ಎತ್ತಿನಹೊಳೆ ಯೋಜನೆಗೆ ಮೂಡಬಿದಿರೆ ಶ್ರೀ ವಿರೋಧ

0
475

ವಾರ್ತೆ ವಿಶೇಷ ಹರೀಶ್ ಕೆ.ಆದೂರು.
“ ರಾಜ್ಯಾದ್ಯಂತ ಜಲಕ್ರಾಂತಿಯ `ಕೆರೆ ಅಭಿವೃದ್ಧಿ ಯೋಜನೆ’ ಜಾರಿಗೊಳ್ಳಲಿ ”
ಜೀವನದೀ ನೇತ್ರಾವತಿಯನ್ನು ತಿರುಗಿಸುವ `ಎತ್ತಿನಹೊಳೆ’ ಯೋಜನೆಯನ್ನು ಸರ್ಕಾರ ಈ ಕ್ಷಣದಿಂದ ಕೈಬಿಡಲಿ; ಬದಲಾಗಿ `ಕೆರೆ ಅಭಿವೃದ್ಧಿ ಯೋಜನೆ’ ಯನ್ನು ರಾಜ್ಯದಾದ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ನಡೆಸಲಿ. ಕರಾವಳೀ ಭಾಗದ ನೀರ ಬೈಲುಗದ್ದೆಗಳಲ್ಲಿ ಬೃಹದಾಕಾರದ ಕೆರೆಗಳ ನಿರ್ಮಾಣಕ್ಕೆ ಸರಕಾರ ಸಂಘ ಸಂಸ್ಥೆಗಳು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಬೇಕಾಗಿದೆ. ಹೀಗಾದಾಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ಕರಾವಳಿಯಾದ್ಯಂತ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಲಭ್ಯವಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಮೂಡಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮಿಗಳು ತಮ್ಮ ಮನದಾಳದ ಮಾತುಗಳನ್ನು `ವಾರ್ತೆ.ಕಾಂ’ನೊಂದಿಗೆ ಹಂಚಿಕೊಂಡರು.
 
 
ಕರಾವಳೀ ಭಾಗದ ಪ್ರತಿಯೊಂದು ಗ್ರಾಮಗಳಲ್ಲೂ ಬೈಲು ಹಾಗೂ ನೀರ ಬೈಲುಗಳೆಂಬ ಎರಡು ವಿಧಗಳ ಬೈಲುಗಳನ್ನು ಗುರುತಿಸಬಹುದು. ನೀರ ಬೈಲುಗಳಲ್ಲಿ 120 120 ಅಡಿ ವಿಸ್ತೀರ್ಣದ ಹತ್ತು ಅಡಿ ಆಳದ ಕೆರೆಗಳನ್ನು ನಿರ್ಮಾಣ ಮಾಡಬೇಕಾಗಿದೆ. ಕೆರೆಯ ಸನಿಹದಲ್ಲೇ ಲಕ್ಷ ಲೀಟರ್ ಸಾಮಥ್ರ್ಯದ ನೀರು ಸಂಗ್ರಹಣಾ ಟ್ಯಾಂಕ್ ನಿರ್ಮಾಣ ಮಾಡಿ ಗ್ರಾಮಗಳಿಗೆ ಶುದ್ಧಕುಡಿಯುವ ನೀರಿನ ಪೂರೈಕೆಗೆ ವ್ಯವಸ್ಥೆ ಮಾಡಬಹುದಾಗಿದೆ. ಮಳೆ ನೀರು, ನೀರ ಹರಿವಿನ ದಿಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ಕೆರೆಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿ ಕೆರೆಯ ಪರಿಸರದಲ್ಲಿ ನೀರು ಇಂಗಲು ಸಹಕಾರಿಯಾಗುವ ಕೇಪುಳ, ನೇರಳೆ, ಕುಂಟಾಲ ಮೊದಲಾದ ಸಸ್ಯ ಪ್ರಬೇಧಗಳನ್ನು ಬೆಳೆಸಿದ್ದೇ ಆದಲ್ಲಿ ಪರಿಸರಕ್ಕೆ ಸಹ್ಯವಾದಂತಹ ಕಾರ್ಯ ಮಾಡಿದಂತಾಗುತ್ತದೆ ಎಂಬ ಸಲಹೆ ನೀಡಿದ್ದಾರೆ.
 
 
ಕೆರೆ ಅಭಿವೃದ್ಧಿಯ ಆಂದೋಲನವಾಗಲಿ
ಕೆರೆ ಅಭಿವೃದ್ಧಿಯ ಆಂದೋಲನ ರಾಜ್ಯದಲ್ಲಿ ಅವಶ್ಯವಾಗಿ ನಡೆಯಬೇಕಾಗಿದೆ. ರಾಜ್ಯದಾದ್ಯಂತ ಇರುವ ಮಠದ ಪೀಠಾಧಿಪತಿಗಳು ಒಟ್ಟಾಗಿ ಆಂದೋಲನವನ್ನು ಬಲಪಡಿಸಬೇಕಾಗಿದೆ. ವಿವಿಧ ಸಂಘ-ಸಂಸ್ಥೆಗಳು, ಎನ್.ಜಿ.ಒ ಸಂಘಟನೆಗಳು, ರಾಜಕೀಯ ಪಕ್ಷಗಳು, ಸಾಮಾಜಿಕ, ಧಾರ್ಮಿಕ ಮುಖಂಡರು ಒಟ್ಟಾಗಿ ಈ ಕಾರ್ಯವನ್ನು ಮಾಡಬೇಕಾಗಿದೆ. ಈಗಾಗಲೇ ಮೂಡಬಿದಿರೆ ಜೈನಮಠ 2001ರಲ್ಲಿಯೇ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಟೊಂಕ ಕಟ್ಟಿನಿಂತಿದೆ. ಎಲ್ಲರ ಸಹಭಾಗಿತ್ವದೊಂದಿಗೆ ಈ ಕಾರ್ಯ ಆಗಬೇಕಾಗಿದೆ ಎಂದವರು ಆಶಿಸಿದರು.
 
 
 
ನೀರಿಗಾಗಿ ಆಂತರಿಕ ಕಲಹಗಳು ಆಗುವುದು ಬೇಡ. ನೀರಿನ ಬರವನ್ನು ನೀಗಿಸುವ ನಿಟ್ಟಿನಲ್ಲಿ ಜಲಕೊಯ್ಲು ಯೋಜನೆ ಪರಿಣಾಮಕಾರಿಯಾಗಿ ರಾಜ್ಯದಾದ್ಯಂತ ಜಾರಿಗೊಳ್ಳಲಿ. ನೀರಿನ ಹಿತ ಮಿತ ಬಳಕೆಯ ಬಗ್ಗೆ ಆಂದೋಲನವಾಗಲಿ. ರಾಜ್ಯದಾದ್ಯಂತ ಇರುವ ಸರೋವರ, ಕೆರೆ, ಬಾವಿಗಳ ಹೂಳೆತ್ತುವ ಕಾರ್ಯ ಜರೂರಾಗಿ ನಡೆಯಲಿ. ಇದಾದದ್ದೇ ಆದಲ್ಲಿ ಸಮೃದ್ಧ ನೀರು ರಾಜ್ಯದ ಜನತೆಗೆ ಲಭಿಸುವುದರಲ್ಲಿ ಸಂದೇಹವೇ ಇಲ್ಲ. ಅನವಶ್ಯ `ಜಲವಿವಾದ’ ಅಂತ್ಯವಾಗುವುದರಲ್ಲಿ ಸಂದೇಹವಿಲ್ಲ ಎಂದರು.
 
 
 
ದೇಗುದಂತೆ ಕೆರೆಗಳ ಜೀರ್ಣೋದ್ಧಾರವಾಗಲಿ
ಗ್ರಾಮ ಗ್ರಾಮಗಳಲ್ಲಿರುವ ದೇವಸ್ಥಾನದ ಜೀರ್ಣೋದ್ಧಾರದಂತೆ ಕೆರೆಗಳನ್ನೂ ಜೀರ್ಣೋದ್ಧಾರ ಮಾಡುವ ಕಾರ್ಯ ಸಂಘಟಿತ ಪ್ರಯತ್ನದಿಂದ ನಡೆಯಬೇಕಾಗಿದೆ. ಕೆರೆಯಲ್ಲಿ ತುಂಬಿದ ಹೂಳನ್ನು ತೆಗೆದು ಶುದ್ಧಗೊಳಿಸಿದ್ದೇ ಆದಲ್ಲಿ ಜಲಕ್ಷಾಮದ ಸ್ಥಿತಿಯೇ ಇರದು. ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ಅತ್ಯಧಿಕ ಕೆರೆ/ ಸರೋವರಳಿವೆ. ಇವುಗಳ ಪುನಶ್ಚೇತನ ಕಾರ್ಯ ಶೀಘ್ರ ನಡೆಯಬೇಕಾಗಿದೆ.
 
 
 
ಜೈನಮಠದಿಂದ `ನೀರ ಕ್ರಾಂತಿ
ಮೂಡಬಿದಿರೆ ಜೈನಮಠದಿಂದ ಜಲಕ್ರಾಂತಿ ಕಳೆದೊಂದು ದಶಕದಿಂದ ನಡೆಯುತ್ತಿದೆ. 18ಕೆರೆಗಳ ಮೂಲಕ ಗಮನ ಸೆಳೆದ ಮೂಡಬಿದಿರೆಯಲ್ಲಿ ಬತ್ತಿಹೋದ ಕೆರೆಗಳಿಗೆ ಮತ್ತೆ ಜೀವಸೆಲೆ ತುಂಬುವ ಕಾರ್ಯವನ್ನು ಜೈನ ಮಠ ಸದ್ದಿಲ್ಲದೆ ಮಾಡುತ್ತಿದೆ. ಕೆರೆ ಒತ್ತುವರಿಯನ್ನು ತೆರವುಗೊಳಿಸಿ ಇದ್ದ ಕೆರೆಗಳನ್ನು ಉಳಿಸುವುದು ಹಾಗೂ ನೀರ ಒಸರು ಉಕ್ಕುವಂತೆ ಮಾಡುವ ನಿಟ್ಟಿನಲ್ಲಿ ದೊಡ್ಡ ಸಾಧನೆಯನ್ನು ಮಾಡಿದೆ. 2001ರಲ್ಲಿ ಪ್ರಾರಂಭವಾದ ಈ ಕಾರ್ಯಕ್ಕೆ ನವದೆಹಲಿಯ ಇನ್ ಟೆಕ್ ಪರಂಪರೆ ಉಳಿಸಿ ಪ್ರಾಧಿಕಾರದ ನೆರವಿನೊಂದಿಗೆ ಕಾರ್ಯಗತಗೊಳಿಸಲಾರಂಭಿಸಿದ್ದಾರೆ.
 
 
ಮೂಡಬಿದಿರೆಯ ಭೆಟ್ಕೇರಿಯಲ್ಲಿ ಎರಡು ಕೆರೆಗಳನ್ನು ಪುರಾತನ ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡಿ ಅಭಿವೃದ್ಧಿ ಪಡಿಸಲಾಯಿತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೂಡಬಿದಿರೆ ಕೆರೆ ಬಸದಿಯ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಹಸಿರು ನಿಶಾನೆ ದೊರಕಿದ್ದು ಪ್ರಸ್ತುತ ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ಸ್ಥಳೀಯ ಶಾಸಕ ಕೆ.ಅಭಯಚಂದ್ರ ಜೈನ್ ಅವರ ಸಹಕಾರದೊಂದಿಗೆ ಇದೀಗ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಜಲಮೂಲಕ್ಕೆ ಒತ್ತು ಕೊಟ್ಟು ಇದಲ್ಲದೆ ಮೂಡಬಿದಿರೆಯ ಹೊರಭಾಗಗಳಲ್ಲೂ ಕೆರೆ ಅಭಿವೃದ್ಧಿಯ ಕಾರ್ಯವನ್ನು ಜೈನಮಠ ನಡೆಸುತ್ತಿದೆ. ನೀರ್ಕೆರೆ ಗ್ರಾಮದಲ್ಲಿ 1, ಬಜಗೋಳಿಯಲ್ಲಿ 2 ಕೆರೆಗಳ ಕಾರ್ಯ ನಿರ್ಮಾಣವಾಗುತ್ತಿದೆ. 121 ಗುಣಿಸು 121 ವಿಸ್ತೀರ್ಣ, 15 ಅಡಿ ಆಳ ಇರುವ ಅತ್ಯಂತ ಮಾದರೀ ರೀತಿಯ ಕೆರೆಯೊಂದನ್ನು ಜೈನಮಠ ಅಭಿವೃದ್ಧಿಗೊಳಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ 13ರಿಂದ ಅರ್ಧ ಕಿಲೋಮೀಟರ್ ಒಳಭಾಗದಲ್ಲಿ ಈ ಕೆರೆ ಅಭಿವೃದ್ಧಿಯಾಗುತ್ತಿದೆ. ಕಾನ – ಅಂಬೂರಿ ರಸ್ತೆಯಲ್ಲಿ ಒಂದು ಕೋಟಿ ರುಪಾಯಿ ವೆಚ್ಚದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಕೆರೆ ಅಭಿವೃದ್ಧಿ ನಡೆಯುತ್ತಿದೆ.
 

ರೋಟರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಭಿವೃದ್ಧಿಗೊಳ್ಳುತ್ತಿರುವ ಮೂಡಬಿದಿರೆಯ ಕೆರೆ
ರೋಟರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಭಿವೃದ್ಧಿಗೊಳ್ಳುತ್ತಿರುವ ಮೂಡಬಿದಿರೆಯ ಕೆರೆ

 
ಕೆರೆ ಅಭಿವೃದ್ಧಿಗೆ ರೋಟರೀ ಕ್ಲಬ್ ಸಾಥ್
ಪಾಳು ಬಿದ್ದ ಕೆರೆಗಳನ್ನು ಅಭಿವೃದ್ಧಿ ಗೊಳಿಸುವುದು ಹಾಗೂ ಅಂತರ್ಜಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೋಟೋಲೇಕ್ಸ್ ಯೋಜನೆಯ ಮೂಲಕ ರೋಟರಿ ಚಾರಿಟೇಬಲ್ ಟ್ರಸ್ಟ್ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದೆ. ಮೂಡಬಿದಿರೆ ಜೈನ ಮಠಕ್ಕೆ ಸಂಬಂಧಪಟ್ಟ ಪಾಶ್ರ್ವನಾಥ ಸ್ವಾಮಿಯ ತೀರ್ಥದ ಕೆರೆಯಾದ ಪಟ್ಟದ ಅಭಿಷೇಕದ ಕೆರೆಯ ಅಭಿವೃದ್ಧಿಗೆ ಮುಂದಡಿಯಿಟ್ಟಿದೆ. ಮೊಹಲ್ಲಾ ಪರಿಸರದಲ್ಲಿ ಈ ಕೆರೆಯಿದೆ.

LEAVE A REPLY

Please enter your comment!
Please enter your name here