ಕರಾವಳಿ ಪ್ರಾಧಿಕಾರ ಅಧ್ಯಕ್ಷರಿಗೆ ಬೀಳ್ಕೊಡುಗೆ

0
327

ಮ0ಗಳೂರು ಪ್ರತಿನಿಧಿ ವರದಿ
ಕಳೆದ 21 ತಿಂಗಳುಗಳಿಂದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ನಿವೇದಿತ್ ಆಳ್ವರವರ ಕಾರ್ಯಾವಧಿ ಆಗಸ್ಟ್ 24 ಕ್ಕೆ ಮುಕ್ತಾಯಗೊಂಡಿರುವುದರಿಂದ ಪ್ರಾಧಿಕಾರದ ಕಚೇರಿಯಲ್ಲಿ ಬೀಳ್ಕೊಡುಗೆ ಮಾಡಲಾಯಿತು.
 
 
ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜಾ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ನಿಂಗಸೆಟ್ಟಿ, ವ್ಯವಸ್ಥಾಪಕರಾದ ಮಂಜುನಾಥ ಶೆಟ್ಟಿ, ಲೆಕ್ಕಪರಿಶೋಧಾನಾಧಿಕಾರಿಯಾದ ಸುಲೋಚನಾ, ವಲಯಾಧಿಕಾರಿಗಳಾದ ರಘುರಾಮ ರಾವ್, ಹರಿಹರ ವಿ ಹರಿಕಾಂತ್ ಹಾಗೂ ಕಛೇರಿ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
 
 
ನಿವೇದಿತ್ ಆಳ್ವರವರು ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ಮಾಡಿರುವ ಒಂದು ಗುರುತರವಾದ ಸಾಧನೆಯೆಂದರೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಪಾತ್ರ ಮತ್ತು ಪ್ರಕಾರ್ಯಗಳನ್ನು ಪರಿಷ್ಕರಿಸಿ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದ್ದು. ಈ ಹಿಂದೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ಕೇವಲ ಹೊಸ ಯೋಜನೆಗಳನ್ನು ಗುರುತಿಸಿ ಪ್ರಾಥಮಿಕ ಸರ್ವೇ ವರದಿ/ಸಮಗ್ರ ಯೋಜನಾ ವರದಿಗಳನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವ ಮೂಲಕ ಮಾರ್ಗದರ್ಶನ ನೀಡುವ ಸಂಸ್ಥೆ ಮಾತ್ರವಾಗಿತ್ತು. ನಿವೇದಿತ್ ಆಳ್ವರವರು ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯಭಾರ ವಹಿಸಿಕೊಂಡ ತಕ್ಷಣ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಪ್ರಾಧಿಕಾರಕ್ಕೆ ಒದಗಿಸುವ ಅನುದಾನವನ್ನು ಬಳಸಿಕೊಂಡು ಹೊಸ ಹೊಸ ಯೋಜನೆಗಳನ್ನು ಗುರುತಿಸುವುದರ ಜೊತೆಗೆ ಅವುಗಳನ್ನು ವಿವಿಧ ಸರ್ಕಾರಿ ಇಲಾಖೆ/ಸರ್ಕಾರದಿಂದ ಅಂಗೀಕೃತ ಸಂಸ್ಥೆಗಳ ಮೂಲಕ ಕಾಮಗಾರಿಗಳನ್ನು ಅನುಷ್ಠಾನಿಸುವ ಅವಕಾಶವನ್ನು ಪಡೆದುಕೊಂಡಿರುವುದು. ಇದರಿಂದಾಗಿ ಸರ್ಕಾರವು ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಒದಗಿಸುವ ಅನುದಾನದ ಪ್ರಯೋಜನವು ಕರಾವಳಿ ಜಿಲ್ಲೆಗಳ ಜನಸಾಮಾನ್ಯರಿಗೆ ನೇರವಾಗಿ ಮತ್ತು ಶೀಘ್ರವಾಗಿ ದೊರೆಯುವಂತಾಗಿದೆ.
 
 
2015-16ನೇ ಸಾಲಿನಲ್ಲಿ ಹಳ್ಳಿ-ಹಳ್ಳಿಗಳ ನಡುವೆ, ತಾಲೂಕು ಕೇಂದ್ರಗಳ ನಡುವೆ ಸಂಪರ್ಕ ಕೊಂಡಿಯಾಗಿ ಕಾಲುಸಂಕಗಳ ರಚನೆ, ತೂಗುಸೇತುವೆಗಳ ನಿರ್ಮಾಣ, ಕರ್ನಾಟಕ ಕರಾವಳಿ ಜಿಲ್ಲೆಗಳ ಪ್ರಮುಖ ಕಸುಬಾದ ಮೀನುಗಾರಿಕೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆಗಳ ನಿರ್ಮಾಣ, ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಉದ್ಯಾನವನಗಳ ನಿರ್ಮಾಣ ಹಾಗೂ ಕೌಶಾಲ್ಯಭಿವೃದ್ಧಿ ತರಬೇತಿ, ವಿಚಾರ ಸಂಕಿರಣ ಇತ್ಯಾದಿ ಕಾರ್ಯಕ್ರಮಗಳನ್ನು ಪ್ರಾಧಿಕಾರದ ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ.
 
 
ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ಪ್ರಾರಂಭವಾದಗಿನಿಂದ ಈ ಹಿಂದಿನ ವಾರ್ಷಿಕ ಸಾಲುಗಳಲ್ಲಿ ಕನಿಷ್ಠ 1 ಕೋಟಿ ಹಾಗೂ ಗರಿಷ್ಠ 3 ಕೋಟಿ ಅನುದಾನವನ್ನು ಸರ್ಕಾರವು ಒದಗಿಸಿರುತ್ತದೆ. ನಿವೇದಿತ್ ಆಳ್ವರವರು ಪ್ರಾಧಿಕಾರದ ಅಧ್ಯಕ್ಷ ಹುದ್ದೆಯಲ್ಲಿ ಕಾರ್ಯಭಾರವಹಿಸಿಕೊಂಡ ನಂತರ ಕಳೆದ ವಾರ್ಷಿಕ ಸಾಲಿನಲ್ಲಿ 10 ಕೋಟಿ (2015-16) ಹಾಗೂ ಈ ಸಾಲಿನಲ್ಲಿ ರೂ 15 ಕೋಟಿ (2016-17) ಅನುದಾನವನ್ನು ಒದಗಿಸಲಾಗಿದೆ. 2015-16ನೇ ಸಾಲಿನಲ್ಲಿ ಒದಗಿಸಲಾದ ಅನುದಾನದಲ್ಲಿ ಶೇಕಡ 95 ರಷ್ಟನ್ನು ವಿನಿಯೋಗಿಸಿ ಕಾಮಗಾರಿಗಳನ್ನು ಅನುಷ್ಠಾನಿಸಲಾಗಿದೆ ಹಾಗೂ ಈ ವಾರ್ಷಿಕ ಸಾಲಿನಲ್ಲಿ ಹಲವಾರು ಜನಪರ ಯೋಜನಾ ಕಾಮಗಾರಿಗಳನ್ನು ಅನುಷ್ಠಾನಿಸಲು ಉದ್ದೇಶಿಸಲಾಗಿದೆ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here