ಕರಾವಳಿ ಉತ್ಸವಕ್ಕೆ ನಾಳೆ ಚಾಲನೆ: ಅದ್ದೂರಿ ಮೆರವಣಿಗೆ

0
442

ಮ0ಗಳೂರು ಪ್ರತಿನಿಧಿ ವರದಿ
ಈ ಸಾಲಿನ ಕರಾವಳಿ ಉತ್ಸವ ಕಾರ್ಯಕ್ರಮಕ್ಕೆ ಡಿ.23ರಂದು ಚಾಲನೆ ದೊರೆಯಲಿದೆ. ಕರಾವಳಿ ಉತ್ಸವ ಮೈದಾನದಲ್ಲಿ ಸಂಜೆ 4ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ವಸ್ತುಪ್ರದರ್ಶನ ಉದ್ಘಾಟಿಸಲಿದ್ದು, ಸಂಜೆ 4.30ಕ್ಕೆ ಸಾಂಸ್ಕೃತಿಕ ಮೆರವಣಿಗೆಗೆ ಆಹಾರ ಸಚಿವ ಯು.ಟಿ. ಖಾದರ್ ಚಾಲನೆ ನೀಡುವರು.
 
 
 
ಮೆರವಣಿಗೆಯು ಕರಾವಳಿ ಉತ್ಸವ ಮೈದಾನದಿಂದ ಹೊರಟು ಬಳ್ಳಾಲ್‍ಭಾಗ್ ಸರ್ಕಲ್‍ನಲ್ಲಿ ಹಿಂತಿರುಗಿ ಲಾಲ್‍ಭಾಗ, ಕೆ.ಎಸ್.ಆರ್.ಟಿ.ಸಿ. ಬಿಜೈ ಸರ್ಕಲ್, ಬಿಜೈ ಬಟ್ಟಗುಡ್ಡ, ಸರ್ಕಿಟ್ ಹೌಸ್ ಜಂಕ್ಷನ್, ಕದ್ರಿ ಪಾರ್ಕ್ ರಸ್ತೆಯಲ್ಲಿ ಮುಂದುವರಿದು ಕದ್ರಿ ಉದ್ಯಾನವನದ ಒಳಗಡೆ ಇರುವ ಕರಾವಳಿ ಉತ್ಸವ ವೇದಿಕೆಯ ಎರಡು ಪಾಶ್ರ್ವಗಳಲ್ಲಿ ಸಂಪನ್ನಗೊಳ್ಳಲಿದೆ.
 
 
 
ಈ ಬಾರಿ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ವೈವಿಧ್ಯ ಪ್ರಕಾರಗಳ ಆಕರ್ಷಕ ತಂಡಗಳು ಭಾಗವಹಿಸಲಿವೆ. ಮಂಗಳವಾದ್ಯ, ತಟ್ಟಿರಾಯ, ಪಕ್ಕಿನಿಶಾನೆ, ಕೊಂಬು, ಚೆಂಡೆ, ರಣಕಹಳೆ, ಜಿಲ್ಲಾ ಪೋಲೀಸ್ ಬ್ಯಾಂಡ್, ಬಣ್ಣದ ಕೊಡೆಗಳು, ಬಸವ ತಂಡ, ಶಂಖದಾಸರು, ಕನ್ನಡ ಭುವೇಶ್ವರಿ ಸ್ತಬ್ಧ ಚಿತ್ರ, ಕೀಲು ಕುದುರೆ, ಕರಗ, ಕುಸ್ತಿಪಟುಗಳ ತಂಡ, ಹಾಸ್ಯಗೊಂಬೆ ತಂಡ, ದಪ್ಪು ಕುಣಿತ, ಅರೆಭಾಷೆ ಜನರ ಕುದುರೆ ಸವಾರಿ, ಒಪ್ಪಣಿ ತಂಡ, ಕೋಲ್ಕಳಿ, ಕೊಡವ ನೃತ್ಯ, ತಾಲೀಮು, ಮರಕಾಲು ಹುಲಿವೇಷ ಮತ್ತು ಹುಲಿವೇಷ, ಶಾರ್ದೂಲ – ಕರಡಿ ಕುಣಿತ, ಡೋಲು ಕುಣಿತ, ಆಟಿಕಳಂಜ, ಛತ್ರ ಕುಣಿತ, ಬೊಳ್ಗುಡೆ ನಲಿಕೆ, ಇರೆನಲಿಕೆ, ಪರಕೋಲು ನಲಿಕೆ, ಯಕ್ಷಗಾನ ವೇಷ, ಯಕ್ಷಗಾನದ ಬೃಹತ್ ಗೊಂಬೆ, ವೀರಭದ್ರ ಕುಣಿತ, ಬೇಡರಕುಣಿತ, ಮೈಸೂರು ನಗಾರಿ, ಗೊರವರ ಕುಣಿತ, ಡೊಳ್ಳು ಕುಣಿತ, ಜಗ್ಗಳಿಕೆ, ಫಟ್ಟಾಕುಣಿತ, ಪೂಜಾಕುಣೀತ, ಕಂಸಾಳೆ, ಮಹಿಳಾ ವೀರಗಾಸೆ, ಪುರವಂತಿಕೆ, ಸಿದ್ದಿ ದಮಾಮ್ ಕುಣಿತ, ಅಕ್ಕಮಹಾದೇವಿ, ವೀರಶೈವ ಮಹಿಳಾ ತಂಡ, ಹಾಲಕ್ಕಿ ಸುಗ್ಗಿ ಕುಣಿತ, ಕೋಲಾಟ, ಕಂಗೀಲು ನೃತ್ಯ, ಸೊಮನ ಕುಣಿತ ಇತ್ಯಾದಿ ಕಲಾತಂಡಗಳಿಂದ ಸಾಂಸ್ಕೃತಿಕ ಕಲಾ ಪ್ರದರ್ಶನವು ಮೆರವಣಿಗೆಯುದ್ದಕ್ಕೂ ಆಕರ್ಷಣೀಯವಾಗಿ ಪ್ರದರ್ಶಿತಗೊಳ್ಳಲಿದೆ.
 
 
 
ಇದಲ್ಲದೆ ಅನೇಕ ಧಾರ್ಮಿಕ ಕ್ಷೇತ್ರಗಳ ಪ್ರಮುಖರು, ಸಚಿವರು, ಮಹಾಪೌರರು, ಜನಪ್ರತಿನಿಧಿಗಳು, ಅಧಿಕಾರಿಗಳು ಪುರಪ್ರಮುಖರು, ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಎನ.ಎಸ್.ಎಸ್. ರೆಡ್‍ಕ್ರಾಸ್, ವಿವಿಧ ಬ್ಯಾಂಕುಗಳ ಕನ್ನಡ ಸಂಘದ ಸದಸ್ಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗ್ರಾಮಾಂತರ ಮತ್ತು ನಗರ, ಅಲ್ಲದೆ ವಿವಿಧ ಸ್ವಸಹಾಯ ಗುಂಪುಗಳು ಅಂಗನಾಡಿ ಕಾರ್ಯಕರ್ತೆಯರು, ಎನ್.ಸಿ.ಸಿ. ವಿದ್ಯಾರ್ಥಿಗಳು, ಕುದುರೆ ಮುಖ ಕಬ್ಬಿಣ ಮತ್ತು ಅದಿರು ಕಾರ್ಖಾನೆ ಪಣಂಬೂರು ಇಲ್ಲಿನ ಕನ್ನಡ ಸಂಘದ ಸದಸ್ಯರು, ಅಂಚೆ ಇಲಾಖೆ, ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್, ಸ್ವಚ್ಚ ಭಾರತ ತಂಡಗಳ ಸಹಿತ ಇನ್ನೂ ಅನೇಕರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿರುವರು.
 
 
ಸಂಜೆ 6 ಗಂಟೆಗೆ ಕದ್ರಿ ಉದ್ಯಾನವನದಲ್ಲಿ ಕರಾವಳಿ ಉತ್ಸವವನ್ನು ಖ್ಯಾತ ಸಂಗೀತ ಕಲಾವಿದ ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ್ ಉದ್ಘಾಟಿಸಲಿರುವರು.

LEAVE A REPLY

Please enter your comment!
Please enter your name here