ಎನ್​ಎಸ್​ಜಿ ಸದಸ್ಯತ್ವಕ್ಕೆ ಇಂದು ಅಂತಿಮ ನಿರ್ಧಾರ

0
127

ವರದಿ:ಲೇಖಾ
ಸಿಯೋಲ್​ನಲ್ಲಿ ನಡೆಯುತ್ತಿರುವ ಎನ್​ಎಸ್​ಜಿ ಸಭೆಯಲ್ಲಿ ಪರಮಾಣು ಪೂರೈಕೆದಾರರ ಒಕ್ಕೂಟ (ಎನ್​ಎಸ್​ಜಿ)ಸೇರಲು ಭಾರತ ಶತಾಯಗತಾಯ ಯತ್ನಿಸಿದ್ದರೂ ಚೀನಾ ಬಿಕ್ಕತ್ಟು ಮುಂದುವರೆಸಿದೆ. ಭಾರತದ ಸದಸ್ಯತ್ವ ನೀಡಿಕೆ ಕುರಿತ ಚರ್ಚೆ ಇಂದಿಗೆ ಮುಂದೂಡಲಾಗಿದೆ.
 
nsg_india
 
ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ಎನ್‌ಎಸ್‌ಜಿ ಸಭೆಗೆ ಪೂರಕವಾಗಿ ಭಾರತದ ವಿಚಾರದಲ್ಲಿ ಗುರುವಾರ ರಾತ್ರಿ ವಿಶೇಷ ಸಭೆ ನಡೆದಿದ್ದು, ಚರ್ಚೆ ನಡೆದಿದೆ. ಈ ವೇಳೆ ಭಾರತದ ಸೇರ್ಪಡೆಯನ್ನು ಚೀನಾ ಸೇರಿದಂತೆ 5 ರಾಷ್ಟ್ರಗಳು ವಿರೋಧಿಸಿವೆ. ಆದಾಗ್ಯೂ ಚರ್ಚೆ ಮುಂದುವರಿದಿದ್ದು,ಇಂದಿಗೆ ಮುಂದೂಡಿಕೆಯಾಗಿದೆ.
 
 
 
ಎನ್​ಎಸ್​ಜಿಗೆ ಭಾರತ ಸೇರ್ಪಡೆ ವಿಚಾರವಾಗಿ ನಡೆದ ಸಭೆಯಲ್ಲಿ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಒಪ್ಪಂದ (ಎನ್​ಪಿಟಿಗೆ) ಸಹಿ ಹಾಕದ ಹೊರತು ಭಾರತಕ್ಕೆ ಸದಸ್ಯತ್ವ ನೀಡಬಾರದೆಂದು ಚೀನಾ ಪಟ್ಟು ಹಿಡಿಯಿತು. ಇದಕ್ಕೆ ಆಸ್ಟ್ರಿಯಾ, ಐರ್ಲೆಂಡ್, ಬ್ರೆಜಿಲ್, ಟರ್ಕಿ ಹಾಗೂ ನ್ಯೂಜಿಲೆಂಡ್ ದನಿಗೂಡಿಸಿದವು.
 
 
 
ಈ ವಿಚಾರವಾಗಿ ರ್ಚಚಿಸಲು ಸಂಜೆ ವಿಶೇಷ ಅಧಿವೇಶನ ನಡೆಯಿತು. ಅಜೆಂಡಾದಲ್ಲಿ ಈ ವಿಷಯ ಇರಲಿಲ್ಲವಾದರೂ ಜಪಾನ್ ಸೇರಿ ಹಲವು ರಾಷ್ಟ್ರಗಳು ಭಾರತಕ್ಕೆ ಎನ್​ಎಸ್​ಜಿ ಸದಸ್ಯತ್ವ ನೀಡುವ ಬಗ್ಗೆ ಪ್ರಸ್ತಾಪಿಸಿದವು.
 
 
 
ವಿಶೇಷ ಅಧಿವೇಶನದಲ್ಲಿ ಭಾರತಕ್ಕೆ ಸದಸ್ಯತ್ವ ನೀಡುವ ವಿಚಾರವಾಗಿ ಸುದೀರ್ಘ ಚರ್ಚೆ ನಡೆಯಿತಾದರೂ ಈ ಕುರಿತು ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಇಂದು ಮುಂದುವರಿಯಲಿರುವ ಸಭೆಯಲ್ಲಿ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ. ಎನ್​ಪಿಟಿ ವಿಚಾರವಾಗಿ 6 ರಾಷ್ಟ್ರಗಳ ಮನವೊಲಿಸಲು ಭಾರತಕ್ಕೆ ಇಂದಿನ ಸಭೆಯಲ್ಲೂ ಅವಕಾಶ ಇದೆ.
 
 
 
ಭಾರತದ ವಿದೇಶಾಂಗ ಸಚಿವಾಲಯ ಕಾರ್ಯದರ್ಶಿ ಎಸ್.ಜೈಶಂಕರ್ ಸೇರಿ ಹಲವು ರಾಜತಾಂತ್ರಿಕ ಅಧಿಕಾರಿಗಳು ಸಿಯೋಲ್​ನಲ್ಲಿದ್ದು, ಭಾರತವನ್ನು ಬೆಂಬಲಿಸುವಂತೆ ಎನ್​ಎಸ್​ಜಿ ಸದಸ್ಯ ರಾಷ್ಟ್ರಗಳ ಮನವೊಲಿಕೆಗೆ ಯತ್ನಿಸುತ್ತಿದ್ದಾರೆ. ಸಭೆಯಲ್ಲಿ 48 ಸದಸ್ಯ ರಾಷ್ಟ್ರಗಳು, 300ಕ್ಕೂ ಹೆಚ್ಚು ಪ್ರತಿನಿಧಿ ಮತ್ತು ಅಧಿಕಾರಿಗಳು ಭಾಗಿಯಾಗಿದ್ದಾರೆ.

LEAVE A REPLY

Please enter your comment!
Please enter your name here