ಕಾಂಞಂಗಾಡಿನಲ್ಲಿ ಮಾಡಿದ ವಿಶೇಷವಾದ ಪವಾಡ…!!

0
490

ನಿತ್ಯ ಅಂಕಣ:೫೭-ತಾರಾನಾಥ್‌ ಮೇಸ್ತ,ಶಿರೂರು.
ನಿತ್ಯಾನಂದ ಸ್ವಾಮಿಗಳು ಕಾಂಞಂಗಾಡಿನಲ್ಲಿ ಒಮ್ಮೆ ದೊಡ್ಡಗಾತ್ರದ ಮಾವಿನ ಮರದ ರಂಬೆಯ ಮೇಲೆ ಕುಳಿತುಕೊಂಡಿದ್ದರು. ಜನರು ಅವರಲ್ಲಿಗೆ ಬಂದು ಕೌಟುಂಬಿಕ, ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿ ಕೊಂಡು ಹೋಗುತ್ತಿದ್ದರು. ಅಲ್ಲಿಗೆ ಬಂದ ಕೃಷಿಕನೊಬ್ಬ, ತನ್ನ ಹೊಲದಲ್ಲಿ ಬಿತ್ತಿದ ಪೈರುಗಳಿಗೆ ಮಳೆ ನೀರು ಇಲ್ಲದೆ ಒಣಗಲು ಆರಂಭಗೊಂಡಿದೆ. ಊರಿನ ಕೃಷಿಕರಿಗೆಲ್ಲರಿಗೂ ನೀರಿನ ಕ್ಷಾಮ ಎದುರಾಗಿದೆ. ಬಾವಿ, ಹಳ್ಳ ಕೊಳ್ಳಗಳು ಎಲ್ಲವೂ ಬತ್ತಿ ಹೋಗಿವೆ. ಕುಡಿಯುವ ನೀರಿಗೂ ಬರಗಾಲ, ಜಾನುವಾರುಗಳಿಗೂ ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ನಾವೆಲ್ಲರೂ ಮಳೆಯ ಬರುವುದನ್ನು ನಿರೀಕ್ಷಿಸುತ್ತ ಆಕಾಶದತ್ತ ಕಾಣುತ್ತಿದ್ದೇವೆ. ಹೀಗೆಂದು ಕೃಷಿಕ ಊರಿಗೆ ಎದುರಾದ ಸಮಸ್ಯೆಗಳನ್ನು ನಿವೇದಿಸಿದ.

ಕರುಣಾನಿಧಿ, ಕರುಣಾಕರನಾದ ನಿತ್ಯಾನಂದರು ನೇಗಿಲಯೋಗಿ ಅನ್ನದಾತನ ಅಳಲನ್ನು ಅರ್ಥಮಾಡಿಕೊಂಡರು. ವೃಷ್ಠಿ ಕೃಪೆಯಾಗುತ್ತದೆ, ನಾಡಿಗೆ ಸುಭಿಕ್ಷೆಯಾಗುತ್ತದೆ ಎಂದು ಹೇಳಿ ಕಳಿಸಿದರು. ಒಮ್ಮೆಗೆ ನಿತ್ಯಾನಂದರು ನಕ್ಕರು. ತಸು ಹೊತ್ತಿನ ಬಳಿಕ ಬಾನಂಗಳದಲ್ಲಿ ಕರಿಮೋಡಗಳ ಚಲನೆ ಕಂಡು ಬಂದವು. ಪಡುವಣದಿಂದ ತಂಪುಗಾಳಿಯು ಬಿಸುತ್ತಾ ಪಸರಿಸಿತು. ಅದೇಷ್ಟೋ ದಿನಗಳಿಂದ ಜಲಪಸೆ ಕಳೆದುಕೊಂಡ ಭೂ ಮಡಿಲಿಗೆ ಮೇಘರಾಜನು ವೃಷ್ಠಿ ಸುರಿಸಿದ. ಹಳ್ಳ ಕೊಳ್ಳಗಳು ಹರಿದು ಭೂಗರ್ಭದೊಳಗೂ ನೀರು ಸೇರಿತು. ಇದೊಂದು ಸಮಷ್ಟಿಯ ಕ್ಷೇಮಕ್ಕೆ ಗರುದೇವ ನಿತ್ಯಾನಂದರು ಕಾಂಞಂಗಾಡಿನಲ್ಲಿ ಮಾಡಿದ ವಿಶೇಷವಾದ ಪವಾಡ…!!

ಕಾಂಞಂಗಾಡ್ ನಿತ್ಯಾನಂದ ಆಶ್ರಮದಲ್ಲಿ ತಾಮ್ರ ಲೋಹದ ಪಾತ್ರೆ ಪರಿಕರಗಳು ಇದ್ದವು. ಅಲ್ಲಿರುವ ಪಾತ್ರೆ ಪಗಡೆಗಳನ್ನು ಕಳ್ಳನೊಬ್ಬ ಕೆಲವು ದಿನಗಳಿಂದ ಗಮನಿಸಿದ್ದ. ಒಂದು ದಿನ ರಾತ್ರಿಯ ಸಮಯ ಕಳ್ಳ ದೊಡ್ಡದಾದ ತಾಮ್ರದ ಹಂಡೆಯನ್ನು ಕದ್ದು ತನ್ನ ಮನೆಗೆ ಸಾಗಿಸಿದ. ಕದ್ದ ಮಾಲನ್ನು ಮನೆಯಲ್ಲಿ ಅಡಗಿಸಿಟ್ಟು ಮಲಗಿದ. ಆದರೆ ಹಂಡೆ ಕದ್ದವನಿಗೆ ರಾತ್ರಿ ನಿದ್ದೆ ಹತ್ತಲಿಲ್ಲ. ದುಸ್ವಪ್ನಗಳು ಕಾಡತೊಡಗಿದವು. ಮನಸು ವಿಕಾರವಾಗಿ ಮಾನಸಿಕ ಅಸ್ವಸ್ಥರಂತೆ ವರ್ತಿಸಿತು. ಬೆಳಿಗ್ಗೆ ಎದ್ದ ಆತ ತಕ್ಷಣ ಹಂಡೆಯನ್ನು ತಲೆ ಮೇಲೆ ಹೊತ್ತುಕೊಂಡು, “ತಾನು ಹಂಡೆ ಕಳವುಗೈದಿದ್ದೇನೆ” ಎಂದು ಬೊಬ್ಬಿಡುತ, ತನ್ನ ಅಪರಾಧವನ್ನು ತಾನಾಗಿಯೇ ಪ್ರಚಾರಪಡಿಸುತ್ತ, ಸ್ವಾಮೀಜಿಗಳ ಆಶ್ರಮದಡೆಗೆ ಹೋದ.

ನಿತ್ಯಾನಂದ ಸ್ವಾಮಿಗಳ ಬಳಿಗೆ ಬಂದು ಕದ್ದಿರುವ ತಾಮ್ರದ ಹಂಡೆಯನ್ನು ಪಾದ ತಳದಲ್ಲಿಟ್ಟು, ತನ್ನಿಂದಾದ ತಪ್ಪಿಗೆ ಕ್ಷಮೆಯಾಚಿಸಿದ. ನಂತರ ಕಳ್ಳನ ವಿಕಾರಗೊಂಡ ಮಾನಸಿಕತೆ ಸುಸ್ಥಿತಿಯನ್ನು ಪಡೆಯಿತು. ಮುಂದೆ ಕಳ್ಳತನ ಮಾಡಬಾರದೆಂಬ ಜೀವನ ಪಾಠವನ್ನು ತನ್ನ ಲೀಲೆಯ ಮೂಲಕ ಗುರುದೇವರು ಕಲಿಸಿದರು. ಸರ್ವವ್ಯಾಪಿಯಲ್ಲಿರುವ ಭಗವಂತನ ದೃಷ್ಠಿ ತಪ್ಪಿಸಿ, ಅಹಿತಕರ ಕೃತ್ಯ ಎಸಗಲು ಸಾಧ್ಯವಿಲ್ಲ. ಭಗವಂತನ ನೋಡಿಯೇ ನೋಡುತ್ತಾನೆ. ಅವನ ಕಣ್ಣು ತಪ್ಪಿಸಲು ಸಾಧ್ಯವಿಲ್ಲ. ಕಾಂಞಂಗಾಡಿನ ದೇವರಾಯ ಪೈಗಳು ಗುರುದೇವರ ಅಚ್ಚು ಮೆಚ್ಚಿನ ಭಕ್ತರು. ಅವರು ಶಾಲಾ ಅಧ್ಯಾಪಕರಾಗಿದ್ದರು. ಗುರುದೇವರ ಈ ಮಹಿಮೆಯನ್ನು ಕಣ್ಣಾರೆ ಕಂಡವರು.

Advertisement

ಹಣ ಇರುವಲ್ಲಿ ಸಕ್ಕರೆಗೆ ಇರುವೆಗಳು ಮುತ್ತುವಂತೆ ಜನರು ಮುತ್ತುತ್ತಾರೆ. ನಿತ್ಯಾನಂದರು ಲಂಗೋಟಿಯಿಂದ ಹಣ ನೀಡುವುದರಿಂದ ಅವರ ಹಿಂದು ಮುಂದು ಜನರು ಸೇರುತ್ತಿದ್ದರು. ಅವರ ಹಣ ನೀಡುವ ಪವಾಡತೆ ಎಲ್ಲಾ ಕಡೆಯೂ ವಿಸ್ಮಯದ ಸುದ್ದಿಯಾಗಿತ್ತು. ಈ ವಿಚಾರವು ಆರಕ್ಷಕ ಇಲಾಖೆಗೆಗೂ ನಿದ್ದೆಗೆಡಿಸಿತ್ತು. ಠಾಣೆಯ ಆರಕ್ಷಕ ನಿರೀಕ್ಷಕರು ನಿತ್ಯಾನಂದರನ್ನು ವಿಚಾರಣೆ ನಡೆಸಬೇಕಾಗಿದೆ, ಅವರನ್ನು ಠಾಣೆಗೆ ಕರೆದು ತನ್ನಿ ಎಂದು ಪೇದೆಗಳನ್ನು ಕಳಿಸಿಕೊಟ್ಟರು. ಹಿರಿಯ ಅಧಿಕಾರಿಯ ಆದೇಶದಂತೆ ಪೇದೆಗಳು ನಿತ್ಯಾನಂದರನ್ನು ಕರೆದುಕೊಂಡು ಬಂದು ವಿಚಾರಣೆಗೆ ಒಳಪಡಿಸಿದರು. ವಿಚಾರಣೆ ನಡೆಸಿದಾಗ ನಿತ್ಯಾನಂದರಿಂದ ಸ್ವಷ್ಟ ಉತ್ತರವನ್ನು ಪಡೆಯಲಾಗಲಿಲ್ಲ. ಪುನಃ ಕೇಳುತ್ತಾರೆ. ಸ್ವಾಮೀ ನಿಮಗೆ ಹಣವು ಎಲ್ಲಿಂದ ಬರುತ್ತದೆ..? ಸ್ವಾಮಿಗಳು ಹಣವು ನನ್ನ ಲಂಗೋಟಿಯಿಂದ ಬರುತ್ತದೆ. ಬೇಕಾದರೆ ಲಂಗೋಟಿ ಬಿಚ್ಚಿ ನೋಡಿ ಎಂದರು.

ನಿತ್ಯಾನಂದರು ಅಣುಕು ಮಾತಿನಿಂದ ಅವಮಾನಿಸುತ್ತಿದ್ದಾರೆ, ಎಂದು ಆರಕ್ಷಕ ಅಧಿಕಾರಿ ಕೋಪಗೊಳ್ಳುತ್ತಾರೆ. ತಕ್ಷಣ ಇವರನ್ನು ಜೈಲಿಗೆ ತಳ್ಳಿರಿ ಎಂದು ಆದೇಶ ಮಾಡುತ್ತಾರೆ. ಆದೇಶದಂತೆ ಪೇದೆಗಳು ಲಾಕಪಿನಲ್ಲಿ ಬಂಧಿಸಿಡುತ್ತಾರೆ. ಸ್ವಲ್ಪ ಹೊತ್ತಿನಲ್ಲಿ ನಿತ್ಯಾನಂದರು ಹೊರ ಭಾಗದಲ್ಲಿ ಪ್ರಕಟವಾಗುತ್ತಾರೆ. ಎಲ್ಲಾ ಆರಕ್ಷಕ ಸಿಬ್ಬಂದಿಗಳು ಅಚ್ಚರಿ ಪಡುವಂತಾಗುತ್ತದೆ. ಮತ್ತೊಮ್ಮೆ ಅವರನ್ನು ಬಂಧಿಸಲಾಗುತ್ತದೆ. ಮತ್ತೆ ಹಾಗೆಯೇ ಅವರು ಹೊರ ಭಾಗದಲ್ಲಿ ಬಂಧನ ಮುಕ್ತಗೊಂಡು ನಗುತ್ತಲೇ ವ್ಯಕ್ತವಾಗುತ್ತಾರೆ. ಸೋತು ಹೋದ ಅಧಿಕಾರಿಗಳು ದಿಕ್ಕುತೋಚದೆ, ಬಲು ಅಪರೂಪ ಪ್ರಕರಣದ ವರದಿಯನ್ನು, ಅಂದಿನ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದ ಇ.ಎಮ್.ಎಮ್ ಗೋನ್ ಅವರಿಗೆ ರವಾನಿಸುತ್ತಾರೆ.

LEAVE A REPLY

Please enter your comment!
Please enter your name here