ಕಾರ್ಗಿಲ್ ಯಶಸ್ವಿನ ಮೆಟ್ಟಿಲಿಗೆ 17 ವರ್ಷ…

0
357

 
ವಿಶೇಷ ವರದಿ
ಇಂದು ಕಾರ್ಗಿಲ್ ವಿಜಯ ದಿವಸವಾಗಿದೆ. ಇಂದಿಗೆ ಕಾರ್ಗಿಲ್ ‘ಆಪರೇಷನ್ ವಿಜಯ್’ಆಗಿ 17 ವರ್ಷ ಸಂದಿದೆ. ಇಂದು ದೇಶಾದ್ಯಂತ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗಿದೆ.
 
ಪಾಕಿಸ್ತಾನದ ಮೇಲೆ 1999ರ ಜುಲೈ 26 ಭಾರತ ದಿಗ್ವಿಜಯ ಸಾಧಿಸಿದ ಸವಿನೆನಪಿಗಾಗಿ ಪ್ರತಿವರ್ಷ ಇಂದಿನ ದಿನವನ್ನು ‘ಕಾರ್ಗಿಲ್ ವಿಜಯ ದಿವಸ’ವನ್ನು ಆಚರಿಸಲಾಗುತ್ತಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸಾವಿರಾರು ಕಾರ್ಗಿಲ್ ವೀರ ಯೋಧರಿಗೆ ನಮ್ಮ ಕೋಟಿ ನಮನ.
 
 
20 ಸಾವಿರ ಮಂದಿ ಭೂಸೇನಾ ಪಡೆ ಯೋಧರು, 10 ಸಾವಿರ ಮಂದಿ ವಾಯು ಸೇನೆ, ಪ್ಯಾರಾ ಮಿಲಿಟರಿ ಪಡೆಯವರು ಗಡಿಯಲ್ಲಿ ಟೊಂಕ ಕಟ್ಟಿದರು. ಮೈನಸ್ 15 ಡಿಗ್ರಿ ಕೊರೆಯುವ ಚಳಿಯಲ್ಲಿ, ಸಮುದ್ರ ಮಟ್ಟಕ್ಕಿಂತ 16 ಸಾವಿರ ಅಡಿ ಎತ್ತರದ ಯುದ್ಧ ಭೂಮಿಯಲ್ಲಿ ಭಾರತೀಯ ಸೈನಿಕರು ಶತ್ರುಗಳ ರುಂಡ ಚೆಂಡಾಡಿ ಭಾರತಕ್ಕೆ ವಿಜಯ ತಂದು ಕೊಟ್ಟಿದ್ದಾರೆ.
 
 
ಕಾರ್ಗಿಲ್ ಸಂಘರ್ಷ ವೆಂದೇ ಹೆಸರಾದ ಕಾರ್ಗಿಲ್ ಯುದ್ದವು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಸಶಸ್ತ್ರ ಸಂಘರ್ಷವಾಗಿದ್ದು, ಕಾಶ್ಮೀರದ ಕಾರ್ಗಿಲ್ ಜಿಲ್ಲೆ ಮತ್ತು ನಿಯಂತ್ರಣ ರೇಖೆಯಿರುವ ಪ್ರದೇಶಗಳಲ್ಲಿ 1999ರ ಮೇ ಮತ್ತು ಜುಲೈ ನಡುವೆ ಸಂಭವಿಸಿತು.
 
 
ಉಭಯ ರಾಷ್ಟ್ರಗಳ ನಡುವಿನ ಡೇ ಫಾಕ್ಟೊ ಗಡಿಯಾಗಿರುವ ನಿಯಂತ್ರಣ ರೇಖೆಯಲ್ಲಿ(LOC)ರುವ ಭಾರತದ ನೆಲೆಗಳಿಗೆ ಪಾಕಿಸ್ತಾನದ ಸೈನಿಕರು ಮತ್ತು ಕಾಶ್ಮೀರಿ ಉಗ್ರಗಾಮಿಗಳು ನುಸುಳಿದ್ದೇ ಯುದ್ಧಕ್ಕೆ ಕಾರಣ. ಯುದ್ಧದ ಆರಂಭದ ಹಂತಗಳಲ್ಲಿ, ಕಾರ್ಗಿಲ್ ಕದನಕ್ಕೆ ಸ್ವತಂತ್ರ ಕಾಶ್ಮೀರಿ ಉಗ್ರಗಾಮಿಗಳ ಮೇಲೆ ಪಾಕಿಸ್ತಾನ ಗೂಬೆ ಕೂರಿಸಿತು, ಆದರೆ ಯುದ್ಧಾನಂತರದ ಸಾವು ನೋವುಗಳ ದಾಖಲೆಗಳು ಮತ್ತು ಆ ಬಳಿಕ ಪಾಕಿಸ್ತಾನದ ಪ್ರಧಾನ ಮಂತ್ರಿ ಮತ್ತು ಸೇನಾ ಸಿಬ್ಬಂದಿ ಮುಖ್ಯಸ್ಥರು ನೀಡಿದ ಹೇಳಿಕೆಗಳು, ಜನರಲ್ ಅಶ್ರಫ್ ರಷೀದ್ ನೇತೃತ್ವದ ಪಾಕಿಸ್ತಾನಿ ಅರೆಸೇನೆ ಪಡೆಗಳು ಈ ಯುದ್ಧದಲ್ಲಿ ಪಾಲ್ಗೊಂಡಿದ್ದನ್ನು ರುಜುವಾತು ಮಾಡಿತು. ಪಾಕಿಸ್ತಾನದ ಪಡೆಗಳು ಮತ್ತು ಉಗ್ರಗಾಮಿಗಳು ನಿಯಂತ್ರಣ ರೇಖೆಯಲ್ಲಿ ಆಕ್ರಮಿಸಿಕೊಂಡ ಭಾರತದ ಬಹುತೇಕ ನೆಲೆಗಳನ್ನು ಬಳಿಕ ಭಾರತದ ಸೇನೆಯು ಭಾರತೀಯ ವಾಯು ಪಡೆಯ ಬೆಂಬಲದೊಂದಿಗೆ ಮರುವಶಕ್ಕೆ ತೆಗೆದುಕೊಂಡಿತು. ಅಂತಾರಾಷ್ಟ್ರೀಯವಾಗಿ ರಾಜತಾಂತ್ರಿಕ ವಿರೋಧ ವ್ಯಕ್ತವಾಗಿದ್ದರಿಂದಾಗಿ, ಪಾಕಿಸ್ತಾನದ ಪಡೆಗಳು ನಿಯಂತ್ರಣ ರೇಖೆಯ ಭಾರತದ ನೆಲೆಗಳಿಂದ ಬಲವಂತವಾಗಿ ಹಿಂದಕ್ಕೆ ಸರಿಯಬೇಕಾಯಿತು.

LEAVE A REPLY

Please enter your comment!
Please enter your name here