ಏರೋಸ್ಪೇಸ್ ಮತ್ತು ಸೆಂಟರ್ ಆಫ್ ಎಕ್ಸ್ ಲೆನ್ಸ್ ಸ್ಥಾಪನೆಗೆ ಒಪ್ಪಂದ

0
452

ನ್ಯೂಸ್ ಬ್ಯುರೋ ವಾರ್ತೆ.ಕಾಂ
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಕ್ಯಾಂಪಸ್‍ನಲ್ಲಿ ಹಾಗೂ ಬೆಂಗಳೂರು ನಗರದಲ್ಲಿ ಕರ್ನಾಟಕ ಸರ್ಕಾರ ಹಾಗೂ ಫ್ರಾನ್ಸ್ ನ ದಸ್ಸಾಲ್ಟ್ ಸಿಸ್ಟಮಿಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸುವ ಬಗ್ಗೆ ಇಂದು ಒಪ್ಪಂದ ಮಾಡಿಕೊಳ್ಳಲಾಯಿತು.
ಈ ಯೋಜನೆಯು 288.68 ಕೋಟಿ ರೂ. ವೆಚ್ಚದಲ್ಲಿ ಜಾರಿಗೊಳ್ಳಲ್ಲಿದ್ದು ಇದರಲ್ಲಿ ಫ್ರಾನ್ಸ್‍ನ ದಸ್ಸಾಲ್ಟ್ ಸಿಸ್ಟಮಿಸ್ ಅವರ ಪಾಲು 250.93 ಕೋಟಿ ರೂ.ಗಳಾಗಿದ್ದು ರಾಜ್ಯ ಸರ್ಕಾರದ ಪಾಲು 33.46 ಕೋಟಿ ರೂ.ಗಳಷ್ಟಿದೆ.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಕ್ಕೆ ಈ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆಯಿಂದ ಆನೆ ಬಲ ಬಂದಂತಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಯೋಜನೆ ಕುರಿತು ಮಾಹಿತಿ ನೀಡಿದ ಸಚಿವರು ಈ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ವರ್ಷಕ್ಕೆ ಸುಮಾರು 1600 ಎಂಜಿನಿಯರ್‍ ಗಳಿಗೆ ಉನ್ನತ ಮಟ್ಟದ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಜಗತ್ತಿನಲ್ಲಿಯೇ ಏರೋಸ್ಪೇಸ್ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಮಾರುಕಟ್ಟೆ ಬೇಡಿಕೆ ಹೆಚ್ಚಾಗಿದ್ದು ಈ ಸಂಸ್ಥೆಯಿಂದಾಗಿ ಹೆಚ್ಚಿನ ಉದ್ಯೋಗಾವಕಾಶ ಲಭಿಸಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ವೃತ್ತಿಪರರಿಗೆ ತರಬೇತಿ ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸುತ್ತಿರುವ ಫ್ರಾನ್ಸ್ ದೇಶದ ತುಲೂಸ್ ನಗರದ ಇಸ್ರೋ ಮಾದರಿಯ ಇನ್ಸ್ ಟಿಟ್ಯೂಟ್ ಏರೋನಾಟಿಕ್ ಎಟ್ ಸ್ಪೇಷಿಯಲ್ (ಐಎಎಸ್) ನೊಂದಿಗೆ ಸಹಾ ರಾಜ್ಯ ಸರ್ಕಾರವು ಒಪ್ಪಂದ ಮಾಡಿಕೊಂಡಿದೆ. ಆ ಮೂಲಕ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ಗುಣಮಟ್ಟದ ತರಬೇತಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಈ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ಬೇಸಿಕ್ ಮತ್ತು ಅಡ್ವಾನ್ಸ್ ಎಂಬ ಎರಡು ವಿಭಾಗದಲ್ಲಿ ತರಬೇತಿ ನೀಡಲಾಗುವುದು. ಬೇಸಿಕ್ ತರಬೇತಿಯನ್ನು ಆನ್‍ಲೈನ್‍ನಲ್ಲಿಯೂ ತರಬೇತಿ ಪಡೆಯಲು ಅವಕಾಶವಿದೆ ಎಂದು ಸಚಿವರು ತಿಳಿಸಿದರು. ಒಪ್ಪಂದದ ಪ್ರಕಾರ ತರಬೇತಿ ಪಡೆದವರಿಗೆ ಇದೇ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಕಲ್ಪಿಸುವುದು ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.

LEAVE A REPLY

Please enter your comment!
Please enter your name here