ಎರಡನೇ ಅವಧಿ ಬೇಡ : ರಾಜನ್

0
243
ವರದಿ: ಲೇಖಾ
ಆರ್ ಬಿ ಐ ಗವರ್ನರ್ ಆಗಿ ಎರಡನೇ ಅವಧಿಯಲ್ಲಿ ಮುಂದುವರೆಯಲು ನಿರಾಕರಿಸಿದ ರಘುರಾಮ್ ರಾಜನ್
ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಆಗಿ ಎರಡನೇ ಅವಧಿಗೆ ಮುಂದುವರಿಯಲು ನಿರಾಕರಿಸಿರುವ ರಾಘುರಾಮ್ ರಾಜನ್, ಸೆಪ್ಟೆಂಬರ್ 4ರಂದು ನಿವೃತ್ತಿ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ನಿವೃತ್ತಿ ಬಳಿಕ ಅಮೆರಿಕದಲ್ಲಿನ ತಮ್ಮ ನೆಚ್ಚಿನ ಬೋಧನಾ ವೃತ್ತಿಗೆ ಮರಳುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ರಾಜನ್‌ ಅವರು ತಾವು 2ನೇ ಅವಧಿಗೆ ಮುಂದುವರಿಯಲು ನಿರಾಕರಿಸಿರುವುದಕ್ಕೆ ಯಾವುದೇ ಕಾರಣ ನೀಡಿಲ್ಲ. ಆದರೆ ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಅವರು ಮಾಡಿದ ಹಲವು ಆರೋಪಗಳಿಂದ ರಾಜನ್‌ ನೊಂದಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಮುಂದುವರಿಯದೇ ಇರಲು ನಿರ್ಣಯಿಸಿದರು ಎಂದು ಹೇಳಲಾಗುತ್ತಿದೆ.
ಡಿ.ಸುಬ್ಬರಾವ್‌ ನಿವೃತ್ತರಾದ ನಂತರ 2013ರ ಸೆ.4ರಂದು ರಘುರಾಂ ರಾಜನ್‌ ಅವರು ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಆಗಿ ಅಧಿಕಾರ ವಹಿಸಿಕೊಂಡಿದ್ದರು. ವಿಶ್ವ ಶ್ರೇಷ್ಠ ಹಣಕಾಸು ತಜ್ಞರಲ್ಲಿ ಒಬ್ಬರಾಗಿರುವ ರಾಜನ್‌ ಅವರು ಐಎಂಎಫ್ನ ಮಾಜಿ ಮುಖ್ಯ ಹಣಕಾಸು ತಜ್ಞರೂ ಹೌದು. ಆರ್‌ಬಿಐ ಹುದ್ದೆ ವಹಿಸಿಕೊಳ್ಳುವ ಸಲುವಾಗಿ ಶಿಕಾಗೋ ಬೂತ್‌ ಸ್ಕೂಲ್‌ ಆಫ್ ಬಿಸಿನೆಸ್‌ನ ಹಣಕಾಸು ಪ್ರಾಧ್ಯಾಪಕ ಹುದ್ದೆಯಿಂದ ರಜೆ ಪಡೆದಿದ್ದರು.ಸರ್ಕಾರ ಹೇಳಿದರೂ ಬಡ್ಡಿ ದರ ಕಡಿತ ಮಾಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಹಾಗೂ ಮತ್ತಿತರರ ಆಕ್ರೋಶಕ್ಕೂ ಅವರು ಗುರಿಯಾಗಿದ್ದರು.
ರಘುರಾಮ್ ರಾಜನ್ ತಾವು ಎರಡನೇ ಅವಧಿಗೆ ಮುಂದುವರಿಯುತ್ತಿಲ್ಲ ಎಂದು ಹೇಳಿ, ತಮ್ಮ ಸಿಬ್ಬಂದಿಗೆ ಪತ್ರ ಬರೆದಿದ್ದಾರೆ. ಈ ವರ್ಷದ ಸೆಪ್ಟೆಂಬರ್‌ 4ಕ್ಕೆ ನನ್ನ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ಬಳಿಕ ನಾನು ಶೈಕ್ಷಣಿಕ ಕ್ಷೇತ್ರಕ್ಕೆ ಮರಳಬೇಕೆಂದಿದ್ದೇನೆ. ಈ ಕುರಿತು ಸರ್ಕಾರದೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.
2013ರ ಸೆ.23ರಂದು ನಾನು ಆರ್​ಬಿಐ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದಾಗ ದೇಶದ ಹಣದುಬ್ಬರ ಹೆಚ್ಚಾಗಿತ್ತು, ಆರ್ಥಿಕ ಪ್ರಗತಿ ಕುಂಠಿತವಾಗಿತ್ತು. ಆದರೆ ಈಗ ಹಣದುಬ್ಬರ ನಿಯಂತ್ರಿಸುವಲ್ಲಿ ನಾವು ಸಾಕಷ್ಟು ಸಫಲತೆಯನ್ನು ಕಂಡಿದ್ದೇವೆ. ಈ ಬಗ್ಗೆ ನನಗೆ ಹೆಮ್ಮೆ ಇದೆ. ಆರ್ಥಿಕ ಪ್ರಗತಿ ಕುಂಠಿತವಾದಾಗ ನಿಮ್ಮೊಡನೆ ರ್ಚಚಿಸಿ ಹೊಸ ಹಣಕಾಸು ಮಾರ್ಗದರ್ಶಿ ಸಿದ್ಧಪಡಿಸಿದೆ. ಬಳಿಕ, ಅನಿವಾಸಿಯರಿಂದ ವಿದೇಶಿ ಕರೆನ್ಸಿ ಠೇವಣಿ ಇಡುವಂತೆ ಮಾಡುವ ಮೂಲಕ ವಿದೇಶಿ ವಿನಿಮಯ ಹೆಚ್ಚುವಂತೆ ನೋಡಿಕೊಳ್ಳಲಾಯಿತು. ಹೊಸ ಬ್ಯಾಂಕುಗಳಿಗೆ ಪರವಾನಗಿ ನೀಡುವ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಲಾಯಿತು. ಭಾರತ್ ಬಿಲ್ ಪೇಮೆಂಟ್ ಸಿಸ್ಟಂನಂಥ ಹೊಸ ವ್ಯವಸ್ಥೆ ಜಾರಿಗೆ ತರುವ ಮೂಲಕ ಪಾವತಿ ವ್ಯಾಪ್ತಿಯನ್ನು ವಿಸ್ತರಿಸಲಾಯಿತು. ಇದರಿಂದ ಇಂದು ನಾನು ಹೆಮ್ಮೆಪಡುವಂತಾಗಿದೆ.
ಹಣದುಬ್ಬರ ತಡೆಯುವ ನಿಟ್ಟಿನಲ್ಲಿ ಮಾರ್ಗದರ್ಶಿ ಸಿದ್ಧಪಡಿಸಿ ಅದರಂತೆ ಕಾರ್ಯನಿರ್ವಹಿಸಿದೆವು. ನಮ್ಮ ಅವಧಿಯಲ್ಲಿ 150 ಮೂಲಾಂಶ ಬಡ್ಡಿ ದರ ಕಡಿತ ಮಾಡಿದೆವು. ಇದರಿಂದ ಉದ್ಯಮಕ್ಕೆ ಉತ್ತೇಜನ ದೊರೆಯಿತು. ಆರಂಭದ ಹಂತದಲ್ಲಿ ಉದ್ದೇಶಿಸಿದ್ದಕ್ಕಿಂತಲೂ ಹೆಚ್ಚನ್ನೇ ನಾವು ಸಾಧಿಸಿದೆವು. ನ್ಯಾಷನಲ್ ಪೇಮೆಂಟ್ ಕಾಪೋರೇಷನ್ ಆಫ್ ಇಂಡಿಯಾ, ಏಕೀಕೃತ ಪಾವತಿ ವ್ಯವಸ್ಥೆಗೆ ಮಾರ್ಗದರ್ಶಿ ಸಿದ್ಧಪಡಿಸಿದೆವು. ಇದು ಮೊಬೈಲ್ ಪಾವತಿ ವ್ಯವಸ್ಥೆ ಹೆಚ್ಚಿಸಲು ನೆರವಾಗಲಿದ್ದು, ದೇಶದಲ್ಲಿ ಕ್ರಾಂತಿಕಾರಕ ಬೆಳವಣಿಗೆಗೆ ಕಾರಣವಾಗಲಿದೆ. ಪರಮಾಣು ಇಂಧನ ಆಯೋಗದ ಮಾಜಿ ಅಧ್ಯಕ್ಷ, ಪದ್ಮ ವಿಭೂಷಣ ಡಾ. ಅನಿಲ್ ಕಾಕೋಡ್ಕರ್ ಮತ್ತಿತರ ಗೌರವಾನ್ವಿತ ನಾಗರಿಕರು ನಮಗೆ ಮಾರ್ಗದರ್ಶನ ನೀಡಿದರು.
2016ರ ಸೆ. 4ಕ್ಕೆ ಆರ್​ಬಿಐ ಗವರ್ನರ್ ಆಗಿ ನನ್ನ ಅವಧಿ ಮುಕ್ತಾಯವಾಗಲಿದೆ. ಬಳಿಕ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳಲಿದ್ದೇನೆ. ಆದಾಗ್ಯೂ, ನನ್ನ ದೇಶಕ್ಕೆ ಸೇವೆ ಸಲ್ಲಿಸಲು ನಾನು ಸದಾ ಸಿದ್ಧ. ಮುಂದಿನ ಗವರ್ನರ್ ಕೂಡ ನಿಮ್ಮ ಸಹಕಾರದೊಂದಿಗೆ ಸಮರ್ಥವಾಗಿ ಆರ್​ಬಿಐ ಮುನ್ನಡೆಸುವ ಬಗ್ಗೆ ವಿಶ್ವಾಸವಿದೆ ಎಂದು ಪತ್ರದಲ್ಲಿ ರಾಜನ್ ಉಲ್ಲೇಖಿಸಿದ್ದಾರೆ.

LEAVE A REPLY

Please enter your comment!
Please enter your name here