ರಾಜ್ಯವಾರ್ತೆ

'ಕಯ್ಯಾರ ಕಿಞ್ಞಣ್ಣ ರೈ ನೆನಪು'

 
ನಮ್ಮ ಪ್ರತಿನಿಧಿ ವರದಿ
ದೆಹಲಿ ಕರ್ನಾಟಕ ಸಂಘದಲ್ಲಿ ಶತಮಾನ ಕಂಡ ಕನ್ನಡದ ಕಯ್ಯಾರ-‘ಕಯ್ಯಾರ ಕಿಞ್ಞಣ್ಣ ರೈ ನೆನಪು’ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
 
 
ವಿಶೇಷ ಉಪನ್ಯಾಸಕರಾಗಿ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರಾದ ಎಂ.ಕೆ. ಭಾಸ್ಕರ ರಾವ್ ಮತ್ತು ಖ್ಯಾತ ಸಾಹಿತಿಗಳು ಹಾಗೂ ರಂಗಕರ್ಮಿಗಳಾದ ಡಾ. ನಾ. ದಾಮೋದರ ಶೆಟ್ಟಿ ಅವರು ಭಾಗವಹಿಸಿದ್ದರು.
 
 
ಕಾಸರಗೋಡು ಕರ್ನಾಟಕದಲ್ಲಿ ವಿಲೀನಗೊಳ್ಳಬೇಕು ಎಂಬುದು ಕಯ್ಯಾರ ಕಿಂಜ್ಞಣ್ಣ ರೈಗಳ ಕನಸು, ಕನವರಿಕೆ ಆಗಿಯೇ ಉಳಿಯಿತು ಎಂದು ಹಿರಿಯ ಪತ್ರಕರ್ತ ಭಾಸ್ಕರ್ ರಾವ್ ಹೇಳಿದರು. ಕಾಸರಗೋಡನ್ನು ಕನ್ನಡಮಯಗೊಳಿಸಲು ರೈಗಳು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಇತ್ತಿಚೆಗೆ ನಡೆದ ಕೇರಳ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಮಂಜೇಶ್ವರ ಕ್ಷೇತ್ರದಿಂದ ಗೆದ್ದ ಮುಸ್ಲಿಂ ಲೀಗ್ ಅಭ್ಯರ್ಥಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ ನಡೆಸಲು ರೈಗಳ ಪ್ರಯತ್ನವೇ ಕಾರಣ ಎಂದು ಭಾಸ್ಕರ್ ರಾವ್ ಅಭಿಪ್ರಾಯ ಪಟ್ಟರು.
 
 
ಕನ್ನಡವೇ ಮಾತನಾಡುವ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಲು ಹೋರಾಟ ಸಂಘಟಿಸಿದವರೇ ರೈಗಳು. ಆದರೆ ಆವರ ಹೋರಾಟಕ್ಕೆ ಕಾಸರಗೋಡಿನಿಂದ ಹೊರಗಿನ ಕನ್ನಡಿಗರಿಂದ ಸೂಕ್ತ ಬೆಂಬಲ ಸಿಗಲಿಲ್ಲ ಎಂದು ರೈಗಳು ಹೇಳಿದರು.
ಮಹಾಜನ್ ವರದಿ ಪ್ರಕಾರ ಕಾಸರಗೋಡಿನ ಅನೇಕ ಭಾಗಗಳು ಕರ್ನಾಟಕಕ್ಕೆ ಸೇರಬೇಕಿತ್ತು. ಆದರೆ ಆ ವರದಿ ಅನುಷ್ಠಾನಗೊಳ್ಳದಿರಲು ಕರ್ನಾಟಕದ ರಾಜಕೀಯವೇ ಕಾರಣ. ಕೇಂದ್ರ ಸರ್ಕಾರದ ವಿರುದ್ಧ ಹೋಗಬಾರದು ಎಂಬ ದಾಸ್ಯ ಮನೋಭಾವ ಕರ್ನಾಟಕದ ರಾಜಕಾರಣಿಗಳಲ್ಲಿದೆ. ಇದನ್ನು ಪ್ರತಿಭಟಿಸಿದವರು ರೈಗಳು ಎಂದು ವಿವರಿಸಿದರು.
 
 
ರೈ ಅವರ ನೋವಿಗೆ ಕರ್ನಾಟಕದಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ. ಕಾಸರಗೋಡಿನ ಒಬ್ಬ ರಾಜಕಾರಣಿ ಕನ್ನಡದಲ್ಲಿ ಪ್ರಮಾಣ ತೆಗೆದುಕೊಳ್ಳುತ್ತಾನೆ ಎಂದರೆ ಆ ಭಾಗದಲ್ಲಿ ಕನ್ನಡದ ಕಿಡಿ ಇದೆ ಎಂದೇ ಅರ್ಥ. ಆ ಕಿಡಿಯ ಮೇಲಿನ ಬೂದಿ ತೆಗೆಯುವ ಕೆಲಸ ಆಗಬೇಕಿದೆ. ಕಾಸರಗೋಡು ಕರ್ನಾಟಕದಲ್ಲಿ ವಿಲೀನವಾಗದೆ ರೈಗಳ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯವಾ ಎಂದು ರಾವ್ ಪ್ರಶ್ನಿಸಿದರು.
 
 
ಖಡ್ಗವಾಗಲಿ ಕಾವ್ಯ ಎಂಬುದನ್ನು ಎಷ್ಟೋ ದಶಕಗಳ ಹಿಂದೆ ಯೋಚಿಸಿದವರು ರೈಗಳು. ಅವರ ಕಾವ್ಯ ಎಂದರೆ ಪ್ರತಿಭಟನಾ ಅಸ್ತ್ರ ಎಂದು ರಾವ್ ಬಣ್ಣಿಸಿದರು. ಕಿಞ್ಞಣ್ಣ ರೈಗಳು ಗಡಿನಾಡ ಗಾಂಧಿ ಆಗಿದ್ದರು. ಮಂಗಳೂರಿನಲ್ಲಿ ಪತ್ರಕರ್ತರಾಗಿದ್ದ ರೈಗಳು ಗಾಂಧಿಯ ಕರೆಗೆ ಓಗೊಟ್ಟು ಹಳ್ಳಿಗೆ ಹಿಂತಿರುಗಿದರು ಎಂದು ಖ್ಯಾತ ಸಾಹಿತಿ ನಾ. ದಾಮೋದರ ಶೆಟ್ಟಿ ಹೇಳಿದರು.
 
 
ರೈ ಅವರ ಭಾಷೆಗೆ ಅವರೇ ಸಾಟಿ. ಇನ್ನೊಬ್ಬರು ಯಾರೇ ಅವರ ಭಾಷೆಯನ್ನು ಬಳಸಿಲ್ಲ. ಇವರ ರೀತಿ ಘರ್ಜನೆಯ ಭಾಷೆ ಇಟ್ಟುಕೊಂಡು ಬರೆಯಲು ಯಾರಿಗೂ ಸಾಧ್ಯವಾಗಿಲ್ಲ ಎಂದು ದಾಮೋದರ ಶೆಟ್ಟಿ ಅಭಿಪ್ರಾಯ ಪಟ್ಟರು.
ಅವರ ಕಂಠದಲ್ಲಿಯೂ ಇದೇ ರೀತಿಯ ಧಮ್ ಇತ್ತು. ರೈಗಳು ಒಂದು ರೀತಿಯಲ್ಲಿ ಪಂಪನ ಹಾಗೆ. ಕಲಿಯೂ ಹೌದು, ಕವಿಯೂ ಹೌದು ಎಂದು ದಾಮೋದರ ಶೆಟ್ಟಿ ಬಣ್ಣಿಸಿದರು.
 
 
ಕಾಸರಗೋಡಿನ ಮೂಲೆಯ ಹಳ್ಳಿಯಲ್ಲೇ ಉಳಿದ ಕಿಂಜ್ಞಣ್ಣ ರೈಗಳನ್ನು ಕರ್ನಾಟಕದ ಮುಖ್ಯವಾಹಿನಿಗೆ ಕರೆ ತರುವ ಪ್ರಯತ್ನವನ್ನು ಕರ್ನಾಟಕ ಮಾಡಲೇ ಇಲ್ಲ ಎಂದು ದಾಮೋದರ ಶೆಟ್ಟಿ ವಿಷಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರು ಮಾತನಾಡುತ್ತ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೈಯಾರ ಕಿಞ್ಞಣ್ಣ ರೈ ಅವರ ನೆನಪಿನಲ್ಲಿ ಯಾವುದಾದರೊಂದು ಮೆಟ್ರೋ ನಿಲ್ದಾಣಕ್ಕೆ ಅವರ ಹೆಸರನ್ನಿಡಬೇಕೆಂದು ಆಗ್ರಹಿಸಿದರು ಹಾಗೂ ಕಾಸರಗೋಡಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಬಗ್ಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದರು.
 
 
ಕಾರ್ಯಕ್ರಮದ ಮೊದಲು ಎಸ್. ಕುಮಾರ್ ಮತ್ತು ತಂಡವು ಕಿಞ್ಞಣ್ಣ ರೈಗಳ ಕವನಗಳನ್ನು ಹಾಡಿದರು. ಡಾ. ಅವನೀಂದ್ರನಾಥ್ ರಾವ್ ಕಾರ್ಯಕ್ರಮ ನಿರೂಪಿಸಿದರು, ಖಜಾಂಚಿ ಕೆ.ಎಸ್.ಜಿ. ಶೆಟ್ಟಿ ಅವರು ವಂದನಾರ್ಪನೆ ಸಲ್ಲಿಸಿದರು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here