ಕಳೆದುಹೋದ ದನ ಹಟ್ಟಿಸೇರಿತ್ತು!!

0
431

ನಿತ್ಯ ಅಂಕಣ-೧೦

ಉಡುಪಿಯಿಂದ ಹೊರ ವಲಯದಲ್ಲಿರುವ ಬುಡ್ನಾರು ಎಂಬಲ್ಲಿ ಅಪ್ಪಿ ಶೇರಿಗಾರ್ತಿ ಎಂಬ ಹೆಸರಿನ ವೃದ್ಧೆಯೊರ್ವರು ವಾಸವಾಗಿದ್ದರು. ಜನರು ಅವರನ್ನು ಅಪ್ಪಿಯಮ್ಮ ಎಂದು ಕರೆಯುತ್ತಿದ್ದರು. ಅವರು ಮನೆಯಲ್ಲಿ ಬಹಳಷ್ಟು ಗೋವುಗಳನ್ನು ಸಾಕಿಕೊಂಡಿದ್ದರು. ಬೆಳಿಗ್ಗೆ ಅವುಗಳಿಗೆ ಮೇವು ನೀಡಿದ ಬಳಿಕ, ಮೇಯಲು ಬಯಲಿಗೆ ಬಿಟ್ಟು ಬಿಡುತ್ತಿದ್ದರು. ಗೋವುಗಳು ಸಂಜೆಯಾದಂತೆ ತಾವಾಗಿಯೇ ಬಂದು ಹಟ್ಟಿ ಸೇರುತ್ತಿದ್ದವು. ಒಂದು ದಿನ ಮೇಯಲು ಹೋದ ಗೋವುಗಳಲ್ಲಿ ಒಂದು ದನ ಮಾತ್ರ ಮನೆಯ ಹಟ್ಟಿಗೆ ಬಂದು ಸೇರುವುದಿಲ್ಲ. ಮರು ದಿನವು ಬಂದು ಸೇರುವುದಿಲ್ಲ. ಗಾಭರಿಗೊಂಡ ಅಪ್ಪಿಯಮ್ಮ ಕಾಣೆಯಾದ ದನದ ಹುಡುಕಾಟ ನಡೆಸುತ್ತಾರೆ. ಪರಿಸರದ ಎಲ್ಲಾ ಗದ್ದೆ ಬಯಲುಗಳಲ್ಲಿ ಹುಡುಕಾಟ ನಡೆಸಿದರೂ ಅವರಿಗೆ ದನ ಕಾಣಲು ಸಿಗುವುದಿಲ್ಲ.

ಕೊನೆಗೆ ಅಪ್ಪಿಯಮ್ಮ ದನದ ಹುಡುಕಾಟ ನಡೆಸುತ್ತ ಶ್ರೀಕೃಷ್ಣ ಮಠದ ರಥಬೀದಿಗೆ ಬರುತ್ತಾರೆ. ರಥಬೀದಿ, ತೆಂಕಪೇಟೆ, ಬಡಗುಪೇಟೆಗಳಲ್ಲಿ ಜಾನುವಾರುಗಳು ಹೆಚ್ಚಾಗಿ ನೆಲೆ ಕಾಣುತ್ತಿದ್ದವಂತೆ. ಈ ಪ್ರದೇಶದಲ್ಲಿ ಗೌಡ ಸಾರಸ್ವತ ಬ್ರಾಹ್ಮಣರ ಮನೆಗಳು ಹೆಚ್ಚಾಗಿ ಇರುವುದು. ಅವರು ಜಾನುವಾರುಗಳು ಬಾಯಾರಿಕೆ ನಿಗಿಸಿಕೊಳ್ಳಲು ಕಲ್ಮರ್ಗಿಗಳನ್ನು ರಸ್ತೆ ಬದಿಗಳಲ್ಲಿ ಇಡುತ್ತಿದ್ದರು.(ಕಲ್ಲ್ ಮರಾಯಿ) ಅದರಲ್ಲಿ ನಿತ್ಯವು ನೀರು ತುಂಬಿಸಿ ಇಡುತಿದ್ದರಂತೆ. ಬಿಸಿಲಿಗೆ ಬಳಲಿದ ಜಾನುವಾರುಗಳು ಕಲ್ಮರ್ಗಿಯ ನೀರು ಕುಡಿಯುತ್ತಿದ್ದವು. ಅಂಥಾದೊಂದು ಗೋಮಾತೆಯ ಸೇವೆಯು ಗೌಡ ಸಾರಸ್ವತ ಸಮಾಜ ಬಾಂಧವರಿಂದ ಅಂದು ನಡೆಯುತ್ತಿದ್ದವು. ಹಾಗಾಗಿ ಆ ಸಮಯದಲ್ಲಿ ಬಿಡಾಡಿ ಗೋವುಗಳು ತೆಂಕಪೇಟೆ ರಥಬೀದಿ ಪ್ರದೇಶಗಳಲ್ಲಿ ನೆಲೆ ಕಾಣುತ್ತಿದ್ದವು. ಆದುದರಿಂದ ತಮ್ಮ ಕಾಣೆಯಾದ ದನ ಇಲ್ಲಿಯೇ ಇರಬಹುದೆನ್ನುವ ಊಹೆ ಅಪ್ಪಿಯಮ್ಮ ಅವರದಾಗಿತ್ತು. ಊಹಿಸಿದ ಜಾಗಗಳಲ್ಲಿ ಹುಡಿಕಾಡಿದರೂ ಅಪ್ಪಿಯಮ್ಮ ಅವರಿಗೆ ಮಾತ್ರ ದನ ಸಿಗುವುದಿಲ್ಲ. ಬೇಸರಗೊಂಡ ಅಪ್ಪಿಯಮ್ಮ ರಥಬೀದಿಯಲ್ಲಿ ಇರುವ ಅನಂತೇಶ್ವರ ದೇವಾಸ್ಥನದ ಬಳಿಗೆ ಬರುತ್ತಾರೆ. ಹೊರಗಿರುವ ಮಾನಸ್ತಂಭದ ಬಳಿ ನಿಂತು, ದೇವರೇ.. ನನ್ನ ಕಾಣೆಯಾದ ದನ ಮನೆ ಸೇರಿಸುವಂತೆ ಮಾಡೆಂದು ಪ್ರಾರ್ಥಿಸಿದಳಂತೆ.

ಚಿತ್ರ ಕೃಪೆ: ಅಂತರ್ಜಾಲ.

ಆವಾಗ… ದೇವಸ್ಥಾನದ ಹೊರ ಜಗುಲಿಯಲ್ಲಿ ಕೂತ ಲಂಗೋಟಿಧಾರಿ ವ್ಯಕ್ತಿಯೊರ್ವರು ಅಪ್ಪಿಯಮ್ಮ ಅವರನ್ನು ಕಂಡು, ತುಳು ಭಾಷೆಯಲ್ಲಿ “ಬಯ್ಯ ಆಂಡ್ ಇಲ್ಲಾಗ್ ಪೋಲಾ..! ಪೆತ್ತ ಕಿದೆಕ್ ಸೆರುದುಂಡು, ಪೆತ್ತ ನಾಡುನ ಬೊಡ್ಚಿ’ ಎಂದು ಹೇಳುತ್ತಾನೆ. (ಕತ್ತಲೆ ಆಯ್ತು, ಮನೆಗೆ ಹೋಗು. ದನ ಹಟ್ಟಿಗೆ ಸೇರಿದೆ. ದನ ಹುಡುಕವುದು ಬೇಡ) ಈ ಅಪರಿಚಿತ ವ್ಯಕ್ತಿಗೆ, ನಾನು ದನದ ಹುಡುಕಾಟ ನಡೆಸುವುದು ಹೇಗೆ ಗೊತ್ತಾಯಿತು..! ಎಂದು ಅಪ್ಪಿಯಮ್ಮ ಅವರಿಗೆ ಆಶ್ಚರ್ಯವಾಗುತ್ತದೆ. ವ್ಯಕ್ತಿಯ ದೇಹಾಕೃತಿ ಕಂಡು ಭಯಗೊಂಡ ಅಪ್ಪಿಯಮ್ಮ, ಏನೆಂದು ಮಾತನಾಡದೆ ಮನೆಗೆ ಬಂದು ಹಟ್ಟಿಯೊಳಗೆ ಇಣುಕಿ ನೋಡಿದಾಗ ಕಾಣೆಯಾದ ದನವು ಅಪ್ಪಿಯಮ್ಮನನ್ನು ಕಂಡು, ತಲೆ ಎತ್ತಿ ಅಂಬಾ ಎಂದಿತಂತೆ. ಅಪ್ಪಿಯಮ್ಮ ಅವರಿಗೆ ದನ ಕಂಡು ಬಹಳ ಸಂತೋಷವಾಗುತ್ತದೆ. ಅಪ್ಪಿಯಮ್ಮ ಅವರಿಗೆ ಅಭಯನುಡಿ ಹೇಳಿದ ಲಂಗೋಟಿಧಾರಿ ಯಾರೋ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಆ ಸಮಯದಲ್ಲಿ ಕಂಡು ಬಂದಿದ್ದರು. ಆದರೆ ಅವರು ಅವಧೂತ ನಿತ್ಯಾನಂದರು ಎಂಬುವುದು ತಿಳಿದು ಬರುವುದಿಲ್ಲ. ನಂತರ ಅಪ್ಪಿಯಮ್ಮ ನಡೆದ ಘಟನೆ ಎಲ್ಲರಲ್ಲಿ ಹೇಳಿಕೊಂಡಾಗ, ದೇವಸ್ಥಾನದಲ್ಲಿ ನಗಾರಿ ಬಾರಿಸುವ ದೇವಾಡಿಗರೊಬ್ಬರು ಅವರು ನಿತ್ಯಾನಂದ ಸ್ವಾಮಿಗಳೆಂದು ಪರಿಚಯಿಸುತ್ತಾರಂತೆ. 1935 ರ ಆಸುಪಾಸಿನ ಸುಮಾರಿಗೆ ನಡೆದ ಘಟನೆ ಇದು. ಗುರುದೇವರ ಈ ಲೀಲಾಮೃತ ಮೌಖಿಕವಾಗಿ ಪ್ರಚಲಿತದಲ್ಲಿದೆ. ಆ ಸಮಯದಲ್ಲಿ ಗುರುದೇವರು ಉಡುಪಿಯಲ್ಲಿ ಮೊಕ್ಕಾಂ ಹೂಡಿದಾಗ ಅನಂತೇಶ್ವರ ದೇವಸ್ಥಾನದ ಹೊರಗಿನ ಕಲ್ಲು ಚಪ್ಪಡಿಯ ಜಗುಲಿಯಲ್ಲಿ ಮಲಗುತ್ತಿದ್ದರಂತೆ.

ತಾರಾನಾಥ್‌ ಮೇಸ್ತ ಶಿರೂರು

Advertisement

LEAVE A REPLY

Please enter your comment!
Please enter your name here