ಕಾರ್ಮಿಕರಿಂದ ಪ್ರತಿಭಟನಾ ಪ್ರದರ್ಶನ

0
269

ವರದಿ: ಸುನೀಲ್ ಕುಮಾರ್
ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಸಾರ್ವತ್ರಿಕ ಸಾರ್ವಜನಿಕ ವಿತರಣಾ ವ್ಯವಸ್ಥೆ ಜಾರಿ ಮಾಡಬೇಕು, ನಿರುದ್ಯೋಗ ತಡೆಗಟ್ಟಿ ಉದ್ಯೋಗ ಸೃಷ್ಟಿಸಲು ನಿರ್ದಿಷ್ಟ ಕ್ರಮಕೈಗೊಳ್ಳುವುದು, ಮೂಲ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ಮಾಡುವ ಪ್ರಸ್ತಾವಗಳನ್ನು ಕೈಬಿಡಬೇಕು, ಸಾಮಾಜಿಕ ಭದ್ರತೆಯ ರಕ್ಷಣೆ ಎಲ್ಲ ಕಾರ್ಮಿಕರಿಗೂ ಸಿಗಬೇಕು, ರೂ. 18,000/- ರಾಷ್ಟ್ರವ್ಯಾಪಿ ಸಮಾನ ಕನಿಷ್ಟ ವೇತನ ನಿಗದಿಗೊಳಿಸಬೇಕು ಮೊದಲಾದ 17 ರಾಷ್ಟ್ರಮಟ್ಟದ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಸೆಪ್ಟೆಂಬರ್ 2ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರವನ್ನು ಬೆಂಬಲಿಸಿ ಇಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನವನ್ನು ಏರ್ಪಡಿಸಲಾಯಿತು.
 
 
ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿಗಳಾದ ವಸಂತ ಆಚಾರಿ ಮಾತನಾಡಿ, ಕಳೆದ ವರ್ಷ 10 ಬೇಡಿಕೆಗಳನ್ನು ಮುಂದಿಟ್ಟು ಇದೇ ಕಾರ್ಮಿಕ ಸಂಘಟನೆಗಳು ಅಖಿಲ ಭಾರತ ಮುಷ್ಕರವನ್ನು ಏರ್ಪಡಿಸಿದರು, ಕೇಂದ್ರ ಸರಕಾರವಾಗಲೀ ಪ್ರಧಾನಿ ನರೇಂದ್ರ ಮೋದಿಯಾಗಲೀ ಕಾರ್ಮಿಕ ಸಂಘಟನೆಗಳ ಬೇಡಿಕೆಗಳನ್ನು ಈಡೇರಿಸಲು ಕ್ರಮಕೈಗೊಂಡಿಲ್ಲ. ಕೇಂದ್ರ ಸರಕಾರದ ಉದ್ಯಮ ಹಾಗೂ ಕಾರ್ಮಿಕ ನೀತಿಗಳು ಬಂಡವಾಳಶಾಹಿ ಕಾರ್ಪರೇಟುಗಳ ಪರವಾಗಿದೆ. ಕಾರ್ಮಿಕರ ಹಲವಾರು ಹೋರಾಟಗಳ ಮೂಲಕ ಪಡೆದುಕೊಂಡ 44 ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ 5 ಕಾರ್ಮಿಕ ಕೋಡ್ ಗಳ ಮೂಲಕ ಜಾರಿಗೊಳಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸುತ್ತಿದೆ. ಸುಧಾರಣೆಯ ಹೆಸರಲ್ಲಿ ಈ ತಿದ್ದುಪಡಿಗಳನ್ನು ಮಾಡಲಾಗುತ್ತಿದೆ. ದೇಶದಲ್ಲಿ 93% ಅಸಂಘಟಿತ ಕಾರ್ಮಿಕರು ಮತ್ತು 7% ಸಂಘಟಿತ ಕಾರ್ಮಿಕರ ಪರವಾಗಿ ಕೇಂದ್ರ ಸರಕಾರದ ಮುಂದಿಟ್ಟ ಎಲ್ಲ ಪ್ರಸ್ತಾವನೆಗಳನ್ನು ಕೈಬಿಟ್ಟ ಸರಕಾರ, ಕಾರ್ಮಿಕ ವಿರೋಧಿಯಾಗಿ ಕಾನೂನುಗಳನ್ನು ತಿದ್ದುಪಡಿಮಾಡುತ್ತಿದೆ.
 
 
 
ಪ್ರೊವಿಡೆಂಟ್ ಫಂಡ್ ಕಾಯ್ದೆಗೆ ತಂದ ತಿದ್ದುಪಡಿಗಳನ್ನು ಬೆಂಗಳೂರಿನ ಗಾರ್ಮೆಂಟ್ ಕಾರ್ಮಿಕರು ನಡೆಸಿದ ಧೀರ ಹೋರಾಟಕ್ಕೆ ಮಣಿದು, ಸರಕಾರ ಹಿಂತೆಗೆದುಕೊಳ್ಳಬೇಕಾಯಿತು. ಪ್ರಧಾನಿಯವರು ಹೇಳುವ ‘ಒಳ್ಳೆಯ ದಿನಗಳು’ ಮಾಲಕರಿಗಲ್ಲದೆ ಕಾರ್ಮಿಕರಿಗಲ್ಲ. ವಿಮೆ, ಬ್ಯಾಂಕು, ರೈಲ್ವೇ, ರಕ್ಷಣಾ ಇಲಾಖೆಗಳಲ್ಲೂ ವಿದೇಶೀ ನೇರ ಹೂಡಿಕೆಯ ದೇಶವಿರೋಧಿ ಕ್ರಮಗಳು ಬರುವ ಅಪಾಯ ಎದುರಾಗಿದೆ. ಗುತ್ತಿಗೆ ಉದ್ಯೋಗಕ್ಕೆ ಸರ್ಕಾರ ಪ್ರೋತ್ಸಾಹಿಸುತ್ತಿದೆ. ಸ್ಕೀಮು ಕಾರ್ಮಿಕರಾದ ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಮಿಕರಿಗೆ ಕನಿಷ್ಟ ಕೂಲಿ ಇಲ್ಲ. ಬರಲಿರುವ ರಸ್ತೆ ಸುರಕ್ಷಣಾ ಕಾಯ್ದೆ ಸಾರಿಗೆರಂಗದ ಕಾರ್ಮಿಕರನ್ನು ಅಪರಾಧಿಗಳೆಂಬಂತೆ ಪರಿಗಣಿಸುತ್ತಿದೆ. ಬಿಜೆಪಿ ಪಕ್ಷ ಆಳುವ ರಾಜ್ಯಗಳಲ್ಲಿ ರೈತರ ಆತ್ಮಹತ್ಯೆ ಬೇರೆಡೆಗಿಂತ ಹೆಚ್ಚಾಗಿದೆ. ಕೇಂದ್ರ ಸರಕಾರದ ದೇಶವಿರೋಧಿ ನೀತಿಗಳಿಗೆದುರಾಗಿ ದೇಶಪ್ರೇಮ ಕಾರ್ಮಿಕರ ಸಂಘಟನೆಗಳು ಏಕತೆಯಿಂದ ದೇಶವನ್ನು ರಕ್ಷಿಸುವ ಸಲುವಾಗಿ ಅಖಿಲ ಭಾರತ ಮುಷ್ಕರ ಪ್ರತಿಭಟನೆಗಳನ್ನು ಹಮ್ಮಿಕೊಂಡಿದೆ ಎಂದು ವಸಂತ ಆಚಾರಿ ನುಡಿದರು.
 
 
ಎಐಟಿಯುಸಿ ಜಿಲ್ಲಾ ಅಧ್ಯಕ್ಷರಾದ ಎಚ್.ವಿ.ರಾವ್ ಮಾತನಾಡಿ, ಚಲೇಜಾವ್ ಚಳುವಳಿಯನ್ನು ನೆನಪಿಸುವ ಆಗಸ್ಟ್ 9ರಂದು ದೇಶದೆಲ್ಲೆಡೆ ಕಾರ್ಮಿಕ ಸಂಘಟನೆಗಳು ಪ್ರತಿಭಟನಾ ಪ್ರದರ್ಶನಗಳನ್ನು ನಡೆಸುತ್ತಿದ್ದು, ವಿದೇಶೀ ಬಂಡವಾಳಿಗರು ದೇಶ ಪ್ರವೇಶಿಸಿ ಸುಲಿಗೆ ಮಾಡುವುದನ್ನು ಕಾರ್ಮಿಕ ಸಂಘಟನೆಗಳು ವಿರೋಧಿಸುತ್ತಿವೆ ಎಂದರು.
 
 
ಎಚ್ಎಂಎಸ್ ಸಂಘಟನೆಯ ರಾಜ್ಯ ಮುಖಂಡರಾದ ವೆಂಕಟರಾಮ್ ಮಾತನಾಡಿ, ಸರಕಾರೀ ರಂಗದಲ್ಲಿ ಇರುವ ಖಾಯಂ ಹುದ್ದೆಗಳಿಗೆ ಸರ್ಕಾರ ಗುತ್ತಿಗೆಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದೆ. ಸಾರ್ವಜನಿಕ ರಂಗವನ್ನು ಮುಚ್ಚಿ, ಖಾಸಗಿಯವರಿಗೆ ಹಸ್ತಾಂತರ ಮಾಡಲಾಗುತ್ತಿದೆ ಎಂದು ಎಚ್ಚರಿಸಿದರು.
ಐಎನ್ಟಿಯುಸಿ ದ.ಕ. ಜಿಲ್ಲಾ ಮುಖಂಡರಾದ ಸದಾಶಿವ ಶೆಟ್ಟಿ ಮಾತನಾಡಿ, ದೇಶದ ಕಾರ್ಮಿಕ ವರ್ಗವನ್ನು ಸರ್ಕಾರ ಗುಲಾಮಗಿರಿಗೆ ತಳ್ಳುತ್ತಿದೆ. 50 ವರ್ಷಗಳಿಗೂ ಮೀರಿ ಅಂದಿನ ಸರ್ಕಾರಗಳೇ ತಂದಿದ್ದ ಕಾರ್ಮಿಕ ಕಾನೂನುಗಳನ್ನು ಕಾರ್ಮಿಕ ವಿರೋಧಿಯಾಗಿ ಇವತ್ತು ತಿದ್ದುಪಡಿ ಮಾಡುತ್ತಿರುವುದನ್ನು ಕಾರ್ಮಿಕರು ಜಂಟಿಯಾಗಿ ಎದುರಿಸಲು ಸಜ್ಜಾಗಿದ್ದಾರೆ ಎಂದು ನುಡಿದರು.
 
 
ಬಿಎಸ್ಎನ್ಎಲ್ ನೌಕರರ ಸಂಘಟನೆಯ ಮುಖಂಡರಾದ ಕೃಷ್ಣ ಅವರು ಮಾತನಾಡಿ, 1984ರಿಂದ ಬಿಎಸ್ಎನ್ಎಲ್ ನಲ್ಲಿ ನೇಮಕಾತಿ ನಿಲ್ಲಿಸಲಾಗಿದೆ. ಈಗಾಗಲೇ 80% ಅಂದಿನ ಕಾರ್ಮಿಕರು ನಿವೃತ್ತರಾಗಿದ್ದು, ಉಳಿದಂತೆ ಗುತ್ತಿಗೆ ಕಾರ್ಮಿಕರಿಂದ ಭರ್ತಿ ಮಾಡಲಾಗುತ್ತಿದೆ. ಅಲ್ಲದೆ ದೂರಸಂಪರ್ಕ ರಂಗದಲ್ಲಿ ಖಾಸಗಿ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಮೂಲಕ ಸರ್ಕಾರೀ ಸಂಸ್ಥೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ದೂರಿದರು.
 
 
ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ದ.ಕ. ಜಿಲ್ಲಾ ಸಂಚಾಲಕರಾದ ಸಿಐಟಿಯು ಮುಖಂಡ ಜೆ. ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಐಟಿಯುಸಿ ಮುಖಂಡ ಬಿ. ಸುರೇಶ ಧನ್ಯವಾದವಿತ್ತರು. ವಿಮಾ ನೌಕರ ಸಂಘಟನೆ, ಎಐಸಿಸಿಟಿಯು ಮುಖಂಡರೂ ಸಭೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಗೂ ಮೊದಲು ಮಿನಿವಿಧಾನ ಸೌಧದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾರ್ಮಿಕರ ಬೃಹತ್ ಮೆರವಣಿಗೆ ನಡೆಯಿತು.

LEAVE A REPLY

Please enter your comment!
Please enter your name here