ಎಡಪಕ್ಷಗಳ ಪ್ರತಿಭಟನೆ

0
310

 
ಮಂಗಳೂರು ಪ್ರತಿನಿಧಿ ವರದಿ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರ ಬಂದು 3 ವರ್ಷಗಳಾಗಿವೆ. ಅದಕ್ಕೂ ಹಿಂದಿನ ಬಿಜೆಪಿ ಸರಕಾರದ ಭ್ರಷ್ಟಾಚಾರಕ್ಕೆ ಬೇಸತ್ತು ಜನ ಕಾಂಗ್ರೆಸ್ಸನ್ನು ಆಡಳಿತಕ್ಕೂ ತಂದರೂ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನರಿಗೆ ಕನಿಷ್ಠ ಸವಲತ್ತು ನೀಡುವಲ್ಲಿಯೂ ವಿಫಲವಾಗಿದೆ. ಉತ್ತಮ ದಿನಗಳ ಹಾಗೂ ಭ್ರಷ್ಟಾಚಾರ ರಹಿತವಾದ ಆಡಳಿತದ ಭರವಸೆಯೊಂದಿಗೆ 2 ವರ್ಷಗಳ ಹಿಂದೆ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಆಡಳಿತಕ್ಕೆ ಬಂದಿರುವ ಬಿಜೆಪಿ ಸರಕಾರವು ರೈತ ಹಾಗೂ ಕಾರ್ಮಿಕ ವಿರೋಧಿಯಾಗಿದೆಯಲ್ಲದೆ ಬಂಡವಾಳಶಾಹಿಗಳ ಪರವಾಗಿ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಇದನ್ನು ವಿರೋಧಿಸಿ ರಾಜ್ಯದಲ್ಲಿ 6 ಎಡಪಕ್ಷಗಳು ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಹಾಕಿಕೊಂಡಿರುವ ಬೃಹತ್ ಪ್ರತಿಭಟನಾ ಸಭೆಗೆ ಪೂರ್ವಭಾವಿಯಾಗಿ, ದ.ಕ. ಜಿಲ್ಲೆಯ ಎಡಪಕ್ಷಗಳಾದ ಸಿಪಿಐ ಮತ್ತು ಸಿಪಿಐ(ಎಂ) ಜಂಟಿಯಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿತು. ಸಿಪಿಐ(ಎಂ) ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
 
 
 
ಸಿಪಿಐ ದ.ಕ. ಜಿಲ್ಲಾ ಮಂಡಳಿ ಕಾರ್ಯದರ್ಶಿ ವಿ. ಕುಕ್ಯಾನ್ ಮಾತನಾಡಿ, ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ವೇಳೆಗೆ ಕಪ್ಪು ಹಣ ವಿದೇಶದಿಂದ ತರುವುದಾಗಿ ಹೇಳಿದ ಬಿಜೆಪಿ ಪಕ್ಷವು ಅದನ್ನು ನೆರವೇರಿಸುವಲ್ಲಿ ವಿಫಲವಾಗಿದೆ. ಅಲ್ಲದೆ ಬ್ಯಾಂಕುಗಳಿಗೆ ಕಾರ್ಪೊರೇಟ್ ಉದ್ಯಮಿಗಳು 3 ಲಕ್ಷ ಕೋಟಿ ರೂಪಾಯಿ ಬಾಕಿದಾರರಾಗಿದ್ದು, ಅವು ಹಿಂದೆ ಪಡೆಯಲಾಗದ ಮೊಬಲಗು ಎಂದು ಬ್ಯಾಂಕುಗಳು ಘೋಷಿಸಿದೆ. ಸರಕಾರಕ್ಕೆ 9000 ಕೋಟಿ ರೂಪಾಯಿ ತೆರಿಗೆ ಬಾಕಿದಾರನಾದ ವಿಜಯ ಮಲ್ಯ ದೇಶಬಿಟ್ಟು ಪರಾರಿಯಾಗುವುದಕ್ಕೆ ಕೇಂದ್ರ ಸರಕಾರ ಎಡೆಮಾಡಿಕೊಟ್ಟಿದೆ. ಆದರೆ ಕೇವಲ ಸಾವಿರ ರೂಪಾಯಿಗಳಲ್ಲಿ ಸಾಲ ಬಾಕಿದಾರರಾದ ರೈತರನ್ನು ಬಂಧಿಸಲಾಗುತ್ತಿದೆ ಎಂಬ ಕೇಂದ್ರ ಸರಕಾರವನ್ನು ಟೀಕಿಸಿದರು.
 
ಕೇಂದ್ರ ಸರಕಾರದ ಗೋದಾಮಗಳಲ್ಲಿ 43,000 ಟನ್ ಆಹಾರ ದಾಸ್ತಾನು ಹೆಚ್ಚಿಗೆ ಇದ್ದರೂ ಸರಕಾರ ಆಹಾರ ಹಂಚಿಕೆ ಮಾಡುತ್ತಿಲ್ಲ. ಆಹಾರ ಭದ್ರತಾ ಕಾನೂನು ಜಾರಿಗೊಳಿಸಲು ಕೇಂದ್ರ ಸರ್ಕಾರ ಆಸಕ್ತವಾಗಿಲ್ಲ. ಅಲ್ಲದೆ ಗ್ರಾಮೀಣ ಬಡತನ ನಿವಾರಣೆಗೆ ಸಂಬಂಧಿಸಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾರ್ಯಗತಗೊಳಿಸುವಲ್ಲಿ ಕಾಳಜಿ ತೋರಿಸುತ್ತಿಲ್ಲ. ಮೋದಿಯವರು ತಮ್ಮ ಮಾತಿನ ಚಮತ್ಕಾರ, ನಟನೆಗಳಿಂದ ಜನರನ್ನು ಮರುಳುಗೊಳಿಸಿದ್ದಾರೆ. ಜನರು ಮಾತಿಗೆ ಮರುಳಾಗದೆ, ಅವರ ಸರಕಾರದ ಜನವಿರೋಧಿ ನೀತಿಗಳನ್ನು ಬಯಲುಗೊಳಿಸಲು ವಿ. ಕುಕ್ಯಾನ್ ಕರೆ ನೀಡಿದರು.
ಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ಕವಿಗಳ ಮಾತಿನಂತೆ ಇವತ್ತು ಸ್ವಾತಂತ್ರ್ಯ ಬಂದುದ ಜನರಿಗಲ್ಲ, ಟಾಟಾ ಬಿರ್ಲಾರಿಗೆ; ಅದಾನಿ ಅಂಬಾನಿಗಳಿಗೆ, ಬಿಜೆಪಿ ಕಾಂಗ್ರೆಸ್ ಪಕ್ಷಗಳ ನಾಯಕರು ದ.ಕ. ಜಿಲ್ಲೆಯಲ್ಲಿ ಜನರ ಸಮಸ್ಯೆಗಳ ಬಗ್ಗೆ ಮಾತನಾಡದೆ, ಜನರನ್ನು ದಿಕ್ಕು ತಪ್ಪಿಸಿ ಎತ್ತಿನಹೊಳೆ ಯೋಜನೆ ಬಗ್ಗೆ ಮಾತನಾಡುತ್ತಾರೆ. ಜನರ ಪ್ರಮುಖ ಸಮಸ್ಯೆಗಳಾದ ಜಿಲ್ಲೆಯ ಜನರಿಗೆ ನೀರು, ಬೀಡಿ ಉದ್ಯಮದ ರಕ್ಷಣೆ ಬಗ್ಗೆ ಇವರುಗಳು ಮಾತನಾಡುತ್ತಿಲ್ಲ. ಸಂಸದರುಗಳು ಈ ಬಗ್ಗೆ ಸಂಸತ್ತಿನಲ್ಲೂ ದನಿ ಎತ್ತುತ್ತಿಲ್ಲ ಎಂದು ವಸಂತ ಆಚಾರಿ ಖಂಡಿಸಿದರು.
 
ದೇಶಕ್ಕೆ ‘ಅಚ್ಛೆ ದಿನ್’ ಬರುವುದೆಂಬ ಭರವಸೆ ನೀಡಿದ ಮೋದಿಯವರು ಬ್ಯಾಂಕಿಂಗ್, ವಿಮೆ, ರೈಲ್ವೇ, ರಕ್ಷಣೆ ಎಲ್ಲ ರಂಗಗಳಲ್ಲಿಯೂ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಉದ್ಯೋಗವಕಾಶಗಳು ಕಡಿಮೆಯಾಗಿದೆ. ಉದ್ಯಮಿಗಳ ಪರವಾಗಿ ಕಾರ್ಮಿಕ ಕಾನೂನುಗಳು ನೀಡಿದ ರಕ್ಷಣೆಯನ್ನು ಸಡಿಲಗೊಳಿಸಲಾಗುತ್ತಿದೆ. ಕನಿಷ್ಟ ಕೂಲಿ ಕಾರ್ಮಿಕರಿಗೆ ರೂ. 18,000/- ನೀಡಲು ಸರಕಾರಗಳು ತಯಾರಿಲ್ಲ. ಕರ್ನಾಟಕ ರಾಜ್ಯ ಸರ್ಕಾರ ಕಾರ್ಮಿಕರ ತುಟ್ಟಿಭತ್ತೆ ಪಾಯಿಂಟ್ನ್ನು ಕಡಿಮೆಗೆ ನಿಗದಿಗೊಳಿಸಿದ್ದಾರೆ; ಕಾರ್ಮಿಕ ಕಲ್ಯಾಣ ನಿಧಿಯನ್ನು ರಾಜ್ಯದಲ್ಲಿ ದುರ್ಬಳಕೆ ಮಾಡಲಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ನಿವೇಶನ ರಹಿತರು ಹಾಗೂ ಆದಿವಾಸಿಗಳು ನಿವೇಶನದ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ಸರಕಾರ ಈ ಬಗ್ಗೆ ನೀತಿಯನ್ನು ರೂಪಿಸಿಲ್ಲ. ಕಾರ್ಮಿಕರ ದಿನದ ದುಡಿತದ ಅವಧಿಯನ್ನು ಹೆಚ್ಚಿಸಲಾಗುತ್ತಿದೆ. ಇನ್ನೊಂದೆಡೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಂದಿನಿಂದ ಕರಾವಳಿಯಲ್ಲಿ ಕೋಮುವಾದಿಗಳ ದಬ್ಬಾಳಿಕೆ ಹೆಚ್ಚಾಗಿದೆ; ಕಾಂಗ್ರೆಸ್ ಸರಕಾರ ದಾಂದಲೆಕೋರರನ್ನು ಬಂಧಿಸುವ ಬದಲು, ಇನ್ನೊಂದು ಮತದ ದಾಂದಲೆಕೋರರನ್ನು ಅನಾವಶ್ಯಕವಾಗಿ ಬಂಧನದಿಂದ ಬಿಡುಗಡೆಗೊಳಿಸಲಾಗಿದೆ. ಇದರಿಂದ ಇವರೂ ಕೋಮುವಾದವನ್ನು ನಿಜವಾಗಿ ಎದುರಿಸಲು ನಿಶ್ಶಕ್ತರು ಎಂದು ಸಾಬೀತಾಗಿದೆ. ರಾಜ್ಯದಲ್ಲಿರುವ ಬರದ ಬಗ್ಗೆ ಚರ್ಚಿಸಿ ಕಾರ್ಯಕ್ರಮ ರೂಪಿಸುವ ಬದಲು, ದಲಿತ ಮುಖ್ಯಮಂತ್ರಿ ಚರ್ಚೆಯ ವಿಷಯವಾಗಿದೆ.
2014, 2015ರಲ್ಲಿ ಕೇಂದ್ರದ ಆರ್ಥಿಕ ನೀತಿಗಳ ವಿರುದ್ಧ ಕಾರ್ಮಿಕರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಿದರು. ಇದನ್ನು ಎಚ್ಚರಿಕೆ ಎಂದು ಭಾವಿಸಿ ಕೇಂದ್ರ ಸರ್ಕಾರ ತನ್ನ ಜನವಿರೋಧಿ ನೀತಿ ಕೈಬಿಡಬೇಕೆಂದು ವಸಂತ ಆಚಾರಿ ಎಚ್ಚರಿಕೆ ನೀಡಿದರು.
ಸಿಪಿಐ ಜಿಲ್ಲಾ ಮಂಡಳಿಯ ಕರುಣಾಕರ ವಂದಿಸಿದರು. ಸಿಪಿಐ(ಎಂ) ಮುಖಂಡರಾದ ಯಾದವ ಶೆಟ್ಟಿ, ಬಿ.ಎಂ. ಭಟ್, ಸುನೀಲ್ ಕುಮಾರ್ ಬಜಾಲ್, ಕೃಷ್ಣಪ್ಪ ಕೊಂಚಾಡಿ, ಸಿಪಿಐ ಮುಖಂಡರಾದ ಸೀತಾರಾಮ್ ಬೇರಿಂಜೆ, ಬಿ. ಶೇಖರ್, ಶಿವಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಾ ಸಭೆಗೂ ಮೊದಲು ಮಂಗಳೂರು ಪುರಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಎಡಪಕ್ಷಗಳ ಕಾರ್ಯಕರ್ತರು ಮೆರವಣಿಗೆ ನಡೆಸಿದರು.

LEAVE A REPLY

Please enter your comment!
Please enter your name here