ಕನ್ಯಾಡಿ-ನಿತ್ಯಾನಂದರ ಪಾದಸ್ಪರ್ಶ ಪಡೆದ ಪುಣ್ಯಭೂಮಿ!

0
1883

ನಿತ್ಯ ಅಂಕಣ:೨೫

ಪರಬ್ರಹ್ಮ ನಿತ್ಯಾನಂದ ಸ್ವಾಮಿಗಳ ಸಾಂಗತ್ಯದಲ್ಲಿದ್ದು, ಅವರ ಅನುಗ್ರಹ ಪಡೆದು ಆಧ್ಯಾತ್ಮ ಕ್ಷೇತ್ರದಲ್ಲಿ ಸಾಧಕರಾದವರಲ್ಲಿ ಹಲವಾರು ಭಕ್ತ ಶ್ರೇಷ್ಠರಿದ್ದಾರೆ. ಅಂತಹ ಸಾಧಕರ ಸಾಲಿನಲ್ಲಿ ಧರ್ಮಸ್ಥಳ ಸನಿಹದ ದೇವರಗುಡ್ಡೆ ಗುರುದೇವ ಮಠದ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮಿಗಳು ಮಹಾ ಸಾಧಕರು ಕೂಡ ಹೌದು. ಇವರು ಮೂಲತಃ ಬಂಟ್ವಾಳ ಮೂಲದವರು. ಮುಂಬೈಯಲ್ಲಿ ವೃತ್ತಿ ಬದುಕು ಸಾಗಿಸುತ್ತಿದ್ದರು. ಗಣೇಶಪುರಿಯಲ್ಲಿ ನಿತ್ಯಾನಂದ ಸ್ವಾಮಿಗಳ ಸಂಪರ್ಕ ಪಡೆಯುತ್ತಾರೆ. ಅಲ್ಲಿಯೇ ಗುರುದೇವರ ಸಾನಿಧ್ಯದಲ್ಲಿ ಕೆಲವು ವರ್ಷ ಸೇವಾಕರ್ತರಾಗಿದ್ದು, ಸಾಧನೆ ಮಾಡುತ್ತ ಗುರುದೇವರ ಅನುಗ್ರಹ ಪಡೆಯುತ್ತಾರೆ. ನಿತ್ಯಾನಂದ ಸ್ವಾಮಿಗಳ ಆಜ್ಞೆಯಂತೆ ಕೇರಳದ ಕಾಂಞಂಗಾಡ್ ನಿತ್ಯಾನಂದ ಆಶ್ರಮದಲ್ಲಿ ಶ್ರೀಜನಾನಂದ ಸ್ವಾಮಿಗಳಿಂದ ಸನ್ಯಾಸ ದೀಕ್ಷೆ ಪಡೆಯುತ್ತಾರೆ. ಅಲ್ಲಿ ಸಲ್ಪ ಸಮಯ ಕಳೆಯುತ್ತಾರೆ. ಅಲ್ಲಿ ನಿತ್ಯಾನಂದ ಪಾಲಿಟೆಕ್ನಿಕ್ ವಿದ್ಯಾಸಂಸ್ಥೆಯು ಇವರ ಶ್ರಮದಿಂದ ಸ್ಥಾಪನೆಯಾಗುತ್ತದೆ.

ಮುಂದೆ 1969 ರಲ್ಲಿ ಆತ್ಮಾನಂದ ಸರಸ್ವತಿ ಸ್ವಾಮಿಗಳು ಉಜಿರೆ ಸಮೀಪದ ದೇವರಗುಡ್ಡೆ ಎಂಬ ಸ್ಥಳದಲ್ಲಿ “ಶ್ರೀಗುರುದೇವ ಆಶ್ರಮ” ಸ್ಥಾಪಿಸುತ್ತಾರೆ. ಅಲ್ಲಿಯೇ ಅವರ ಆಶ್ರಮ ಜೀವನ ಸಾಗುತ್ತದೆ. ಧರ್ಮಸ್ಥಳದ ಪರಿಸರವು ಅವಧೂತ ನಿತ್ಯಾನಂದ ಸ್ವಾಮಿಗಳು ಸಂಚರಿಸಿದ ಸ್ಥಳ. ಇಲ್ಲಿ ನಿತ್ಯಾನಂದರು ಬಹಳ ಲೀಲೆಗಳನ್ನು ತೋರಿಸಿದ್ದಾರೆ. ಇಲ್ಲಿ ಸನಿಹದಲ್ಲಿರುವ ಕನ್ಯಾಡಿ ಎಂಬ ಸಣ್ಣದಾದ ಊರು ನಿತ್ಯಾನಂದರ ಪಾದಸ್ಪರ್ಶ ಪಡೆದ ಪುಣ್ಯಭೂಮಿ, ಅಲ್ಲದೇ ಅವರು ವಿಶ್ರಮಿಸಿದ ಸ್ಥಳವು ಹೌದು. ಅದೇ ಸ್ಥಳದಲ್ಲಿ ಆತ್ಮಾನಂದ ಸ್ವಾಮಿಗಳು ಸಣ್ಣದಾದ ನಾಡ ಹೆಂಚಿನ ‘ಭಗವಾನ್ ನಿತ್ಯಾನಂದ ಮಂದಿರ’ ಸ್ಥಾಪನೆ ಮಾಡುತ್ತಾರೆ. ಅದು ಮುಂದೆ ಭಕ್ತರ ಶೃದ್ಧಾಕೇಂದ್ರವಾಗಿ ಬೆಳೆಯುತ್ತದೆ. ಅಲ್ಲಿಯೇ ಸನಿಹ 1978 ರಲ್ಲಿ ಆತ್ಮಾನಂದ ಸ್ವಾಮಿಗಳು ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಮಾಡಲು ಸಂಕಲ್ಪಿಸುತ್ತಾರೆ. ಸಂಕಲ್ಪದಂತೆ ಬೆಂಗಳೂರಿನ ಶ್ರೀ ಶಿವ ಬಾಲಯೋಗಿ ಸ್ವಾಮೀಜಿ ಅವರ ಹಸ್ತದಿಂದ ಭೂಮಿಪೂಜೆ ಮಾಡಿಸುತ್ತಾರೆ. ಭವ್ಯವಾದ ರಾಮ ಮಂದಿರವು 2003 ರಲ್ಲಿ ಅಂದಿನ ಮುಖ್ಯ ಮಂತ್ರಿಗಳಾದ ಎಸ್.ಎಂ.ಕೃಷ್ಣ ಅವರ ಮೂಲಕ ಉದ್ಘಾಟನೆಗೊಳ್ಳುತ್ತದೆ. ಕಾಶಿಮಠದ ಶ್ರೀಸುಧೀಂದ್ರ ತೀರ್ಥ ಸ್ವಾಮಿಗಳಿಂದ ರಾಮದೇವರ ವಿಗ್ರಹವು ಪ್ರತಿಷ್ಠಾಪನೆ ಮಾಡಿಸುತ್ತಾರೆ. 2009 ರಂದು ತನ್ನ 84 ನೇ ಹರೆಯದಲ್ಲಿ ಆತ್ಮಾನಂದ ಸರಸ್ವತಿ ಸ್ವಾಮಿಗಳು ಕನ್ಯಾಡಿಯಲ್ಲಿಯೇ ಸಮಾಧಿ ಪಡೆಯುತ್ತಾರೆ. ಈಗ ಅವರ ಶಿಷ್ಯರಾದ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳು ಕ್ಷೇತ್ರವನ್ನು ಮುನ್ನೆಡೆಸುತ್ತಿದ್ದಾರೆ.

ಈಗ ಶ್ರೀರಾಮಕ್ಷೇತ್ರ ಇರುವ ಸ್ಥಳವು ನಿತ್ಯಾನಂದ ನಗರ ಎಂದು ಗುರುದೇವರ ಶುಭನಾಮ ಪಡೆದುಕೊಂಡಿದೆ. “ದಕ್ಷಿಣ ಭಾರತದ ಅಯೋಧ್ಯೆ” ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಶ್ರೀರಾಮ ಕ್ಷೇತ್ರ ಈಗ ಭಕ್ತರ ಜನಾಕರ್ಷಣೆಯ ಪ್ರಮುಖ ಶ್ರದ್ಧಾ ಕೇಂದ್ರ. ಕ್ಷೇತ್ರವು ಧರ್ಮಸ್ಥಳ ಮಂಗಳೂರು ಹೆದ್ದಾರಿಯಲ್ಲಿ ಧರ್ಮಸ್ಥಳದಿಂದ 4 ಕಿ.ಮೀ ದೂರದಲ್ಲಿದ್ದರೆ, ಮಂಗಳೂರಿನಿಂದ ಕೇವಲ 67 ಕಿ.ಮೀ ದೂರದಲ್ಲಿದೆ. ಪವಿತ್ರ ನದಿ ನೇತ್ರಾವತಿಗೆ ತೀರಾ ಸಮೀಪದಲ್ಲಿರುವುದು ಇದರ ವಿಶೇಷತೆಗಳಲ್ಲೊಂದು. ದಕ್ಷಿಣೋತ್ತರ ಶಿಲ್ಪಕಲಾ ಶೈಲಿಯಯಲ್ಲಿ ಕಂಗೊಳಿಸುತ್ತಿರುವ ಶ್ರೀ ರಾಮ ಕ್ಷೇತ್ರಕ್ಕೆ ಊರ ಹೊರ ಊರ ಭಕ್ತಾದಿಗಳು ಬಂದು ‘ಶ್ರೀ ರಾಮ’ನ ದರ್ಶನ, ಭಗವಾನ್ ನಿತ್ಯಾನಂದರ ದರ್ಶನ ಹಾಗೂ ಅಲ್ಲಿರುವ ಇನ್ನಿತರ ಸಾನಿಧ್ಯಗಳ ದರ್ಶನವನ್ನು ಪಡೆದು ಪುನೀತರಾಗುತ್ತಿದ್ದಾರೆ. ಕ್ಷೇತ್ರದಲ್ಲಿ ರಾಮನವಮಿ ಸಮಯದಲ್ಲಿ ಶ್ರೀರಾಮ ತಾರಕ ಮಂತ್ರ – ಸಪ್ತಾಹ ಸಮಾರಂಭ ಹಾಗೂ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ” ಮಹಾ ಬ್ರಹ್ಮರಥೋತ್ಸವ” ನಡೆಯುತ್ತವೆ. ಇಲ್ಲಿ ನಿತ್ಯವು ಭಕ್ತರಿಗೆ ಅನ್ನದಾನವು ನಡೆಯುತ್ತಿದೆ.

ತಾರಾನಾಥ್‌ ಮೇಸ್ತ ಶಿರೂರು

Advertisement

LEAVE A REPLY

Please enter your comment!
Please enter your name here