ಕಾರಾಗೃಹದ ಗೋಶಾಲೆಗೆ ಹಸು ಸಮರ್ಪಣೆ

0
212

ವರದಿ: ಶ್ಯಾಮ್ ಪ್ರಸಾಸ್, ಬದಿಯಡ್ಕ
ಕೇರಳದ ಚೀಮೇನಿ ತೆರೆದ ಕಾರಾಗೃಹದ ಗೋಶಾಲೆಗೆ ರಾಮಚಂದ್ರಾಪುರ ಮಠದಿಂದ ಹಸು ಸಮರ್ಪಣೆ
ಇದು ಕಾರಾಗೃಹವಲ್ಲ, ಖೈದಿಗಳ ಮನಃಪರಿವರ್ತನಾ ಕೇಂದ್ರ, ಇದೂ ಒಂದು ಆಶ್ರಮವಾಗಿದೆ ಎಂದು ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
 
kasar_chimini jail
ಅವರು ಬುಧವಾರ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಚಿಮೇನಿ ಗ್ರಾಮಪಂಚಾಯತಿನಲ್ಲಿ ಕಾರ್ಯಾಚರಿಸುತ್ತಿರುವ ತೆರೆದ ಕಾರಾಗೃಹದಲ್ಲಿ ನೂತನವಾಗಿ ನಿರ್ಮಿಸಲಾದ ಕಾಸರಗೋಡು ಗಿಡ್ಡ ತಳಿಯ ಗೋಶಾಲೆಗೆ ರಾಮಚಂದ್ರಾಪುರ ಮಠದ ಕಾಮದುಘಾ ಯೋಜನೆಯ ವತಿಯಿಂದ ನೀಡಲಾದ ಹಸುಗಳ ಸಮರ್ಪಣಾ ಸಮಾರಂಭವನ್ನು ದೀಪಬೆಳಗಿಸಿ ಉದ್ಘಾಟಿಸಿ ಗೋವುಗಳನ್ನು ಸಮರ್ಪಿಸಿದರು. ಗೋವು ಕೇವಲ ಪ್ರಾಣಿ ಅಲ್ಲ ಅದು ನಮ್ಮ ಪ್ರಾಣ, ನಾವು ಗೋವನ್ನು ಸಾಕಿದರೆ ಗೋವು ನಮ್ಮನ್ನು ಸಾಕುತ್ತದೆ. ಇದು ಖೈದಿಗಳಿಗೆ ಗುರುಕುಲವಾಗಿ ಮಾರ್ಪಟ್ಟಿದೆ. ಗೋಮೂತ್ರದಲ್ಲೇ ಅನೇಕ ಔಷಧೀಯ ಗುಣಗಳು ಅಡಕವಾಗಿದೆ. ಗೋವಿನ ಒಡನಾಟದ ಮೂಲಕ ಖೈದಿಗಳು ಮಾನಸಿಕವಾಗಿ ಪರಿವರ್ತಿತರಾಗಿ ಒಳ್ಳೆಯ ಜೀವನ ನಡೆಸಲಿ. ಪಂಚಗವ್ಯದ ಮೂಲಕ ಮಾನಸಿಕ ರೋಗಗಳೂ ಗುಣವಾದ ಉದಾಹರಣೆಗಳಿವೆ.
 
 
 
2007ನೇ ದಶಂಬರ 14ರಂದು ಚಿಮೇನಿ ತೆರೆದ ಕಾರಾಗೃಹ ಲೋಕಾರ್ಪಣೆಗೊಂಡಿತ್ತು. ಅಂದಿನ ಮುಖ್ಯಮಂತ್ರಿ ವಿ.ಎಸ್.ಅಚ್ಚುತಾನಂದನ್, ಗೃಹಸಚಿವ ಕೊಡಿಯೇರಿ ಬಾಲಕೃಷ್ಣನ್ ಮೊದಲಾದವರ ಸಮ್ಮುಖದಲ್ಲಿ ಉದ್ಘಾಟನೆಗೊಂಡ ಕಾರಾಗೃಹ 308 ಎಕ್ರೆ ಸ್ಥಳದಲ್ಲಿ ಕಾರ್ಯಾಚರಿಸುತ್ತಿದೆ.
 
 
 
17-09-2016ರಂದು ಕಾರಾಗೃಹದ ಸುಪರಿಂಟೆಂಡೆಂಟ್ ಆಗಿ ಅಧಿಕಾರ ವಹಿಸಿಕೊಂಡ ಸುರೇಶ್ ಎ.ಜಿ. ಅವರು ಸುಭಾಷ್ ಪಾಳೇಕರ್ ಅವರ ಶೂನ್ಯ ಬಂಡವಾಳ ಕೃಷಿಯ ಮೂಲಕ ಪ್ರೇರಿತರಾಗಿ ಕಾಸರಗೋಡು ಗಿಡ್ಡ ತಳಿಯ ಹಸುವಿಗಾಗಿ ರಾಮಚಂದ್ರಾಪುರ ಮಠದ ಕಾರ್ಯಕರ್ತರನ್ನು ಸಂಪರ್ಕಿಸಿದ್ದರು. ಇದರ ಪರಿಣಾಮವಾಗಿ ಇದೀಗ 20 ಹಸುಗಳ ಸಾಮಥ್ರ್ಯವಿರುವ ಪ್ರಕೃತಿದತ್ತವಾದ ಮುಳಿಹುಲ್ಲು ಹಾಸಿನ ಗೋಶಾಲೆ ನಿರ್ಮಾಣಗೊಂಡಿದೆ. ಮುಂದಿನ ದಿನಗಳಲ್ಲಿ ಗೋಶಾಲೆಯನ್ನು ಇನ್ನಷ್ಟು ವಿಸ್ತರಿಸುವುದಾಗಿ ಅವರು ಹೇಳಿದರು. ಈಗಾಗಲೇ ಕಾರಾಗೃಹದಲ್ಲಿ ಭಸ್ಮ ತಯಾರಿ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಗೋಮೂತ್ರವನ್ನು ಸಂಗ್ರಹಿಸಿ ತರಕಾರಿ ಹಾಗೂ ಇತರ ಕೃಷಿಗಳಿಗೆ ಉಪಯುಕ್ತವಾಗುವ ಜೀವಾಮೃತವನ್ನು ತಯಾರಿಸಲಾಗುವುದು ಎಂದರು.
 
 
 
ದೇಶೀಯ ತಳಿಯನ್ನು ಆಯ್ಕೆಮಾಡಲು ಕಾರಣವಿದೆ. ಪರಂಪರಾಗತ ಜೈವಿಕ ಕೃಷಿಯನ್ನು ಮುಂದುವರಿಸಿಕೊಳ್ಳುವ ಮೂಲಕ ಪ್ರಕೃತಿಯನ್ನು ರಕ್ಷಣೆ ಮಾಡಿದಂತಾಗುತ್ತದೆ. ತನ್ಮೂಲಕ ನಮ್ಮ ಆರೋಗ್ಯ ಹಾಗೂ ಖೈದಿಗಳ ಮನಃಪರಿವರ್ತನೆಗೆ ಕಾರಣವಾಗಬಹುದು. ಗೋವಿನ ಮೂಲಕ ಲಭಿಸುವ ಎಲ್ಲಾ ಉತ್ಪನ್ನಗಳ ತಯಾರಿಗೆ ಬೇಕಾದ ವ್ಯವಸ್ಥೆಯನ್ನು ಕಾರಾಗೃಹದಲ್ಲೇ ಮಾಡಬೇಕು ಎಂಬ ಪಣತೊಟ್ಟಿದ್ದೇನೆ.
– ಸುರೇಶ್ ಎ.ಜಿ. (ಜೈಲು ಸುಪರಿಂಟೆಂಡೆಂಟ್)
 
 
 
ಗೋಶಾಲೆಯನ್ನು ವಾಸ್ತುಪ್ರಕಾರವಾಗಿ ನಿರ್ಮಿಸಲಾಗಿದೆ. ಗೋವನ್ನು ಇಲ್ಲಿ ಪೂಜ್ಯಭಾವದಿಂದ ನೋಡುತ್ತಾರೆ. ಗೋಸೇವೆ ಮಾಡುವ ಮೂಲಕ ಖೈದಿಗಳಿಗೆ ಮಾನಸಿಕ ನೆಮ್ಮದಿ ಲಭಿಸಲಿ.
– ಶಶಿಧರ ಪೊದುವಾಳ್ (ಜ್ಯೋತಿಷ್ಯರು ಹಾಗೂ ವಾಸ್ತು ತಜ್ಞ)
 
 
 
ಕಾರಾಗೃಹದಲ್ಲಿ ಬೆಂಡೆ, ತೊಂಡೆ, ಬದನೆ, ಕ್ಯಾಬೇಜ್, ಬಾಳೆ, ತೆಂಗು ಮೊದಲಾದ ಕೃಷಿಗಳನ್ನು ಮಾಡಲಾಗುತ್ತದೆ. ಚಪಾತಿ ತಯಾರಿಕೆಯ ಮೂಲಕ ದಿನವೊಂದಕ್ಕೆ 8000 ರೂಪಾಯಿ ಲಭಿಸುತ್ತದೆ.
 
ಈ ಸಂದರ್ಭದಲ್ಲಿ ಪೊದುಕಂಡ ಆನಂದಾಶ್ರಮದ ಕೃಷ್ಣಾನಂದ ಸ್ವಾಮೀಜಿ, ರಂಜಿತ್ ಪೆರಿಯ, ಕಾಮದುಘಾ ಯೋಜನೆಯ ಡಾ| ವೈ.ವಿ. ಕೃಷ್ಣಮೂರ್ತಿ, ಸುಬ್ರಹ್ಮಣ್ಯ ಪ್ರಸಾದ ನೆಕ್ಕರೆಕಳೆಯ, ಈಶ್ವರಿ ಬೇರ್ಕಡವು, ನಾರಾಯಣ ಭಟ್ ದಂಬೆಮೂಲೆ, ಚಲಿಸುವ ಗೋ ಆಲಯದ ರೂವಾರಿ ಗಣೇಶ್ ಭಟ್ ಮುಣ್ಚಿಕ್ಕಾನ, ಕಾರಾಗೃಹದ ವೆಲ್ಫೇರ್ ಆಫೀಸರ್ ಶಿವಪ್ರಸಾದ್, ಜಗದೀಶ್, ವಿಷ್ಣು ಪೂಚಕ್ಕಾಡು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here