ನಿತ್ಯ ಅಂಕಣ-೮೨ : ತಾರಾನಾಥ್ ಮೇಸ್ತ, ಶಿರೂರು.
ಗರುದೇವರ ದರ್ಶನ ಪಡೆಯಲು ವಿದ್ಯಾಧರ ಪಾಟೀಲ ಎನ್ನುವ ಭಕ್ತ ಗಣೇಶಪುರಿಗೆ ಬಂದಿದ್ದ. ಅವರು ಸಾಮಾನ್ಯವಾಗಿ ಯಾವತ್ತೂ ಬರವ ಭಕ್ತನು ಹೌದು. ಆ ದಿನ ಪಾಟೀಲರು ಗುರುದೇವರ ದರ್ಶನ ಪಡೆಯಲು ಬಂದಿರುವ ದಿನ ಏಕಾದಶಿ ಆಗಿತ್ತು. ಏಕಾದಶಿ ದಿನದಂದು ಉಪವಾಸ ಆಚರಣೆಯನ್ನು ಅವರು ಶ್ರದ್ಧೆಯಿಂದ ಮಾಡುತ್ತಿದ್ದರು. ಆ ದಿನದಲ್ಲಿ ಯಾವುದಾದರೊಂದು ಮಂದಿರ ಗುಡಿಗಳಿಗೆ ಹೋಗುವುದು ವಿದ್ಯಾಧರ ಪಾಟೀಲರ ಪದ್ಧತಿಯೂ ಆಗಿತ್ತು. ಪಾಟೀಲರು ಗುರುದೇವರ ದರ್ಶನವನ್ನು ಮಧ್ಯಾಹ್ನದ ಹೊತ್ತಿಗೆ ಪಡೆಯುವ ಅವಕಾಶ ದೊರೆಯಿತು. ಗುರುದೇವರು ಪಾಟೀಲರನ್ನು ಕಂಡು ಯೋಗ ಕ್ಷೇಮ ವಿಚಾರಿಸಿ, “ಊಟ ಆಯ್ತೆ..?” ಎಂದು ಕೇಳಿದರು. ಆಗ ಪಾಟೀಲರು, ‘ಇಂದು ಏಕಾದಶಿಯ ಶುಭದಿನ, ನಾನು ಊಟ ಮಾಡುವುದಿಲ್ಲ’ ವೃತಾಚರಣೆಯಲ್ಲಿ ಇದ್ದೇನೆ ಎಂದು ಹೇಳಿಕೊಂಡರು.
ಪಾಟೀಲರ ಉತ್ತರ ಕೇಳಿದ ನಿತ್ಯಾನಂದರು, ಒಮ್ಮೆಗೆ ಸಿಡಿ ಮಿಡಿಗೊಂಡು, ‘ಏನು ಏಕಾದಶಿ..?’ ಎಂತಹಾ ಏಕಾದಶಿ..? ಈ ಶರೀರಕ್ಕೆ ಆಹಾರ ಒದಗಿಸಲೇ ಬೇಕು. ನಿಜವಾದ ‘ಏಕಾದಶಿ ಉಪವಾಸ’ ಎಂದರೆ, ಮನಸ್ಸು ಉಪವಾಸ ಮಾಡುವುದು, ಎಂದು ನಿತ್ಯಾನಂದರು ಹೇಳುತ್ತಾರೆ. ಅದೇ ಕೂಡಲೇ ಗುರುದೇವರು ತಮ್ಮ ಕೋಣೆಯನ್ನು ಪ್ರವೇಶ ಮಾಡಿದರು. ಹಾಗೆಯೇ ಹೊರಗೆ ಬರುವಾಗ ಊಟದ ಡಬ್ಬಿಯೊಂದನ್ನು ಹಿಡಿದು ತಂದರು. ಅದನ್ನು ವಿದ್ಯಾದರ ಪಾಟೀಲರ ಕೈಗಿಟ್ಟು ಊಟ ಮಾಡಲು ಆಜ್ಞೆ ಇತ್ತರು.
ಭಕ್ತ ಪಾಟೀಲನ ಸನಿಹ ಬಾಗಿಲ ಮೆಟ್ಟಿಲ ಬಳಿ ನಿತ್ಯಾನಂದರು ಕುಳಿತುಕೊಂಡರು. ವಿದ್ಯಾಧರ ಪಾಟೀಲರು ಗುರುಆಜ್ಞೆ ಮೀರಲಾಗದೆ ಡಬ್ಬಿಯ ಮುಚ್ಚಳವನ್ನು ನಿಧಾನವಾಗಿ ತೆಗೆದು ನೋಡಿದರು. ಅದರಲ್ಲಿ ಮೂರು ಜನರು ಊಟ ಮಾಡುವಷ್ಟು ವಿವಿಧ ಪದಾರ್ಥಗಳು ಇರುವುದು ಕಂಡಿತು. ಇದುವರೆಗೆ ಏಕಾದಶಿಯ ದಿನ ಊಟ ಮಾಡಿದವನು ನಾನಲ್ಲ. ಈಗ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಗುರುದೇವರ ಅಪ್ಪಣೆ ಮೀರಿದರೆ ಅಪರಾಧ ಆಗುತ್ತದೆ. ಏನೇ ಇರಲಿ ಏಕಾದಶಿಯ ಮಹತ್ವವನ್ನು ಗುರುದೇವರು ನನಗೆ ಭೋಧಿಸಿದ್ದಾರೆ. ಗರುದೇವರ ಸನಿಹದಲ್ಲಿ ಕೂತು ಊಟ ಮಾಡುವುದು ಎಂದರೆ ಅದು ಬಯಸದೇ ಬಂದಿರುವ ಭಾಗ್ಯ. ಅದಲ್ಲದೆ ಉಣ್ಣಲೆಂದು ಊಟವನ್ನು ನನ್ನ ಕೈಗಳಿಗೆ ಅವರೇ ಒದಗಿಸಿದ್ದಾರೆ. ಭಕ್ತನ ಮೇಲೆ ಗುರುದೇವರು ಇಟ್ಟಿರುವ ಪ್ರೀತಿ ಅನನ್ಯ ಎಂದು ತಿಳಿದು, ಪಾಟೀಲರು ಮೂವರ ಊಟವನ್ನು ಒಬ್ಬರೇ ಉಂಡರು. ವಿದ್ಯಾಧರ ಪಾಟೀಲರು ಏಕಾದಶಿಯ ನಿಜಾವಾದ ಅರ್ಥವನ್ನು ಗುರುದೇವರಿಂದ ತಿಳಿದು ಕೊಂಡರು.