"ಕಲೆ ಕಲಾವಿದನಲ್ಲೇ ಉಳಿದು ಅಳಿಯದಿರಲಿ…"

0
805

ವಾರ್ತೆ ವಾರದ ಅತಿಥಿ-ಮನದ ಮಾತು : ವೆಂಕಟ್ರಮಣ ಭಟ್ ಕೆ., ನಿವೃತ್ತ ಶಿಕ್ಷಕ-ಕಲಾವಿದ
ಸಂದರ್ಶನಃ ಹರೀಶ್ ಕೆ.ಆದೂರು.
ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಇವರು ಪ್ರವೃತ್ತಿಯಲ್ಲಿ ಕಲಾವಿದ…ಅಲ್ಲ ಕಲಾವಿವಿಧ… ಹೌದು ಬಹುಮುಖ ಪತ್ರಿಭೆ… ಏನೊಂದೂ `ಗೊತ್ತಿಲ್ಲ’ ಎಂಬುದೇ ಇಲ್ಲ… ಏನಿಲ್ಲ…ಎಲ್ಲವೂ ಇದೆ… ಇಲ್ಲ ಎಂಬ ಉತ್ತರವೇ ಇಲ್ಲದ ಇವರು ಅಪರೂಪದ ವ್ಯಕ್ತಿ… ನೇರ ನಿಷ್ಠುರವಾದಿ… ಆಪ್ತರಿಗೆ ಆಪ್ತ… ವಿಶೇಷ ವ್ಯಕ್ತಿತ್ವ…ಇದು ಇವರ ಹೆಗ್ಗಳಿಕೆ… ಇವರೇ ವೆಂಕಟ್ರಮಣ ಭಟ್ ಕೈಲಂಕಜೆ.  ಗಡಿನಾಡ ಕಾಸರಗೋಡಿನವರಾದ ಇವರು ದೇಶದ ಸತ್ಪ್ರಜೆಗಳನ್ನು ರೂಪಿಸುವಲ್ಲಿ ಇವರ ಕೊಡುಗೆಯಿದೆ. ಇವರ ಶಿಷ್ಯರನೇಕರು ಅತ್ಯುನ್ನತ ಹುದ್ದೆಗಳನ್ನಲಂಕರಿಸಿದ್ದಾರೆ…ಇವರೋರ್ವ ಅಪೂರ್ವ ಶಿಕ್ಷಕ…ವೇಸ್ಟ್ ಗಳೆಲ್ಲವರೂ ಇವರ ಟೇಸ್ಟ್ ಗಳು…ನಾವು ನಿರುಪಯೋಗಿ ಎಂದೆನಿಸಿದ ವಸ್ತುಗಳು ಇವರ ಕೈಯಲ್ಲಿ ಕಲೆಯಾಗಿ ಅರಳುತ್ತವೆ… ಕ್ಯಮರಾ ಬಗಲಿಗೇರಿಸಿದರೆ ಇವರನ್ನು ಮೀರಿಸುವ ಛಾಯಾಗ್ರಾಹಕರಿರಲಾರರು… ಚಾರಣ ಇವರ ಹವ್ಯಾಸಗಳಲ್ಲಿ ಮತ್ತೊಂದು… ಸಾಧಿಸುವ ಛಲ ಇವರನ್ನು ಬಿಡದೆ ಅರಸಿ ಬಂದಿದೆ…ಇಷ್ಟೆಲ್ಲಾ ಇದ್ದರೂ ಸರಳ ಜೀವನ ಇವರದ್ದು… ಎಲ್ಲರೊಂದಿಗೆ ನಗು ನಗುತ್ತಾ ಬೆರೆಯುವ `ಮಾಸ್ಟ್ರು’ ನಮ್ಮ ಇಂದಿನ ವಾರ್ತೆ ವಾರದ ಅತಿಥಿ… ನಮ್ಮೊಂದಿಗೆ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ…ನೀವೂ ಓದಿ..ಅಭಿಪ್ರಾಯಿಸಿ...
 

ಎಂಡೋಸಲ್ಫಾನ್ ದುರಂತದ ಕುರಿತಾದ ಅದ್ಭುತ ಕಲಾಕೃತಿ
ಎಂಡೋಸಲ್ಫಾನ್ ದುರಂತದ ಕುರಿತಾದ ಅದ್ಭುತ ಕಲಾಕೃತಿ

ನಮಸ್ತೆ…ವಾರ್ತೆ ವಾರದ ಅತಿಥಿಯಾಗಿ ನೀವಿಂದು ನಮ್ಮೊಂದಿಗಿದ್ದೀರಿ…ವಾರ್ತೆ ತಂಡದ ಪರವಾಗಿ ಅಭಿನಂದನೆಗಳು…ಸ್ವಾಗತ…
ನಮಸ್ಕಾರ… ನಿಮಗೂ ಪ್ರೀತಿಯ ಸ್ವಾಗತ…
 
ಮೊಟ್ಟಮೊದಲನೆಯದಾಗಿ `ಕಲೆ’ ಎಂದರೇನು?
ನನ್ನ ಪ್ರಕಾರ ಕಲೆ ಎಂದರೆ ಮನಸ್ಸಿಗೆ ನೆಮ್ಮದಿ ಕೊಡುವಂತಹುದು. ಇನ್ನೊಬ್ಬ ನೋಡಿ ಖುಷಿಪಡುವ ರೀತಿಯ ಒಂದು ಪ್ರಕಾರವಾಗಿರಬೇಕು. ಜನ್ಮತಹ ಬಂದಿರಬೇಕು.
 
ಕಲೆ ಸಿದ್ಧಿಯೇ…?
ಕಲಿತು ಮಾಡಲು ಶ್ರಮವಿದೆ. ಸಾಧನೆ ಮುಖ್ಯ. ಯಾವುದೇ ವಿಷಯದ ಮೇಲೆ ಸಂಪೂರ್ಣ ತೊಡಗಿಸುವುದು…ಅದನ್ನು ಪರಿಶ್ರಮದಿಂದ ಅಧ್ಯಯನ ಮಾಡುವುದು ಕಲೆಯನ್ನು ತನ್ನದಾಗಿಸಿಕೊಳ್ಳುವ ರೀತಿ.
ಗೆರೆಟೆಯಲ್ಲಿ ಮೂಡಿಬಂದ ಅದ್ಭುತ ಕಲಾಕೃತಿಗಳು
ಗೆರೆಟೆಯಲ್ಲಿ ಮೂಡಿಬಂದ ಅದ್ಭುತ ಕಲಾಕೃತಿಗಳು

ಕಲೆಯಲ್ಲಿ `ಬದುಕಿಲ್ಲ’ ಅನ್ನುತ್ತಾರೆ…?
ಶುದ್ಧ ಸುಳ್ಳು. ಎಷ್ಟೋ ಜನ ಕಲೆಯನ್ನೇ ಜೀವನಾಧಾರವಾಗಿಸಿಕೊಂಡಿದ್ದಾರೆ…
ಕಲೆಯಿಂದ ಆತ್ಮಸಂತೋಷ ಪ್ರಾಪ್ತವಾಗುತ್ತದೆ. ಇರುವುದಕ್ಕಿಂತಲೂ ಹೆಚ್ಚು ಪ್ರಚಾರಪ್ರಿಯತೆಯತ್ತ ಗಮನಿಸಿದಾಗ ಕಲೆಯ ಬೆಲೆ ಕಡಿಮೆಯಾಗುತ್ತದೆ. ಬದುಕಿಲ್ಲ ಎಂಬುದು ಸತ್ಯಕ್ಕೆ ದೂರವಾದುದು.
 
ಕಲೆಯನ್ನು ವಾಣಿಜ್ಯೀಕರಣ ಮಾಡುತ್ತಾರಲ್ಲಾ…?
ಹೌದು. ಅದು ಇಂದಿನ ದುರಂತ. ಇಂದು ಪ್ರತಿಯೊಂದು ಕ್ಷೇತ್ರವೂ ವಾಣಿಜ್ಯೀಕರಣವಾಗುತ್ತಾ ಸಾಗಿದೆ. ವಾಣಿಜ್ಯೀಕರಣಕ್ಕಾಗಿ ಕಲೆಯನ್ನು ಬಳಸುತ್ತಾರೆ. ಇದರಿಂದ ಗುಣಮಟ್ಟ ಕಡಿಮೆಯಾಗುತ್ತಿದೆ. ಕಲೆಯ ಮೌಲ್ಯ ಒಂದಷ್ಟು ಕುಸಿತಕಂಡಂತಾಗಿದೆ.
 
ಶಿಕ್ಷಕವೃತ್ತಿಯಿಂದ ನಿವೃತ್ತರಾದಮೇಲಂತೂ ಕಲೆಯೇ ಮುಖ್ಯ ಎಂಬಂತಿದೆಯಲ್ಲಾ...
ಖಂಡಿತಾ… ವೃತ್ತಿಯಿಂದಷ್ಟೇ ನಿವೃತ್ತಿ. ಆದರೆ ಇದು ಪ್ರವೃತ್ತಿ… ನಿವೃತ್ತಿ ಹೊಂದಿ ಸುಮ್ಮನೆ ಕೂತರೆ ಜೀವನ ವ್ಯರ್ಥ. ಹಾಗಾಗಿ ನನ್ನ ಇಷ್ಟದ ಕಲೆಯನ್ನು ಮುಂದುವರಿಸುತ್ತಿದ್ದೇನೆ. ಇದರಲ್ಲಿ ತೃಪ್ತಿ ಕಾಣುತ್ತಿದ್ದೇನೆ. ಮನೆಯವರ ಪ್ರೋತ್ಸಾಹವೂ ಇದೆ.
 
ವೃತ್ತಿಜೀವನದಿಂದ ನಿವೃತ್ತಿ ಆದಮೇಲೆ ಬಹುತೇಕ ಮಂದಿ ಜೀವನೋತ್ಸಾಹ ಕಳೆದುಕೊಳ್ಳುತ್ತಾರಲ್ಲ…
ನನ್ನ ಪ್ರಕಾರ ರೆಸ್ಟ್ ಈಸ್ ರಸ್ಟ್… ನಾನು ಅದರಿಂದ ಹೊರತಾಗಿದ್ದೇನೆ.
 
ಗೆರಟೆ ಕಲಾಕೃತಿಗೆ ಆದ್ಯತೆ ನೀಡಿದಂತಿದೆಯಲ್ಲಾ…
ಇದಕ್ಕೆ ಪ್ರೇರಣೆ ನನ್ನ ತಂದೆ. ಅವರು ಗೆರಟೆಯಿಂದ ಸೌಟು ತಯಾರು ಮಾಡುತ್ತಿದ್ದರು. ಅದು ನನಗೆ ಕುತೂಹಲ ಹುಟ್ಟಿಸಿತ್ತು. ಮುಂದೆ ಅದೇ ನನ್ನ ಆಕರ್ಷಣೆಯ ವಿಷಯವಾಯಿತು.
 
ವಿಷಯ – ಆಯ್ಕೆಗಳು ಹೇಗೆ…?
ಮನಸ್ಸಿಗೆ ಬಂದ ಆಕೃತಿ ಮೂಡಿಸುವುದು ನನ್ನ ಉದ್ದೇಶ. ತೆಂಗಿನ ತೋಟಕ್ಕೆ ಹೋದಾಗ ತೆಂಗಿನ ಕಾಯಿ/ಗೆರಟೆಗಳನ್ನು ಕಂಡಾಕ್ಷಣ ಮನಸ್ಸಲ್ಲಿ ಮೊದಲು ಮೂಡುವ ಕಲ್ಪನೆಗಳು ಗೆರೆಟೆ ಕಲಾಕೃತಿಯಾಗಿ ಹೊರಹೊಮ್ಮುತ್ತವೆ. ಈಗಾಗಲೇ ಮೂರು ಗೋಣಿಚೀಲಗಳಷ್ಟು ಗೆರಟೆಗಳಿವೆ. ಒಂದೊಂದಾಗಿ ಅದು ರೂಪ ಪಡೆದುಕೊಳ್ಳುತ್ತವೆ.
ಈ ಕಲೆಯಲ್ಲಿ ನಿಮಗಾದ ಅವಿಸ್ಮರಣೀಯ ಕ್ಷಣ…
ಹೊಸನಗರ ಶ್ರೀ ರಾಮಚಂದ್ರಾಪುರಮಠದ ಶ್ರೀಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಗೆ ಕಲಶ-ಕನ್ನಡಿ-ಚಾಮರ ದ ಗೆರಟೆಕಲಾಕೃತಿಯನ್ನು ಮಾಡಿ ಒಪ್ಪಿಸಿದೆ. ಅವರು ಅಚ್ಚರಿವ್ಯಕ್ತಪಡಿಸಿದ್ದು ಹಾಗೂ ಶುಭಾಶೀರ್ವಾದ ನೀಡಿದ್ದು ನನ್ನ ಅವಿಸ್ಮರಣೀಯ ಕ್ಷಣ.
ಈ ಕಲೆ ಉಳಿಯಬೇಕು-ಮುಂದುವರಿಯಬೇಕು…ಈ ನಿಟ್ಟಿನಲ್ಲಿ ನಿಮ್ಮ ಚಿಂತನೆ…?
ಹೌದು.ಅದು ಆಗಲೇ ಬೇಕು. ಕಲಿಯುವ ಆಸಕ್ತಿ ಇರುವವರಿಗೆ ಮುಕ್ತವಾಗಿ ಕಲೆ ಕಲಿಸುತ್ತೇನೆ. ಹಲವಾರು ಮಂದಿ ಈಗಾಗಲೇ ತರಬೇತಿ ಪಡೆದಿದ್ದಾರೆ. ಆಸಕ್ತಿ ಇರುವೆಡೆಗೆ ಹೋಗಿ ತರಬೇತಿ ನೀಡುತ್ತಿದ್ದೇನೆ. ಮುಂದೊಂದು ದಿನ ಈ ಕಲಾಕೃತಿ ಸಮಾಜಕ್ಕೆ ತಲುಪಬೇಕು ಮುಂದುವರಿಯಬೇಕೆಂಬ ಆಸೆಯಿಂದ ತರಬೇತಿ ಕೇಂದ್ರ ಆರಂಭಿಸುವ ಚಿಂತನೆಯೂ ಇದೆ.
ನಿಮ್ಮ ಮನದ ಮಾತು…
ಹಲವುತರದ `ಕಲೆ’ಗಳಿವೆ. ಪ್ರತಿಯೊಂದೂ ಅಮೂಲ್ಯ. ಕಲೆ ಕಲಾವಿದನಲ್ಲೇ ಉಳಿದು ಅಳಿದು ಹೋಗಬಾರದು. ಅದು ಮುಂದಿನ ಪೀಳಿಗೆಗೂ ಹಸ್ತಾಂತರವಾಗಬೇಕು. ತನಗಿರುವ ಜ್ಞಾನವನ್ನು ಇನ್ನುಳಿದವರಿಗೆ ನಿರ್ವಂಚನೆಯಿಂದ ಹೇಳುವ ಕಾರ್ಯ ಆಗಬೇಕಾಗಿದೆ. ಕಲೆ ನಿಂತ ನೀರಲ್ಲ. ಅದು ಹರಿವ ನೀರು. ಅದನ್ನು ಪ್ರತಿಯೊಬ್ಬರೂ ಅರಿಯುವಂತಾಗಬೇಕು.
ಗೆರಟೆಕಲಾಕೃತಿಯ ಕುರಿತಾದ  ಇವರ ವೆಬ್ ಸೈಟ್   http://www.craftntalk.com ನಲ್ಲಿ ಕಲೆಯ ಕುರಿತಾದ ತರಬೇತಿಯೂ ಇವೆ. ಆಸಕ್ತರು ವೆಂಕಟ್ರಮಣ ಭಟ್ ಕೆ. ಇವರನ್ನು ದೂರವಾಣಿ ಮೂಲಕವೂ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ದೂರವಾಣಿ ಸಂಖ್ಯೆ 09961425731
 
ಸಂದರ್ಶನ  ಃ ಹರೀಶ್ ಕೆ.ಆದೂರು.
[email protected]

LEAVE A REPLY

Please enter your comment!
Please enter your name here