ಕಾಮಗಾರಿಗಾಗಿ ಮುಚ್ಚಲು ಸಜ್ಜಾಗುತ್ತಿರುವ ಶಿರಾಡಿ ಘಾಟ್

0
185

ವಿಶೇಷ ವರದಿ: ಆನಿತ್ ಕುಮಾರ್
ಸಕಲೇಶಪುರ-ಶಿರಾಡಿ ಘಾಟ್ ಕಾಂಕ್ರಿಟೀಕರಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ 75ರ ಬಂದ್‍ಗೆ ದಿನಗಣನೆ ಆರಂಭವಾಗಿದೆ. ಹೆದ್ದಾರಿಯ 250.6 ಕಿಮೀ ನಿಂದ 263 ಕಿ.ಮೀ ವರೆಗಿನ 13 ಕಿ.ಮೀ ಕಾಂಕ್ರೀಟಿಕರಣ ಹಾಗೂ 70 ಮೋರಿ ದುರಸ್ಥಿ ಮತ್ತು 3 ಸೇತುವೆಗಳ ಅಭಿವೃದ್ದಿಗಾಗಿ 90.30 ಕೋಟಿಗೆ 2015 ರ ನವಂಬರ್ ತಿಂಗಳಿನಲ್ಲಿ ಚೆನ್ನೈನ ಜಿವಿಆರ್ ಕಂಪನಿ ಗುತ್ತಿಗೆ ಪಡೆದಿದೆ.
 
 
ಈ ಕಂಪೆನಿಗೆ ಡಿಸೆಂಬರ್ 2015ರಿಂದ ಹೆದ್ದಾರಿ ಕಾಮಗಾರಿ ನಡೆಸಲು ಒಪ್ಪಿಗೆ ಸೂಚಿಸಿರುವ ಇಲಾಖೆ 18 ತಿಂಗಳ ಗುಡುವು ನೀಡಿದ್ದು, ಜೂನ್ 2017 ರ ವೇಳೆಗೆ ಸಾರ್ವಜನಿಕ ಸೇವೆಗಾಗಿ ಬಿಡುಗಡೆ ಮಾಡಲು ಕರಾರು ವಿಧಿಸಿದೆ. ಇದರಿಂದಾಗಿ ಕಂಪನಿ ಈಗಾಗಲೇ ಸಾಮಗ್ರಿಗಳನ್ನು ಸಂಗ್ರಹಿಸುವ ಕೆಲಸ ಆರಂಭಿಸಿದ್ದು, ಕಾಮಗಾರಿಗೆ ಬೇಕಿರುವ 20 ಹಾಗೂ 26 ಮೀ.ಮೀನ 33380 ಕ್ಯೂಬಿಕ್ ಮೀಟರ್ ಜಲ್ಲಿಯಲ್ಲಿ 19046 ಕ್ಯೂಬಿಕ್ ಮೀಟರ್ ಜಲ್ಲಿ ಸಂಗ್ರಹಿಸಲಾಗಿದ್ದರೆ, 40 ಎಂ.ಎಂ ನ 1038 ಕ್ಯೂಬಿಕ್ ಮೀಟರ್ ಜಲ್ಲಿ ಬೇಕಿದ್ದು 540 ಕ್ಯೂಬಿಕ್ ಮೀಟರ್ ಜಲ್ಲಿ ಸಂಗ್ರಹಿಸಲಾಗಿದೆ. 10 ಮಿಲಿಮೀಟರ್‍ ನ 19042 ಕ್ಯೂಬಿಕ್ ಮೀಟರ್ ಜಲ್ಲಿ ಅಗತ್ಯವಿದ್ದು 11184 ಕ್ಯೂಬಿಕ್ ಮೀಟರ್ ಜಲ್ಲಿಯನ್ನು ಈಗಾಗಲೇ ಸಂಗ್ರಹಿಸಲಾಗಿದೆ.
 
 
 
ಕಾಮಗಾರಿಗೆ 27180 ಕ್ಯೂಬಿಕ್ ಮೀಟರ್ ಮರಳಿನ ಅವಶ್ಯಕತೆ ಇದ್ದು ಪ್ರಸಕ್ತ 9900 ಕ್ಯೂಬಿಕ್ ಮೀಟರ್ ಮರಳನ್ನು ಸಂಗ್ರಹಿಸಲಾಗಿದ್ದು ಒಟ್ಟಾರೆ ಶೇ 48 ರಷ್ಟು ಸಮಾಗ್ರಿಗಳ ಸಂಗ್ರಹಿಸಿರುವ ಕಂಪನಿ ಇನ್ನೊಂದು ವಾರದೊಳಗೆ ಇದರ ಸಂಗ್ರಹ ಶೇ 65 ರಷ್ಟು ತಲುಪಲಿದೆ. ಕಾಂಕ್ರೀಟಿಕರಣಕ್ಕಾಗಿ 60 ಹಾಗೂ 30 ಕ್ಯೂಬಿಕ್ ಮೀಟರ್ ಸಾಮರ್ಥ್ಯದ ಎರಡು ಕಾಂಕ್ರೀಟಿಕರಣದ ಪ್ಲಾಟ್ ನಿರ್ಮಾಣ ಸಹ ನಡೆದಿದೆ.
 
 
ಬದಲಿ ರಸ್ತೆಗಾಗಿ ಸಭೆ:
ಕಳೆದ ಸೆಪ್ಟಂಬರ್ 26 ರಂದು ಹೆದ್ದಾರಿ ಇಲಾಖೆ ಕಮಿಷನರ್ ಕಚೇರಿಯಲ್ಲಿ ಈ ಸಂಬಂದ ಮೊದಲ ಸಭೆ ನಡೆಸಿದ ಅಧಿಕಾರಿಗಳು ಮಂಗಳೂರು, ಬೆಂಗಳೂರು ಸಂಚರಿಸಲು 7 ಬದಲಿ ರಸ್ತೆಗಳನ್ನು ಗುರುತಿಸಿದ್ದು ಇದರಲ್ಲಿ ಕೆಲವು ಲೋಕೋಪಯೋಗಿ ಇಲಾಖೆಗೆ ಸೇರುವುದರಿಂದ ಇನ್ನೂ 15 ದಿನಗಳ ಒಳಗಾಗಿ ಈ ರಸ್ತೆಗಳ ಗುಂಡಿ ಮುಚ್ಚುವ ಪ್ರಕ್ರಿಯೆ ನಡೆಸುವಂತೆ ಸೂಚಿಸಲಾಗಿದೆ. ಈ ಬದಲಿ ರಸ್ತೆಗಳು ಸಂಪೂರ್ಣ ದುರಸ್ಥಿಗೊಂಡ ನಂತರ ಹೆದ್ದಾರಿ ಮುಚ್ಚುಗಡೆಗೆ ದಿನಾಂಕ ನಿಗದಿಪಡಿಸಲು ಸಭೆಯು ನಿರ್ಣಯಕ್ಕೆ ಬಂದಿದ್ದು ಬಹುತೇಕ ಈ ತಿಂಗಳ ಅಂತ್ಯಕ್ಕೆ ರಸ್ತೆ ಬಂದ್ ಆಗುವ ಸಂಭವ ಹೆಚ್ಚಿದೆ.
 
 
 
ಬದಲಿ ರಸ್ತೆಗಳ ವಿವರ:
*ಸಕಲೇಶಪುದಿಂದ ಮಂಗಳೂರಿಗೆ ತಲುಪಲು ಹಾನುಬಾಳ್-ಮೂಡಿಗೆರೆ-ಚಾರ್ಮಾಡಿ ಘಾಟ್- ಮಂಗಳೂರು.
*ಅರೇಹಳ್ಳಿ, ಬೇಲೂರು –ಚಾರ್ಮುಡಿ ಘಾಟ್ ಮೂಲಕ ಬೇಲೂರು ತಾಲೂಕಿನ ಜನರು ಮಂಗಳೂರು ತಲುಪಲು ಅನುಕೂಲ ಕಲ್ಪಿಸಲಾಗಿದೆ.
*ರಾಷ್ಟ್ರೀಯ ಹೆದ್ದಾರಿ 275 ರ ಕುಶಾಲನಗರ, ಮಡಿಕೇರಿ ಮೂಲಕ ಮೈಸೂರು ಭಾಗದ ಜನತೆ ಮಂಗಳೂರು ತಲುಪಲು ವ್ಯವಸ್ಥೆ ಮಾಡಲಾಗಿದೆ.
*ಇದಲ್ಲದೆ ಹಾಸನ-ಕೆ.ಆರ್ ನಗರ-ಕುಶಾಲನಗರದ ಮೂಲಕವೂ ತಲುಪಬಹುದಾಗಿದೆ.
*ಮಂಗಳೂರು ಜನರು ಉಡುಪಿ-ಬೈಂದೂರು-ಬಾಳೆಬರೆಘಾಟ್-ಮಾಸ್ತಿಕಟ್ಟೆ-ಆಯನೂರು ಶಿವಮೊಗ್ಗ ಬೆಂಗಳೂರಿಗೆ ತಲುಪಲು.
*ಹೊನ್ನವರ-ಶಿವಮೊಗ್ಗ-ಆಯನೂರು ಮತ್ತೊಂದು ಬದಲಿ ರಸ್ತೆ.
*ಉಡುಪಿ-ಕಾರ್ಕಳ-ಕುದುರೆಮುಖ-ಮೂಡಿಗೆರೆ-ಬೆಂಗಳೂರು ರಸ್ತೆಗಳನ್ನು ಬದಲಿ ರಸ್ತೆಗಳನ್ನಾಗಿ ಗುರುತಿಸಲಾಗಿದೆ.

LEAVE A REPLY

Please enter your comment!
Please enter your name here