ವರದಿ:ಲೇಖಾ
ಆಫ್ಘಾನಿಸ್ತಾನದ ರಾಜಧಾನಿ ಕಾಬುಲ್ ನ ಹೊರವಲಯದಲ್ಲಿ ಉಗ್ರರು ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 40ಕ್ಕೂ ಹೆಚ್ಚು ಪೊಲೀಸರು ಸಾವನ್ನಪ್ಪಿದ್ದಾರೆ.
ಕಾಬೂಲ್ ನಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಹೊಸದಾಗಿ ಸೇವೆಗೆ ಸೇರಿದ ಪೊಲೀಸರನ್ನು ತರಬೇತಿಗಾಗಿ ಬಸ್ ನಲ್ಲಿ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಬಸ್ ಮೇಲೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಪೊಲೀಸರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಆಂತರಿಕ ಸಚಿವಾಲಯ ತಿಳಿಸಿದೆ.
ಮೈದಾನ್ ವರ್ಡಕ್ ಪ್ರಾಂತ್ಯದಿಂದ ಕಾಬೂಲ್ ನಗರಕ್ಕೆ ಬಸ್ ಬರುತ್ತಿದ್ದಾಗ ಮಧ್ಯಾಹ್ನ 12 ಗಂಟೆ (ಸ್ಥಳೀಯ ಕಾಲಮಾನ) ವೇಳೆಗೆ ಈ ಘಟನೆ ಸಂಭವಿಸಿದೆ. ಮೊದಲ ಸ್ಫೋಟ ಸಂಭವಿಸಿದ ನಂತರ 2ನೇ ಬಾಂಬ್ ಸ್ಫೋಟ ಸಂಭವಿಸಿದ್ದು, 2ನೇ ಸ್ಪೋಟದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಜತೆಗೆ ಸ್ಪೋಟದಲ್ಲಿ ಗಾಯಗೊಂಡಿರುವವರ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ತಾಲಿಬಾನ್ ಉಗ್ರ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಕಳೆದ ವಾರ ಕಾಬುಲ್ ನಲ್ಲಿರುವ ಕೆನಡಾ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನೇಪಾಳಿ ಭದ್ರತಾ ಸಿಬ್ಬಂದಿ ತೆರಳುತ್ತಿದ್ದ ಬಸ್ ಮೇಲೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 14 ಮಂದಿ ಮೃತಪಟ್ಟಿದ್ದರು.