ಎಂತಹ ಆಕ್ರಮಣಗಳು ಎದುರಾದರೂ ಗೋಸಂರಕ್ಷಣೆ ಮಾಡಿಯೇ ಸಿದ್ದ

0
388

ನಮ್ಮ ಪ್ರತಿನಿಧಿ ವರದಿ
ಗೋಸಂರಕ್ಷಣೆಯ ದೀಕ್ಷೆ ತೆಗೆದುಕೊಂಡರೆ, ಆಕ್ರಮಣಗಳೇ ಬದುಕಾಗುತ್ತದೆ. ಇದು ಅನುಭವದ ಮಾತಾಗಿದ್ದು, ಎಂತಹ ಆಕ್ರಮಣಗಳು ಎದುರಾದರೂ ಗೋಸಂರಕ್ಷಣೆ ಮಾಡಿಯೇ ಸಿದ್ದ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
 
mata_sagar
ಸಾಗರದ ಗಾಂಧಿ ಮೈದಾನದಲ್ಲಿ ನಡೆದ ಮಂಗಲ ಗೋಯಾತ್ರೆಯ ಸುರಭಿ ಸಂತ ಸಮಾಗಮದಲ್ಲಿ ಸಾನ್ನಿಧ್ಯವಹಿಸಿ ಗೋ ಸಂದೇಶ ನೀಡಿದ ಶ್ರೀಗಳು, ನಾವು ಜನಿಸಿದ್ದು ಸಾಗರದಲ್ಲೇ ಆದ್ದರಿಂದ, ಸಾಗರದ ಋಣತೀರಿಸ ಬೇಕಾಗಿದೆ. ಗೋಹತ್ಯೆಯನ್ನು ಮುಕ್ತವಾಗಿಸುವುದೇ ಸಾಗರದ ಋಣತೀರಿಸುವುದಾಗಿದೆ ಎಂದು ಭಾವಪೂರ್ಣವಾಗಿ ಹೇಳಿದ ಪೂಜ್ಯ ಶ್ರೀಗಳು, ಸಾಗರದಲ್ಲಿ ಇಂದು ಜನಸಾಗರದ ದರ್ಶನವಾಗುತ್ತಿದ್ದು, ಗೋಪ್ರೇಮಿಗಳು ಬೃಹತ್ ಸಂಖ್ಯೆಯಲ್ಲಿ ಸೇರಿರುವುದು ಶುಭ ಸೂಚನೆಯಾಗಿದೆ ಎಂದರು.
 
ಮಣ್ಣಿಗೂ ಗೋವಿಗೂ ಅವಿನಾಭಾವ ಸಂಬಂಧವಿದ್ದು, ಗೋಮೂತ್ರ – ಗೋಮಯಗಳಿಂದ ಮಾತ್ರ ಭೂಮಿ ಫಲವತ್ತಾಗುತ್ತದೆ. ಹಾಗೆಯೇ ಗೋವಿಗೂ ಸಾಗರಕ್ಕೂ ಸಂಬಂಧವಿದ್ದು, ಕಾಮಧೇನು ಆವಿರ್ಭವಿಸಿದ್ದು ಕ್ಷೀರಸಾಗರದಲ್ಲಿ. ಈ ಸಾಗರವೂ ಕ್ಷೀರಸಾಗರವಾಗಲಿ ಎಂದು ಹಾರೈಸಿದರು.
 
 
ಇಂದು ಭಾರತದ ಗಡಿರಕ್ಷಣಾ ಪಡೆ ಸ್ಥಾಪನೆಯಾದ ದಿನವಾಗಿದ್ದು, ದೇಶ ರಕ್ಷಿಸಲು ಹೇಗೇ ಸೈನ್ಯ ಅನಿವಾರ್ಯವೋ, ಅದಕ್ಕಿಂತ ಹೆಚ್ಚಾಗಿ ಗೋರಕ್ಷಣಾ ಪಡೆಯ ಅವಶ್ಯಕತೆ ಇದೆ.ಗೋವಿನ ರಕ್ಷಣೆಗೆ ನಾವಂತು ತೊಡಗಿಕೊಂಡಿದ್ದು, ಈ ಸಂಗ್ರಾಮದಲ್ಲಿ ಭಾಗಿಯಾಗಲು ಮನಸ್ಸಿರುವವರೆಲ್ಲ ಈ ಪುಣ್ಯಕಾರ್ಯದಲ್ಲಿ ಭಾಗಿಗಳಾಗಿ, ಇದು ಗೋವಿನ ಸ್ವಾತಂತ್ರ್ಯ ಸಂಗ್ರಾಮವಾಗಿದ್ದು, ಗೋರಕ್ಷಣೆಯೇ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
 
 
ಮೂಡಬಿದರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕಾಚಾರ್ಯ ಸ್ವಾಮಿಜಿ ಮಾತನಾಡಿ, ಒಳ್ಳೆಯ ಕೆಲಸ ಮಾಡುವವರಿಗೆ ವಿಘ್ನಗಳು ಸಾಮಾನ್ಯ, ಗೋರಕ್ಷಣೆಯಲ್ಲಿ ತೊಡಗಿಕೊಂಡಿರುವ ರಾಘವೇಶ್ವರ ಶ್ರೀಗಳಿಗೆ ಆಗಾಗ ವಿಘ್ನಗಳು ಬರುತ್ತಿವೆಯಾದರೂ, ಅವೆಲ್ಲವನ್ನೂ ಅವರು ಎದುರಿಸಿ ನಿಂತಿದ್ದಾರೆ. ಮೂಖಪ್ರಾಣಿಯ ಕಂಬನಿಗೆ ಧ್ವನಿಯಾಗಿರುವ ಅವರ ಕಾರ್ಯ ಎಲ್ಲಾ ಮಠಾಧೀಶರಿಗೆ ಅನುಕರಣೀಯ. ಜೈನ ಧರ್ಮವೂ ಅಹಿಂಸೆಯನ್ನು ಪ್ರತಿಪಾದಿಸುವಂತದ್ದಾಗಿದ್ದು, ನಾವು ರಾಘವೇಶ್ವರ ಶ್ರೀಗಳ ಜೊತೆಗೆ ಸದಾ ಇರುತ್ತವೆ ಎಂದರು.
 
 
ಗೊಗ್ಗೇಹಳ್ಳಿ ಮಠದ ಷ.ಬ್ರ ಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಭಗವಂತ ಎಲ್ಲಾ ಅಮೂಲ್ಯವಾದ ವಸ್ತುಗಳನ್ನ ಭೂಗರ್ಭದಲ್ಲಿ – ಸಮುದ್ರಗರ್ಭದಲ್ಲಿ ಇಟ್ಟಿದ್ದಾನೆ. ಆದರೆ ಗೋವು ಮಾತ್ರ ಭೂಮಿಯ ಮೇಲಿರುವ ಅನರ್ಘ್ಯ ರತ್ನ.ಯಾವುದೋ ಪ್ರಾಣಿಯನ್ನು ದತ್ತು ಪಡೆಯುವ ಬದಲು ಗೋವನ್ನು ದತ್ತು ಪಡೆದು ಸಲಹುವಂತಾಗಬೇಕು ಎಂದರು.
 
 
ಭಾರತ ಗೋಮಾಂಸ ರಫ್ತು ಮಾಡುವುದರಲ್ಲಿ ಪ್ರಥಮ ಸ್ಥಾನದಲ್ಲಿರುವುದು ಖೇದಕರವಾಗಿದ್ದು, ಹಂತ ಹಂತವಾಗಿ ಇದನ್ನು ನಿಲ್ಲಿಸಬೇಕಿದೆ ಎಂದು ಸಂತಜೋಸೆಫ್ ಚರ್ಚ, ಸಾಗರದ ಫಾದರ್ ಇನ್ನಾಸಿ ಮುತ್ತು ಹೇಳಿದರು.
 
 
ಜೈನ ಸಂತರಾದ ಜ್ಞಾನಾನಂದಜೀ ಮಾತನಾಡಿ, ಗೋವು ನಮ್ಮೆಲ್ಲರ ಮಾತೆಯಾಗಿದ್ದು, ಗೋವನ್ನು ರಕ್ಷಿಸಲು ನಾವೆಲ್ಲರೂ ಮಂಗಲ ಪಾಂಡೆಯಂತಾಗಬೇಕು ಎಂದು ಕರೆನೀಡಿದರು.
 
ಸಾಗರದ ಗಣಪತಿ ದೇವಸ್ಥಾನದಿಂದ ಗಾಂಧಿ ಮೈದಾನದ ವರೆಗೆ ಚಂಡೆ ವಾದ್ಯಗಳೊಂದಿಗೆ ಭವ್ಯ ಶೋಭಾಯಾತ್ರೆ ನಡೆಯಿತು. ಕಾರ್ಯಕ್ರಮದ ನಂತರ ಗೋವು ಹಾಗೂ ಸಂತರಿಗೆ ಭವ್ಯವಾದ ನೀರಾಜನ ಮಾಡಲಾಯಿತು. ಗಾಂಧಿ ಮೈದಾನಲ್ಲಿ ತುಂಬಿದ್ದ ಜನಸಾಗರಕ್ಕೆ ಗೋಸಂರಕ್ಷಣೆಯ ಪ್ರತಿಜ್ಞೆ ಬೋಧಿಸಿದರು.

LEAVE A REPLY

Please enter your comment!
Please enter your name here