ಕಾನೂನು ಪಾಲನೆಯಿಂದ ನೆಮ್ಮದಿಯ ಜೀವನ

0
400

 
ಉಡುಪಿ ಪ್ರತಿನಿಧಿ ವರದಿ
ಕಾನೂನುಗಳನ್ನು ಜನರ ಹಿತಕ್ಕಾಗಿಯೇ ಜಾರಿಗೆ ತರಲಾಗಿದ್ದು, ಅವುಗಳನ್ನು ಸಮರ್ಪಕವಾಗಿ ಪಾಲನೆ ಮಾಡುವುದರಿಂದ ನೆಮ್ಮದಿಯ ಹಾಗೂ ಸುರಕ್ಷಿತ ಜೀವನ ಸಾಗಿಸಲು ಸಾಧ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಶಂಕರ ಬಿ ಅಮರಣ್ಣವರ ಹೇಳಿದ್ದಾರೆ.
 
udupi-sarige1
ಅವರು ಬುಧವಾರ, ಉಡುಪಿಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ(ರಿ), ಪಂಚಾಯತ್ ರಾಜ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆ, ಉಡುಪಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಸಾಕ್ಷರತಾ ರಥದ ಮೂಲಕ ಕಾನೂನು ಸಾಕ್ಷರತಾ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದರು.
 
ಕಾನೂನುಗಳ ರಚನೆಯ ಮೂಲ ಉದ್ದೇಶಗಳನ್ನು ಅರಿತಾಗ ಮಾತ್ರ ಕಾನೂನಿನ ಮಹತ್ವ ತಿಳಿಯುತ್ತದೆ, ಕಾನೂನು ಅರಿತಿಲ್ಲ ಎನ್ನುವುದು ಕಾನೂನು ಉಲ್ಲಂಘನೆಗೆ ಸಕಾರಣವಲ್ಲ, ಇತ್ತೀಚೆಗೆ ಸುಪ್ರೀಂ ಕೋರ್ಟ್ ಜಾರಿಗೆ ತಂದ ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಕುರಿತ ಕಾನೂನು ಹಿಂಬದಿ ಸವಾರರ ಜೀವ ರಕ್ಷಣೆಗಾಗಿ ಮಾಡಲಾಗಿದೆ, ವಾಹನ ಚಲಾವಣೆಯ ಸಂದರ್ಭದಲ್ಲಿ ಅಗತ್ಯ ದಾಖಲೆಗಳೊಂದಿಗೆ ಚಲಾಯಿಸುವಂತೆ ಹಾಗೂ ರಸ್ತೆ ದಾಟುವ ಪಾದಾಚಾರಿಗಳ ಸುರಕ್ಷತೆಗೆ ಆದ್ಯತೆ ನೀಡುವಂತೆ ನ್ಯಾಯಾಧೀಶರು ತಿಳಿಸಿದರು.
 
ರಸ್ತೆ ಸುರಕ್ಷತೆ ಕುರಿತು ಉಪನ್ಯಾಸ ನೀಡಿದ ಮೋಟಾರು ವಾಹನ ನಿರೀಕ್ಷಕ ವಿಶ್ವನಾಥ ನಾಯ್ಕ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಪ್ರತಿ ತಿಂಗಳು ಸರಾಸರಿ 100 ಅಪಘಾತಗಳು ಸಂಭವಿಸುತ್ತಿದ್ದು, 30 ಮಂದಿ ಮಾರಣಾಂತಿಕವಾಗಿ ಗಾಯಗೊಳ್ಳುತ್ತಿದ್ದಾರೆ, ಎಲ್ಲಾ ಅಪಘಾತಗಳು ಚಾಲಕರ ನಿರ್ಲಕ್ಷ್ಯದಿಂದಲೇ ಸಂಭವಿಸುತ್ತಿವೆ ಎಂದು ಹೇಳಿದರು.
 
ದ್ವಿಚಕ್ರ ಅಪಘಾತ ಪ್ರಕರಣಗಳಲ್ಲಿ ಬಹುತೇಕ ಹಿಂಬದಿ ಪ್ರಯಾಣಿಕರ ಸಾವಿಗೀಡಾಗುತ್ತಿದ್ದು, ಹಿಂಬದಿ ಪ್ರಯಾಣಿಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಸೂಚಿಸಿದರು. ದ್ವಿಪಥದ ರಸ್ತೆ ಯಲ್ಲಿ ನಿಧಾನವಾಗಿ ಚಲಿಸುವ ವಾಹನಗಳು ಎಡಬದಿಯಲ್ಲಿ ಹಾಗೂ ವೇಗವಾಗಿ ಚಲಿಸುವ ವಾಹನಗಳು ಬಲಬದಿಯಲ್ಲಿ ಚಲಿಸಬೇಕು ಹಾಗೂ ಕಡ್ಡಾಯವಾಗಿ ಬಲಬದಿಯಿಂದಲೇ ಓವರ್ ಟೇಕ್ ಮಾಡುವಂತೆ ಸೂಚಿಸಿದರು. ಸುಗಮ ಸಂಚಾರಕ್ಕೆ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಹಾಗೂ ಪಾದಾಚಾರಿಗಳು ರಸ್ತೆಗಳ ಬಲಬದಿಯಲ್ಲಿ ನಡೆಯುವುದು ಸೂಕ್ತ ಎಂದು ತಿಳಿಸಿದರು.
ಪ್ರಭಾರ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಗುರುಮೂರ್ತಿ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ದಯಾನಂದ ಕೆ ಉಪಸ್ಥಿತರಿದ್ದರು.
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ ವಂದಿಸಿದರು.

LEAVE A REPLY

Please enter your comment!
Please enter your name here