ವಾರ್ತೆ

ಎಸ್ ಡಿ ಎಂ ಕಾಲೇಜಿನಲ್ಲಿ ವಿಜ್ಞಾನ ಉಪನ್ಯಾಸ ಮಾಲೆ ಕಾರ್ಯಕ್ರಮ

ವರದಿ: ಪವಿತ್ರ ದೇರ್ಲಕ್ಕಿ, ರಾಜೇಶ್ವರಿ ಬೆಳಾಲು
ಇಂದು ವಿಜ್ಞಾನ ನಾಗಾಲೋಟದಲ್ಲಿ ಮುಂದುವರಿಯುತ್ತಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕು. ಸಾಮಾನ್ಯ ವಿದ್ಯಾರ್ಥಿಯನ್ನು ಅಸಾಮಾನ್ಯನನ್ನಾಗಿ ಮಾಡಬೇಕಾದರೆ ಪೂರಕ ಮಾರ್ಗದರ್ಶನದ ಅಗತ್ಯವಿದೆ ಎಂದು ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ. ವಿ. ರಾವ್ ಹೇಳಿದರು.
 
 
 
ಇವರು ಇತ್ತೀಚೆಗೆ ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ‘ವಿಜ್ಞಾನ ಉಪನ್ಯಾಸ ಮಾಲೆ’ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ಸರ್ಕಾರ ಹಾಗೂ ಎಸ್ಡಿಎಂ ಕಾಲೇಜಿನ ವಿಜ್ಞಾನ ವಿಭಾಗಗಳ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ಕೇವಲ ನಗರ ಪ್ರದೇಶಗಳಲ್ಲಿ ಓದಿದವರು ಮಾತ್ರ ಉನ್ನತ ಹುದ್ದೆಯನ್ನು ಅಲಂಕರಿಸುವುದಲ್ಲ. ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದಿಂದ ಬಂದವರು. ನಿರ್ದಿಷ್ಟ ಗುರಿ, ಸಾಧಿಸುವ ಛಲ, ಸತತ ಪ್ರಯತ್ನವಿದ್ದರೆ ಯಶಸ್ಸು ನಿಮ್ಮದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
 
 
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ ಯಶೋವರ್ಮ ಮಾತನಾಡಿ ವಿಜ್ಞಾನ ವಿದ್ಯಾರ್ಥಿಯಾದವರಿಗೆ ಕುತೂಹಲ, ಕ್ರಿಯಾಶೀಲತೆ, ವೈಜ್ಞಾನಿಕ ಮನೋಭಾವನೆ ಇರಬೇಕು. ಯಾವುದೇ ವಿಚಾರದ ಬಗ್ಗೆ ಆಳವಾದ ಅಧ್ಯಯನ, ಹೊಸ ದೃಷ್ಟಿಕೋನ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಬೇಕು ಎಂದ ಅವರು ವಿದ್ಯಾರ್ಥಿಗಳು ಕೇವಲ ಪರೀಕ್ಷಾ ದೃಷ್ಟಿಯಿಂದ ಓದದೆ ಆಸಕ್ತಿ ವಹಿಸಿ ಆಳವಾದ ಅಧ್ಯಯನದಲ್ಲಿ ತೊಡಗಿಸಿಕೊಂಡರೆ ಮಾತ್ರ ಸಾಧನೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
 
 
 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ. ಕೆ.ಎಸ್. ಮೋಹನ ನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿ, ಶುಭ ಹಾರೈಸಿದರು. ಕಾಲೇಜಿನ ಉಪಪ್ರಾಂಶುಪಾಲ ಟಿ.ಎನ್.ಕೇಶವ್, ವಿಜ್ಞಾನ ವಿಭಾಗದ ಡೀನ್ ಸತೀಶ್ಚಂದ್ರ, ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರೊ.ಎಸ್.ಎನ್. ಕಾಕತ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
 
 
ಕ್ರೈಸ್ಟ್ ಯೂನಿವರ್ಸಿಟಿ ಬೆಂಗಳೂರಿನ ಉಪನ್ಯಾಸಕ ಡಾ. ಪ್ರವೀಣ್ ಎಂ, ಬೆಂಗಳೂರಿನ ಜವಹರಲಾಲ್ ನೆಹರು ಸೆಂಟರ್ ಫಾರ್ ಅಡ್ವನ್ಸ್ಡ್ ಸೈಂಟಿಫಿಕ್ ರೀಸರ್ಚ್ ನ ಉಪನ್ಯಾಸಕ ಪ್ರೋ. ಎಸ್.ಎಂ. ಶಿವಪ್ರಸಾದ್, ಆಂದ್ರ ಪ್ರದೇಶದ ಗಂಡಕಿ ನ್ಯಾಶನಲ್ ಅಟ್ಮಾಸ್ಫಿಯರಿಕ್ ರಿಸರ್ಚ್ ಲ್ಯಾಬೊರೇಟರಿಯ ಡಾ| ಚೈತನ್ಯ ಡಿ. ಜೈನ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
 
 
 
ಜಿಲ್ಲೆಯ ಸುಮಾರು ಎಂಟು ಕಾಲೇಜುಗಳಿಂದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾಲೇಜಿನ ವಿಜ್ಞಾನ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮವನ್ನ ಉಪನ್ಯಾಸಕ ಸತೀಶ್ಚಂದ್ರ ಸ್ವಾಗತಿಸಿ, ಉಪನ್ಯಾಸಕಿ ನಂದಕುಮಾರಿ ವಂದಿಸಿದರೆ, ವಿದ್ಯಾರ್ಥಿನಿ ಶ್ರಾವ್ಯ ನಿರೂಪಿಸಿದರು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here