ಎಸೆದ ಕಲ್ಲು ತಾಗಿತು…!ಆದರೆ ನೋವಾಗಲೇ ಇಲ್ಲ!!

0
1115

ನಿತ್ಯ ಅಂಕಣ-೮೭ : ತಾರಾನಾಥ್‌ ಮೇಸ್ತ, ಶಿರೂರು.
ನಿತ್ಯಾನಂದ ಸ್ವಾಮಿಗಳು ‘ಮದ್ಯ ಮುಕ್ತ ಸಮಾಜ’ದ ಕನಸು ಕಂಡವರು. ತನ್ನ ಬಳಿಗೆ ಬರುವ ಭಕ್ತರಲ್ಲಿ ಕುಡಿತದ ಚಟ ಹೊಂದಿದ್ದವರು ಯಾರಾದರೂ ಬಂದರೆ, ಅವರಿಗೆ ತಿಳಿದು ಬರುತಿತ್ತು. ಅಂತವರಿಗೆ ಪ್ರಥಮವಾಗಿ ತಿಳುವಳಿಕೆ ಹೇಳುತ್ತಿದ್ದರು. ಮಾತು ಕೇಳದೆ ಇದ್ದವರಿಗೆ ಕೆಲವೊಮ್ಮೆ ಸಿಟ್ಟಾಗಿ ಗದರಿಸುತ್ತಿದ್ದರು. ಸನಿಹ ಬರಬೇಡ ಹೋಗು..! ಎಂದು ಅಮಲು ವ್ಯಸನಿಗಳನ್ನು ಅಟ್ಟಿಸುತ್ತಿದ್ದರು. ಹೀಗೆ ನಿತ್ಯಾನಂದರು ಬಹಳಷ್ಟು ಕುಡುಕರನ್ನು ಮದ್ಯ ವ್ಯಸನದಿಂದ ಮುಕ್ತಗೊಳಿಸಿದ್ದಾರೆ. ಹೀಗೆ ಗುರುದೇವರು ಕುಡಿತದ ಕತ್ತಲೆಯಲ್ಲಿ ದಿನಗಳ ಕಳೆಯುತ್ತಿದ್ದ ನೂರಾರು ಮನೆ ಮನಗಳನ್ನು ಬೆಳಗಿಸಿದ್ದಾರೆ.
ಕಾರ್ಕಳ ಬೋಳ ಬಡಕಲಗುತ್ತು ವಿಠಲ ಶೆಟ್ಟಿ ಅವರು ಉದ್ಯೋಗಕ್ಕೋಸ್ಕರ ಮುಂಬೈಗೆ ತೆರಳುತ್ತಾರೆ. ಮೊದಲು ಮುಂಬೈ ಹೊಟೇಲುಗಳಲ್ಲಿ ದುಡಿಯುತ್ತಿರುತ್ತಾರೆ. ಆವಾಗ ಅವರಿಗೆ ಅಲ್ಲಿ ಸಹವಾಸ ದೋಷದಿಂದ ಕಳ್ಳಬಟ್ಟಿಗಳಲ್ಲಿ ತಯಾರಿಸುವ ಮದ್ಯ ಸೇವಿಸುವ ಚಟವು ಅಂಟಿಕೊಳ್ಳುತ್ತದೆ. ಹೀಗಿರುವಾಗ ಅವರು ಒಮ್ಮೆ ಗಣೇಶಪುರಿಗೆ ತೆರಳುತ್ತಾರೆ. ತೆರಳುವಾಗ ಅವರು ಮದ್ಯದ ಅಮಲಿನಲ್ಲಿ ತೆರಳಿದ್ದರು. ಆದರೆ ಅವರಿಗೆ ಅಲ್ಲಿ ಗುರುದೇವರ ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲ. ಗುರುದೇವರ ದರ್ಶನ ಪಡೆಯದೆ ನಾನು ಗಣೇಶಪುರಿ ಬಿಟ್ಟು ತೆರಳುವುದಿಲ್ಲ..! ಎಂದು ಹಠಮಾಡಿ ಕೊಂಡು ಅಲ್ಲೆ ಠಿಕಾಣಿ ಹೂಡುತ್ತಾರೆ. ಮೂರನೆ ದಿನ ವಿಠಲ ಶೆಟ್ಟಿ ಅವರಿಗೆ ಗುರುದೇವರ ದರ್ಶನ ಪಡೆಯಲು ಅವಕಾಶ ಸಿಗುತ್ತದೆ.
ವಿಠಲ ಶೆಟ್ಟಿ ಅವರು ಸನಿಹ ಬಂದಾಗ, ನಿತ್ಯಾನಂದರು ಸಿಟ್ಟಾಗುತ್ತಾರೆ. ತಮ್ಮ ಬಳಿಗೆ ಬರುತ್ತಿರುವ ವಿಠಲ ಶೆಟ್ಟಿ ಅವರಿಗೆ ಕಲ್ಲೊಂದನ್ನು ಗುರಿ ಇಟ್ಟು ಹೊಡೆಯುತ್ತಾರೆ. ಶೆಟ್ಟರು ಹೆದರಿ ಮುಂದೆ ಹೆಜ್ಜೆಗಳಿಡದೆ, ಹಿಂದೆ ಸರಿಯುತ್ತಾರೆ. ಕಲ್ಲಿನ ಗುರಿ ಮಾತ್ರ ವಿಠಲ ಶೆಟ್ಟಿ ಅವರಿಗೆ ತಾಗುತ್ತದೆ. ನಿತ್ಯಾನಂದರು ಎಸೆದ ಕಲ್ಲಿನ ಗಾತ್ರ, ಎಸೆದಿರುವ ವೇಗಕ್ಕೆ ತನಗೆ ಗಂಭೀರ ಸ್ವರೂಪದ ಗಾಯವಾಗುತ್ತದೆ ಎಂದು ಅವರು ಭಾವಿಸುತ್ತಾರೆ. ಆದರೆ ಅವರಿಗೆ ಸ್ವಲ್ಪವು ನೋವು ಕಾಣುವುದಿಲ್ಲ. ಪುಟ್ಬಾಲ್ ಚೆಂಡು ಸ್ಪರ್ಶಗೊಂಡ ಅನುಭವವನ್ನು ಅವರು ಪಡೆಯುತ್ತಾರೆ.
ಮುಂದೆ ವಿಠಲ ಶೆಟ್ಟಿ ಅವರು ಮದ್ಯ ಸೇವನೆ ಹಂತ ಹಂತವಾಗಿ ಕಡಿಮೆ ಮಾಡುತ್ತ ಚಟದಿಂದ ಸಂಪೂರ್ಣವಾಗಿ ಮುಕ್ತಿ ಪಡೆಯುತ್ತಾರೆ. ಮುಂದೆ ಗುರುದೇವರ ಕೃಪೆಯಿಂದ 1953 ರಲ್ಲಿ ಮುಂಬೈ ಬೈಯಂದರ್ ಪೊಲೀಸ್ ಠಾಣೆ ಬಳಿ ಸ್ವಂತದಾದ ಹೊಟೇಲು ತೆರೆಯುತ್ತಾರೆ. ಆಗಿಂದಾಗ ಗುರುದೇವರ ದರ್ಶನ ಪಡೆಯಲು ಗಣೇಶಪುರಿಗೆ ಹೋಗುತ್ತಿರುತ್ತಾರೆ. ಮೊದಲು ಸ್ವಾಮಿಗಳಿಂದ ಕಲ್ಲಿನ ಎಸೆತವನ್ನು ಎದುರಿಸಿದ ಶೆಟ್ಟಿ ಅವರು, ನಂತರದ ದಿನಗಳಲ್ಲಿ ಗುರುದೇವರ ನಗುಮುಖದ ದರ್ಶನವನ್ನು ಪಡೆಯುತ್ತ ಇರುತ್ತಾರೆ. ನಂತರ ತಮ್ಮ ಕುಟುಂಬ ವರ್ಗದ ಸದಸ್ಯರನ್ನು ಗಣೇಶಪುರಿಗೆ ಕರೆದೊಯ್ಯುದು ಗುರುದೇವರ ದರ್ಶನವನ್ನು ಮಾಡಿಸುತ್ತಾರೆ. ಅವರ ಮಗ ಕರುಣಾಕರ ಶೆಟ್ಟಿ ಆವಾಗ ಮದರ್ ಇಂಡಿಯಾ ರಾತ್ರಿ ಶಾಲೆಯಲ್ಲಿ 6 ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ. ಅವರು 1960 ರಲ್ಲಿ ಗುರುದೇವರ ದರ್ಶನ ಪಡೆಯುವ ಭಾಗ್ಯವನ್ನು ತಂದೆಯ ಮೂಲಕ ಪಡೆಯುತ್ತಾರೆ.
ನಿತ್ಯಾನಂದರ ಭಕ್ತರಾಗಿದ್ದ ವಿಠಲ ಶೆಟ್ಟಿ ಅವರು 94 ವರ್ಷಗಳ ಕಾಲ ಬದುಕಿ ದೇವರಪಾದ ಸೇರಿದ್ದಾರೆ. ಈಗ ಅವರ ಮಗ ಹೆರೂರು ಪಡುಮನೆ ಕುರುಣಾಕರ ಶೆಟ್ಟಿ ಅವರಿಗೆ 74 ರ ಹರೆಯ. ಅವರು ನಿತ್ಯಾನಂದರ ಭಕ್ತರಾಗಿದ್ದಾರೆ. ತಮ್ಮ ತಂದೆಯಿಂದ ಕೇಳಿದ ಗುರುದೇವರ ಮಹಿಮೆ, ತಾನು ಪಡೆದಿರುವ ಗುರುದೇವರ ದರ್ಶನ ಅಮೃತಘಳಿಗೆಯ ಸವಿನೆನಪನ್ನು ನಮ್ಮಲ್ಲಿ ಅವರು ಹಂಚಿಕೊಂಡರು.

LEAVE A REPLY

Please enter your comment!
Please enter your name here