“ಓಂ ನಮೋ ಭಗವತೇ ನಿತ್ಯಾನಂದಾಯ”

0
17581

ನಿತ್ಯ ಅಂಕಣ-೧೦೮ : ತಾರಾನಾಥ್ ಮೇಸ್ತ, ಶಿರೂರು.
ಸದ್ಗುರುಗಳು ಅಗಸ್ಟ್ 8, ಮಂಗಳವಾರ ಪೂರ್ವಾಹ್ನ ಸುಮಾರು 10-43 ಗಂಟೆಗೆ ಬೆಂಗಳೂರು ವಾಲಾ ಧರ್ಮಛತ್ರದಲ್ಲಿ ಸಮಾಧಿ ಪಡೆದರು. ಆ ಸಮಯದಲ್ಲಿ ಅವರ ಪರಮಭಕ್ತರೆಲ್ಲರು ಸುತ್ತಲಿದ್ದರು. ಮಹಾಸಮಾಧಿಯ ಸುದ್ದಿ ದೇಶ ವಿದೇಶಗಳಿಗೆ ಪಸರಿಸಿತು. ದಿವ್ಯಶರೀರದ ದರ್ಶನ ಪಡೆಯಲು ಭಕ್ತ ಸಾಗರ ಗಣೇಶಪುರಿಯಲ್ಲಿ ಸೇರಿಕೊಂಡಿತು. ಮಂಗಳವಾರ ಮಧ್ಯಾಹ್ನದಿಂದ ಬಾಬಾರ ದರ್ಶನ ಪಡೆಯಲು ಮಂಗಳವಾರ ಹಗಲು ರಾತ್ರಿಯಂತೆ ಬುಧವಾರದ ರಾತ್ರಿಯ ವರೆಗೆ ಸ್ವಾಮಿಗಳ ದರ್ಶನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಆಶ್ರಮದ ಆಪ್ತವಲಯದ ಭಕ್ತರು ಮಾಡಿದ್ದರು. ಗರುದೇವರ ದಿವ್ಯಶರೀರವನ್ನು ಪದ್ಮಾಸನದಲ್ಲಿ ಕುಳ್ಳಿರಿಸಿ ಇಟ್ಟಿದ್ದರು. ಪೊಲೀಸರು ದರ್ಶನಕ್ಕೆ ಸಾಗರೋಪಾದಿಯಲ್ಲಿ ಬರುತ್ತಿರುವ ಭಕ್ತರನ್ನು ಶಿಸ್ತುಬದ್ಧವಾಗಿ ನಿಯಂತ್ರಿಸಲು ಬಹಳವಾಗಿ ಶ್ರಮಪಟ್ಟಿದ್ದರು. ನಿಜವಾಗಲೂ ಅಲ್ಲಿ ಬಾಬಾರು ಕೊನೆ ಘಳಿಗೆಯಲ್ಲಿ ಹೇಳಿರುವ ” ಬಹುತ್ ಲೋಗ್ ದರ್ಶನ್ ಕೋ ಆತಾ.. ಸಬ್ ಕೋ ದರ್ಶನ್ ಮಿಲ್ನಾ, ಕೀಸಿಕಾ ದಿಲ್ ದುಖಾನಾ ನಹಿ” ಮಾತಿಗೆ ನ್ಯಾಯ ದೊರಕಿದೆ ಎಂಬ ಅಭಿಪ್ರಾಯವು ಸೇರಿರುವ ಭಕ್ತ ವಲಯದಿಂದ ಕೇಳಿಬಂದಿತ್ತು.
ಒಂದಡೆ ಭಕ್ತರ ದರ್ಶನ ನಡೆಯುತಿತ್ತು. ಮತ್ತೊಂದಡೆ ಆಶ್ರಮ ಆಪ್ತರು ಸೇವಕರು ಗುರುದೇವರ ಸಮಾಧಿ ಎಲ್ಲಿ ನಡೆಸುವ ವಿಚಾರವಾಗಿ ಸಭೆ ನಡೆಸಿ ಚರ್ಚಿಸುತ್ತಿದ್ದರು. ಕೇರಳ ಕಾಂಞಂಗಾಡ್ ನಿತ್ಯಾನಂದ ಆಶ್ರಮದಲ್ಲಿ ಬಾಬಾರ ಸಮಾಧಿ ನಡೆಸಬೇಕು ಎನ್ನುವ ಆಶಾಭಾವನೆ ವ್ಯಕ್ತಪಡಿಸಿದರು. ಕೊನೆಗೆ ಬಾಬಾರು 1936 ರಿಂದ 1956 ರ ವರೆಗೆ ಭಕ್ತರಿಗೆ ದರ್ಶನ ನೀಡಿರುವ ವೈಕುಂಠ ಆಶ್ರಮದಲ್ಲಿ ಸಮಾಧಿ ಸ್ಥಾನ ಕಟ್ಟುವ ನಿರ್ಧಾರವು ಸರಿ ನಿರ್ಧಾರವೆಂದು ಎಲ್ಲಾ ಭಕ್ತರಿಂದಲೂ ಒಪ್ಪಿಗೆ ಪಡೆದುಕೊಂಡಿತು. ಬುಧವಾರದ ನಡುರಾತ್ರಿಯಿಂದ ಗುರುವಾರದ ಬೆಳಗಿನ ಜಾವದೊಳಗೆ ಭಕ್ತರು ಸೇರಿಕೊಂಡು ಸ್ಥಿರ ಸಮಾಧಿ ಸಿದ್ಧಗೊಳಿಸಿದ್ದರು. ಗುರುವಾರ ಬ್ರಾಹ್ಮಿಮುಹೂರ್ತದಲ್ಲಿ ಸ್ಥಿರ ಸಮಾಧಿ ಪೂರ್ವದ ವಿಧಿ ವಿಧಾನಗಳು ನಡೆದವು. ಪ್ರಣವ ಮಂತ್ರ ಓಂಕಾರದ ಜಪಗಳು ಪಠಿಸಲ್ಪಟ್ಟವು. ಶಿಷ್ಯ ಸಂತರಾದ ಜನಾನಂದ ಸ್ವಾಮಿ, ಮುಕ್ತಾನಂದ ಸ್ವಾಮಿ, ಮಹಾಬಲ ಸ್ವಾಮಿ ಹಾಗೂ ಕುಟ್ಟಿರಾಮ ಸ್ವಾಮಿ ಗುರುದೇವರ ಪವಿತ್ರ ಶರೀರಕ್ಕೆ ಪುಣ್ಯಸ್ನಾನ ಮಾಡಿಸಿದರು.
ಗುರುವಾರ ಬೆಳಿಗ್ಗೆ ನಿತ್ಯಾನಂದರನ್ನು ಬೆಂಗಳೂರು ವಾಲ ಧರ್ಮಛತ್ರದಿಂದ ಹೊರತರಲಾಯಿತು. ಅಲಂಕೃತವಾದ ರಥ ಮಾದರಿಯ ವಾಹನದಲ್ಲಿ ಕುಳ್ಳರಿಸಿದರು. ಗಣೇಶಪುರಿ ಪೇಟೆಯ ಮುಖ್ಯರಸ್ತೆಯಲ್ಲಿ ದಿವ್ಯಶರೀರದ ಮಹಾ ಮೆರವಣಿಗೆ ನಡೆಸಲಾಯಿತು. “ಓಂ ನಮೋ ಭಗವತೇ ನಿತ್ಯಾನಂದಯಾ” ದಿವ್ಯಮಂತ್ರದ ಘೋಷಣೆಯು ಭಕ್ತಗಡಣದಿಂದ ಅಂಬರದೆತ್ತರಕ್ಕೆ ಮುಟ್ಟಿತು. ವಾದ್ಯ ಮೇಳಗಳ ಸ್ವರ ಮೊಳಗಿತು. ಅನೇಕ ಭಜನಾ ಮಂಡಳಿಗಳ ಭಜಕರು ಭಜನೆಗಳ ಹಾಡುತಿದ್ದರು. ಲಕ್ಷಕ್ಕೂ ಅಧಿಕ ಮಂದಿ ಮಹಾಯಾತ್ರೆಯಲ್ಲಿ ಭಾಗವಹಿಸಿದ್ದರು. ಸ್ಥಿರ ಸಮಾಧಿ ನಡೆಸುವ ವೈಕುಂಠ ಆಶ್ರಮದಲ್ಲಿ ಐನೂರು ಭಕ್ತರು ಸೇರಲು ಸ್ಥಳಾವಕಾಶ ಇದ್ದಿತ್ತು. ಹಾಗಾಗಿ ಆಯ್ದ ಭಕ್ತರಿಗೆ, ಗಣ್ಯ ಭಕ್ತರಿಗೆ ಪ್ರವೇಶಚೀಟಿ ನೀಡಲಾಗಿತ್ತು. ಸಮಾಧಿಯ ಹೊಂಡದಲ್ಲಿ ಗುರುದೇವರ ಶರೀರ ಇಟ್ಟಾಗ ಭಕ್ತರ ಅಳು..! ಮುಗಿಲು ಮುಟ್ಟಿತು.
ಬಾಬಾ..! ಬಾಬಾ..! ಬಾಬಾ..! ಅಳುದಧ್ವನಿಯಲ್ಲಿ ಕರೆಯುವ ಭಕ್ತರು ಕರೆಯುವ ಧ್ವನಿಗಳು ಕೇಳಿಬಂದವು. ಪರಬ್ರಹ್ಮ ನಿತ್ಯಾನಂದರ ದಿವ್ಯ ಶರೀರವನ್ನು ಪದ್ಮಾಸನದಲ್ಲಿ ಕುಳ್ಳರಿಸಿ ಸಮಾಧಿ ಹೊಂಡದಲ್ಲಿ ಇಡಲಾಯಿತು. ಕೊನೆಯ ವಿಧಿ ವಿಧಾನಗಳು ಜನಾನಂದ ಸ್ವಾಮಿಗಳಿಂದ ನಡೆಯಿತು. ಹೊಂಡದಲ್ಲಿ ಮುತ್ತು ರತ್ನಗಳು, ನವರತ್ನಗಳು, ಬೆಳ್ಳಿ ಚಿನ್ನದ ನಾಣ್ಯಗಳು, ಹಾಕಲಾಗಿತ್ತು. ಭಕ್ತರು ತಾವು ತಂದಿರುವ ಆಭರಣಗಳನ್ನು ಸಮರ್ಪಿಸಿದ್ದರು. ಹಂತ ಹಂತವಾಗಿ ಸ್ಥಿರ ಸಮಾಧಿ ಹೊಂಡವು ಹಲವು ಬಗೆಯ ಸಮಾಧಿ ಪ್ರಕ್ರಿಯೆ ನಡೆಸುವ ಸುವಸ್ತುಗಳಿಂದ ತುಂಬಿತು. ಕೊನೆಗೆ ಪದ್ಮಸಾನ ಸ್ಥಿತಿಯಲ್ಲಿದ್ದ ಬಾಬಾರು ಕಾಣದಾದರು. ಬಾಬಾರು ಮಹಾ ಸಮಾಧಿ ಪಡೆದರು. ಮುಂದೆ ಅದೇ ಸ್ಥಳದಲ್ಲಿ ಭವ್ಯವಾದ ಸಮಾಧಿ ಮಂದಿರ ನಿರ್ಮಾಣಗೊಂಡಿತು. ಗುರುದೇವರ ಸಮಾಧಿಯ ಬಳಿಕವು ಗುರುದೇವರು ಶ್ರದ್ಧಾಳು ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ. ನಂಬಿದ ಭಕ್ತರನ್ನು ಹರಸುತ್ತಿದ್ದಾರೆ. ಜೀವನದಲ್ಲಿ ಎದುರಾಗಿರುವ ಸಂಕಷ್ಟಗಳ ಪರಿಹರಿಸುತ್ತಿದ್ದಾರೆ. ಅವಧೂತ ಭಗವಾನರ ಲೀಲಾಮೃತವು ಸಮಾಧಿಯ ಬಳಿಕವು ನಡೆಯುತ್ತಿದೆ. “ಓಂ ನಮೋ ಭಗವತೇ ನಿತ್ಯಾನಂದಯಾ” ಏಕ ವಾಕ್ಯ, ದ್ವಾದಶ ಅಕ್ಷರಗಳ ದಿವ್ಯ ಮಂತ್ರ ಪಠಿಸಿ ಭಕ್ತರು ಜೀವನದಲ್ಲಿ ಉಲ್ಲಾಸ ಸಮೃದ್ಧಿ ಕಾಣುತ್ತಿದ್ದಾರೆ.
“ಓಂ ನಮೋ ಭಗವತೇ ನಿತ್ಯಾನಂದಾಯ”

LEAVE A REPLY

Please enter your comment!
Please enter your name here