕ್ಷೆಗೆ ತಕ್ಕಂತೆ ಕಾರ್ಯಕ್ರಮ ಇಲ್ಲದೆ ಇದ್ದರೆ ಅವರೆಲ್ಲರೂ ಗಲಾಟೆ ಮಾಡಲು ಶುರು ಮಾಡಿ ಬಿಡುತ್ತಾರೆ. ಇಂತಹ ಕಾರ್ಯಕ್ರಮಗಳಲ್ಲಿ ಸಂಘಟಕರು ಊಟ, ತಿಂಡಿ, ಆಸನ, ಧ್ವನಿವರ್ಧಕದಂತಹ ಜನರ ಸಾಮಾನ್ಯ ಅವಶ್ಯಕತೆಗಳಿಗೆ ಸ್ಪಂದಿಸಲು ಆದ್ಯತೆಯನ್ನು ನೀಡಬೇಕಾಗುತ್ತದೆ.
 
 
ಒತ್ತಾಯದ ಪ್ರೇಕ್ಷಕರು:
ಶಾಲೆಗಳಲ್ಲಿ ಈ ರೀತಿಯ ಪ್ರೇಕ್ಷಕರು ಜಾಸ್ತಿ ಕಂಡುಬರುತ್ತಾರೆ. ಕಾರ್ಯಕ್ರಮದಲ್ಲಿ ಆಸಕ್ತಿ ಇರಲಿ, ಇಲ್ಲದಿರಲಿ, ಭಾಗವಹಿಸದೆ ಇರಲು ಮಕ್ಕಳಿಗೆ ಸ್ವಾತಂತ್ರ್ಯವಿಲ್ಲ. ಒತ್ತಾಯವಾಗಿ ಅವರನ್ನು ಹಿಡಿದು ಕೂರಿಸಲಾಗುತ್ತದೆ. ಸರ್ಕಾರಿ ಆದೇಶದ ಮೂಲಕ ರೂಪುಗೊಳ್ಳುವ ಪ್ರೇಕ್ಷಕರು ಈ ರೀತಿಯವರೇ ಆಗಿರುತ್ತಾರೆ. ಇಂತಹ ಪ್ರೇಕ್ಷಕ ವರ್ಗದಲ್ಲಿ ಎರಡು ಗುಂಪು ಇರುತ್ತದೆ. ಹೇಗೋ ಭಾಗವಹಿಸಿದ ಮೇಲೆ ತೊಡಗಿಸಿಕೊಂಡುಬಿಡೋಣ ಎಂಬ ಮನಃಸ್ಥಿತಿಯ ಪ್ರೇಕ್ಷಕ ವರ್ಗ ರೂಪುಗಳ್ಳುತ್ತದೆ. ಈ ಗುಂಪನ್ನು ನಿಭಾಯಿಸವುದು ಸುಲಭ. ಇನ್ನೊಂದು ಗುಂಪು ಕಾರ್ಯಕ್ರಮದ ಉದ್ದಕ್ಕೂ ಅದರ ಅಸಮಧಾನವನ್ನು ಹೊಹಾಕುತ್ತಲೇ ಇರುತ್ತದೆ. ಇವರನ್ನು ನಿಭಾಯಿಸುವುದು ಬಹಳ ಕಷ್ಟ.
 
 
 
ಬಾಡಿಕೆ ಪ್ರೇಕ್ಷಕರು:
ಇವರು ನಿಜವಾಗಿ ಪ್ರೇಕ್ಷಕರರಾಗಿರುವುದಿಲ್ಲ. ಕಾಣಲಿಕ್ಕೆ ಜನರು ಇರಬೇಕೆಂದು ದುಡ್ಡು ಕೊಟ್ಟು ಕರೆತಂದ ಪ್ರೇಕ್ಷಕರಾಗಿರುತ್ತಾರೆ. ಈ ಪ್ರೇಕ್ಷಕರನ್ನು ನಿರ್ವಹಿಸುವುದು ಕೆಲವೊಮ್ಮೆ ತುಂಬಾ ಸುಲಭ, ಕೆಲವೊಮ್ಮೆ ತುಂಬಾ ಕಷ್ಟ. ಆದರೆ ಕಾರ್ಯಕ್ರಮದಿಂದ ಇಲ್ಲಿನ ಪ್ರೇಕ್ಷಕರು ಅಂತಹ ಉಪಯೋಗವೇನೂ ಆಗುವುದಿಲ್ಲ.
 
 
 
ಸಾಮಾನ್ಯ ಆಸಕ್ತಿಯ ಪ್ರೇಕ್ಷಕರು:
ಈ ಬಗೆಯ ಪ್ರೇಕ್ಷಕರು ನಡೆಯುತ್ತಿರುವ ಕಾರ್ಯಕ್ರಮದ ಬಗ್ಗೆ ಸಾಮಾನ್ಯ ಆಸಕ್ತಿಯನ್ನೂ, ಕೂತುಹಲವನ್ನೂ ಹೊಂದಿರುತ್ತಾರೆ. ಇಷ್ಟರ ಮಟ್ಟಿನ ಆಸಕ್ತಿಯನ್ನು ಹೊರತುಪಡಿಸಿದರೆ ಕಾರ್ಯಕ್ರಮದ ಬಗ್ಗೆ ಕಲ್ಪನೆಯನ್ನೇನೂ ಹೊಂದಿರುವುದಿಲ್ಲ. ಇಂತಹ ಪ್ರೇಕ್ಷಕರು ಸ್ವಯಂ ಶಿಸ್ತಿನಿಂದ ಇರುತ್ತಾರೆ. ಆದ್ದರಿಂದ ಸಭೆಯನ್ನು ನಿರ್ವಹಿಸುವುದು ಸಂಘಕರಿಗೆ ಬಹಳ ಕಷ್ಟವೇನೂ ಆಗುವುದಿಲ್ಲ.
 
 
 
ವಿಶೇಷ ಆಸಕ್ತಿಯ ಪ್ರೇಕ್ಷಕರು:
ವಿಶೇಷ ಆಸಕ್ತಿಯ ಪ್ರೇಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೋ-ಬೇಡವೋ ಎಂದು ನಿರ್ಧರಿಸಲು ಕೆಲವು ಮಾನದಂಡಗಳನ್ನು ಹೊಂದಿರುತ್ತಾರೆ. ಕಾರ್ಯಕ್ರಮದಲ್ಲಿ ಯಾರು ಭಾಗವಹಿಸುತ್ತಾರೆ ಎಂದು ಪರಿಶೀಲಿಸುತ್ತಾರೆ. ಯಾವ ಸ್ಥಳದಲ್ಲಿ ಕಾರ್ಯಕ್ರಮ ನಡೆಯುತ್ತದೆ ಎಂದು ನೋಡುತ್ತಾರೆ. ಕಾರ್ಯಕ್ರಮವನ್ನು ಯಾವ ಪ್ರೇಕ್ಷಕ ವರ್ಗವನ್ನು ದೃಷ್ಠಿಯಲ್ಲಿಟ್ಟುಕೊಂಡಿದೆ ಎಂಬುದನ್ನು ನೋಡುತ್ತಾರೆ. ಇದೆಲ್ಲವನ್ನು ಪರಿಶೀಲಿಸಿದ ಬಳಿಕ ಕಾರ್ಯಕ್ರಮಕ್ಕೆ ಹೋಗಬೇಕೋ ಬೇಡವೋ ಎಂದು ನಿರ್ಧರಿಸುತ್ತಾರೆ. ಈ ವರ್ಗದ ಪ್ರೇಕ್ಷಕರು ಕಾರ್ಯಕ್ರಮಕ್ಕೆ ಬಂದರೆ ಅವರಿಂದ ಸಂಘಟಕರಿಗೆ ಯಾವುದೇ ಸಮಸ್ಯೆಗಳು ಆಗುವುದಿಲ್ಲ. ಊಟೋಪಚಾರ ಅವರಿಗೆ ಮುಖ್ಯವಾಗುವುದಿಲ್ಲ. ಆದರೆ ಕಾರ್ಯಕ್ರಮ ಮಾತ್ರ ಅವರ ನಿರೀಕ್ಷೆಗೆ ಹತ್ತಿರವಾಗುವಷ್ಟಾದರೂ ಇರಬೇಕು. ಆದರೆ ಆಗಲೂ ಅವರು ಸಂಘಟಕರಿಗೆ ಕಿರುಕುಳವನ್ನೇನೂ ಮಾಡುವುದಿಲ್ಲ.
 
 
ತಜ್ಞ ಪ್ರೇಕ್ಷಕರು:
ಈ ವರ್ಗದ ಪ್ರೇಕ್ಷಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿಶೇಷ ಪರಿಣಿತಿಯನ್ನು ಪಡೆದಿರುವ ಪ್ರೇಕ್ಷಕರಾಗಿರುತ್ತಾರೆ. ಇಲ್ಲಿ ಶಿಸ್ತಿನ ಬಗ್ಗೆ ಸಂಘಟಕರು ಚಿಂತಿಸಬೇಕಾಗಿಯೇ ಇಲ್ಲ. ತಾನೇ ತಾನಾಗಿ ಸಭೆಯಲ್ಲಿ ಶಿಸ್ತಿನ ವಾತಾವರಣ ಇರುತ್ತದೆ. ಇಂತಹ ಸಭೆಗಳಲ್ಲಿ ನಡೆಯುವ ಕಾರ್ಯಕ್ರಮಗಳು ಅಧ್ಯಯನ ಪೂರ್ಣವಾಗಿರುವ ಹಾಗೆ ನೋಡಿಕೊಳ್ಳಬೇಕಾದ್ದೇ ಪ್ರಮುಖ ಜವಾಬ್ದಾರಿಯಾಗಿರುತ್ತದೆ.
 

ಮುಂದುವರಿಯುವುದು…

ಅರವಿಂದ ಚೊಕ್ಕಾಡಿ

[email protected]

LEAVE A REPLY

Please enter your comment!
Please enter your name here