ಕಂಬಳ ಮಾಡಿದರೆ ಸಾಲದು…ಕ್ಲೀನಿಂಗ್ ಯಾರ ಹೊಣೆ ಸ್ವಾಮೀ…?

0
534

ವರದಿ: ಹರೀಶ್ ಕೆ.ಆದೂರು.

 

ಐತಿಹಾಸಿಕ ಪ್ರಸಿದ್ಧಿಯ ಮೂಡಬಿದಿರೆಯಲ್ಲಿ ಜಿಲ್ಲೆಯಲ್ಲಿಯೇ ಅತ್ಯಂತ ಪ್ರತಿಷ್ಟಿತ ಎಂಬ ರೀತಿಯಲ್ಲಿ ಕಳೆದ 15ವರ್ಷಗಳಿಂದ ಕಂಬಳ ನಡೆಯುತ್ತಾ ಬಂದಿದೆ. ಅದೂ ಮೂಡಬಿದಿರೆಯ ಮಣ್ಣಿನ ಮಗಳು, ವಸಾಹತು ಶಾಹಿಗಳ ವಿರುದ್ಧ ಹೋರಾಡಿದ ವೀರ ವನಿತೆ ರಾಣಿ ಅಬ್ಬಕ್ಕನ ಹೆಸರನ್ನಿಟ್ಟಿರುವ `ವೀರ ರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ’ಕಡಲಕೆರೆಯಲ್ಲಿ.
ಹೌದು ಕಳೆದ ಭಾನುವಾರ ಈ ಸಂಸ್ಕೃತಿ ಗ್ರಾಮದಲ್ಲಿ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ನಡೆಸಲಾಗಿತ್ತು. ಇಂದಿಗೆ ಸರಿಯಾಗಿ ವಾರವೊಂದು ಕಳೆಯಿತು. ಕಂಬಳದ ಸಂದರ್ಭದಲ್ಲಿ ಇರಿಸಲಾಗಿದ್ದ ಅಂಗಡಿಗಳಲ್ಲಿ ಬಳಸಲಾದ ವಸ್ತು ಪರಿಕರಗಳು, ತ್ಯಾಜ್ಯಗಳು, ಮೋಜು ಮಸ್ತಿಮಾಡಿದ ಕುರುಹುಗಳು, ಮಾದಕ ದ್ರವ್ಯದ ರಾಶಿ ರಾಶಿ ಬಾಟಲಿಗಳು ಇನ್ನೂ ಹಾಗೇ ಉಳಿದುಕೊಂಡಿವೆ. ಒಂದೇ ಒಂದು ಸ್ವಲ್ಪವೂ `ಸ್ವಚ್ಛತೆಯ ಕಡೆಗೆ’ಗಮನ ಹರಿಸದಿದ್ದುದು ದೊಡ್ಡ ದುರ್ದೈವವೇ ಸರಿ.
ಮೂಡಬಿದಿರೆಯ ಭಾರತೀಯ ಜನತಾ ಪಾರ್ಟಿ ಇನ್ನೇನು ಪುರಸಭೆಯ ಚುನಾವಣೆ ಹತ್ತಿರ ಬರುತ್ತಿದೆ ಎಂಬಂತಹ ಸುಳಿವು ಸಿಕ್ಕಿದಾಗಲೇ ಪುರಸಭೆಯ ಪ್ರತಿಯೊಂದು ವಾರ್ಡಿನಲ್ಲಿಯೂ ಸ್ವಚ್ಛ ಭಾರತದ ಮಂತ್ರ ಪಠಿಸಲಾರಂಭಿಸಿದೆ. ಪ್ರತೀ ಭಾನುವಾರ ಒಂದೊಂದು ವಾರ್ಡಿನಲ್ಲಿ ಸ್ವಚ್ಛತಾ ಅಭಿಯಾನ ಎಂಬ ಕಾರ್ಯವನ್ನು ಮಾಡುತ್ತಿದೆ. ಕೇವಲ ರಸ್ತೆ ಬದಿಗಳಲ್ಲಿರುವ ಪ್ಲಾಸ್ಟಿಕ್ ಸಂಗ್ರಹಿಸುವ ಹಾಗೂ ಫೋಟೋಗೆ ಫೋಸ್ ನೀಡುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ.
ಮೂಡಬಿದಿರೆಯ ಪುರಸಭಾ ವ್ಯಾಪ್ತಿಯಲ್ಲಿ ನಡೆದ ಕಂಬಳದ ಪ್ರದೇಶದಲ್ಲಿ ರಾಶಿ ರಾಶಿ ತ್ಯಾಜ್ಯಗಳು ಬಿದ್ದಿದ್ದರೂ ಇವರಿಗ್ಯಾರಿಗೂ ಅದು ಗೋಚರಿಸಲೇ ಇಲ್ಲ!. ಇಲ್ಲಿ ಸ್ವಚ್ಛತೆ ಮಾಡಬೇಕೆಂಬ ಕನಿಷ್ಠ ಪರಿಜ್ಞಾನವೂ ಇವರಿಗಿದ್ದಂತೆ ಭಾಸವಾಗಿಲ್ಲ!

ಸಮಿತಿಗೆ ಜವಾಬ್ದಾರಿ ಇಲ್ಲವೇ? : ಮೂಡಬಿದಿರೆ ಐತಿಹಾಸಿಕ ನಗರಿ. ಇಲ್ಲಿಗೆ ದಿನಂಪ್ರತಿ ಸಹಸ್ರಾರು ಮಂದಿ ಪ್ರವಾಸಿಗರು ಆಗಮಿಸುತ್ತಲೇ ಇದ್ದಾರೆ. ಭಾರತೀಯ ಜನತಾ ಪಕ್ಷದಿಂದ ಆರಿಸಿ ಬಂದವರು ಇಲ್ಲಿ ಶಾಸಕರಾಗಿದ್ದಾರೆ. ಸ್ವಚ್ಛ ಭಾರತದ ಬಗ್ಗೆ ನರೇಂದ್ರ ಮೋದಿಯವರು ಇಷ್ಟೆಲ್ಲಾ ದೊಡ್ಡ ಪ್ರಯತ್ನವನ್ನು ಮಾಡುತ್ತಿದ್ದರೆ ಇತ್ತ ಇದೇ ಪಕ್ಷದಿಂದ ಪ್ರತಿನಿಧಿಸಿದವರು ಸ್ವಚ್ಛತೆಯ ಬಗ್ಗೆ ಗಮನ ಹರಿಸದೆ ಇರುವುದು ಮಾತ್ರ ವಿಪರ್ಯಾಸವೇ ಸರಿ!
ಮೂಡಬಿದಿರೆಯ ಕಂಬಳ ನಡೆದ ನಂತರ ಸಮಿತಿಯ ಅಧ್ಯಕ್ಷ ಸ್ಥಳೀಯ ಶಾಸಕರು ಈ ಬಗ್ಗೆ ಗಮನ ಹರಿಸಬೇಕಾದ ಅವಶ್ಯಕತೆಯಿತ್ತು. ಕಂಬಳ ಪೂರ್ಣಗೊಳ್ಳುವ ಮೊದಲೇ ಶಾಲು ಹೊದೆಸಿಕೊಂಡು ಸನ್ಮಾನ ಮಾಡಿಸಿಕೊಂಡ `ಯಶಸ್ಸಿಗೆ ಕಾರಣೀಕರ್ತ’ರೆನಿಸಿಕೊಂಡವರೂ ಈ ಬಗ್ಗೆ ಚಿಂತಿಸಬೇಕಾಗಿತ್ತು. ಆದರೆ ಅದ್ಯಾವುದೂ ಆಗಿಲ್ಲ ಎಂಬುದು ಬೇಸರದ ಸಂಗತಿ.
ಜಾನದಪ ಕ್ರೀಡೆ ಕಂಬಳವೇನೋ ನಡೆಯಿತು. ಆದರೆ ಅಲ್ಲಿ ಜಾತಿ ರಾಜಕೀಯವಾಗಿದೆ ಎಂಬ ಕೂಗು ಇದೀಗ ಬಲವಾಗಿ ಕೇಳಿಬರಲಾರಂಭಿಸಿದೆ. ತಾರತಮ್ಯ ಎಸಗಲಾಗಿದೆ ಎಂಬ ಮಾತೂ ಜೋರಾಗಿದೆ. ಕಂಬಳದ ನಂತರ ನಡೆದ ಕೋಳಿ ಅಂಕವೂ ಹಲವಾರು ಠೀಕೆಗಳಿಗೆ ಕಾರಣವಾಗಿದೆ. ಏನೇ ಇರಲಿ ಸ್ವಚ್ಛತೆಯ ಮಂತ್ರ ಪಠಿಸುತ್ತಿರುವ ಇಲ್ಲಿನ ಕೆಲವೊಂದು ಪ್ರತಿಷ್ಟಿತ ಮಂದಿ ಈ ಭಾಗದ ಸ್ವಚ್ಛತೆಯತ್ತ ಗಮನ ಹರಿಸದೆ ಇರುವುದು ಮಾತ್ರ ವಿಪರ್ಯಾಸವೇ ಸರಿ.

LEAVE A REPLY

Please enter your comment!
Please enter your name here