ಏರ್ ಪೋರ್ಟ್ ಗೆ ಪರ್ಯಾಯ ಮಾರ್ಗಗಳ ಅಭಿವೃದ್ಧಿ

0
274

ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರು ಸಮೀಪದ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಸ್ತುತ ಇರುವ ಏಕೈಕ ಸಂಪರ್ಕ ರಸ್ತೆ ರಾಷ್ಟ್ರೀಯ ಹೆದ್ದಾರಿ-7 ರಲ್ಲಿನ ಬಳ್ಳಾರಿ ರಸ್ತೆಯಲ್ಲಿರುವ ಅತ್ಯಧಿಕ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಸದುದ್ದೇಶದಿಂದ ರಾಜ್ಯ ಸರ್ಕಾರ ಮೂರು ಪರ್ಯಾಯ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
 
 
 
ನಗರದ ಕುಮಾರಕೃಪ ರಸ್ತೆಯಲ್ಲಿರುವ ತಮ್ಮ ಗೃಹ ಕಚೇರಿ ಕೃಷ್ಣಾ ದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಪರಿಶೀಲನೆ ನಡೆಸಿದ ನಂತರ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
 
 
 
ಹೆಬ್ಬಾಳ ಕೆಂಪಾಪುರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಕೇತ ರಹಿತ (ಸಿಗ್ನಲ್-ಫ್ರೀ) ರಸ್ತೆಯನ್ನು ನಿರ್ಮಿಸಿದ್ದರೂ ಕೂಡ ಅಲ್ಲಿನ ಮೇಲು ಸೇತುವೆಯಲ್ಲೂ ಪ್ರತಿ ನಿತ್ಯವೂ ವಾಹನಗಳ ದಟ್ಟಣೆ ಅತ್ಯಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ ರಸ್ತೆ ಹಾಗೂ ಅದರ ಸಂಪರ್ಕ ರಸ್ತೆಗಳಲ್ಲಿ ವಾಹನಗಳ ಒತ್ತಡವನ್ನು ಕಡಿತಗೊಳಿಸಲು ಬೆಂಗಳೂರು ನಗರದ ಪೂರ್ವ, ಕೇಂದ್ರ ಹಾಗೂ ಪಶ್ಚಿಮ ಭಾಗಗಳ ಪ್ರಮುಖ ರಸ್ತೆಗಳನ್ನು ಸುಧಾರಣೆ ಮಾಡಿ ಪರ್ಯಾಯ ಮಾರ್ಗಗಳಾಗಿ ಅಭಿವೃದ್ಧಿ ಪಡಿಸಲು ಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
 
 
 
ಬೆಂಗಳೂರು ಪೂರ್ವ ಭಾಗದ ಹೆಣ್ಣೂರು ಮುಖ್ಯ ರಸ್ತೆ – ಬಾಗಲೂರು ವೃತ್ತ, ಬಂಡಿಕೊಡಿಗೇಹಳ್ಳಿ ಹಾಗೂ ಮೈಲನಹಳ್ಳಿ ಮಾರ್ಗದಲ್ಲಿ ಒಟ್ಟು ಪ್ರಸ್ತಾಪಿತ ದೂರ 21.48 ಕಿ. ಮೀ. ಆಗಿದೆ. ಈ ಮಾರ್ಗವು ಬಳ್ಳಾರಿ ರಸ್ತೆಯ ಹಾಲಿ ಮಾರ್ಗಕ್ಕಿಂತಲೂ 9.64 ಕಿ. ಮೀ ಪ್ರಯಾಣದ ದೂರವನ್ನು ಕಡಿತಗೊಳಿಸುತ್ತದೆ. ಹೊರ ವರ್ತುಲ ರಸ್ತೆಯಿಂದ ಮೈಲನಹಳ್ಳಿಯವರೆಗೂ ಈಗಾಗಲೇ ರಸ್ತೆಯ ವಿಸ್ತøತೀಕರಣ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಲ್ಲದೆ, ಕಣ್ಣೂರು ವೃತ್ತದಿಂದ ಮೈಲನಹಳ್ಳಿ-ಬೇಗೂರು ಮಾರ್ಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಲೋಕೋಪಯೋಗಿ ಇಲಾಖೆಯು ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದೆ. ಹೆಣ್ಣೂರು ರಸ್ತೆ ಅಭಿವೃದ್ಧಿಗೆ 2014-15 ನೇ ಸಾಲಿನ ನಗರೋತ್ಥಾನ ಯೋಜನೆಯಡಿ ಏಳು ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ. ಅಂತೆಯೇ, ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದೆ.
 
 
 
ಬೆಂಗಳೂರು ಕೇಂದ್ರ ಭಾಗದ ಥಣಿಸಂದ್ರ ಮುಖ್ಯರ¸ – ಬಾಗಲೂರು ರಸ್ತೆಯಿಂದ ಮೈಲನಹಳ್ಳಿ ಮಾರ್ಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಸ್ತಾಪಿತ ಒಟ್ಟು ದೂರ 20.63 ಕಿ. ಮೀ. ಆಗಿದೆ. ಇದೂ ಕೂಡಾ ಪ್ರಸ್ತುತದ ಬಳ್ಳಾರಿ ರಸ್ತೆಯ ಮಾರ್ಗಕ್ಕಿಂತಲೂ 3.14 ಕಿ. ಮೀ ಕಡಿಮೆಯಾಗಲಿದೆ. ಥಣಿಸಂದ್ರ ರಸ್ತೆಯನ್ನು ಅಭಿವೃದ್ಧಿ ಪಡಿಸಲು 2014-15 ನೇ ಸಾಲಿನಲ್ಲಿ ನಗರೋತ್ಥಾನ ಯೋಜನೆಯಲ್ಲಿ 16.97 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಅಂತೆಯೇ, ರಸ್ತೆ ಅಭಿವೃದ್ಧಿಯ ಕಾಮಗಾರಿಗಳೂ ಪ್ರಗತಿಯಲ್ಲಿದೆ. ಅಲ್ಲದೆ, 2016-17 ನೇ ಸಾಲಿನ ಹಾಗೂ 2017-18 ನೇ ಸಾಲಿನ ನಗರೋತ್ಥಾನ ಯೋಜನೆಯಡಿಯಲ್ಲಿ ಥಣಿಸಂದ್ರ ಮುಖ್ಯ ರಸ್ತೆಯ ರಾಷ್ಟ್ರೋತ್ಥಾನ ವೃತ್ತದಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣಕ್ಕೆ 31 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈ ನಿಟ್ಟಿನಲ್ಲಿ ಸವಿವರ ಯೋಜನಾ ವರದಿ ತಯಾರಿಕಾ ಹಂತದಲ್ಲಿದೆ.
 
 
 
ಬೆಂಗಳೂರು ಪಶ್ಚಿಮ ಭಾಗದಿಂದ ಮಾಗಡಿ ರಸ್ತೆ-ಪೀಣ್ಯಾ-ಯಲಹಂಕ ಮಾರ್ಗದ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಕಂಠೀರವ ವೃತ್ತದಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಕೆಳ ಸೇತುವೆ ಹಾಗೂ ಮೇಲು ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ನಗರೋತ್ಥಾನ ಯೋಜನೆಯಲ್ಲಿ 2014-15 ನೇ ಸಾಲಿನಲ್ಲಿ ಜಾಲಹಳ್ಳಿ ಬಳಿಯ ವೃತ್ತದಲ್ಲಿ ಕೆಳ ಸೇತುವೆ ನಿರ್ಮಾಣ ಹಾಗೂ ಸುಭ್ರತೋ ಮುಖರ್ಜಿ ರಸ್ತೆಯ ಅಗಲೀಕರಣ ಕಾಮಾಗಾರಿಗಳಿಗೆ 4.5 ಕೋಟಿ ರೂ. ಬಿಡುಗಡೆ ಮಾಡಿದೆ. ಅಲ್ಲದೆ, ಹೆಚ್. ಎಂ. ಟಿ. ಮುಖ್ಯರಸ್ತೆ ಅಭಿವೃದ್ಧಿ ಮತ್ತು ಅಗಲೀಕರಣ ಕಾಮಗಾರಿಗಳಿಗೆ ಪ್ರಸ್ತಕ ಸಾಲಿನಲ್ಲಿ 5.6 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಂತೆಯೇ, ಬಿ. ಇ. ಎಲ್ ವೃತ್ತದಿಂದ ಗಂಗಮ್ಮ ವೃತ್ತದವರೆಗೆ ರಸ್ತೆ ಅಗಲೀಕರಣ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಜೊತೆಗೆ, ಗಂಗಮ್ಮ ವೃತ್ತದಲ್ಲಿ 23 ಕೋಟಿ ರೂ. ವೆಚ್ಚದಲ್ಲಿ ಗ್ರೇಡ್ ಸೆಪರೇಟರ್ ನಿರ್ಮಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಯಲಹಂಕದ ಮದರ್ ಡೈರಿ ಬಳಿಯ ಅರೋಮಾ ಬೇಕರಿ ವೃತ್ತದಲ್ಲೂ 23 ಕೋಟಿ ರೂ ವೆಚ್ಚದಲ್ಲಿ ಮೇಲು ಸೇತುವೆ ನಿರ್ಮಿಸಲು ಅನುದಾನ ಬಿಡುಗಡೆ ಮಾಡಲಾಗಿದೆ.
 
 
 
ತಮ್ಮ ಸರ್ಕಾರ 2013-14 ನೇ ಸಾಲಿನಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಈವರೆಗೆ ಬೆಂಗಳೂರಿನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಗೆ ಪರ್ಯಾಯ ಮಾರ್ಗಗಳ ಅಭಿವೃದ್ಧಿಪಡಿಸುವ ಕೆಳ ಸೇತುವೆ ಮತ್ತು ಮೇಲು ಸೇತುವೆ ನಿರ್ಮಾಣ, ರಸ್ತೆ ಅಗಲೀಕರಣ, ರಸ್ತೆ ಸುಧಾರಣಾ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗಾಗಿ 300 ಕೋಟಿ ರೂ. ಗಳಿಗೂ ಹೆಚ್ಚಿನ ಮೊತ್ತದ ಅನುದಾನವನ್ನು ಬಿಡುಗಡೆ ಮಾಡಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶೀಘ್ರದಲ್ಲಿಯೇ ಪರ್ಯಾಯ ಮಾರ್ಗಗಳನ್ನು ಅಭಿವೃದ್ಧಿಪಡಿಸಿ ನಗರದ ನಾಗರೀಕರಿಗೆ ಸುಗಮ ಸಂಚಾರಕ್ಕೆ ಅನುವುಮಾಡಿಕೊಡಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.

LEAVE A REPLY

Please enter your comment!
Please enter your name here